ನೆಲಬೇವು (ಕಾಲಮೇಘ) ವನಸ್ಪತಿ ಮತ್ತು ರೋಗಗಳಲ್ಲಿ ಅದರ ಉಪಯೋಗ

ಸನಾತನದ ‘ಮನೆಮನೆಗಳಲ್ಲಿ ಕೈದೋಟ ಅಭಿಯಾನ’

ನೆಲಬೇವು ವನಸ್ಪತಿ (ಕೃಪೆ – ವಿಮೀಡಿಯಾ)
ನೆಲಬೇವು ವನಸ್ಪತಿಯ ಮೇಲೆ ಬಂದ ತುರಾಯಿ (ಗೋಲದಲ್ಲಿ ತೋರಿಸಲಾಗಿದೆ)  (ಕೃಪೆ : live.staticflicker.com)

೧. ಮಹತ್ವ

ಈ ವನಸ್ಪತಿಯು ಸಾಂಕ್ರಾಮಿಕರೋಗಗಳಿಗೆ ತುಂಬಾ ಉಪಯುಕ್ತವಾಗಿದೆ. ಇದು ಬಹಳ ಕಹಿ ಇರುತ್ತದೆ. ಇದನ್ನು ಜ್ವರಕ್ಕೆ ಮತ್ತು ಹೊಟ್ಟೆಯಲ್ಲಿನ ಜಂತುಗಳ ನಿವಾರಣೆಗೆ ಉಪಯೋಗಿಸುತ್ತಾರೆ. ಇದು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ; ಹಾಗಾಗಿ ಕೆಲವೆಡೆಗಳಲ್ಲಿ ಮಳೆಗಾಲದಲ್ಲಿ ಮತ್ತು ಅನಂತರ ಬರುವ ಶರತ್ಕಾಲದಲ್ಲಿ ವಾರಕ್ಕೊಮ್ಮೆ ಅದರ ಕಷಾಯ ಮಾಡಿ ಸೇವಿಸುವ ವಾಡಿಕೆ ಇದೆ. ಇದರಿಂದ ಶರೀರವು ಆರೋಗ್ಯವಂತವಾಗಿರುತ್ತದೆ.

೨. ಪರಿಚಯ

ಇದರ ಲ್ಯಾಟಿನ್ ಹೆಸರು Andrographis paniculata ಎಂದಾಗಿದೆ. ಈ ವನಸ್ಪತಿಗೆ ಕರಾವಳಿಯಲ್ಲಿ ‘ಕಿರಾಯತ’ ಎನ್ನುತ್ತಾರೆ. ಕರಾವಳಿಯ ಜನರಿಗೆ ಈ ವನಸ್ಪತಿಯು ಸುಪರಿಚಿತವಾಗಿದೆ. ಮಳೆಗಾಲದ ಆರಂಭದಲ್ಲಿ ಇದಕ್ಕೆ ಬಹಳಷ್ಟು ಎಲೆಗಳು ಬರುತ್ತವೆ. (ಛಾಯಾಚಿತ್ರ ೧) ಈ ವನಸ್ಪತಿಯ ಆಯುಷ್ಯವು ೯೦ ರಿಂದ ೧೦೦ ದಿನಗಳದ್ದಾಗಿರುತ್ತದೆ. ಮಳೆಗಾಲದ ನಂತರ ನೀರು ಹಾಕಿದರೆ ಈ ವನಸ್ಪತಿ ಬದುಕುತ್ತದೆ, ಇಲ್ಲದಿದ್ದರೆ ಒಣಗುತ್ತದೆ. ಬಹಳಷ್ಟು ಸಲ ಕರಾವಳಿಯಲ್ಲಿ ಮಳೆಗಾಲದ ನಂತರ ಒಣಗಿದ ಸ್ಥಿತಿಯಲ್ಲಿ ಈ ವನಸ್ಪತಿಯು ಅಲ್ಲಲ್ಲಿ ಕಾಣಿಸುತ್ತದೆ. ಮಳೆಗಾಲದ ಕೊನೆಯಲ್ಲಿ ಈ ವನಸ್ಪತಿಗೆ ಚಿಕ್ಕ ತುರಾಯಿಗಳು ಬರುತ್ತವೆ. (ಛಾಯಾಚಿತ್ರ ೨) ಅವುಗಳಲ್ಲಿ ಬೀಜಗಳಿರುತ್ತವೆ.

೩. ಬೆಳೆಸುವುದು

ಈ ವನಸ್ಪತಿ ಕರಾವಳಿಯಲ್ಲಿ ಹೆಚ್ಚಿನ ಜನರ ಮನೆಗಳಲ್ಲಿ ಇರುತ್ತದೆ. ಮೊದಲ ಮಳೆ ಬಿದ್ದ ಮೇಲೆ ಈ ವನಸ್ಪತಿಯ ಸಸಿಗಳು ಮೊದಲು ಬಿದ್ದಿರುವ ಬೀಜಗಳಿಂದ ಬಹಳಷ್ಟು ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತವೆ. ಈ ಸಸಿಗಳನ್ನು ತಂದು ಮನೆಯಲ್ಲಿ ನೆಡಬಹುದು. ಮಳೆಗಾಲ ಮುಗಿಯುವಾಗ ಬರುವ ಬೀಜಗಳನ್ನು ಸಂಗ್ರಹಿಸಿಟ್ಟರೆ ಮುಂದಿನ ಮಳೆಗಾಲದ ಆರಂಭದಲ್ಲಿ ಅವುಗಳನ್ನು ಬಿತ್ತಿ ಅವುಗಳಿಂದಲೂ ಸಸಿಗಳನ್ನು ತಯಾರಿಸಬಹುದು. ನೀರು ಲಭ್ಯವಿದ್ದರೆ ಮನೆಯಲ್ಲಿ ಕುಂಡಗಳಲ್ಲಿ ಈ ಬೀಜಗಳನ್ನು ಯಾವಾಗ ಬೇಕಾದರೂ ಬಿತ್ತಬಹುದು.

೪. ರೋಗಗಳಲ್ಲಿ ಇದರ ಉಪಯೋಗ

೪ ಅ. ಜ್ವರ : ಯಾವುದೇ ಜ್ವರವಿದ್ದರೂ ಮುಷ್ಠಿಯಷ್ಟು ನೆಲಬೇವು ಮತ್ತು ಕಾಲು ಚಮಚ ಶುಂಠಿಯ ಪುಡಿಯನ್ನು ೨ ಲೋಟ ನೀರಿನಲ್ಲಿ ಹಾಕಿ ಕುದಿಸಿ ಒಂದು ಲೋಟ ಕಷಾಯವನ್ನು ತಯಾರಿಸಬೇಕು. ಈ ಕಷಾಯವನ್ನು ಅರ್ಧ ಲೋಟ ಬೆಳಗ್ಗೆ ಮತ್ತು ಅರ್ಧ ಲೋಟ ಸಾಯಂಕಾಲ ಕುಡಿಯಬೇಕು. (ಕೊರೊನಾದ ಕಾಲದಲ್ಲಿ ಅನೇಕ ವೈದ್ಯರು ಈ ವನಸ್ಪತಿಯನ್ನು ಉಪಯೋಗಿಸಿ ಕೊರೊನಾದ ಮೇಲೆ ಯಶಸ್ವಿ ಚಿಕಿತ್ಸೆಯನ್ನು ಮಾಡಿದುದರ ಉದಾಹರಣೆಗಳಿವೆ.)

೪ ಆ. ಆಮ್ಲಪಿತ್ತ : ಒಣಗಿದ ನೆಲಬೇವಿನ (ಎಲೆಗಳ) ಪುಡಿಯನ್ನು ಮಾಡಿಡಬೇಕು. ಗಂಟಲಿನಲ್ಲಿ ಅಥವಾ ಎದೆಯಲ್ಲಿ ಉರಿ ಆಗುತ್ತಿದ್ದರೆ (ಎಸಿಡಿಟಿ) ಅರ್ಧ ಚಮಚ ನೆಲಬೇವಿನ ಪುಡಿಯನ್ನು ಅರ್ಧ ಚಮಚ ಸಕ್ಕರೆಯ ಜೊತೆಗೆ ಜಗಿದು ತಿನ್ನಬೇಕು.

೪ ಇ. ಮಲಬದ್ಧತೆ, ಪಿತ್ತ ಮತ್ತು ಉಷ್ಣತೆ : ಮುಷ್ಟಿಯಷ್ಟು ನೆಲಬೇವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಿ ಅರ್ಧ ಲೋಟದಷ್ಟು ಕಷಾಯ ತಯಾರಿಸಬೇಕು ಮತ್ತು ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಪ್ರತಿ ಶರತ್ಕಾಲದಲ್ಲಿ ಈ ಕಷಾಯವನ್ನು ವಾರದಲ್ಲಿ ಒಂದು ಸಲ ಕುಡಿಯಬೇಕು.

೪ ಈ. ಹೊಟ್ಟೆಯಲ್ಲಿ ಜಂತುಗಳು ಆಗುವುದು, ಚರ್ಮರೋಗ ಮತ್ತು ರಕ್ತಶುದ್ಧಿಗಾಗಿ : ಸತತವಾಗಿ ೭ ದಿನ ಒಂದು ಮುಷ್ಟಿಯಷ್ಟು ನೆಲಬೇವನ್ನು ಒಂದು ಲೋಟದಷ್ಟು ನೀರಿನಲ್ಲಿ ಕುದಿಸಿ ಅದರ ಅರ್ಧದಷ್ಟು ಕಷಾಯ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

೫. ವಿಶೇಷ ಸೂಚನೆ

ಈ ವನಸ್ಪತಿಯು ವಾತವನ್ನು ಹೆಚ್ಚಿಸುತ್ತದೆ, ಆದುದರಿಂದ ಜ್ವರ ಇಲ್ಲದಿರುವಾಗ ಮತ್ತು ವೈದ್ಯರ ಸಲಹೆಯ ಹೊರತು ಇದರ ಕಷಾಯವನ್ನು ಪ್ರತಿದಿನ ಸೇವಿಸಬಾರದು. ವೈದ್ಯರ ಸಲಹೆಯ ಹೊರತು ಈ ವನಸ್ಪತಿಯನ್ನು ೭ ದಿನಗಳಿಗಿಂತ ಹೆಚ್ಚು ಕಾಲ ಸತತ ಬಳಸಬಾರದು.

೬. ಕೃಷಿಗಾಗಿ ನೆಲಬೇವಿನ ಬೀಜಗಳನ್ನು ಈ ರೀತಿ ಸಂಗ್ರಹಿಸಿಡಿ

ಮಳೆಗಾಲದ ನಂತರ ಒಣಗಿದ ನೆಲಬೇವಿನ ಗಿಡಗಳನ್ನು ಬೇರುಸಹಿತ ಕೀಳಬೇಕು. ಬೇರಿನ ಕಡೆಗಿನ ಭಾಗವನ್ನು ಕತ್ತರಿಸಿ ಬೇರೆ ಇಡಬೇಕು. ವನಸ್ಪತಿಯ ಮೇಲಿನ ಭಾಗವನ್ನು ಪ್ಲಾಸ್ಟಿಕಿನ ಚೀಲದಲ್ಲಿ ಹಾಕಿ ಎರಡೂ ಕೈಗಳಲ್ಲಿ ಹಿಡಿದು ಉಜ್ಜಬೇಕು. ಹೀಗೆ ಮಾಡುವುದರಿಂದ ವನಸ್ಪತಿಯ ಬೀಜಗಳು ಚೀಲದಲ್ಲಿ ಜಮೆಯಾಗುತ್ತವೆ. ಈ ಬೀಜಗಳನ್ನು ತಟ್ಟೆಯಲ್ಲಿ ತೆಗೆದುಕೊಂಡು ಅವುಗಳ ಮೇಲೆ ನಿಧಾನವಾಗಿ ಊದಬೇಕು, ಹೀಗೆ ಮಾಡಿದರೆ ಅದರಲ್ಲಿರುವ ಎಲೆಗಳ ಕಸವು ಪಕ್ಕಕ್ಕೆ ಹೋಗುವುದು. ಈ ರೀತಿ ಕಸವಿರದ ಬೀಜಗಳನ್ನು ಒಟ್ಟುಗೂಡಿಸಿ ಕಾಗದದಲ್ಲಿ ಕಟ್ಟಿ ಪ್ಲಾಸ್ಟಿಕಿನ ಚೀಲದಲ್ಲಿ ಇಡಬೇಕು. ಜೊತೆಗೆ ಬೀಜಗಳನ್ನು ಸಂಗ್ರಹಿಸಿದ ದಿನಾಂಕವನ್ನು ಬರೆದಿಡಬೇಕು. ಇದರಲ್ಲಿನ ಸ್ವಲ್ಪ ಬೀಜಗಳನ್ನು ಕೃಷಿಗಾಗಿ ತಯಾರಿಸಲಾದ ಮಡಿಗಳಲ್ಲಿ ಅಥವಾ ಕುಂಡದಲ್ಲಿ ಬಿತ್ತಬೇಕು. ಸ್ವಲ್ಪ ಬೀಜಗಳನ್ನು ಮಳೆಗಾಲಕ್ಕಾಗಿ ಉಪಯೋಗಿಸಲು ಸಂಗ್ರಹಿಸಿಡಬೇಕು. (ಚಿಟಿಕೆಯಷ್ಟು ಬೀಜದಿಂದಲೂ ಬಹಳಷ್ಟು ಸಸಿಗಳು ಅಂಕುರಿಸುತ್ತವೆ.)

೭. ಒಣಗಿದ ವನಸ್ಪತಿಯನ್ನು ಒಳ್ಳೆಯದಾಗಿ ಸಂಗ್ರಹಿಸಿಡಿ !

ಬೀಜಗಳನ್ನು ತೆಗೆದ ನೆಲಬೇವಿನ ವನಸ್ಪತಿಯನ್ನು ಮತ್ತು ಅದರ ಬೇರುಗಳನ್ನು ನೀರಿನಲ್ಲಿ ಪ್ರತ್ಯೇಕವಾಗಿ ತೊಳೆದು ನಂತರ ಒಟ್ಟುಗೂಡಿಸಿ ನೆರಳಿನಲ್ಲಿ ಒಣಗಿಸಿಡಬೇಕು. ಬೇರುಗಳನ್ನು ಪ್ರತ್ಯೇಕವಾಗಿ ತೊಳೆಯುವುದರಿಂದ ಬೇರುಗಳಿಗೆ ಅಂಟಿಕೊಂಡಿರುವ ಮಣ್ಣು ವನಸ್ಪತಿಗೆ ತಾಗುವುದಿಲ್ಲ. ಈ ಒಣಗಿದ ವನಸ್ಪತಿಯನ್ನು ಕಷಾಯ ಮಾಡಲು, ಹಾಗೆಯೇ ಚೂರ್ಣವನ್ನು ಮಾಡಿ ಉಪಯೋಗಿಸಲು ಬರುತ್ತದೆ. ಮನೆಯಲ್ಲಿಯೇ ಚೂರ್ಣವನ್ನು ಮಾಡುವುದಿದ್ದರೆ ಅದನ್ನು ಮಿಕ್ಸರ್‌ನಲ್ಲಿ ಮಾಡಬಹುದು. ಮಿಕ್ಸರ್‌ನಲ್ಲಿ ಪುಡಿಯನ್ನು ಮಾಡುವ ಮೊದಲು ವನಸ್ಪತಿಯನ್ನು ಸ್ವಲ್ಪ ಸಮಯ ಬಿಸಿಲಿನಲ್ಲಿ ಒಣಗಿಸಬೇಕು, ಇದರಿಂದ ಚೂರ್ಣವು ಸಹಜವಾಗಿ ತಯಾರಾಗುತ್ತದೆ. ಒಣಗಿದ ವನಸ್ಪತಿ ಅಥವಾ ಅದರ ಚೂರ್ಣವನ್ನು ಪ್ಲಾಸ್ಟಿಕಿನ ಚೀಲದಲ್ಲಿ ವ್ಯವಸ್ಥಿತವಾಗಿ ಕಟ್ಟಿ (ಪ್ಯಾಕ್ ಮಾಡಿ) ಇಡಬೇಕು. ಹೊರಗಿನ ಗಾಳಿ ತಾಗದಿದ್ದರೆ, ವ್ಯವಸ್ಥಿತವಾಗಿ ಒಣಗಿಸಿಟ್ಟ ವನಸ್ಪತಿಯನ್ನು ಸುಮಾರು ೨ ವರ್ಷಗಳ ಕಾಲ ಉಪಯೋಗಿಸಬಹುದು.

೮. ನೆಲಬೇವಿನ ಬೀಜ ಮತ್ತು ಒಣಗಿದ ವನಸ್ಪತಿಯನ್ನು ಸ್ಥಳೀಯ ಸ್ತರದಲ್ಲಿ ಹಂಚಿಕೊಳ್ಳಿರಿ !

ಯಾವ ಸಾಧಕರ ಬಳಿ ಈ ವನಸ್ಪತಿಯು ಲಭ್ಯವಿದೆಯೋ, ಅವರು ಅದನ್ನು ತಮಗೆ ಆವಶ್ಯಕವಿದ್ದಷ್ಟು ಇಟ್ಟುಕೊಂಡು ಉಳಿದ ವನಸ್ಪತಿಯನ್ನು ಇತರ ಸಾಧಕರಿಗೆ ಕೊಡಬಹುದು. ನೆಲಬೇವಿನ ಬೀಜಗಳನ್ನೂ ಸಾಧಕರು ಪರಸ್ಪರರಲ್ಲಿ ಹಂಚಿಕೊಂಡು ಮನೆಯಲ್ಲಿ ಅದನ್ನು ಬೆಳೆಸಬಹುದು.

(ಟಿಪ್ಪಣಿ – ಯಾವ ಪ್ರದೇಶದಲ್ಲಿ ನೆಲಬೇವು ವನಸ್ಪತಿ ಸಿಗುತ್ತದೆಯೋ, ಅದೇ ಪ್ರದೇಶದಲ್ಲಿ ಅದರ ಕೃಷಿಯನ್ನು ಮಾಡಬೇಕು. ಎಲ್ಲಿ ಈ ವನಸ್ಪತಿಯು ನೈಸರ್ಗಿಕವಾಗಿ ಸಿಗುವುದಿಲ್ಲವೋ, ಅಲ್ಲಿ ಈ ವನಸ್ಪತಿಯನ್ನು ಬೆಳೆಸುವ ಆವಶ್ಯಕತೆ ಇಲ್ಲ. ಇಂತಹ ಭಾಗಗಳಲ್ಲಿ ಕಹಿಬೇವಿನ ಎಲೆಗಳನ್ನು ಈ ವನಸ್ಪತಿಯಂತೆ ಉಪಯೋಗಿಸಲು ಬರುತ್ತದೆ.)

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೦.೧೧.೨೦೨೧)

ಸನಾತನದ ‘ಮನೆಮನೆಗಳಲ್ಲಿ ಕೈದೋಟ ಅಭಿಯಾನ’ ಇದು ಈಶ್ವರೀ ನಿಯೋಜನೆ ಆಗಿರುವುದರ ಬಗ್ಗೆ ಸಾಧಕಿಗೆ ಬಂದ ಅನುಭೂತಿ

ಸೌ. ರಾಘವೀ ಕೋನೆಕರ

ಕಾರ್ತಿಕ ಏಕಾದಶಿಯಿಂದ ಸನಾತನವು ‘ಮನೆಮನೆಗಳಲ್ಲಿ ಕೈದೋಟ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದ ಅಂತರ್ಗತ ಎಲ್ಲೆಡೆಯ ಸಾಧಕರಿಗೆ ‘ನೈಸರ್ಗಿಕ ಬೇಸಾಯ’ ಪದ್ಧತಿಯ ಮಹತ್ವವನ್ನು ಹೇಳಿ ಅದರಂತೆ ಕೃಷಿಯನ್ನು ಹೇಗೆ ಮಾಡಬೇಕು, ಎಂಬುದರ ಬಗ್ಗೆ ಮಾರ್ಗದರ್ಶನವನ್ನು ಮಾಡಲಾಗುತ್ತಿದೆ. ಇದರ ಬಗೆಗಿನ ಸವಿಸ್ತಾರ ಲೇಖನವು ೧೪.೧೧.೨೦೨೧ ರ ದೈನಿಕ ‘ಸನಾತನ ಪ್ರಭಾತ’ದಲ್ಲಿ ಪ್ರಕಟವಾಗಿತ್ತು. ಅನಂತರ ಕೇವಲ ೫ ದಿನಗಳ ನಂತರ, ಅಂದರೆ ೨೦.೧೧.೨೦೨೧ ರ ದೈನಿಕ ‘ಸನಾತನ ಪ್ರಭಾತ’ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ನೈಸರ್ಗಿಕ ಕೃಷಿಗೆ ಪ್ರೋತ್ಸಾಹ ನೀಡಲು ಸಮಿತಿಯನ್ನು ಸ್ಥಾಪಿಸುವೆವು’, ಎಂಬ ಘೋಷಣೆಯನ್ನು ಮಾಡಿದುದರ ವಾರ್ತೆಯು ಪ್ರಕಟವಾಯಿತು. ‘ಈ ಎರಡೂ ಘಟನೆಗಳೆಂದರೆ ಕೇವಲ ಕಾಕತಾಳೀಯ ಆಗಿರದೇ ದೇಶದಲ್ಲಿ ಬೇಸಾಯದ ಬಗ್ಗೆ ಕ್ರಾಂತಿಯನ್ನು ನಿರ್ಮಿಸುವ ಈಶ್ವರೀ ಸಂಕೇತವೇ ಆಗಿವೆ’, ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬಂದಿತು. ಈ ಘಟನೆಯಿಂದ ಸಂಸ್ಥೆಯು ಕೈಗೊಂಡ ‘ಮನೆಮನೆಗಳಲ್ಲಿ ಕೈದೋಟ ಅಭಿಯಾನ’ ಇದು ಈಶ್ವರೀ ನಿಯೋಜನೆ ಆಗಿರುವುದು ಅಧೋರೇಖಿತವಾಯಿತು. ಕಾಲಾನುಸಾರ ಆವಶ್ಯಕವಾಗಿರುವ ಈ ಅಭಿಯಾನದಲ್ಲಿ ಎಲ್ಲ ಸಾಧಕರಿಗೆ ಪಾಲ್ಗೊಳ್ಳುವ ಅವಕಾಶವನ್ನು ನೀಡಿದ ಬಗ್ಗೆ ಶ್ರೀ ಗುರುಗಳ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

– ಸೌ. ರಾಘವೀ ಮಯುರೇಶ ಕೋನೆಕರ, ಫೋಂಡಾ, ಗೋವಾ. (೨೨.೧೧.೨೦೨೧)

ಸಾಧಕರಿಗೆ ಸೂಚನೆ

ವೈದ್ಯ ಮೇಘರಾಜ ಪರಾಡಕರ

ಸನಾತನದ ಜಾಲತಾಣದಲ್ಲಿನ ಕೃಷಿಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡಿಲ್ಲದಿದ್ದರೆ ಅವುಗಳನ್ನು ಆದಷ್ಟು ಬೇಗನೆ ನೋಡಿ ಕೃಷಿಯನ್ನು ಆರಂಭಿಸಿ !

‘ಕಾರ್ತಿಕ ಏಕಾದಶಿಯಿಂದ (೧೫.೧೧.೨೦೨೧ ರಿಂದ) ಸನಾತನವು ‘ಮನೆಮನೆಗಳಲ್ಲಿ ಕೈದೋಟ ಅಭಿಯಾನ’ವನ್ನು ಹಮ್ಮಿಕೊಂಡಿದೆ. ಆಪತ್ಕಾಲದ ಪೂರ್ವಸಿದ್ಧತೆಯೆಂದು ಪ್ರತಿಯೊಬ್ಬ ಸಾಧಕರ ಮನೆಯಲ್ಲಿ ಸ್ವಲ್ಪವಾದರೂ ತರಕಾರಿ, ಹಣ್ಣಿನ ಗಿಡಗಳು ಮತ್ತು ಔಷಧಿ ವನಸ್ಪತಿಗಳನ್ನು ಬೆಳೆಸಬೇಕು, ಎಂಬುದು ಈ ಅಭಿಯಾನದ ಉದ್ದೇಶವಾಗಿದೆ. ಅತ್ಯಂತ ಸುಲಭ ಮತ್ತು ನೈಸರ್ಗಿಕ ಪದ್ಧತಿಯಿಂದ ಮಾರುಕಟ್ಟೆಯಿಂದ ಏನನ್ನೂ ಖರೀದಿಸದೇ ಮನೆಯಲ್ಲಿಯೇ ಗಿಡಗಳನ್ನು ಹೇಗೆ ಬೆಳೆಸಬೇಕು, ಎಂಬ ಸವಿಸ್ತಾರ ಮಾರ್ಗದರ್ಶನ ಮಾಡುವ ವಿಡಿಯೋಗಳನ್ನು ಸನಾತನದ ಜಾಲತಾಣದಲ್ಲಿ (ಪಕ್ಕದಲ್ಲಿ ಚೌಕಟ್ಟಿನಲ್ಲಿ ನೀಡಿದ ಕೊಂಡಿಯಲ್ಲಿ) ನೀಡಲಾಗಿದೆ. ಸಾಧಕರು ಈ ವಿಡಿಯೋಗಳನ್ನು ನೋಡಿರದಿದ್ದರೆ ಆದಷ್ಟು ಬೇಗನೆ ನೋಡಬೇಕು ಮತ್ತು ವಿಷಯ ತಿಳಿದು ಕೃಷಿಯನ್ನು ಆರಂಭಿಸಬೇಕು’.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೧೧.೨೦೨೧)

ಸನಾತನದ ಜಾಲತಾಣದಲ್ಲಿ ಓದಿರಿ : ‘ಮನೆಯಲ್ಲಿಯೇ ನೈಸರ್ಗಿಕ ಪದ್ಧತಿಯಿಂದ ಕೃಷಿಯನ್ನು ಹೇಗೆ ಮಾಡಬೇಕು’, ಈ ಬಗೆಗಿನ ಸವಿಸ್ತಾರ ಮಾಹಿತಿ

www.sanatan.org/mr/a/82985.html  (ಈ ಕೊಂಡಿಯಲ್ಲಿ  ನೇರವಾಗಿ ಹೋಗಲು ಪಕ್ಕದ ‘QR’ ಕೊಡನ್ನು‘ಸ್ಕ್ಯಾನ್’ ಮಾಡಿರಿ !)

ಟಿಪ್ಪಣಿ – ‘QR ಕೋಡ್’ ಎಂದರೆ ‘Quick Response ಕೋಡ್’. ‘ಸ್ಮಾರ್ಟ್ ಫೋನ್’ ನಲ್ಲಿನ ‘QR ಕೋಡ್ ಸ್ಕ್ಯಾನ್‌ರ್’ ಈ ತಂತ್ರಾಶವನ್ನು (ಆಪ್) ಆರಂಭಿಸಿ ‘QR ಕೊಡ್’ದ ಮೇಲೆ ‘ಸ್ಮಾರ್ಟ್ ಫೋನ್‌’ನ ಛಾಯಾಚಿತ್ರಕವನ್ನು (ಕ್ಯಾಮೆರಾವನ್ನು) ಹಿಡಿಯಬೇಕು, ಅಂದರೆ ‘ಕೋಡ್’ ‘ಸ್ಕ್ಯಾನ್’ ಆಗುತ್ತದೆ ಮತ್ತು ‘ಸ್ಮಾರ್ಟ್ ಫೋನ್’ನಲ್ಲಿನ ಜಾಲತಾಣದ ಕೊಂಡಿಯು ತಾನಾಗಿಯೇ ತೆರೆಯುತ್ತದೆ. ಅದರ ಬೆರಳಚ್ಚು ಮಾಡಬೇಕಾಗುವುದಿಲ್ಲ.