ಯುಗಾದಿಯ ವಿಷಯದಲ್ಲಿ ಮಹಾಭಾರತದಲ್ಲಿರುವ ಕಥೆ

ಮಹಾಭಾರತದಲ್ಲಿ ಒಂದು ಕಥೆಯಿದೆ. ಚೇದಿಯ ರಾಜನಾದ ವಸು ಈತನು ಕಾಡಿಗೆ ತೆರಳಿ, ಕಠಿಣ ತಪಸ್ಸನ್ನು ಪ್ರಾರಂಭಿಸಿದನು. ದೇವರು ಅವನ ಮೇಲೆ ಪ್ರಸನ್ನರಾಗಿ, ಅವನಿಗೆ ಶುಭದಾಯಕವಾದ ವೈಜಯಂತಿ ಮಾಲೆಯನ್ನು ಕೊಟ್ಟರು. ಅಲ್ಲದೇ ನಿರಂತರ ಪರ್ಯಟನೆಗಾಗಿ ಒಂದು ವಿಮಾನವನ್ನು ಮತ್ತು ರಾಜ್ಯದ ಆಡಳಿತವನ್ನು ನಡೆಸಲು ರಾಜದಂಡವನ್ನು ಕೊಟ್ಟರು. ಈ ದೈವೀ ಪ್ರಸಾದದಿಂದ ವಸು ಸಂತೋಷದಿಂದ ಗದ್ಗದಿತನಾದನು. ಅವನು ಆ ರಾಜದಂಡದ ಒಂದು ತುದಿಗೆ ಜರಿಯ ರೇಷ್ಮೆಯ ವಸ್ತ್ರವನ್ನು ಇಟ್ಟು, ಅದರ ಮೇಲೆ ಬಂಗಾರದ ತಂಬಿಗೆಯನ್ನು ಕೂಡಿಸಿ ಅದನ್ನು ಪೂಜಿಸಿದನು. ಇದನ್ನೇ ಇಂದಿನ ಬ್ರಹ್ಮಧ್ವಜದ ಮೂಲಸ್ವರೂಪವೆಂದು ಹೇಳಲಾಗುತ್ತದೆ. ಪಾಡ್ಯದ ಈ ಉತ್ಸವವು ಹೊಸ ವರ್ಷದ ಪ್ರಾರಂಭವಾಗಿರುವುದರಿಂದ ಈ ದಿನವನ್ನು ಸಂತೋಷದಿಂದ ಆಚರಿಸಿದರೆ ಮುಂದಿನ ವರ್ಷವೆಲ್ಲ ಆನಂದಮಯವಾಗಿರುತ್ತದೆಯೆಂದು ನಂಬಲಾಗುತ್ತದೆ.

ಶುಭಾಶಯಪತ್ರವನ್ನು ಯುಗಾದಿಯಂದೇ ನೀಡಿ !

ನಾವು ಜನವರಿ ತಿಂಗಳಿನ ಪ್ರಾರಂಭದಲ್ಲಿ ಹೊಸವರ್ಷದ ಶುಭಾಶಯಪತ್ರವನ್ನು ನಮ್ಮ ಸಂಬಂಧಿಕರಿಗೆ ಮತ್ತು ಮಿತ್ರರಿಗೆ ಕಳುಹಿಸುತ್ತೇವೆ. ಅದರ ಬದಲು ಚೈತ್ರ ಶುಕ್ಲ ಪಕ್ಷ ಪಾಡ್ಯಕ್ಕೆ ಶುಭಾಶಯ ಪತ್ರ ಕಳುಹಿಸಲು ಪ್ರಾರಂಭಿಸಿ; ಏಕೆಂದರೆ ಇದುವೇ ನಿಜವಾದ ವರ್ಷಾರಂಭದ ದಿನವಾಗಿದೆ.