ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

ಈ ಲೇಖನದಲ್ಲಿ ಭೂಕುಸಿತದ ಮಾಹಿತಿಯನ್ನು ನೀಡಲಾಗಿದೆ. ಭೂ ಕುಸಿತವು ಎಲ್ಲ ಕಡೆಗೆ ಆಗದಿದ್ದರೂ, ಮುಂದಿನ ಆಪತ್ಕಾಲದಲ್ಲಿ ಭೂಕಂಪದಂತೆ ಇದರ ಅಪಾಯವೂ ಗುಡ್ಡಗಾಡು ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆಗಬಹುದು. ಭೂಕುಸಿತವಾಗುವುದರ ಕಾರಣಗಳು, ಅದರ ಭೀಕರತೆ, ಭೂಕುಸಿತದ ಆಪತ್ತನ್ನು ತಡೆಯಲು ಮಾಡಬೇಕಾದ ಕೆಲವು ಉಪಾಯಗಳು, ಭೂಕುಸಿತವಾಗುವ ಮೊದಲು ದೊರಕುವ ಕೆಲವು ಮುನ್ಸೂಚನೆಗಳು, ಭೂಕುಸಿತ ಆಗುತ್ತಿರವಾಗ ಮತ್ತು ಆದನಂತರ ಯಾವ ಕೃತಿಗಳನ್ನು ಮಾಡಬೇಕು, ಮುಂತಾದ ವಿಷಯಗಳ ಮಾಹಿತಿಯನ್ನು ಇದರಲ್ಲಿ ನೀಡಲಾಗಿದೆ.

೭. ಭೂಕುಸಿತ

೭ ಅ. ‘ಭೂಕುಸಿತ’ ಶಬ್ದದ ಅರ್ಥ :  ಕಠಿಣ ಅಥವಾ ಟೊಳ್ಳು ಗುಡ್ಡ ಅಥವಾ ದಿಬ್ಬದ ಭಾಗವು ಇದ್ದಕ್ಕಿದ್ದಂತೆಯೇ ಇಳಿಜಾರು ದಿಶೆಯಲ್ಲಿ ಕುಸಿಯುವುದಕ್ಕೆ ‘ಭೂಕುಸಿತ’ ಎಂದು ಹೇಳುತ್ತಾರೆ. ಕೆಲವೊಮ್ಮೆ ಈ ಘಟನೆಯು ಬಹಳ ಬೇಗನೆ ಆಗುತ್ತದೆ ಮತ್ತು ಕೆಲವೊಮ್ಮೆ ಅದಕ್ಕೆ ಕೆಲವು ಗಂಟೆ, ಕೆಲವು ದಿನ ಅಥವಾ ಕೆಲವು ತಿಂಗಳುಗಳೂ ಬೇಕಾಗುತ್ತವೆ. ಹೆಚ್ಚಿನ ಸಲ ಭೂಕುಸಿತವಾಗುತ್ತಿರುವಾಗ ಕಲ್ಲು-ಬಂಡೆಗಳು, ಮಣ್ಣು, ನೀರು ಕೆಸರು ಮುಂತಾದವುಗಳ ಮಿಶ್ರಣವು ಅತಿ ವೇಗದಿಂದ ಕೆಳಗೆ ಬರುತ್ತದೆ.

೭ ಆ. ಭೂಕುಸಿತವಾಗುವುದರ ಕಾರಣಗಳು

೭ ಆ ೧. ನೈಸರ್ಗಿಕ : ಅತಿವೃಷ್ಟಿ, ಮಂಜುಗಡ್ಡೆ ವೇಗವಾಗಿ ಕರಗುವುದು, ಭೂಕಂಪ, ಬಿರುಗಾಳಿ, ಜ್ವಾಲಾಮುಖಿಯ ಉದ್ರೇಕ, ಬೆಂಕಿ (ಮರಗಳ ಘರ್ಷಣೆಯಿಂದ ಅಥವಾ ತಾಪಮಾನದ ಹೆಚ್ಚಳದಿಂದ ನಿರ್ಮಾಣವಾದ ಬೆಂಕಿ) ಇವುಗಳಂತಹ ಅನೇಕ ಕಾರಣಗಳಿಂದ ಭೂಕುಸಿತವಾಗುತ್ತದೆ.

೭ ಆ ೨. ಮಾನವನಿರ್ಮಿತ

ಅ. ಭೂಭಾಗದಲ್ಲಿ ಮನುಷ್ಯನು ಅತಿಯಾಗಿ ಅಗೆದರೆ, ಭೂಮಿಯಲ್ಲಿ ಕಂಪನಗಳು ನಿರ್ಮಾಣವಾಗಿ ಬಿರುಕುಗಳು ಬೀಳುತ್ತವೆ.

ಆ. ಸುರಂಗಗಳನ್ನು ಅಗೆಯುವಾಗ ಕೆಲವೊಮ್ಮೆ ಸ್ಫೋಟಕಗಳನ್ನು ಬಳಸಲಾಗುತ್ತದೆ. ಅದರಿಂದಲೂ ಭೂಮಿ ಟೊಳ್ಳಾಗುತ್ತದೆ.

ಇ. ಬಹಳಷ್ಟು ಬಾರಿ ಕಟ್ಟಡ ಕಾಮಗಾರಿಯನ್ನು ಮಾಡುವಾಗ ಬಹಳಷ್ಟು ವೃಕ್ಷಗಳನ್ನು ಕಡಿಯುವುದರಿಂದಲೂ ಭೂಕುಸಿತವಾಗುತ್ತದೆ.

೭ ಇ. ಭೂಕುಸಿತದ ಆಪತ್ತಿನ ಭೀಕರತೆ : ಭಾರತದಲ್ಲಿ ಹಿಮಾಲಯದ ಪರಿಸರದ ಕಾಶ್ಮೀರ, ಉತ್ತರಾಖಂಡ, ಉತ್ತರಪ್ರದೇಶ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಅತ್ಯಧಿಕ ಭೂಕುಸಿತವಾಗುತ್ತದೆ. ದೇಶದಲ್ಲಿ ಪ್ರತಿವರ್ಷ ಭೂಕುಸಿತದಿಂದ ಸಾಧಾರಣ ೭೦೦ ಜನರ ಮೃತ್ಯು ಆಗುತ್ತದೆ. ತೀರಾ ಇತ್ತೀಚಿಗಿನ ಉದಾಹರಣೆಯನ್ನು ಕೊಡುವುದಾದರೆ ೩೦.೭.೨೦೧೪ ರಂದು ಮಹಾರಾಷ್ಟ್ರದ ಮಾಳಿಣ (ಆಂಬೆಗಾವ ತಾಲೂಕು, ಪುಣೆ ಜಿಲ್ಲೆ) ಈ ಊರಲ್ಲಿ ಭೂಕುಸಿತ ವಾಗಿ ೭೪ ರ ಪೈಕಿ ೪೪ ಮನೆಗಳೊಂದಿಗೆ ೧೫೫ ಕ್ಕಿಂತ ಹೆಚ್ಚು ವ್ಯಕ್ತಿಗಳು, ಹಾಗೆಯೇ ಅನೇಕ ದನಕರುಗಳು ಇತ್ಯಾದಿ ಕೆಲವು ಕ್ಷಣಗಳಲ್ಲಿಯೇ ಮಣ್ಣಿನ ರಾಶಿಯ ಕೆಳಗೆ ಹೂತುಹೋದರು.

೭ ಈ. ಭೂಕುಸಿತದ ಆಪತ್ತನ್ನು ತಡೆಗಟ್ಟಲು ಮಾಡಬೇಕಾದ ಕೆಲವು ಉಪಾಯಗಳು

೭ ಈ ೧. ‘ಭೂಕುಸಿತವನ್ನು ತಡೆಗಟ್ಟಲು ಯಾವ ಭಾಗದಲ್ಲಿ ಭೂಕುಸಿತದ ಸಾಧ್ಯತೆ ಇದೆಯೋ ಅಥವಾ ಎಲ್ಲಿ ಈ ರೀತಿಯ ಘಟನೆಗಳು ಹಿಂದೆ ಘಟಿಸಿವೆಯೋ, ಆ ಭಾಗದಲ್ಲಿ ಹೆಚ್ಚೆಚ್ಚು ಮರಗಳನ್ನು ನೆಡಬೇಕು. ಇದರಿಂದ ಅವುಗಳ ಬೇರುಗಳು ಭೂಮಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವವು ಮತ್ತು ಭೂಕುಸಿತವನ್ನು ತಡೆಗಟ್ಟುವವು. ವಿಶೇಷವಾಗಿ ಗುಡ್ಡಗಾಡು ಪ್ರದೇಶದಲ್ಲಿ ದೊಡ್ಡ ಮರಗಳನ್ನು ಹಾಗೆಯೇ ಇತರ ವನಸ್ಪತಿಯ ಗಿಡಗಳನ್ನು ನೆಡಬೇಕು.

೭ ಈ ೨. ನೀರು ಹರಿದು ಹೋಗಲು ಮಾಡಿರುವ ತಡೆಗೋಡೆಗಳಲ್ಲಿನ (ಕಂಪೌಂಡ್ ವಾಲ್) ತೂತುಗಳನ್ನು ಸ್ವಚ್ಛವಿಡಬೇಕು. ಹಾಗೆಯೇ ನೀರಿನ ನೈಸರ್ಗಿಕ ಹರಿಯುವ ಮಾರ್ಗವನ್ನು ಬದಲಾಯಿಸಬಾರದು. ಹಾಗೆ ಮಾಡಿದರೆ ನೀರಿಗೆ ಹೊರಗೆ ಹೋಗುವ ಮಾರ್ಗವು ಸಿಗುವುದಿಲ್ಲ ಹಾಗೂ ಅದರ ಒತ್ತಡದಿಂದ ಭೂಕುಸಿತದ ಅಪಾಯ ನಿರ್ಮಾಣವಾಗಬಹುದು.

೭ ಈ ೩. ಇಳಿಜಾರು ಮತ್ತು ನೀರು ಹರಿಯುವ ದಾರಿಯಲ್ಲೇ ಕಟ್ಟಡಗಳನ್ನು ಕಟ್ಟಬಾರದು. ಕಸ ಅಥವಾ ಇತರ ಸಾಮಾನುಗಳನ್ನು ಸಂಗ್ರಹಿಸಿಡಬಾರದು. ಹೀಗೆ ಮಾಡಿದರೆ ಭೂಕುಸಿತದಿಂದ ಅವು ಕುಸಿದು ಇನ್ನಷ್ಟು ಹೆಚ್ಚು ಹಾನಿಯಾಗಬಹುದು.

೭ ಈ ೪. ಮಳೆಗಾಲದ ಮೊದಲು ಗುಡ್ಡಗಳ ಇಳಿಜಾರು ಪ್ರದೇಶಗಳ, ಅಪಾಯಕಾರಿ ಬಂಡೆಗಲ್ಲು ಇತ್ಯಾದಿಗಳ ನಿರೀಕ್ಷಣೆಯನ್ನು ಮಾಡಬೇಕು ಮತ್ತು ಆವಶ್ಯಕವಿರುವ ಉಪಾಯಯೋಜನೆಗಳನ್ನು ಮಾಡಿ ಭೂಕುಸಿತವಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಸಂಬಂಧಿತ ಭಾಗದಲ್ಲಿನ ಯುವಕರು, ಗ್ರಾಮಸೇವಕರು ಮತ್ತು ಅನುಭವವಿರುವ ರೈತರ ಸಹಾಯವನ್ನು ಪಡೆಯಬಹುದು. ಇವರು ಅಪಾಯಕಾರಿ ಬಂಡೆಗಲ್ಲುಗಳ ಕಡೆಗೆ ಗಮನವಿಟ್ಟು ಅವರಿಗೆ ಯಾವುದೇ ಅಪಾಯಕಾರಿ ಬದಲಾವಣೆ ಗಮನಕ್ಕೆ ಬಂದರೆ, ತಕ್ಷಣ ಗ್ರಾಮಸ್ಥರಿಗೆ ಮತ್ತು ಸಂಬಂಧಿತ ಆಡಳಿತ ವ್ಯವಸ್ಥೆಗೆ ಎಚ್ಚರಿಸಬಹುದು.

೭ ಉ. ಭೂಕುಸಿತವಾಗುವ ಮೊದಲು ಸಿಗುವ ಕೆಲವು ಮುನ್ಸೂಚನೆಗಳು

‘ಪ್ರತಿ ಸಲ ಭೂಕುಸಿತದ ಮುನ್ಸೂಚನೆ ಸಿಗುತ್ತದೆ ಎಂದೇನಿಲ್ಲ, ಆದರೆ ಕೆಲವೊಮ್ಮೆ ಮುನ್ಸೂಚನೆಗಳು ಸಿಗುತ್ತವೆ; ಆದರೆ ಅವುಗಳ ಅರ್ಥವನ್ನು ಗಮನದಲ್ಲಿಟ್ಟುಕೊಳ್ಳುವುದು ಮಹತ್ವದ್ದಾಗಿರುತ್ತದೆ. ಹಾಗೆ ಮಾಡದಿದ್ದರೆ ಮುನ್ಸೂಚನೆಗಳು ದೊರಕಿಯೂ ಭೂಕುಸಿತದ ಮೊದಲಿನ ಸಿದ್ಧತೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಮ್ಮ ಸುತ್ತಮುತ್ತಲೂ ಮಂದಗತಿಯಲ್ಲಿ ಮುಂದಿನಂತೆ ಆಗುವ ಬದಲಾವಣೆಗಳು, ಮುಂದೆ ದೊಡ್ಡ ಭೂಕುಸಿತಕ್ಕೆ ಕಾರಣವಾಗುತ್ತವೆ. ಇಂತಹ ನೈಸರ್ಗಿಕ ಸೂಚನೆಗಳ ಕಡೆಗೆ ಗಮನ ಕೊಡಬೇಕು.

೧. ಇದ್ದಕ್ಕಿದ್ದಂತೆ ಕಿಟಕಿ-ಬಾಗಿಲುಗಳು ಗಟ್ಟಿಯಾಗುವುದು (ಕಿಟಕಿ-ಬಾಗಿಲುಗಳನ್ನು ಸಂಪೂರ್ಣ ಮುಚ್ಚಲು ಬಾರದಿರುವುದು)

೨. ಕಟ್ಟಡಗಳ ಅಡಿಪಾಯ ಕುಸಿಯುವುದು. ಇದರಿಂದ ಕಟ್ಟಡವು ಸ್ವಲ್ಪ ಪ್ರಮಾಣದಲ್ಲಿ ಭೂಮಿಯ ಕೆಳಗೆ ಹೋಗುತ್ತದೆ ಅಥವಾ ಕಟ್ಟಡಗಳಿಗೆ ಬಿರುಕು ಬೀಳುತ್ತವೆ.

೩. ಭೂಮಿಯ ಕೆಳಗಿರುವ ವಿದ್ಯುತ್ತಿನ ವೈಯರ್‌ಗಳು ತಾವಾಗಿಯೇ ತುಂಡಾಗುವುದು, ನೀರಿನ ಪೈಪ್‌ಗಳು ತಾವಾಗಿಯೇ ಒಡೆಯುವುದು.

೪. ಇದ್ದಕ್ಕಿದ್ದಂತೆ ಭೂಮಿಯಲ್ಲಿ ಬಿರುಕು ಬೀಳುವುದು.

೫. ನದಿಯ ನೀರು ಇದ್ದಕ್ಕಿದ್ದಂತೆ ರಾಡಿಯಾಗುವುದು.

೬. ಮಳೆ ಬೀಳುತ್ತಿರುವಾಗ ಅಥವಾ ಈಗಷ್ಟೇ ಮಳೆ ನಿಂತಿರುವಾಗ ನದಿಯ ನೀರು ಇದ್ದಕ್ಕಿದ್ದಂತೆ ಕಡಿಮೆಯಾಗುವುದು.

೭. ಗಿಡ, ಬೇಲಿ, ಕಂಬ, ಸಂರಕ್ಷಕ ಗೋಡೆ ಮುಂತಾದವುಗಳು ಇದ್ದಕ್ಕಿದ್ದಂತೆಯೇ ಒಂದರ ಹಿಂದೊಂದು ಬಾಗುವುದು.

೮. ಇಳಿಜಾರಿನ ಮೇಲಿನ ನೆಲವು ಮೇಲೆ ಬರುವುದು (ಉಬ್ಬಿದಂತೆ ಕಾಣಿಸುವುದು).

೯. ಭೂಮಿಯ ಮೇಲೆ ಹೊಸ ಝರಿಗಳು ನಿರ್ಮಾಣವಾಗುವುದು.

(ಆಧಾರ : pocketbook-do-dont-1.pdf,pg76 ಮತ್ತು usgs.gov/natural-hazards/landside-hazards/science/landside-preparedness)

೭ ಊ. ಭೂಕುಸಿತವಾಗುತ್ತಿರುವಾಗ ಇವುಗಳನ್ನು ಮಾಡಿರಿ !

೭ ಊ ೧. ‘ಭೂಕುಸಿತದ ಸಮಯದಲ್ಲಿ ನಾವಿರುವಲ್ಲಿ ದೊಡ್ಡ ಕಲ್ಲು, ಮಣ್ಣಿನ ರಾಶಿ ಇತ್ಯಾದಿಗಳು ಬರುತ್ತಿದ್ದರೆ, ಆಗ ರಸ್ತೆ, ಸೇತುವೆಗಳನ್ನು ದಾಟಬಾರದು ಹಾಗೆಯೇ ಸಾಧ್ಯವಾದಷ್ಟು ಬೇಗನೆ ಕಲ್ಲು, ಮಣ್ಣಿನ ರಾಶಿಗಳ ಮಾರ್ಗದಿಂದ ದೂರ ಎತ್ತರದ ಸ್ಥಳಕ್ಕೆ ಹೋಗಲು ಪ್ರಯತ್ನಿಸಬೇಕು. ಭೂಕುಸಿತವಾಗುತ್ತಿರುವಾಗ ಕಲ್ಲು, ಮಣ್ಣು ಕೆಳಭಾಗದಲ್ಲಿ ಸಂಗ್ರಹವಾಗುವುದರಿಂದ ಕೆಳಭಾಗದಲ್ಲಿ, ಹಾಗೆಯೇ ನದಿಯ ಸಮೀಪ ಹೋಗಬಾರದು.

೭ ಊ ೨. ಮರಗಿಡಗಳು ತನ್ನಿಂದತಾನೆ ಮುರಿಯುತ್ತಿರುವ, ಹಾಗೆಯೇ ಕಲ್ಲುಗಳು ಉರುಳುವ ಧ್ವನಿಯು ಕೇಳಿಸಿದರೆ ತಕ್ಷಣ ಇಳಿಜಾರು ಅಥವಾ ಕೆಳಗಿನ ಭಾಗದಿಂದ ದೂರ ಹೋಗಬೇಕು.

೭. ಊ ೩. ಭೂಕುಸಿತದ ಸಮಯದಲ್ಲಿ ನಮಗೆ ಆ ಭಾಗದಿಂದ ದೂರ ಹೋಗಲು (ತಪ್ಪಿಸಿಕೊಳ್ಳಲು) ಸಾಧ್ಯವಾಗದಿದ್ದರೆ ಅಥವಾ ‘ನಾವು ಮಣ್ಣಿನ ಕೆಳಗೆ ಸಿಕ್ಕಿಕೊಳ್ಳುತ್ತೇವೆ’, ಎಂದೆನಿಸಿದರೆ, ದೊಡ್ಡ ಮೇಜು, ಮಂಚ ಅಥವಾ ಅದರಂತಹ ಜಡವಸ್ತುವಿನ ಕೆಳಗೆ ಅಡಗಿಕೊಳ್ಳಬೇಕು. ತಲೆಯ ರಕ್ಷಣೆಯಾಗಲು ತಲೆದಿಂಬನ್ನು ಬಳಸಬಹುದು. ಕಿಟಕಿ ಮತ್ತು ಬಾಗಿಲುಗಳ ಬಳಿ ನಿಲ್ಲಬಾರದು.’

೭ ಎ. ಭೂಕುಸಿತದ ನಂತರ ಇವುಗಳನ್ನು ಮಾಡಿರಿ !

೭ ಎ ೧. ‘ಸಡಿಲು ಮಣ್ಣು ಅಥವಾ ವಸ್ತುಗಳನ್ನು ಸ್ಪರ್ಶಿಸಬಾರದು ಅಥವಾ ಅವುಗಳ ಮೇಲಿನಿಂದ ನಡೆದಾಡಬಾರದು. ಭೂಕುಸಿತದಿಂದ ಇಂತಹ ಮಣ್ಣಿನ ಮೇಲೆ ಒತ್ತಡ ಬಿದ್ದರೆ ಅದು ಕೂಡಲೇ ಕುಸಿಯಬಹುದು ಮತ್ತು ಜೀವಹಾನಿಯಾಗಬಹುದು.

೭ ಎ ೨. ವಿದ್ಯುತ್ತಿನ ಸ್ಪರ್ಶವಾಗಬಾರದೆಂದು ವಿದ್ಯುತ್ ತಂತಿ ಅಥವಾ ಕಂಬಗಳಿಂದ ದೂರವಿರಬೇಕು. ಸಾಧ್ಯವಿದ್ದರೆ ಸಂಬಂಧಿತ (ವಿದ್ಯುತ್, ನೀರು ಮುಂತಾದ) ಖಾತೆಗಳನ್ನು ಸಂಪರ್ಕಿಸಿ ಭೂಕುಸಿತದ ಬಗ್ಗೆ ಹೇಳಬೇಕು. ಇದರಿಂದ ವಿದ್ಯುತ್, ನೀರು ಮುಂತಾದ ಸರಬರಾಜುಗಳು ನಿಂತು ಸಂಭಾವ್ಯ ಅಪಾಯಗಳನ್ನು ತಡೆಗಟ್ಟಬಹುದು.

೭ ಎ ೩. ಇಳಿಜಾರು ಅಥವಾ ಕೆಳಭಾಗದಿಂದ ದೂರ ಹೋಗಬೇಕು.

೭ ಎ ೪. ಭೂಕುಸಿತದಿಂದ ನದಿ, ಝರಿ, ಬಾವಿ ಮುಂತಾದವುಗಳ ನೀರು ಕಲುಷಿತವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಅಲ್ಲಿನ ನೀರನ್ನು ನಿರ್ಜಂತುಕರಣ (ಸ್ಟರಾಯ್ಲ) ಮಾಡಿಯೇ ಕುಡಿಯಬೇಕು. (ಇಂತಹ ಸಮಯದಲ್ಲಿ ನೀರನ್ನು ೧೦ ನಿಮಿಷಗಳ ಕಾಲ ಕುದಿಸಿ ಕುಡಿಯಬಹುದು).

೭ ಎ ೫. ಭೂಕುಸಿತವಾದ ಪ್ರದೇಶದಿಂದ ದೂರವಿರಬೇಕು. ಅಲ್ಲಿ ಮತ್ತೆ ಮತ್ತೆ ಭೂಕುಸಿತಗಳಾಗುವ ಅಥವಾ ನೆರೆ ಬರುವ ಸಾಧ್ಯತೆ ಇರುತ್ತದೆ. ತಜ್ಞರು ಸುರಕ್ಷಿತತೆಯ ಬಗ್ಗೆ ಹೇಳುವವರೆಗೆ ಭೂಕುಸಿತವಾದ ಪ್ರದೇಶದಿಂದ ದೂರವಿರಬೇಕು.

೭ ಎ ೬. ಭೂಕುಸಿತವಾದ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ನೆರೆಬರುವ ಸಾಧ್ಯತೆ ಇರುವುದರಿಂದ ಅಲ್ಲಿ ಆದಷ್ಟು ಬೇಗನೆ ಭೂಮಿಯಲ್ಲಿ ಭರತಿ ಹಾಕಿ (ತಗ್ಗಿನಲ್ಲಿ ಕಲ್ಲು-ಮಣ್ಣುಹಾಕಿ) ಭೂಮಿಯನ್ನು ಮೊದಲಿನಂತೆ ಮಾಡಬೇಕು ಮತ್ತು ಗಿಡಗಳನ್ನು ನೆಡಬೇಕು.’

(ಮುಂದುವರಿಯುವುದು)

(ಆಧಾರ : pocketbook-do-dont-1.pdf,pg77 & 78)