ಹಿಜಾಬ ನಿರ್ಬಂಧದ ಮೇಲೆ ಕರ್ನಾಟಕ ಉಚ್ಚ ನ್ಯಾಯಾಲಯದ ಅಸ್ತು !

ವಿದ್ಯಾರ್ಥಿಗಳು ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಸಮವಸ್ತ್ರವನ್ನು ಧರಿಸುವುದು ಅನಿವಾರ್ಯವಾಗಿದೆ !

ಹಿಜಾಬ ಇಸ್ಲಾಮಿನ ಅನಿವಾರ್ಯ ಭಾಗವಲ್ಲ ಎಂದು ತೀರ್ಪು ನೀಡಲಾಯಿತು !

ಹಿಜಾಬ ನಿರ್ಬಂಧವನ್ನು ಪ್ರಶ್ನಿಸುವ ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಯಿತು !

ಬೆಂಗಳೂರು (ಕರ್ನಾಟಕ) – ಕೊನೆಗೂ ಅನೇಕ ವಾರಗಳಿಂದ ಬಾಕಿ ಉಳಿದಿದ್ದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ (ಮುಸಲ್ಮಾನ ಮಹಿಳೆಯರ ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವ ಬಟ್ಟೆ) ಧರಿಸುವುದರ ಮೇಲಿನ ನಿರ್ಬಂಧದ ಸಂದರ್ಭದಲ್ಲಿನ ತೀರ್ಪು ಬಂದೇ ಬಿಟ್ಟಿತು. ಕರ್ನಾಟಕ ಉಚ್ಚ ನ್ಯಾಯಾಲಯವು ‘ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಹಿಜಾಬನ್ನು ಧರಿಸಲು ನಿರ್ಬಂಧವಿರಲಿದೆ’ ಎಂದು ತೀರ್ಪು ನೀಡಿದೆ. ನ್ಯಾಯಾಲಯವು ಹಿಜಾಬ ನಿರ್ಬಂಧವನ್ನು ಪ್ರಶ್ನಿಸುವ ಎಲ್ಲ ಅರ್ಜಿಗಳನ್ನು ತಿರಸ್ಕರಿಸಿ ‘ಹಿಜಾಬ ಇಸ್ಲಾಮಿನ ಅನಿವಾರ್ಯ ಭಾಗವಲ್ಲ’ ಎಂಬ ಮಹತ್ವಪೂರ್ಣ ತೀರ್ಪು ನೀಡಿದೆ. ಇದರೊಂದಿಗೆ ‘ವಿದ್ಯಾರ್ಥಿಗಳು ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಸಮವಸ್ತ್ರವನ್ನು ಧರಿಸುವುದು ಅನಿವಾರ್ಯವಾಗಿದೆ’ ಎಂದು ನಮೂದಿಸಿದೆ. ಇದರ ಅನ್ವಯ ಶಾಲೆ ಮತ್ತು ಮಹಾವಿದ್ಯಾಲಯಗಳಿಗೆ ಸಮವಸ್ತ್ರವನ್ನು ನಿರ್ಧರಿಸುವ ಅಧಿಕಾರವನ್ನೂ ನೀಡಲಾಗಿದೆ. ಈ ನಿರ್ಣಯದ ಮೊದಲು ಬೆಂಗಳೂರಿನಲ್ಲಿ ಮಾರ್ಚ ೨೧, ೨೦೨೨ರ ವರೆಗೆ ಎಲ್ಲ ರೀತಿಯ ಸಮ್ಮೇಳನಗಳು, ಆಂದೋಲನಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆಗಳು ಹಾಗೂ ಉತ್ಸವಗಳನ್ನು ನಡೆಸಲು ನಿರ್ಬಂಧ ಹೇರಲಾಗಿತ್ತು. ರಾಜ್ಯದಲ್ಲಿನ ಅನೇಕ ಜಿಲ್ಲೆಗಳಲ್ಲಿ ಕಲಂ ೧೪೪ (ಗುಂಪುಸೇರುವಿಕೆ)ಯನ್ನು ಜ್ಯಾರಿಗೊಳಿಸಲಾಗಿತ್ತು.

ಸಂವಿಧಾನದ ಕಲಂ ೨೫ ಮತ್ತು ಶಾಲೆಯ ಸಮವಸ್ತ್ರವು ಆವಶ್ಯಕವಾಗಿರುವುದರ ಆಧಾರದಲ್ಲಿ ನಿರ್ಣಯ !

ಹಿಜಾಬ ನಿರ್ಬಂಧವನ್ನು ಪ್ರಶ್ನಿಸುವ ಒಟ್ಟೂ ೮ ಅರ್ಜಿಗಳನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು. ಈ ಎಲ್ಲ ಅರ್ಜಿಗಳನ್ನು ರದ್ದುಗೊಳಿಸಲಾಗಿದೆ. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ರಿತುರಾಜ ಅವಸ್ಥಿಯವರು ತೀರ್ಪು ನೀಡುವಾಗ, ಈ ತೀರ್ಪು ನೀಡುವಾಗ ೨ ಸಂಗತಿಗಳ ಆಧಾರ ಪಡೆಯಲಾಗಿದೆ. ಮೊದಲನೇಯದು ಹಿಜಾಬ ಧರಿಸುವುದು ಸಂವಿಧಾನದ ಕಲಂ ೨೫ರ ಅನುಸಾರ ಧಾರ್ಮಿಕ ಸ್ವಾತಂತ್ರ‍್ಯದ ಕಕ್ಷೆಯಲ್ಲಿ ಬರುತ್ತದೆಯೇ ? ಎರಡನೇಯದು ಶಾಲೆಯಲ್ಲಿ ಸಮವಸ್ತ್ರವು ಅನಿವಾರ್ಯವಾಗಿರುವುದು ಈ ಅಧಿಕಾರದ ವಿರುದ್ಧವಾಗಿದೆಯೇ ? ಈ ಎರಡು ಅಂಶಗಳ ಅಧ್ಯಯನ ಮಾಡಿ ನ್ಯಾಯಾಲಯವು ಶೈಕ್ಷಣಿಕ ಸಂಸ್ಥೆಗಳ ಹಿಜಾಬ ನಿರ್ಬಂಧದ ಭೂಮಿಕೆಯು ಯೋಗ್ಯವಾಗಿದೆ ಎಂದು ಹೇಳಿದರು.

ಅಶಾಂತಿ ನಿರ್ಮಿಸಲು ಪ್ರಯತ್ನವಾಗುತ್ತಿದೆ ! – ಕರ್ನಾಟಕ ಉಚ್ಚ ನ್ಯಾಯಾಲಯ

ನ್ಯಾಯಾಲಯವು ತೀರ್ಪು ನೀಡುವಾಗ ‘ಈ ಅಂಶಗಳು ಎದುರಿಗೆ ಬಂದಂತಹ ವಿಧವನ್ನು ನೋಡಿದರೆ ಸಮಾಜದಲ್ಲಿ ಅಶಾಂತಿ ಮತ್ತು ಅಸಾಮಂಜಸ್ಯವನ್ನು ನಿರ್ಮಾಣ ಮಾಡಲು ಅನೇಕ ಜನರು ಪ್ರಯತ್ನಿಸುತ್ತಿದ್ದಾರೆ ಎಂದು ಅನಿಸುತ್ತಿದೆ’ ಎಂದು ಹೇಳಿದೆ.

ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು ಹಾಗೂ ಶಾಂತಿಯನ್ನು ಕಾಪಾಡಬೇಕು ! – ಮುಖ್ಯಮಂತ್ರಿ ಬೊಮ್ಮಾಯಿ

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನ್ಯಾಯಾಲಯದ ಈ ನಿರ್ಣಯದ ಮೇಲೆ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತ ‘ನಾವು ಉಚ್ಚ ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದು ಆವಶ್ಯಕವಾಗಿದೆ. ಎಲ್ಲ ಜನರು ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು ಹಾಗೂ ಶಾಂತಿಯನ್ನು ಕಾಪಾಡಬೇಕು’, ಎಂದು ಹೇಳಿದರು.

ಕರ್ನಾಟಕ ಉಚ್ಚ ನ್ಯಾಯಾಲಯವು ಕೆಳಗಿನ ಪ್ರಶ್ನೆಗಳ ಬಗ್ಗೆ ವಿಚಾರ ಮಾಡಿತ್ತು !

೧. ಹಿಜಾಬ ಧರಿಸುವುದು ಕಲಂ ೨೫ರ ಅನ್ವಯ ಇಸ್ಲಾಂ ಧರ್ಮದಲ್ಲಿ ಅನಿವಾರ್ಯವೇ ?

೨. ಶಾಲೆಯಲ್ಲಿ ಸಮವಸ್ತ್ರವನ್ನು ಖಡ್ಡಾಯಗೊಳಿಸುವುದು ಈ ಅಧಿಕಾರಗಳ ಉಲ್ಲಂಘನೆಯಾಗಿದೆಯೇ ?

೩. ಫೆಬ್ರುವರಿ ೫, ೨೦೨೨ರ ಆದೇಶವು ಕಲಂ ೧೪ ಮತ್ತು ೧೫ರ ಉಲ್ಲಂಘನೆಯೇ ?

೪. ಮಹಾವಿದ್ಯಾಲಯದ ಅಧಿಕಾರಿಗಳ ವಿರುದ್ಧ ಶಿಸ್ತುಭಂಗದ ಕಾರ್ಯಾಚರಣೆ ನಡೆಸುವಷ್ಟು ಯಾವುದೇ ಪ್ರಕರಣವು ಮುಂದುವರಿದಿದೆಯೇ ?

ನ್ಯಾಯಾಧೀಶ ರಿತುರಾಜ ಅವಸ್ಥಿಯವರು ಮೇಲಿನ ಪ್ರಶ್ನೆಗಳಿಗೆ ನೀಡಿದ ಉತ್ತರ !

೧. ಮುಸಲ್ಮಾನ ಮಹಿಳೆಯರು ಹಿಜಾಬನ್ನು ಧರಿಸುವುದು ಇಸ್ಲಾಮೀ ಶ್ರದ್ಧೆಯಲ್ಲಿನ ಅತ್ಯಂತ ಆವಶ್ಯಕ ಪದ್ಧತಿಯಲ್ಲ.

೨. ಶಾಲೆಯಲ್ಲಿ ಸಮವಸ್ತ್ರವನ್ನು ಖಡ್ಡಾಯಗೊಳಿಸುವುದು ಕೇವಲ ಒಂದು _ ಬಂಧನವಾಗಿದ್ದು ಸಂವಿಧಾನದ ದೃಷ್ಟಿಯಲ್ಲಿ ಯೋಗ್ಯವಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಆಕ್ಷೇಪವೆತ್ತಲು ಸಾಧ್ಯವಿಲ್ಲ.

೩. ಆದುದರಿಂದ ಫೆಬ್ರುವರಿ ೫, ೨೦೨೨ರ ಆದೇಶವನ್ನು ಜ್ಯಾರಿಗೊಳಿಸುವ ಅಧಿಕಾರ ಸರಕಾರಕ್ಕೆ ಇದೆ ಮತ್ತು ಅದು ಕಾನೂನು ಬಾಹಿರವಲ್ಲ.

೪. ಪ್ರತಿವಾದಿಗಳ ವಿರುದ್ಧ ಶಿಸ್ತುಭಂಗದ ಕಾರ್ಯಾಚರಣೆ ನಡೆಸುವಷ್ಟು ಯಾವುದೇ ಪ್ರಕರಣವು ಸಾಬೀತಾಗಿಲ್ಲ, ಎಂದು ನ್ಯಾಯಾಲಯವು ಹೇಳಿದೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಡುವೆವು !

ಈ ಖಟ್ಲೆಯಲ್ಲಿನ ವಿದ್ಯಾರ್ಥಿನಿಯರ ನ್ಯಾಯವಾದಿಗಳಾದ ಅನಸ ತನ್ವೀರರವರು ಕರ್ನಾಟಕ ಉಚ್ಚ ನ್ಯಾಯಾಲಯದ ಈ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸುವೆವು ಎಂದು ಹೇಳಿದ್ದಾರೆ. ‘ಹಿಜಾಬ ಧರಿಸುವ ಅಧಿಕಾರವನ್ನು ಪಾಲಿಸಿ ಹುಡುಗಿಯರು ಶಿಕ್ಷಣವನ್ನು ಮುಂದುವರಿಸುವರು. ಈ ಹುಡುಗಿಯರು ನ್ಯಾಯಾಲಯ ಹಾಗೂ ಸಂವಿಧಾನದಿಂದ ಆಸೆ ಬಿಟ್ಟಿಲ್ಲ’, ಎಂದು ನ್ಯಾಯವಾದಿ ತನ್ವೀರರವರು ಹೇಳಿದ್ದಾರೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಈ ತೀರ್ಪಿನಿಂದ ಬೇಸರವಾಗಿದೆ ! – ಅಸದುದ್ದೀನ ಒವೈಸಿ

ಎಮ್‌. ಐ. ಎಮ್‌ನ ಅಧ್ಯಕ್ಷ ಹಾಗೂ ಸಂಸದರಾದ ಅಸದುದ್ದೀನ ಒವೈಸಿಯವರು ಕರ್ನಾಟಕ ಉಚ್ಚ ನ್ಯಾಯಾಲಯದ ಈ ತೀರ್ಪಿನ ಮೇಲೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ‘ನಾನು ಈ ನಿರ್ಣಯದಿಂದ ಬೇಸರಗೊಂಡಿದ್ದೇನೆ. ಈ ತೀರ್ಪನ್ನು ಒಪ್ಪದಿರುವುದು ನನ್ನ ಅಧಿಕಾರವಾಗಿದೆ. ಈ ತೀರ್ಪು ಸಂವಿಧಾನದ ಧಾರ್ಮಿಕ ಸ್ವಾತಂತ್ರ‍್ಯದ ವಿರುದ್ಧವಿದೆ. ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಡುವರು ಎಂದು ನಾನು ಆಶಿಸುತ್ತೇನೆ’, ಎಂದು ಹೇಳಿದರು.

‘ನ್ಯಾಯಾಲಯದ ತೀರ್ಪು ನಿರಾಶಾದಾಯಕವಾಗಿದೆ !’ (ಅಂತೆ) – ಮೆಹಬೂಬಾ ಮುಫ್ತಿ

ಕಾಶ್ಮೀರದಲ್ಲಿನ ‘ಪೀಪಲ್ಸ್ ಡೆಮಾಕ್ರೆಟಿಕ್‌ ಪಾರ್ಟಿ’ಯ (‘ಪಿಡಿಪಿ’ಯ) ಪ್ರಮುಖ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಟ್ವೀಟ್‌ ಮಾಡಿ ‘ಹಿಜಾಬಿನ ಮೇಲಿನ ನಿರ್ಬಂಧವನ್ನು ಶಾಶ್ವತವಾಗಿರಿಸುವ ಕರ್ನಾಟಕ ಉಚ್ಚ ನ್ಯಾಯಾಲಯದ ಈ ತೀರ್ಪು ನಿರಾಶಾಜನಕವಾಗಿದೆ. ಒಂದು ಕಡೆಯಲ್ಲಿ ನಾವು ಮಹಿಳೆಯರ ಸಬಲೀಕರಣದ ಬಗ್ಗೆ ಹರಟೆ ಹೊಡೆಯುತ್ತೇವೆ ಮತ್ತು ಇನ್ನೊಂದು ಕಡೆಯಲ್ಲಿ ಸುಲಭ ಅಧಿಕಾರಗಳನ್ನು ನಿರಾಕರಿಸುತ್ತೇವೆ. ಇದು ಧರ್ಮದ ವಿಷಯವಲ್ಲ, ಆದರೆ ಆಯ್ಕೆಯ ಸ್ವಾತಂತ್ರ‍್ಯದ್ದಾಗಿದೆ’ ಎಂದು ಹೇಳಿದರು.

‘ನ್ಯಾಯಾಲಯವು ಮೂಲಭೂತ ಅಧಿಕಾರವನ್ನು ಜೋಪಾನ ಮಾಡಿಲ್ಲ!’ (ಅಂತೆ) – ಓಮರ ಅಬ್ದುಲ್ಲಾ

ಜಮ್ಮೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ ಅಬ್ದುಲ್ಲಾರವರು ‘ಕರ್ನಾಟಕ ಉಚ್ಚ ನ್ಯಾಯಾಲಯದ ಈ ತೀರ್ಪಿನಿಂದ ಬಹಳ ನಿರಾಸೆಯಾಯಿತು. ನೀವು ಹಿಜಾಬಿನ ಬಗ್ಗೆ ಏನು ವಿಚಾರ ಮಾಡುತ್ತೀರಿ ? ಇದು ಕೇವಲ ಬಟ್ಟೆಯ ವಿಷಯವಲ್ಲ. ಬಟ್ಟೆಯನ್ನು ಹೇಗೆ ಧರಿಸಬೇಕು ? ಎಂಬುದು ಸ್ತ್ರೀಯ ಅಧಿಕಾರವಾಗಿದೆ. ನ್ಯಾಯಾಲಯವು ಈ ಮೂಲಭೂತ ಅಧಿಕಾರವನ್ನು ಜೋಪಾನ ಮಾಡಿಲ್ಲ, ಇದು ದೊಡ್ಡ ಹಾಸ್ಯವಾಗಿದೆ’ ಎಂದು ಹೇಳಿದರು.

ಚೆನ್ನೈನಲ್ಲಿ ವಿದ್ಯಾರ್ಥಿಗಳಿಂದ ವಿರೋಧ

ತಮಿಳುನಾಡಿನ ರಾಜಧಾನಿಯಾದ ಚೆನ್ನೈನಲ್ಲಿರುವ ‘ದ ನ್ಯೂ ಕಾಲೇಜ’ನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಕೆಲವು ವಿದ್ಯಾರ್ಥಿಗಳು ಮಹಾವಿದ್ಯಾಲಯದ ಹೊರಗೆ ಬಂದು ವಿರೋಧಿಸಿದರು.

ನ್ಯಾಯಾಲಯದ ತೀರ್ಪಿನ ನಂತರ ಸುರಪುರಾ (ಕರ್ನಾಟಕ)ದಲ್ಲಿ ಮಹಾವಿದ್ಯಾಲಯದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರಿಂದ ಮಹಾವಿದ್ಯಾಲಯದ ಮೇಲೆ ಬಹಿಷ್ಕಾರ !

ಕರ್ನಾಟಕದಲ್ಲಿನ ಸುರಪುರಾ ತಾಲೂಕಿನಲ್ಲಿರುವ ಪಿಯೂ ಮಹಾವಿದ್ಯಾಲಯದಲ್ಲಿನ ಮುಸಲ್ಮಾನ ವಿದ್ಯಾರ್ಥಿನಿಯರು ತರಗತಿಗಳನ್ನು ಬಹಿಷ್ಕರಿಸಿದರು. ಇಲ್ಲಿ ಬೆಳಿಗ್ಗೆ ೧೦ ರಿಂದ
ಮದ್ಯಾಹ್ನ ೧ರ ವರೆಗೆ ಪರೀಕ್ಷೆ ಇತ್ತು. ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಬಹಿಷ್ಕರಿಸಿದರು. ಈ ವಿದ್ಯಾರ್ಥಿನಿಯರು ‘ನಾವು ಪಾಲಕರೊಂದಿಗೆ ಚರ್ಚಿಸಿ ನಂತರ ಮಹಾವಿದ್ಯಾಲಯಕ್ಕೆ ಬರುವ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ. ನಾವು ಹಿಜಾಬ ಧಿರಿಸಿಯೇ ಪರೀಕ್ಷೆ ಬರೆಯುತ್ತೇವೆ. ನಮಗೆ ಹಿಜಾಬ ತೆಗೆಯಲು ಒತ್ತಾಯಿಸಿದರೆ ನಾವು ಪರೀಕ್ಷೆಯನ್ನು ಬರೆಯುವುದಿಲ್ಲ’ ಎಂದು ಹೇಳಿದರು.

ಈ ಬಗ್ಗೆ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶಕುಂತಲಾರವರು ವಿದ್ಯಾರ್ಥಿನಿಯರಿಗೆ ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಲು ಹೇಳಲಾಯಿತು; ಆದರೆ ಅವರು ಅದನ್ನು ನಿರಾಕರಿಸಿದರು. ಅವರು ತರಗತಿಯಿಂದ ಹೊರಗೆ ಹೋದರು. ಒಟ್ಟೂ ೩೫ ವಿದ್ಯಾರ್ಥಿನಿಯರು ಬಹಿಷ್ಕಾರ ಹಾಕಿದರು.

ಈ ಪ್ರಕರಣ ಏನಿದೆ ?

ಕರ್ನಾಟಕ ಸರಕಾರವು ಶೈಕ್ಷಣಿಕ ಸಂಸ್ಥೆಗಳಲ್ಲಿನ ಸಮವಸ್ತ್ರದ ಕಾನೂನಿನಲ್ಲಿ ಸುಧಾರಣೆಗಳನ್ನು ಮಾಡಿ ಸಮವಸ್ತ್ರವನ್ನು ಖಡ್ಡಾಯಗೊಳಿಸಲು ಆದೇಶಿಸಿತ್ತು. ಇದರಲ್ಲಿ ಧಾರ್ಮಿಕ ವೇಷಭೂಷಣಗಳನ್ನು ಧರಿಸಲು ನಿರ್ಬಂಧವಿತ್ತು. ಇದರ ಕಾರ್ಯಾಚರಣೆಯು ಆರಂಭವಾದ ನಂತರ ಕರ್ನಾಟಕದಲ್ಲಿನ ಉಡುಪಿ ಜಿಲ್ಲೆಯಲ್ಲಿನ ಕುಂದಾಪುರದ ಸರಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ಹಿಜಾಬಿನ ಮೇಲೆ ವಾದ ಆರಂಭವಾಯಿತು. ಹಿಜಾಬನ್ನು ಧರಿಸಿ ಮಹಾವಿದ್ಯಾಲಯಕ್ಕೆ ಪ್ರವೇಶಿಸುವ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಮಹಾವಿದ್ಯಾಲಯದಲ್ಲಿ ಪ್ರವೇಶವನ್ನು ನಿರಾಕರಿಸಲಾಯಿತು. ಇದನ್ನು ವಿರೋಧಿಸಿ ೬ ಮುಸಲ್ಮಾನ ವಿದ್ಯಾರ್ಥಿನಿಯರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದರು. ಇದೇ ಸಮಯದಲ್ಲಿ ಕರ್ನಾಟಕ ರಾಜ್ಯ ಸರಕಾರವು ಜ್ಯಾರಿಗೊಳಿಸಿದ ಸಮವಸ್ತ್ರದ ನಿಯಮದ ಅನುಸಾರ ‘ಹಿಜಾಬನ್ನು ಧರಿಸಲು ಅನುಮತಿ ನೀಡಲಾಗುವುದಿಲ್ಲ’ ಎಂಬ ಕಠೋರ ಆದೇಶವನ್ನು ಮಹಾವಿದ್ಯಾಲಯದ ಅಧಿಕಾರಿಗಳು ನೀಡಿಯೂ ಕೆಲವು ಮುಸಲ್ಮಾನ ವಿದ್ಯಾರ್ಥಿನಿಯರು ತಮ್ಮ ಪಾಲಕರೊಂದಿಗೆ ಮಹಾವಿದ್ಯಾಲಯಕ್ಕೆ ಬಂದಾಗ ಅವರನ್ನು ಮಹಾವಿದ್ಯಾಲಯದ ಪರಿಸರದ ಹೊರಗೆ ನಿಲ್ಲಿಸಲಾಯಿತು. ಆದುದರಿಂದ ಹುಡುಗಿಯರೊಂದಿಗೆ ಅವರ ಪಾಲಕರೂ ಪ್ರವೇಶದ್ವಾರದ ಹೊರಗೆ ಪ್ರತಿಭಟನೆ ಮಾಡಿದರು. ಅದೇ ಸಮಯದಲ್ಲಿ ಈ ಹುಡುಗಿಯರನ್ನು ವಿರೋಧಿಸಲು ಕೆಲವು ಹಿಂದೂ ವಿದ್ಯಾರ್ಥಿಗಳು ಭಗವಾ ಶಾಲುಗಳನ್ನು ಧರಿಸಿ ಮಹಾವಿದ್ಯಾಲಯದ ಪರಿಸರದಲ್ಲಿ ತಿರುಗಾಡುತ್ತಿದ್ದರು. ಅನಂತರ ಈ ವಿಷಯವು ಇನ್ನೂ ಭುಗಿಲೆದ್ದಿತು.