ಗುರುಗಳು ಶಿಷ್ಯರಿಗೆ ಕಲಿಸುವುದು

ಸಂತರು ಅಥವಾ ಗುರುಗಳು ಸಾಧಕರಿಗೆ ಅಥವಾ ಶಿಷ್ಯರಿಗೆ ವಿವಿಧ ರೀತಿಯಲ್ಲಿ ಕಲಿಸುತ್ತಿರುತ್ತಾರೆ. ಕೆಲವೊಮ್ಮೆ ಅವರ ಕಲಿಸುವಿಕೆಯು ಪ್ರತ್ಯಕ್ಷವಾಗಿದ್ದರೆ, ಇನ್ನೂ ಕೆಲವೊಮ್ಮೆ ಅದು ಪರೋಕ್ಷ (ವರ್ತನೆಯಿಂದ) ವಾಗಿರುತ್ತದೆ. ಕೆಲವೊಮ್ಮೆ ಅವರು ವಿನೋದದಿಂದ ಕಲಿಸಿದರೆ, ಇನ್ನೂ ಕೆಲವೊಮ್ಮೆ ಅವರು ಅನುಭೂತಿಗಳನ್ನು ಕೊಟ್ಟು ಕಲಿಸುತ್ತಾರೆ. ಹೆಚ್ಚಾಗಿ ಗುರುಗಳು ಮಾತನಾಡುವುದು, ವರ್ತಿಸುವುದು ಇತ್ಯಾದಿಗಳ ಭಾವಾರ್ಥವು ಬೇರೆಯಾಗಿರುತ್ತದೆ. ಅದರಂತೆ ಶಿಷ್ಯರಿಗೂ ತಮ್ಮ ಆಧ್ಯಾತ್ಮಿಕ ಮಟ್ಟ ಮತ್ತು ಸಾಧನಾಮಾರ್ಗಕ್ಕನುಸಾರ ಗುರುಗಳು ಕಲಿಸುವುದರ ಭಾವಾರ್ಥ ಅರ್ಥವಾಗುತ್ತದೆ. ಶಿಷ್ಯನಿಗೆ ಗುರುಗಳ ನಡೆ-ನುಡಿಯ ಭಾವಾರ್ಥ ತಿಳಿಯದಿದ್ದರೆ ಅವನು ಅವರ ಅಮೂಲ್ಯ ವಿಚಾರಗಳಿಂದ ವಂಚಿತನಾಗುವ ಸಾಧ್ಯತೆಯಿರುತ್ತದೆ. ಒಮ್ಮೆ ಶಿಷ್ಯನಿಗೆ ಭಾವಾರ್ಥ ವನ್ನು ಅರ್ಥಮಾಡಿಕೊಳ್ಳುವ ಕಲೆ ಮೈಗೂಡಿತೆಂದರೆ, ಇತರ ಗುರುಗಳ ಅಥವಾ ಸಂತರ ಮಾತುಗಳು, ಧರ್ಮಗ್ರಂಥಗಳಲ್ಲಿರುವ ಬರವಣಿಗೆ ಮುಂತಾದವುಗಳ ಭಾವಾರ್ಥವು ಸಹಜವಾಗಿ ಅವನ ಗಮನಕ್ಕೆ ಬರುತ್ತದೆ. ಈ ದೃಷ್ಟಿಯಿಂದ ಗುರುಗಳ ನಡೆ-ನುಡಿಯ ಭಾವಾರ್ಥವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದು ತಿಳಿಯಲು ಮುಂದೆ ಕೆಲವು ಉದಾಹರಣೆಗಳನ್ನು ಕೊಡಲಾಗಿದೆ. ಗುರುಗಳು ವಿವಿಧ ರೀತಿಯಲ್ಲಿ ಹೇಗೆ ಕಲಿಸುತ್ತಾರೆ ಎಂಬುದು ತಿಳಿದರೆ, ಗುರುಗಳನ್ನು ನೋಡುವ ಒಂದು ಹೊಸ ದೃಷ್ಟಿಯೂ ಲಭಿಸುತ್ತದೆ. ಗುರುಗಳು ವಿವಿಧ ಪದ್ಧತಿಗಳಿಂದ ಕಲಿಸುತ್ತಿದ್ದರೂ ಎಲ್ಲ ಗುರುಗಳ ಬೋಧನೆಯೂ ಒಂದೇ ಆಗಿರುತ್ತದೆ.

ಸಂತ ಭಕ್ತರಾಜ ಮಹಾರಾಜರು ಶಿಷ್ಯರಿಗೆ ಕಲಿಸುವ ಸಂದರ್ಭದಲ್ಲಿನ ಕೆಲವು ಆರಿಸಿದ ಉದಾಹರಣೆಗಳನ್ನು ಸನಾತನದ ಗ್ರಂಥ ‘ಸಂತ ಭಕ್ತರಾಜ ಮಹಾರಾಜರ ಬೋಧನೆ (ಖಂಡ೩) ಇದರಿಂದ ತೆಗೆದುಕೊಳ್ಳಲಾಗಿದೆ.