ಡಾ. ಝಾಕಿರ್ ನಾಯಕ್ ಈತನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ಗೆ ೫ ವರ್ಷಗಳ ಕಾಲ ನಿಷೇಧ ವಿಸ್ತರಣೆ

ಕೇಂದ್ರ ಸರಕಾರವು ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ಜಿಹಾದಿ ಸಂಘಟನೆಯ ಮೇಲೆಯೂ ನಿಷೇಧ ಹೇರಬೇಕು, ಎಂದು ದೇಶಭಕ್ತರಿಗೆ ಅನಿಸುತ್ತದೆ !

ನವ ದೆಹಲಿ : ಜಿಹಾದಿ ಭಯೋತ್ಪಾದಕರಿಗೆ ಆದರ್ಶವಾಗಿರುವ ಡಾ. ಝಾಕಿರ್ ನಾಯಕ್ ಇವನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ ಅನ್ನು ಕೇಂದ್ರ ಸರಕಾರವು ೫ ವರ್ಷಗಳ ಕಾಲ ನಿಷೇಧಿಸಿದೆ. ಈ ಸಂಘಟನೆಯು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತದೆ ಎಂದು ಸರಕಾರವು ಆರೋಪಿಸಿದೆ. ಕಾನೂನುಬಾಹಿರ ಕೃತ್ಯ ತಡೆ ಕಾನೂನು (ಯು.ಎ.ಪಿ.ಎ.ಅನುಸಾರ) ಇದರ ಅಡಿಯಲ್ಲಿ ನಿಷೇಧಕ್ಕೊಳಗಾದ ಇದು ಮೊದಲ ಸಂಘಟನೆಯಾಗಿದೆ. ಝಾಕಿರ್ ನಾಯಿಕ ಸದ್ಯ ಮಲೇಷ್ಯಾದಿಂದ ‘ಇಂಟರ್ನೆಟ್ ಸ್ಯಾಟಲೈಟ್ ಟಿವಿ’ ಬಳಸಿಕೊಂಡು ಜಗತ್ತಿನಾದ್ಯಂತ ತನ್ನ ಅನುಯಾಯಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾನೆ. ಇದೇ ರೀತಿ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮ ಮತ್ತು ಮುದ್ರಿತ ಸಾಹಿತ್ಯಗಳನ್ನು ಸಹ ಬಳಸುತ್ತಿದ್ದಾನೆ.

ನಿಷೇಧದ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ವಿವರಿಸುತ್ತಾ, ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ ದೇಶದ ಭದ್ರತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿದೆ. ಈ ಸಂಘಟನೆಯು ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡಬಹುದು, ಜೊತೆಗೆ ದೇಶದ ಜಾತ್ಯತೀತತೆಗೆ ಧಕ್ಕೆ ತರಬಹುದು. ಈ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯಸ್ಥ ಝಾಕಿರ್ ನಾಯಿಕ ಹಾಗೂ ಈ ಸಂಘಟನೆಯ ಸದಸ್ಯರು ತಮ್ಮ ಅನುಯಾಯಿಗಳಿಗೆ ಧರ್ಮದ ಆಧಾರದಲ್ಲಿ ಉದ್ರೇಕಿಸುತ್ತಿದ್ದಾರೆ, ಜೊತೆಗೆ ದ್ವೇಷ ಹರಡಿ ವೈರತ್ವದ ಭಾವನೆಯನ್ನು ಹುಟ್ಟು ಹಾಕುತ್ತಿದ್ದಾರೆ. ಇದರಿಂದ ದೇಶದ ಐಕ್ಯತೆಗೆ ಧಕ್ಕೆಯಾಗುತ್ತಿದೆ. ಝಾಕಿರ್ ನಾಯಿಕ ಈತನ ಭಾಷಣಗಳು ಆಕ್ಷೇಪಾರ್ಹ ಮತ್ತು ಪ್ರಚೋದನಾಕಾರಿಯಾಗಿವೆ. ಇದರಿಂದ ಆತ ಭಾರತದ ಕೆಲವು ವಿಶಿಷ್ಟ ಭಾಗಗಳಲ್ಲಿ ಧಾರ್ಮಿಕ ದ್ವೇಷವನ್ನು ಹೆಚ್ಚಿಸುವ ಮೂಲಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಲು ಯುವಕರನ್ನು ಉತ್ತೇಜಿಸುತ್ತಾನೆ.

ಈ ಸಂಘಟನೆಯನ್ನು ಈಗ ನಿಷೇಧಿಸದಿದ್ದರೆ, ಈ ಸಂಘಟನೆಯು ತನ್ನ ಬೆಂಬಲಿಗರನ್ನು ಒಗ್ಗೂಡಿಸಿ ವಿಧ್ವಂಸಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು. ಹಾಗಾಗಿ ದೇಶದ ಐಕ್ಯತೆಗೆ ಧಕ್ಕೆಯಾಗಬಹುದು’ ಎಂದು ಹೇಳಿದೆ.