ಉತ್ತರಪ್ರದೇಶ ಪೊಲೀಸರು ಥಳಿಸಿದ್ದರಿಂದ ಉದ್ಯಮಿ ಸಾವು

ಅಮಾನತ್ತುಗೊಳಿಸಲಾದ 6 ಪೊಲೀಸರು ನಂತರ ನಾಪತ್ತೆ

ಸಮಾಜವಾದಿ ಪಕ್ಷದಿಂದ ಉದ್ಯಮಿಯ ಕುಟುಂಬಕ್ಕೆ 20 ಲಕ್ಷ ರೂ.ಗಳ ನಗದು ಸಹಾಯದ ಘೋಷಣೆ

* ಕಾನೂನಿನ ಹೆಸರಿನಲ್ಲಿ ಯಾರನ್ನಾದರೂ ಹೊಡೆದು ಸಾಯಿಸುವುದು ಗೂಂಡಾಗಿರಿಗಿಂತ ದೊಡ್ಡ ಅಪರಾಧವಾಗಿದೆ. ಆದ್ದರಿಂದ ಅಂತಹ ಪೊಲೀಸರಿಗೆ ಗಲ್ಲು ಶಿಕ್ಷೆ ನೀಡಲು ಉತ್ತರಪ್ರದೇಶ ಸರಕಾರವು ಪ್ರಯತ್ನಿಸಬೇಕು !

* ಭಾಜಪದ ಸರಕಾರವಿರುವ ರಾಜ್ಯದಲ್ಲಿ ಈ ರೀತಿಯ ಘಟನೆಗಳಾಗುವುದು, ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಕಾನಪುರ (ಉತ್ತರಪ್ರದೇಶ) – ಇಲ್ಲಿನ 36 ವರ್ಷದ ಉದ್ಯಮಿ ಮನೀಷ ಗುಪ್ತಾ ಅವರು ಗೊರಖಪುರಕ್ಕೆ ವಿಹಾರಕ್ಕೆಂದು ಹೋಗಿದ್ದಾಗ ಪೊಲೀಸರಿಂದಾದ ಥಳಿತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದರಿಂದ 6 ಪೊಲೀಸರನ್ನು ಅಮಾನತ್ತುಗೊಳಿಸಲಾಗಿದೆ. ಅವರ ಮೇಲೆ ಅಪರಾಧ ನೋಂದಾಯಿಸಲಾಗಿದೆ. ಈ ಎಲ್ಲಾ ಪೊಲೀಸರು ಈಗ ನಾಪತ್ತೆಯಾಗಿದ್ದಾರೆ. ಈ ಪ್ರಕರಣದ ಅನ್ವೇಷಣೆಯನ್ನು ಅಪರಾಧ ಶಾಖೆಗೆ ವಹಿಸಲಾಗಿದೆ. ಈ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವರವರು ಸಂತ್ರಸ್ತ ಗುಪ್ತಾ ಕುಟುಂಬದವರ ಮನೆಗೆ ಭೇಟಿ ನೀಡಿ ಅವರಿಗೆ 20 ಲಕ್ಷ ನಗದು ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ.

ಗೊರಖಪುರದ ರಾಮಗಢತಾಲ ಪ್ರದೇಶದಲ್ಲಿರುವ ಒಂದು ಹೊಟೇಲಿಗೆ ಮನೀಷ ಗುಪ್ತಾರವರು ಪ್ರದೀಪ ಚೌಹಾನ ಹಾಗೂ ಹರದೀಪ ಸಿಂಹ ಎಂಬ ತಮ್ಮ ಸ್ನೇಹಿತರೊಂದಿಗೆ ಬಂದಿದ್ದರು. ರಾತ್ರಿ ಹೊಟೇಲಿಗೆ ವಿಚಾರಣೆಗೆಂದು ಬಂದ ಪೊಲೀಸರು ಹಾಗೂ ಗುಪ್ತಾರವರ ನಡುವೆ ಕಾರಣಾಂತರದಿಂದ ವಾದ ನಡೆಯಿತು. ಅನಂತರ ಪೊಲೀಸರು ಅವರನ್ನು ಅಮಾನುಷವಾಗಿ ಥಳಿಸಿದರು. ಹೊಡೆತದಿಂದ ಪ್ರಜ್ಞೆ ತಪ್ಪಿದ ಬಳಿಕ ಪೊಲೀಸರು ಅವರನ್ನು ಒಂದು ಖಾಸಗಿ ಆಸ್ಪತ್ರೆಗೆ ಸೇರಿಸಿದರು; ಆದರೆ ಅವರ ಸ್ಥಿತಿ ಗಂಭೀರವಾಗಿರುವುದು ಗಮನಕ್ಕೆ ಬಂದ ಮೇಲೆ ಅವರನ್ನು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕರೆದೊಯ್ಯಲಾಯಿತು. ಅನಂತರ ಮನೀಷ ಗುಪ್ತಾರವರ ನಿಧನವಾಯಿತು. ಪೊಲೀಸರು ಸಾವಿನ ಬಳಿಕ ಮೃತದೇಹವನ್ನು ಒಂದುವರೆ ಗಂಟೆಗಳ ಕಾಲ ಅಡಗಿಸಿಟ್ಟಿದ್ದಾಗಿ ಹೇಳಲಾಗುತ್ತಿದೆ.

ಮನೀಷರ ಶವವಿಚ್ಛೇದನೆಯ ವರದಿಯಂತೆ ಅವರ ಶರೀರದ ಮೇಲೆ 4 ಗಂಭೀರವಾದ ಗುರುತುಗಳು ಕಂಡುಬಂದಿವೆ. ಮನೀಷರ ತಲೆಗಾಗಿರುವ ಹೊಡೆತವೇ ಅವರಿಗೆ ಮಾರಣಾಂತಿಕವಾಗಿ ಪರಿಣಮಿಸಿದೆ ಎಂದು ತಿಳಿದುಬಂದಿದೆ. ಎಡಗೈನ ಮಣಿಕಟ್ಟಿನ ಮೇಲೆ ಲಾಠಿಯ ಗುರುತುಗಳಿವೆ. ಮನೀಷರವರನ್ನು ಲಾಠಿಯಿಂದ ಥಳಿಸಿರುವುದಾಗಿ ಕಂಡು ಬರುತ್ತದೆ, ಹಾಗೂ ಬಲಗಣ್ಣಿನ ಮೇಲೆಯೂ ಹೊಡೆದಿರುವುದು ಕಂಡು ಬಂದಿದೆ.