ಪಠಾಣಕೋಟ (ಪಂಜಾಬ್) ವಾಯುದಳದ ನೆಲೆಯ ಮೇಲೆ ದಾಳಿ ಮಾಡಲು ಭ್ರಷ್ಟ ಪೊಲೀಸ್ ಅಧಿಕಾರಿಗಳು ಸಹಾಯ ಮಾಡಿದ್ದರು ! – ಇಬ್ಬರು ವಿದೇಶಿ ಪತ್ರಕರ್ತರ ಪುಸ್ತಕದಲ್ಲಿ ಹೇಳಿಕೆ

* ವಿದೇಶಿ ಪತ್ರಕರ್ತರಿಗೆ ಸಿಗುವ ಮಾಹಿತಿಯು, ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಭಾರತೀಯ ಗುಪ್ತಚರರಿಗೆ ಯಾಕೆ ಸಿಗುವುದಿಲ್ಲ ಅಥವಾ ಈ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಹತ್ತಿಕ್ಕಲಾಗಿದೆ ಎಂಬುದು ದೇಶದ ಜನರಿಗೆ ತಿಳಿಯಬೇಕು ! – ಸಂಪಾದಕರು 

* ಇಂತಹ ಭ್ರಷ್ಟ ಮತ್ತು ದೇಶದ್ರೋಹಿ ಪೊಲೀಸ್ ಅಧಿಕಾರಿಗಳನ್ನು ಗಲ್ಲಿಗೇರಿಸಲು ಸರಕಾರವು ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ? – ಸಂಪಾದಕರು 

ನವದೆಹಲಿ – ಪಠಾಣಕೋಟ (ಪಂಜಾಬ್) ಇಲ್ಲಿಯ ವಾಯುದಳದ ನೆಲೆಯ ಮೇಲೆ ಭಯೋತ್ಪಾದಕರು ಮಾಡಿದ ದಾಳಿಯಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಈ ಭ್ರಷ್ಟ ಅಧಿಕಾರಿಗಳು ದಾಳಿಗೂ ಮುನ್ನ ನೆಲೆಯಲ್ಲಿ ಗಸ್ತು ತಿರುಗುತ್ತಿದ್ದರು. ಅವರಲ್ಲಿ ಒಬ್ಬರಿಗೆ ನೆಲೆಗೆ ಹೋಗಲು ನಿರ್ಜನ ಮಾರ್ಗವು ಕಂಡುಬಂತು. ದಾಳಿಕೋರ ಭಯೋತ್ಪಾದಕರು ಮದ್ದುಗುಂಡುಗಳು, ಗ್ರೆನೇಡ್‍ಗಳು, ಮೊರ್ಟಾರಗಳು ಮತ್ತು ಎಕೆ-47 ರೈಫಲ್‍ಗಳನ್ನು ಸಾಗಿಸಲು ಈ ಮಾರ್ಗವನ್ನು ಬಳಸುತ್ತಿದ್ದರು ಎಂದು ಆಡ್ರಿಯನ್ ಲೆವಿ ಮತ್ತು ಕ್ಯಾಥಿ ಸ್ಕಾಟ್ ಕ್ಲಾರ್ಕ್ ಎಂಬ 2 ಪತ್ರಕರ್ತರು ತಮ್ಮ `ಸ್ಪಾಯ ಸ್ಟೋರಿಸ್ : ಇನ್‍ಸೈಡ್ ದ ಸಿಕ್ರೆಟ್ ವಲ್ರ್ಡ ಆಫ್ ದ `ರಾ’ ಎಂಡ್ ದ ಐ.ಎಸ್.ಐ.’ ಈ ಪುಸ್ತಕದಲ್ಲಿ ತಿಳಿಸಿದ್ದಾರೆ.

ಜನವರಿ 2, 2016 ರಂದು ಈ ನೆಲೆಯ ಮೇಲೆ ದಾಳಿ ನಡೆಸಲಾಗಿತ್ತು. ಭಾರತೀಯ ಸೇನೆಯ ಸಮವಸ್ತ್ರದಲ್ಲಿದ್ದ ಉಗ್ರರು ಈ ದಾಳಿಯನ್ನು ನಡೆಸಿದ್ದರು. ಅವರು ಭಾರತ-ಪಾಕಿಸ್ತಾನ ಗಡಿಯಲ್ಲಿರುವ ರಾವಿ ನದಿಯ ಮೂಲಕ ಬಂದಿದ್ದರು. ಭಾರತದ ಗಡಿಯನ್ನು ತಲುಪಿದ ನಂತರ ಭಯೋತ್ಪಾದಕರು ಕೆಲವು ವಾಹನಗಳನ್ನು ಕದ್ದು ಪಠಾಣಕೋಟ ವಾಯುದಳದ ನೆಲೆಯ ದಿಕ್ಕಿನಲ್ಲಿ ಹೋದರು. ವಾಯುಪಡೆಯ ನೆಲೆಯ ಗೋಡೆಯನ್ನು ದಾಟಿ, ಅವರು ಹುಲ್ಲಿನ ಮೂಲಕ ಸೈನಿಕರು ತಂಗಿದ್ದ ಸ್ಥಳವನ್ನು ತಲುಪಿದರು. ಅಲ್ಲಿ ನಡೆದ ಘರ್ಷಣೆಯಲ್ಲಿ ಮೂವರು ಉಗ್ರರು ಹತರಾಗಿದ್ದು, ಮೂವರು ಯೋಧರು ಹುತಾತ್ಮರಾಗಿದರು. ಮರುದಿನ, ಬಾಂಬ್ ಸ್ಫೋಟದಲ್ಲಿ ಇನ್ನೂ ನಾಲ್ಕು ಭಾರತೀಯ ಸೈನಿಕರು ಹುತಾತ್ಮರಾದರು. `ಪರಿಸ್ಥಿತಿ ಸಂಪೂರ್ಣವಾಗಿ ತಮ್ಮ ನಿಯಂತ್ರಣದಲ್ಲಿದೆ’ ಎಂದು ಖಚಿತ ಪಡಿಸಿಕೊಳ್ಳಲು ಭದ್ರತಾ ಪಡೆಗಳಿಗೆ ಮೂರು ದಿನಗಳು ತಗಲಿದವು.

ಭದ್ರತಾ ವ್ಯವಸ್ಥೆಗಳ ಬಗ್ಗೆ ಸೂಚನೆಗಳನ್ನು ನೀಡಿದ್ದರೂ ನಿರ್ಲಕ್ಷ್ಯ !

ಈ ಪತ್ರಕರ್ತರು, ಪದೇ ಪದೇ ಎಚ್ಚರಿಕೆ ನೀಡಿದರೂ ಭಾರತವು ತನ್ನ ಭದ್ರತೆಯನ್ನು ಬಲಪಡಿಸಲಿಲ್ಲ. ಪಂಜಾಬಿನ 91 ಕಿಮೀ ಗಿಂತ ಹೆಚ್ಚಿನ ಗಡಿಯಲ್ಲಿ ಬೇಲಿಯನ್ನು ಸಹ ಹಾಕಿಲ್ಲ. ಕಡಿಮೆ ಪಕ್ಷ 4 ವರದಿಗಳಲ್ಲಿ `ನದಿಗಳು ಮತ್ತು ಕಾಲುವೆಗಳು ಒಳನುಸುಳುವಿಕೆಗೆ ಸಂವೇದನಾಶೀಲವಾಗಿವೆ’ ಎಂದು ಸೂಚಿಸಲಾಗಿತ್ತು; ಆದರೆ ಅದರ ಬಗ್ಗೆಯೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸೂಕ್ಷ್ಮ ಅಂಶಗಳ ಬಗ್ಗೆ 6 ಬಾರಿ ಲಿಖಿತವಾಗಿ ತಿಳಿಸಿದ ನಂತರವೂ ಅಲ್ಲಿ ಗಸ್ತು ಹೆಚ್ಚಿಸಿಲ್ಲ. ಕಣ್ಗಾವಲು ಇಡಲು ತಂತ್ರಜ್ಞಾನವನ್ನು ಬಳಸಲಾಗಿಲ್ಲ.

ಭ್ರಷ್ಟ ಪೊಲೀಸ್ ಅಧಿಕಾರಿಗಳು ನಿಗಾ ಇಟ್ಟಿದ್ದರು !

ಈ ದಾಳಿಗಾಗಿ ಭಾರತದಲ್ಲಿಯೇ 350 ಕಿಲೋ ಸ್ಫೋಟಕಗಳನ್ನು ಖರೀದಿಸಲಾಗಿತ್ತು. ಅದಕ್ಕಾಗಿ ಜೈಶ್-ಎ-ಮೊಹಮ್ಮದ್ ಹಣ ನೀಡಿತ್ತು. ಸ್ಥಳೀಯ ಪೊಲೀಸು ಅಧಿಕಾರಿಗಳು ಸೇರಿದಂತೆ ಉಗ್ರರ ಭಾರತೀಯ ಸಹಚರರು ವಾಯುದಳದ ಮೇಲೆ ತೀವ್ರ ನಿಗಾ ಇಟ್ಟಿದ್ದರು ಎಂದು ಶಂಕಿಸಲಾಗಿದೆ. ಈ ಪೈಕಿ ಓರ್ವ ಪೊಲೀಸ್ ಅಧಿಕಾರಿಯೊಬ್ಬರು ಭದ್ರತಾ ವ್ಯವಸ್ಥೆ ದುರ್ಬಲವಾಗಿರುವ ಪ್ರದೇಶವನ್ನು ಕಂಡುಹಿಡಿದರು. ಈ ಸ್ಥಳದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಚಿತ್ರೀಕರಣವಾಗುತ್ತಿರಲಿಲ್ಲ. ಇಲ್ಲಿ ಮೇಲ್ವಿಚಾರಣೆ ಮಾಡಲು ಯಾವುದೇ ಸಾಧನ ಇರಲಿಲ್ಲ. ಈ ಪೊಲೀಸು ಅಧಿಕಾರಿಯ ಸಹಾಯದಿಂದ ಭಯೋತ್ಪಾದಕರಿಗೆ 50 ಕೆಜಿ ಮದ್ದುಗುಂಡುಗಳು, 30 ಕೆಜಿ ಗ್ರೆನೇಡ್‍ಗಳು, ಮೊರ್ಟ್‍ರ್‍ಗಳು ಮತ್ತು ಎಕೆ-47 ರೈಫಲ್‍ಗಳನ್ನು ವಾಯುದಳದ ನೆಲೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಯಿತು.