ಮಹಾಶಿವರಾತ್ರಿ

ಮಾಘ ಕೃಷ್ಣ ಪಕ್ಷ ಚತುರ್ದಶಿ (೧.೩.೨೦೨೨)

ಮಹಾಶಿವರಾತ್ರಿಯ ದಿನ ಶಿವತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶಿವತತ್ತ್ವದ ಲಾಭವು ಹೆಚ್ಚು ಪ್ರಮಾಣದಲ್ಲಿ ಸಿಗಲು ಮಹಾ ಶಿವರಾತ್ರಿಯ ದಿನ ಭಾವಪೂರ್ಣವಾಗಿ ಶಿವನ ಪೂಜೆ-ಅರ್ಚನೆಯನ್ನು ಮಾಡಬೇಕು; ಅದರೊಂದಿಗೆ ‘ಓಂ ನಮಃ ಶಿವಾಯ |’ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು. ಈ ದಿನದಂದು ‘ಓಂ ನಮಃ ಶಿವಾಯ |’ ಈ ನಾಮಜಪವನ್ನು ಮಾಡುವ ಜೀವಕ್ಕೆ ಶಿವನ ಸೂಕ್ಷ್ಮ-ಶಕ್ತಿ ಸಿಗುತ್ತದೆ. ಸ್ಥೂಲ ಮತ್ತು ಸೂಕ್ಷ್ಮ ರೂಪದ ಕೆಟ್ಟ ಶಕ್ತಿಗಳನ್ನು ನಾಶ ಮಾಡಲು ಮತ್ತು ಮಾನವನ ಕಲ್ಯಾಣಕ್ಕಾಗಿ ಶಿವನ ಜನ್ಮವು ಆಗಿದೆ.

 ಮಹಾಶಿವರಾತ್ರಿ ವ್ರತ ಏಕೆ ಮಾಡಬೇಕು ?

ಶಿವನ ವಿಶ್ರಾಂತಿಯ ಕಾಲವೆಂದರೆ ಮಹಾಶಿವರಾತ್ರಿ. ಆ ಕಾಲದಲ್ಲಿ ಶಿವತತ್ತ್ವದ ಕಾರ್ಯ ನಿಂತು ಹೋಗುತ್ತದೆ. ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಆದುದರಿಂದ ಆ ಕಾಲದಲ್ಲಿ ವಿಶ್ವದಲ್ಲಿನ ತಮೋಗುಣವನ್ನು ಶಿವತತ್ತ್ವವು ಸ್ವೀಕರಿಸುವುದಿಲ್ಲ. ಆದುದರಿಂದ ವಿಶ್ವದಲ್ಲಿ ತಮೋಗುಣ ಬಹಳ ಹೆಚ್ಚಾಗುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಮಹಾಶಿವರಾತ್ರಿಯ ವ್ರತವನ್ನು ಕೈಗೊಂಡು ಶಿವತತ್ತ್ವವನ್ನು ಆಕರ್ಷಿಸಬೇಕು.

ವ್ರತವನ್ನಾಚರಿಸುವ ಪದ್ಧತಿ

ಉಪವಾಸ, ಪೂಜೆ ಮತ್ತು ಜಾಗರಣೆ ಇವು ಈ ಮಹಾಶಿವರಾತ್ರಿ ವ್ರತದ ಮೂರು  ಪ್ರಮುಖವಾದ ಅಂಗಗಳಾಗಿವೆ.

ವ್ರತದ ವಿಧಿ

ಮಾಘ ಕೃಷ್ಣ ಚತುರ್ದಶಿಯಂದು ಏಕಭುಕ್ತರಾಗಿರಬೇಕು (ಒಪ್ಪತ್ತು ಊಟ ಮಾಡುವುದು). ಚತುರ್ದಶಿಯಂದು ಬೆಳಗ್ಗೆ ವ್ರತದ ಸಂಕಲ್ಪವನ್ನು ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಬೇಕು. ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು. ಪ್ರದೋಷಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಬೇಕು. ಶಿವನ ಧ್ಯಾನವನ್ನು ಮಾಡಬೇಕು, ಆಮೇಲೆ ಶೋಡಷೋಪಚಾರ ಪೂಜೆಯನ್ನು ಮಾಡಿ ಭವ ಭಾವಿನಿ ಪ್ರೀತ್ಯರ್ಥ ತರ್ಪಣವನ್ನು ನೀಡಬೇಕು. ಶಿವನಿಗೆ ೧೦೮ ಕಮಲಗಳನ್ನು ಅಥವಾ ಬಿಲ್ವಪತ್ರೆಗಳನ್ನು ನಾಮಮಂತ್ರ ಸಹಿತ ಅರ್ಪಿಸಬೇಕು. ಆಮೇಲೆ ಪುಷ್ಪಾಂಜಲಿಯನ್ನು ಅರ್ಪಿಸಿ ಅರ್ಘ್ಯ ನೀಡಬೇಕು. ಪೂಜೆ, ಸ್ತೋತ್ರಪಠಣ ಮತ್ತು ಮೂಲಮಂತ್ರ ಜಪದ ನಂತರ ಶಿವನ ಮಸ್ತಕದ ಮೇಲಿನ ಒಂದು ಹೂವನ್ನು ತಮ್ಮ ತಲೆಯ ಮೇಲಿಟ್ಟುಕೊಳ್ಳಬೇಕು ಮತ್ತು ಕ್ಷಮಾ ಯಾಚನೆ ಮಾಡಬೇಕು.

ಯಾಮಪೂಜೆ

ಮಹಾಶಿವರಾತ್ರಿ

ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮ ಪೂಜೆ’ ಎನ್ನುತ್ತಾರೆ. ಪ್ರತಿಯೊಂದು ಯಾಮಪೂಜೆಯಲ್ಲಿ ದೇವರಿಗೆ ಅಭ್ಯಂಗಸ್ನಾನ ಮಾಡಿಸಬೇಕು, ಅನುಲೇಪನ ಮಾಡಿ ಧೋತ್ರಾ (ಪಂಚೆ), ಮಾವಿನ ಹಾಗೂ ಬಿಲ್ವದ ಎಲೆಗಳನ್ನು ಅರ್ಪಿಸಬೇಕು. ಅಕ್ಕಿಯ ಹಿಟ್ಟಿನ ೨೬ ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಪೂಜೆಯ ನಂತರ ೧೦೮ ದೀಪಗಳನ್ನು ದಾನ ಮಾಡಬೇಕು. ಪ್ರತಿಯೊಂದು ಪೂಜೆಯ ಮಂತ್ರಗಳು ಬೇರೆಬೇರೆಯಾಗಿರುತ್ತವೆ, ಅವುಗಳಿಂದ ಅರ್ಘ್ಯವನ್ನು ನೀಡಬೇಕು. ನೃತ್ಯ, ಗೀತೆ, ಕಥಾಶ್ರವಣ ಮುಂತಾದ ವಿಷಯಗಳಿಂದ ಜಾಗರಣೆಯನ್ನು ಮಾಡಬೇಕು. ಬೆಳಗ್ಗೆ ಸ್ನಾನ ಮಾಡಿ ಮತ್ತೊಮ್ಮೆ ಶಿವ ಪೂಜೆ ಮಾಡಬೇಕು. ಉಪವಾಸವನ್ನು ಬಿಡುವಾಗ ಬ್ರಾಹ್ಮಣಭೋಜನ ನೀಡಬೇಕು. ಆಶೀರ್ವಾದ ಪಡೆದುಕೊಂಡು ವ್ರತದ ಸಮಾಪ್ತಿ ಮಾಡಬೇಕು. ೧೨, ೧೪ ಅಥವಾ ೨೪ ವರ್ಷ ಈ ವ್ರತವನ್ನು ಆಚರಿಸಿದ ನಂತರ ಅದರ ಉದ್ಯಾಪನೆ (ವ್ರತದ ಪರಿಹಾರ) ಯನ್ನು ಮಾಡಬೇಕು.

ಶಿವನಿಗೆ ಮಾಡಬೇಕಾದ ಪ್ರಾರ್ಥನೆ 

ಹೇ ಶಿವಶಂಕರಾ, ಕೆಟ್ಟ ಶಕ್ತಿಗಳ ತೊಂದರೆಗಳಿಂದ ನನ್ನನ್ನು ರಕ್ಷಿಸು. ನಿನ್ನ ನಾಮದ ರಕ್ಷಾಕವಚ ನನ್ನ ಸುತ್ತಲೂ ಸದಾ ಇರಲಿ ಎಂದು ನಿನ್ನ ಚರಣಗಳಲ್ಲಿ ಪ್ರಾರ್ಥನೆ.

(ಆಧಾರ: ಸನಾತನ ನಿರ್ಮಿತ ಗ್ರಂಥ ‘ಶಿವನ ಉಪಾಸನೆಯ ಹಿಂದಿನ ಶಾಸ್ತ್ರ’)