ಅನಧಿಕೃತವೆಂದು ಬಿಂಬಿತವಾದ ದೇವಸ್ಥಾನಗಳ ಬಗೆಗಿನ ದೋಷಪೂರ್ಣ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿ ದೇವಸ್ಥಾನಗಳನ್ನು ರಕ್ಷಿಸಿ – ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ

ರಾಜ್ಯದಲ್ಲಿ ಕೆಲವು ದಿನಗಳಿಂದ ಅನಧಿಕೃತ ದೇವಸ್ಥಾನದ ಹೆಸರಿನಲ್ಲಿ ದೇವಸ್ಥಾನಗಳನ್ನು ಧ್ವಂಸ ಮಾಡುವ ಚಟುವಟಿಕೆ ಆರಂಭವಾಗಿತ್ತು. ಸದ್ಯದ ಮಾಧ್ಯಮ ವರದಿ ಪ್ರಕಾರ ಸರಕಾರವು ಇದಕ್ಕೆ ತಾತ್ಕಾಲಿಕ ತಡೆ ನೀಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥ ಮಾಡಿಕೊಂಡು ನೂರಾರು ವರ್ಷಗಳ ಇತಿಹಾಸವಿರುವ ಹಿಂದೂ ಧಾರ್ಮಿಕ ಸ್ಥಳಗಳನ್ನು ಅನಧಿಕೃತವೆಂದು ನಿರ್ಧರಿಸಿ, ದೋಷಪೂರಿತ ಪಟ್ಟಿಯನ್ನು ಮಾಡಿರುವುದು ಗಮನಕ್ಕೆ ಬಂದಿದೆ. ಮಾನ್ಯ ನ್ಯಾಯಾಲಯವು ದೇವಸ್ಥಾನಗಳನ್ನು ಅಧಿಕೃತ ಮಾಡಲು ಅವಕಾಶ ನೀಡಿರುವಾಗಲೂ, ಅಧಿಕಾರಿಗಳು ತರಾತುರಿಯಿಂದ ದೇವಸ್ಥಾನಗಳನ್ನು ಏಕಾಏಕಿ ಧ್ವಂಸ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ, ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಹೇಳಿದೆ.

ಅಲ್ಲದೇ ಜುಲೈ ೧ ರಂದು ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ರವಿ ಕುಮಾರ ಇವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ ಅನಧಿಕೃತ ದೇವಸ್ಥಾನಗಳ ಪಟ್ಟಿಯಲ್ಲಿ ೬ ಸಾವಿರಕ್ಕೂ ಅಧಿಕ ಧಾರ್ಮಿಕ ಸ್ಥಳಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೫೭೯ ಧಾರ್ಮಿಕ ಸ್ಥಳಗಳ ಪಟ್ಟಿ ಮಾಡಲಾಗಿದೆ. ಆದರೆ ಈ ಪಟ್ಟಿಯಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಪ್ರಾಚೀನ ದೇವಸ್ಥಾನಗಳನ್ನು ಸೇರಿಸಲಾಗಿದೆ. ಉದಾಹರಣೆಗೆ ಮಂಗಳೂರಿನ ಶಕ್ತಿ ನಗರದಲ್ಲಿರುವ ೮೦೦ ವರ್ಷದ ಇತಿಹಾಸ ಇರುವ ವೈದ್ಯನಾಥ ದೈವಸ್ಥಾನವನ್ನು ಸಹ ಅನಧಿಕೃತ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಪಟ್ಟಿಯನ್ನು ಗಮನಿಸಿದಾಗ, ಪಟ್ಟಿಯು ಆಧಾರ ರಹಿತವಾಗಿದ್ದು, ಅಧಿಕಾರಿಗಳು ತರಾತುರಿಯಲ್ಲಿ ಸ್ಥಳ ತನಿಖೆ ನಡೆಸದೇ ಪಟ್ಟಿ ಮಾಡಿದ್ದಾರೆ ಮತ್ತು ಧಾರ್ಮಿಕ ಸ್ಥಳಗಳು ಯಾವಾಗ ನಿರ್ಮಾಣವಾಯಿತು ಎಂಬುದರ ಬಗ್ಗೆ ಅಧಿಕಾರಿಗಳು ಎಲ್ಲಿಯೂ ಉಲ್ಲೇಖ ಮಾಡದಿರುವುದು ಸಂಶಯಾಸ್ಪದವಾಗಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿತನ, ನಿರ್ಲಕ್ಷ್ಯ ಮತ್ತು ಅಜ್ಞಾನದ ಪರಮಾವಧಿಯಾಗಿದೆ. ಅದಲ್ಲದೇ ತೆರವು ಪಟ್ಟಿಯಲ್ಲಿ ಕೇವಲ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿ, ಅನ್ಯ ಮತದವರ ಧಾರ್ಮಿಕ ಸ್ಥಳಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಉದಾಹರಣೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ೫೭ ಹಿಂದೂ ಧಾರ್ಮಿಕ ಸ್ಥಳಗಳನ್ನು ತೆರವುಗೊಳಿಸುವ ಪಟ್ಟಿಯಲ್ಲಿ ಸೇರಿಸಲಾಗಿದೆ. ಅದರಲ್ಲಿ ೫೭ ಧಾರ್ಮಿಕ ಸ್ಥಳಗಳು ಸಹ ಹಿಂದೂ ಸಮುದಾಯಕ್ಕೆ ಸೇರಿದೆ. ಇದೆಲ್ಲವೂ ಸಂಶಯಾಸ್ಪದವಾಗಿದೆ.

ಹಾಗಾಗಿ ‘ದೋಷಪೂರಿತ ಅನಧಿಕೃತ ಪಟ್ಟಿಯನ್ನು ಕೂಡಲೇ ಪರಿಷ್ಕರಿಸಬೇಕು ಮತ್ತು ದೋಷಪೂರಿತ ಪಟ್ಟಿಯ ಆಧಾರದ ಮೇಲೆ ಧ್ವಂಸ ಮಾಡಿದ ದೇವಾಲಯಗಳ ಪುನರ್‌ನಿರ್ಮಾಣ ಮಾಡಬೇಕು. ಹೊಸದಾಗಿ ಪರಿಷ್ಕರಿಸಿದ ಅನಧಿಕೃತ ಧಾರ್ಮಿಕ ಸ್ಥಳಗಳ ಪಟ್ಟಿಗಳನ್ನು ಸರಕಾರದ ಎಲ್ಲಾ ಜಾಲತಾಣದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಬೇಕು ಮತ್ತು ಈ ಪಟ್ಟಿಯನ್ನು ಎಲ್ಲಾ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಬೇಕು ಮತ್ತು ಪರಿಷ್ಕರಿಸಿದ ಅನಧಿಕೃತ ಧಾರ್ಮಿಕ ಕಟ್ಟಡಗಳ ಬಗ್ಗೆ ಏನಾದರೂ ಆಕ್ಷೇಪವಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಕಾಗದಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲು ಸಾರ್ವಜನಿಕರಿಗೆ ಸಾಕಷ್ಟು ಸಮಯ ಅವಕಾಶ ನೀಡಬೇಕು, ಎಂದೂ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ರಾಜ್ಯದ ವಿವಿಧೆಡೆ ಮನವಿ ನೀಡುವ ಮೂಲಕ ಮುಖ್ಯಮಂತ್ರಿಯವರಿಗೆ ಆಗ್ರಹಿಸಿದೆ.