ವೃಕ್ಷಗಳಿಗೂ ಭಾವನೆಗಳಿರುತ್ತವೆ ಮತ್ತು ಅವು ಮಾನವರನ್ನು ಕ್ಷಮಿಸುತ್ತವೆ !

‘ನಾಶಿಕ್‌’ನಲ್ಲಿ ನಮ್ಮ ತೋಟದಲ್ಲಿ ಅನೇಕ ವಿಧದ ದಾಸವಾಳ ಹೂವುಗಳು ಅರಳಿದ್ದವು. ನಾವಿರುವ ಮನೆಯ ಬಾಗಿಲಿನ ಎದುರಿಗೆ ಒಂದು ದಾಸವಾಳದ ಗಿಡವಿದೆ ಮತ್ತು ಅದರಲ್ಲಿ ಹಳದಿ ಬಣ್ಣದ, ಒಳಗೆ ಕೆಂಪು (ಗಾಢ ಗುಲಾಬಿ) ಬಣ್ಣವಿರುವ ದಾಸವಾಳದ ಹೂವುಗಳು ಅರಳಿದ್ದವು. ಅದರಲ್ಲಿ ಪ್ರತಿದಿನ ಸುಮಾರು ೬೦ ಕ್ಕಿಂತಲೂ ಹೆಚ್ಚು ಹೂವುಗಳು ಅರಳಿರುತ್ತಿದ್ದವು. ಅದು ನನ್ನ ತುಂಬಾ ಅಕ್ಕರೆಯ ದಾಸವಾಳದ ಗಿಡವಾಗಿತ್ತು. ಸ್ವಲ್ಪ ದಿನಗಳ ನಂತರ ಅದರ ಕೊಂಬೆಗಳು ನೆರೆಮನೆಯ ಸೋನಾರಕಾಕಾರವರ ತೋಟದಲ್ಲಿ ಹರಡಲು ಪ್ರಾರಂಭಿಸಿದವು. ಗಿಡದಲ್ಲಿನ ಹೂವುಗಳು ಬಾಡಿ ಕಾಕಾರವರ ತೋಟದಲ್ಲಿ ಕೆಳಗೆ ಬಿದ್ದು ತುಂಬಾ ಕಸವಾಗುತ್ತಿತ್ತು. ಬಾಡಿಹೋದ ಹೂವುಗಳು ಕೊಳೆತು ಅವುಗಳ ಮೇಲೆ ಅನೇಕ ಕೀಟಗಳು ಕುಳಿತುಕೊಳ್ಳುತ್ತಿದ್ದವು. ಕೀಟಗಳು ನಂತರ ಮನೆಯ ಒಳಗೂ ಬರುತ್ತಿದ್ದವು. ಬಾಡಿದ ಹೂವುಗಳು ಅಂಟಂಟಾಗಿರುತ್ತಿದ್ದವು. ತಪ್ಪಿ ಅದರ ಮೇಲೆ ಕಾಲಿಟ್ಟರೆ ಮನುಷ್ಯನು ಜಾರಿ ಬೀಳಬಹುದಾಗಿತ್ತು. ಆದ್ದರಿಂದ ಸೋನಾರಕಾಕಾ ಆ ಕೊಂಬೆಗಳನ್ನು ಕತ್ತರಿಸಬೇಕೆಂದು ನನಗೆ ಆಗಾಗ ಹೇಳುತ್ತಿದ್ದರು; ಆದರೆ ಕೊಂಬೆಯ ಮೇಲಿನ ಅಸಂಖ್ಯ ಮೊಗ್ಗುಗಳನ್ನು ನೋಡಿ ನಾನು ಕಾಕಾರವರಿಗೆ ಇಷ್ಟು ಮೊಗ್ಗುಗಳು ಅರಳಲಿ, ಕೆಲವೇ ದಿನಗಳಲ್ಲಿ ಹೂವಿನ ಪ್ರಮಾಣವೂ ಕಡಿಮೆಯಾಗುವುದು. ನಂತರ ಕೊಂಬೆಗಳನ್ನು ಕತ್ತರಿಸುತ್ತೇನೆ, ಎಂದು ಹೇಳುತ್ತಿದ್ದೆ.

ಒಂದು ದಿನ ಕೋಪ ಮಿತಿಮೀರಿ ಹೋದುದರಿಂದ ದಾಸವಾಳದ ಕೊಂಬೆಗಳನ್ನು ಕಡಿದೆನು, ಆದರೆ ಈ ಕೃತಿ ವಿಕೃತವಾಗಿತ್ತು ಎಂದು ನನಗೆ ನಂತರ ಅರಿವಾಯಿತು

ಅನೇಕ ದಿನಗಳಾದರೂ ನಾನು ಕೊಂಬೆಗಳನ್ನು ಕತ್ತರಿಸದಿರುವುದರಿಂದ ಒಮ್ಮೆ ಸೋನಾರಕಾಕಾ ಸಿಡಿಮಿಡಿಗೊಂಡು ನನಗೆ ‘ಈಗಲೇ ಕೊಂಬೆಗಳನ್ನು ಕತ್ತರಿಸಿರಿ’, ಎಂದು ಗದರಿಸಿ ಹೇಳಿದರು. ಇದರಿಂದ ನನಗೂ ತುಂಬಾ ಕೋಪ ಬಂದಿತು, ನಾನು ಕೊಂಬೆಗಳನ್ನು ಕತ್ತರಿಸುವ ಕತ್ತರಿ ಮತ್ತು ಕತ್ತಿಯಿಂದ ಗಿಡದ ಕೊಂಬೆಗಳನ್ನು ಕತ್ತರಿಸಿದೆ. ೧೦-೧೨ ಅಡಿ ಎತ್ತರದ ಮರವನ್ನು ನಾನು ಎರಡುವರೆ ಮೂರು ಅಡಿ ಮಾಡಿಬಿಟ್ಟೆ. ನನ್ನ ಆ ಕೃತಿಯೆಂದರೆ ಕೋಪ ಮಿತಿಮೀರಿದರೆ ಮನುಷ್ಯ ಎಷ್ಟು ವಿಕೃತವಾಗಿ ವರ್ತಿಸುತ್ತಾನೆ ಎಂಬುದರ ಉದಾಹರಣೆಯಾಗಿತ್ತು. ಪಶ್ಚಾತ್ತಾಪವಂತೂ ಕೂಡಲೇ ಆಯಿತು; ಆದರೆ ಈಗ ಪಶ್ಚಾತ್ತಾಪ ಪಟ್ಟು ಏನೂ ಉಪಯೋಗವಿರಲಿಲ್ಲ.

ಮಳೆಗಾಲದಲ್ಲಿ ಆ ವೃಕ್ಷವು ಪುನಃ ಬೆಳೆದರೂ ಅದಕ್ಕೆ ಒಂದೂ ಹೂವು ಬರಲಿಲ್ಲ

ಮಳೆಗಾಲದ ದಿನಗಳಿದ್ದವು. ವೃಕ್ಷ ಪುನಃ ಬೇಗ ಬೇಗನೇ ಬೆಳೆಯಿತು. ಆಶ್ಚರ್ಯವೆಂದರೆ ಒಂದು ಕೊಂಬೆಯೂ ಸೋನಾರ ಕಾಕಾರ ತೋಟದ ದಿಕ್ಕಿನಲ್ಲಿ ಬೆಳೆಯಲಿಲ್ಲ. ಎಲೆಗಳು ಹಚ್ಚಹಸಿರಾಗಿದ್ದವು, ಆದರೆ ಒಂದೂ ಹೂವು ಇರಲಿಲ್ಲ. ಅದರ ಅಕ್ಕಪಕ್ಕದ ಗಿಡಗಳಲ್ಲಿ ತುಂಬಾ ಹೂವುಗಳಿದ್ದವು. ದಾಸವಾಳದ ಈ ಗಿಡಕ್ಕೆ ಗೊಬ್ಬರ ಮತ್ತು ಔಷಧವನ್ನು ಸಿಂಪಡಿಸಲಾಯಿತು. ೬ ತಿಂಗಳ ನಂತರ ನನ್ನ ಅಸ್ವಸ್ಥತೆ ಹೆಚ್ಚಾಯಿತು. ಸೋನಾರಕಾಕಾ ಇವರಿಗೂ ಈ ಘಟನೆಯನ್ನು ಹೇಳಿದೆ. ಅವರಿಗೂ ತುಂಬಾ ಕೆಡುಕೆನಿಸಿತು.

ಗಿಡಕ್ಕೆ ಪ್ರತಿದಿನ ಕ್ಷಮೆ ಕೇಳಲು ಆರಂಭಿಸಿದ ನಂತರ ಕೆಲವೇ ದಿನಗಳಲ್ಲಿ ದಾಸವಾಳದ ಗಿಡ ಮೊಗ್ಗುಗಳಿಂದ ತುಂಬಿ ಹೋಯಿತು

ಒಂದು ದಿನ ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಲ್ಲಿನ ಹಿರಿಯ ಕಾರ್ಯಕರ್ತೆ ಸರಸ್ವತಿದೀದಿ ಇವರ ದೂರವಾಣಿ ಸಂಪರ್ಕವಾಯಿತು. ಅವರಿಗೆ ಗಿಡಗಳ ಬಗ್ಗೆ ತುಂಬಾ ಮಾಹಿತಿ ಇತ್ತು. ಆಗ ನಾನು ಅವರಿಗೆ ನಮ್ಮ ದಾಸವಾಳ ಹೂವಿನ ಕಥೆಯನ್ನು ಹೇಳಿದೆ. ಅದಕ್ಕೆ ಅವರು, “ಈ ಗಿಡಕ್ಕೆ ಪ್ರತಿದಿನ ಒಂದು ನಿರ್ದಿಷ್ಠ ಸಮಯದಲ್ಲಿ ಕ್ಷಮೆಯಾಚನೆ ಮಾಡಬೇಕು. ಗಿಡದ ಮೇಲೆ ಪ್ರೀತಿಯಿಂದ ಕೈಯಾಡಿಸಬೇಕು ಅದರ ಜೊತೆಗೆ ಮಾತನಾಡಬೇಕು” ಎಂದು ಹೇಳಿದರು. ಗಿಡಕ್ಕೆ ಕ್ಷಮೆಯಾಚನೆ ಮಾಡುವ ನನ್ನ ಕಾರ್ಯಕ್ರಮ ಆರಂಭವಾಯಿತು. ಮೊದಲನೇ ದಿನ ಸ್ವಲ್ಪ ಕೃತಕವೆನಿಸಿತು; ಆದರೆ ದಿನಕಳೆದಂತೆ, ನನ್ನ ಮಾತಿನಲ್ಲಿ ಮತ್ತು ಸ್ಪರ್ಶದಲ್ಲಿ ಒಂದು ರೀತಿಯ ಪ್ರೇಮ ತಾನಾಗಿಯೇ ನಿರ್ಮಾಣವಾಗಲು ಆರಂಭವಾಯಿತು. ಅದಕ್ಕೆ ಹೂವು ಯಾವಾಗ ಬರಬಹುದು, ಎನ್ನುವ ಉತ್ಸುಕತೆಗಿಂತ ನಮ್ಮಿಬ್ಬರಲ್ಲಿ ಬೇರೆಯೇ ಒಂದು ಸಂಬಂಧ ನಿರ್ಮಾಣವಾಯಿತು. ಅದು ನನಗೆ ಹೂವುಗಳು ಬರುವುದಕ್ಕಿಂತ ಹೆಚ್ಚು ಮಹತ್ವದ್ದೆನಿಸಿತು. ೧೦-೧೨ ದಿನಗಳಾದವು. ಒಂದು ದಿನ ಬೆಳಿಗ್ಗೆ ದಾಸವಾಳದ ಎಲೆಯ ಹಿಂದೆ ಒಂದು ಮೊಗ್ಗು ಅಡಗಿ ಕುಳಿತಿರುವುದು ಕಾಣಿಸಿತು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ನಂತರ ನಾಲ್ಕು ದಿನಗಳಲ್ಲಿಯೇ ದಾಸವಾಳದ ಗಿಡ ಮೊಗ್ಗುಗಳಿಂದ ತುಂಬಿ ಹೋಯಿತು, ಹೂವುಗಳೂ ಅರಳತೊಡಗಿದವು. ಆಗ ಮಾತ್ರ ನನಗೆ ದಾಸವಾಳದ ಗಿಡ ನನ್ನನ್ನು ಕ್ಷಮಿಸಿದೆ ಎಂದು ಖಚಿತವಾಯಿತು. ಅನಂತರ ದಾಸವಾಳದ ಗಿಡದೊಂದಿಗೆ ಮಾತನಾಡುವಾಗ ನಾನು, “ಇನ್ನು ನನ್ನ ಜೀವನದಲ್ಲಿ ಎಂದಿಗೂ ಹೀಗೆ ವರ್ತಿಸುವುದಿಲ್ಲ” ಎಂದು ಹೇಳಿದೆ.

– ಭಾರತೀ ಠಾಕೂರ್, ನರ್ಮದಾಲಯ, ಲೇಪಾ ಪುನರ್ವಾಸ (ಬೈರಾಗಡ), ಜಿಲ್ಲೆ ಖರಗೋನ, ಮಧ್ಯಪ್ರದೇಶ.