ಸ್ವಾತಂತ್ರ್ಯದಿನ ನಿಮಿತ್ತ ‘ಸ್ವಾತಂತ್ರ್ಯ ರಥ’ದಲ್ಲಿ ಸ್ವಾತಂತ್ರ್ಯವೀರ ಸಾವರಕರರ ಛಾಯಾಚಿತ್ರ ಹಾಕಿದ್ದಕ್ಕೆ ಎಸ್‌ಡಿಪಿಐ ಪಕ್ಷದ ವಿರೋಧ !

ಟಿಪ್ಪು ಸುಲ್ತಾನನ ಚಿತ್ರ ಹಾಕುವಂತೆ ಆಗ್ರಹ

ಇಂತಹ ರಾಷ್ಟ್ರಘಾತಕ ಪಕ್ಷವನ್ನು ನಿಷೇಧಿಸುವಂತೆ ರಾಷ್ಟ್ರಪ್ರೇಮಿ ಹಿಂದೂಗಳು ಆಗ್ರಹಿಸಬೇಕು !

‘ಸ್ವಾತಂತ್ರ್ಯ ರಥ’ದಲ್ಲಿ ಸ್ವಾತಂತ್ರ್ಯವೀರ ಸಾವರಕರರ ಛಾಯಾಚಿತ್ರ ಹಾಕಿದ್ದಕ್ಕೆ ಎಸ್‌ಡಿಪಿಐ ಪಕ್ಷದ ವಿರೋಧ

ಮಂಗಳೂರು : ಆಗಸ್ಟ್ ೧೫ ರ ಸ್ವಾತಂತ್ರ್ಯದಿನದ ನಿಮಿತ್ತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮಪಂಚಾಯಿತಿಯಲ್ಲಿ ‘ಸ್ವಾತಂತ್ರ್ಯ ರಥ’ ಎಂಬ ವಾಹನವನ್ನು ತಯಾರಿಸಲಾಗಿತ್ತು. ಈ ರಥದಲ್ಲಿ ಹಾಕಿದ್ದ ಬಟ್ಟೆ ಫಲಕದಲ್ಲಿ ಮ. ಗಾಂಧಿ, ನೇತಾಜಿ ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್ ಸಹಿತ ಸ್ವಾತಂತ್ರ್ಯ ವೀರ ಸಾವರಕರರ ಛಾಯಾಚಿತ್ರವನ್ನು ಹಾಕಲಾಗಿತ್ತು. ಅದಕ್ಕಾಗಿ ಎಸ್.ಡಿ.ಪಿ.ಐ ಈ ರಾಜಕೀಯ ಪಕ್ಷದ ಕಾರ್ಯಕರ್ತರು ರಥವನ್ನು ತಡೆದು ಬ್ಯಾನರ್ ಹರಿಯಲು ಮುಂದಾದರು. ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಲ್ಲೇಗ ಮತ್ತು ಇತರ ಸದಸ್ಯರು ಸ್ವಾತಂತ್ರ್ಯ ರಥವನ್ನು ಹಾಳು ಮಾಡುತ್ತಿರುವ ಎಸ್.ಡಿ.ಪಿ.ಐ. ಕಾರ್ಯಕರ್ತರನ್ನು ತಡೆಗಟ್ಟಿದಾಗ ಪರಸ್ಪರ ವಾಗ್ವಾದ, ನೂಕಾಟ, ತಳ್ಳಾಟ ನಡೆದಿದೆ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ಯತ್ನಿಸಿದರೂ, ಅವರ ಮಾತು ಕೇಳದ ಕಾರ್ಯಕರ್ತರು ಸಾವರಕರರ ಫೋಟೋ ಹರಿದು ಅಲ್ಲಿ ಟಿಪ್ಪು ಸುಲ್ತಾನನ ಫೋಟೋ ಹಾಕುವಂತೆ ಪಟ್ಟು ಹಿಡಿದಿದ್ದರು. ಈ ವೇಳೆ ಸ್ವಾಂತ್ರ್ಯವೀರ ಸಾವರಕರ ಮತ್ತು ಗ್ರಾಮ ಪಂಚಾಯತ್‌ಗೆ ಧಿಕ್ಕಾರ ಕೂಗಿದ್ದಾರೆ. ಪುತ್ತೂರು ನಗರ ಠಾಣಾ ನಿರೀಕ್ಷಕ ಗೋಪಾಲ ನಾಯ್ಕ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಚದುರಿಸಿದೆ. ಬಳಿಕ ‘ಸ್ವಾತಂತ್ರ್ಯ ರಥ’ ಗ್ರಾಮದೊಳಗೆ ಸಂಚಾರ ಮಾಡಿದ್ದು, ಅದಕ್ಕೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ‘ಸ್ವಾತಂತ್ರ್ಯ ರಥ’ವನ್ನು ತಡೆದು ವಿರೋಧಿಸಿದ ಎಸ್.ಡಿ.ಪಿ.ಐ.ನ ಮೂವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಕೆ. ಅಜೀಜ್, ಶಮೀರ ಮತ್ತು ಅಬ್ದುಲ್ ರೆಹಮಾನ್ ಇವು ಅವರ ಹೆಸರುಗಳಾಗಿವೆ. ಘಟನೆಯ ಬಳಿಕ ಪುತ್ತೂರಿನ ಭಾಜಪದ ಶಾಸಕ ಸಂಜೀವ ಮಠಂದೂರು ಕಬಕ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಸಂಜೀವ ಮಠಂದೂರು, ‘ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ಕೆಲ ಯುವಕರು ರಾಷ್ಟ್ರವಿರೋಧಿ ಕೆಲಸ ಮಾಡಿದ್ದಾರೆ. ಇವರು ಕಾಸರಗೋಡು ಮತ್ತು ಭಟ್ಕಳದ ಮತೀಯವಾದಿ ಸಂಘಟನೆಗಳ ಬೆಂಬಲದಿಂದ ಈ ಕೆಲಸ ಮಾಡುವುದು ತಿಳಿದುಬಂದಿದೆ”, ಎಂದರು.