ಅಸ್ಸಾಂನಲ್ಲಿ ದೇವಾಲಯದ ಅರ್ಚಕರಿಗೆ 15 ಸಾವಿರ ರೂಪಾಯಿಗಳ ಹಣಕಾಸಿನ ನೆರವು ನೀಡುವ ನಿರ್ಧಾರಕ್ಕೆ ಸ್ವಾಗತ !

ಅಸ್ಸಾಂ ಮುಖ್ಯಮಂತ್ರಿಯವರ ನಿರ್ಧಾರದಿಂದ ಇತರ ರಾಜ್ಯಗಳು ಕಲಿಯಬೇಕು ! – ಹಿಂದೂ ಜನಜಾಗೃತಿ ಸಮಿತಿ ಕರೆ

ಶ್ರೀ. ಮೋಹನ ಗೌಡ

ಕೊರೋನಾದಿಂದ ಬಳಲುತ್ತಿರುವ ರಾಜ್ಯದ ಹಿಂದೂ ಅರ್ಚಕರು ಮತ್ತು ನಾಮಘರ್‌ಗಳಿಗೆ (ಸಣ್ಣ ದೇವಾಲಯಗಳು) ೧೫ ಸಾವಿರ ರೂಪಾಯಿಗಳ ಕೊರೋನಾ ಸಹಾಯ ನಿಧಿಯನ್ನು ಕೊಡುವ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಅವರು ಕೈಗೊಂಡ ನಿರ್ಧಾರವು ಶ್ಲಾಘನೀಯವಾಗಿದ್ದು ಹಿಂದೂ ಜನಜಾಗೃತಿ ಸಮಿತಿಯು ಅವರ ಈ ನಿರ್ಧಾರವನ್ನು ಸ್ವಾಗತಿಸುತ್ತದೆ. ಇದಕ್ಕೂ ಮೊದಲೂ ಸಹ ಧಾರ್ಮಿಕ ಸ್ಥಳಗಳ 5 ಕಿ.ಮೀ. ಪ್ರದೇಶದಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲು ನಿರ್ಧರಿಸಿದ್ದರು. ಈ ರೀತಿಯ ನಿರ್ಧಾರದಿಂದ ಇತರ ರಾಜ್ಯಗಳು ಕಲಿಯುವಂತೆ ಹಿಂದೂ ಜನಜಾಗೃತಿ ಸಮಿತಿಯು ಮನವಿ ಮಾಡಿದೆ.

ಕೊರೋನಾ ಸಾಂಕ್ರಾಮಿಕದಿಂದ ಕಳೆದ ಒಂದೂವರೆ ವರ್ಷಗಳಿಂದ ಎಲ್ಲವೂ ಬಂದ್ ಆದಂತಿದೆ. ಅನೇಕರು ಕೆಲಸ ಕಳೆದುಕೊಂಡರು. ಎಲ್ಲ ಕ್ಷೇತ್ರಗಳಲ್ಲಿ ಆದಾಯ ಕಡಿಮೆಯಾಗಿದೆ. ಇದರಲ್ಲಿ ದೇವಾಲಯವೂ ಒಳಗೊಂಡಿದೆ. ಕೊರೋನಾದಿಂದಾಗಿ, ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ತುಂಬಾ ಇಳಿಕೆಯಾಗಿದ್ದರಿಂದ ದೇವಾಲಯದ ಆದಾಯವು ತುಂಬಾ ಕಡಿಮೆಯಾಗಿದೆ. ಆದ್ದರಿಂದ, ಅನೇಕ ದೇವಾಲಯಗಳಲ್ಲಿ ಅರ್ಚಕರ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗಿದೆ. ಪರಿಣಾಮವಾಗಿ, ದೇವಾಲಯವನ್ನು ಅವಲಂಬಿಸಿರುವ ಅರ್ಚಕರು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅರ್ಚಕರಿಗೆ 15 ಸಾವಿರ ರೂಪಾಯಿ ಧನಸಹಾಯ ಮಾಡುವುದು ಸ್ವಲ್ಪ ಸಮಾಧಾನ ತರುತ್ತದೆ. ಹಿಂದೂ ಜನಜಾಗೃತಿ ಸಮಿತಿಯು ಕೊರೋನಾ ಅವಧಿಯಲ್ಲಿ ಮಹಾರಾಷ್ಟ್ರದ ದೇವಾಲಯಗಳಿಗಾಗಿ ಇಂತಹ ಸಹಾಯವನ್ನು ಕೋರಿತ್ತು.

ದೇಶದ ಹಲವು ರಾಜ್ಯಗಳಲ್ಲಿ ಕೇವಲ ಅಲ್ಪಸಂಖ್ಯಾತರ ಹೆಸರಿನಲ್ಲಿ ಮದರಸಾಗಳು ಮತ್ತು ಮಸೀದಿಗಳಲ್ಲಿ ಕೆಲಸ ಮಾಡುತ್ತಿರುವ ಇಮಾಮ್‌ಗಳು, ಮೌಲ್ವಿಗಳು, ಅಜಾನ್ ನೀಡುವವರು ಮುಂತಾದವರಿಗೆ ಪ್ರತಿತಿಂಗಳು ವಿವಿಧ ರಾಜ್ಯ ಸರಕಾರಗಳು ಹಣಕಾಸಿನ ನೆರವು ನೀಡುತ್ತಿವೆ; ಆದರೆ ಸರಕಾರವು ಈ ರೀತಿಯಲ್ಲಿ ಬಹಸಂಖ್ಯಾತ ಹಿಂದೂ ಅರ್ಚಕರಿಗೆ ಅಥವಾ ದೇವಾಲಯಗಳಿಗೆ ಸಹಾಯ ನೀಡಿರುವುದು ಬೆಳಕಿಗೆ ಬಂದಿಲ್ಲ. ಮತ್ತೊಂದೆಡೆ, ಹಿಂದೂಗಳ ಹೆಚ್ಚಿನ ಶ್ರೀಮಂತ ಹಾಗೂ ದೊಡ್ಡ ದೇವಾಲಯಗಳನ್ನು ಸರಕಾರಿಕರಣ ಮಾಡಿ ಅಲ್ಲಿಯ ಸಂಪತ್ತನ್ನು ಲಪಟಾಯಿಸುವ ಕಾರ್ಯವನ್ನು ವಿವಿಧ ರಾಜ್ಯ ಸರಕಾರಗಳು ಮಾಡಿವೆ. ಇಂತಹ ಸಮಯದಲ್ಲಿ ದೇವಾಲಯದ ಅರ್ಚಕರಿಗೆ ಮತ್ತು ನಾಮಘರ್‌ಗಳಿಗೆ ಅನುದಾನ ನೀಡುವ ನಿರ್ಧಾರವು ಬಹುಸಂಖ್ಯಾತರ ಭಾವನೆಗಳನ್ನು ಗೌರವಿಸುತ್ತದೆ. ಈ ನಿರ್ಧಾರದ ಆಧಾರದಲ್ಲಿ ಇತರ ರಾಜ್ಯ ಸರಕಾರಗಳು ಸಹ ದೇವಾಲಯ ಮತ್ತು ಅದರ ಅರ್ಚಕರಿಗೆ ಸಹಾಯ ಮಾಡಲು ನಿರ್ಧರಿಸಬೇಕು, ಎಂಬುದು ಸಮಿತಿಯ ನಿಲುವಾಗಿದೆ.