ನವವಿಧ ಭಕ್ತಿ

ಶ್ರವಣ

ಭಗವಂತನನಲ್ಲಿರುವ ಗುಣಗಳನ್ನೂ, ಯಶಸ್ಸನ್ನೂ, ಮಹಾತ್ಮೆಯನ್ನೂ ಶ್ರದ್ಧಾಯುಕ್ತ ಮನಸ್ಸಿನಿಂದ ಕೇಳಿಸಿಕೊಳ್ಳುವುದೆಂದರೆ ಶ್ರವಣಭಕ್ತಿ. ಗುರುಗಳು ಹೇಳುವುದನ್ನು ಕೇಳಿಸಿಕೊಳ್ಳುವುದು ಶ್ರವಣಭಕ್ತಿ.

ಕೀರ್ತನೆ

ಭಗವಂತನ ಗುಣಗಳನ್ನು ಹಾಡಿ ಹೊಗಳುವುದೆಂದರೆ ಕೀರ್ತನಭಕ್ತಿ. ಶ್ರವಣಭಕ್ತಿಯಿಂದ ಗುರುಗಳಿಂದ ಪಡೆದ ಜ್ಞಾನವನ್ನು ಪ್ರಸಂಗಗಳು ಬಂದಾಗಲೆಲ್ಲ ಎಲ್ಲರಿಗೂ ಹೇಳುವುದು ಹಾಗೂ ಅವರನ್ನು ಗುರುಗಳಿಗೆ ಅಪೇಕ್ಷಿತವಾಗಿರುವಂತಹ ಕೃತಿಯನ್ನು ಮಾಡಲು ಉದ್ಯುಕ್ತರನ್ನಾಗಿಸುವುದು.

ಸ್ಮರಣೆ

ಭಗವಂತನ ನಾಮ-ಗುಣ-ಲೀಲೆಗಳನ್ನು ಸದಾ ಧ್ಯಾನಿಸುವುದು ಹಾಗೂ ಅದರಲ್ಲಿಯೇ ಮಗ್ನರಾಗಿರುವುದು ಎಂದರೆ ಸ್ಮರಣ ಭಕ್ತಿ. ಗುರುಗಳು ಅಥವಾ ಈಶ್ವರನ ಸ್ಥೂಲ ರೂಪವನ್ನು (ಮೂರ್ತಿ/ಚಿತ್ರ) ಮತ್ತು ನಾಮಜಪದ ಮೂಲಕ ಸೂಕ್ಷ್ಮ ರೂಪವನ್ನು ಸತತ ಸ್ಮರಿಸುವುದೇ ಸ್ಮರಣ ಭಕ್ತಿ

ಪಾದಸೇವನೆ

ಭಗವಂತನ ಚರಣಕಮಲಗಳ ಪ್ರತ್ಯಕ್ಷ ಸೇವೆ ಎಂದರೆ ಪಾದ ಸೇವನ ಭಕ್ತಿ. ಗುರುಗಳ ಸ್ಥೂಲ ದೇಹಕ್ಕಿಂತ ಸೂಕ್ಷ್ಮ ಅರ್ಥಾತ್ ಗುರುತತ್ತ್ವದ ಸೇವೆ ಮಾಡುವ ಶಿಷ್ಯನು ಗುರುಗಳಿಗೆ ಹೆಚ್ಚು ಪ್ರಿಯನಾಗಿರುತ್ತಾನೆ. ಗುರು ಕಾರ್ಯವನ್ನು ಉತ್ತಮವಾಗಿ ಮಾಡುವುದೇ ಚರಣಸೇವೆ.

ಅರ್ಚನೆ

ಶ್ರದ್ಧೆಯಿಂದ ಭಗವಂತನನ್ನು ಪೂಜಿಸುವುದೆಂದರೆ ಅರ್ಚನ ಭಕ್ತಿ. ಮನಸ್ಸಿನ ಆಸನದ ಮೇಲೆ ಗುರುಗಳ ಮೂರ್ತಿಯನ್ನು ಸ್ಥಾಪಿಸುವುದು ಹಾಗೂ ಗುರುಗಳ ಮಾನಸಪೂಜೆಯನ್ನು ಮಾಡುವುದೇ ಅರ್ಚನಭಕ್ತಿ !

ವಂದನೆ

ಭಗವಂತನಲ್ಲಿ ಸಂಪೂರ್ಣ ಶರಣಾಗತಿ ಸ್ವೀಕರಿಸಿ ಹೃದಯದಲ್ಲಿ ಆತನ ಧ್ಯಾನ ಮಾಡುವುದೆಂದರೆ ವಂದನಭಕ್ತಿ. ತನ್ನ ಮೊರೆ ಈಶ್ವರನವರೆಗೆ ತಲುಪಬೇಕೆಂದು ಮಾಡಲಾಗುವ ಭಾವಪೂರ್ಣ ಪ್ರಾರ್ಥನೆಯು ಈ ವಿಧದಲ್ಲಿಯೇ ಬರುತ್ತದೆ.

ದಾಸ್ಯ

ಭಗವಂತನು ನನ್ನ ತಂದೆ-ತಾಯಿ ಹಾಗೂ ಸರ್ವಸ್ವ ಮತ್ತು ನಾನು ಆತನ ಪುತ್ರ, ಸೇವಕನಾಗಿದ್ದೇನೆ ಎಂಬ ಭಾವನೆಯಿಂದ ಭಕ್ತಿ ಮಾಡುವುದನ್ನು ದಾಸ್ಯ ಭಕ್ತಿ ಎನ್ನುತ್ತಾರೆ. ಮಾರುತಿಯು ದಾಸ್ಯ ಭಕ್ತಿಯ ಉತ್ತಮ ಉದಾಹರಣೆ.

ಸಖ್ಯ

ಭಗವಂತನು ನನ್ನ ಸಖನು ಅಥವಾ ಬಂಧು ಆಗಿದ್ದು ನನ್ನ ಸುಖ-ದುಃಖಗಳಲ್ಲಿ ಸಹಭಾಗಿಯಾಗಿದ್ದಾನೆ ಎನ್ನುವ ಭಾವನೆಯಿಂದ ಭಕ್ತಿ ಮಾಡುವುದನ್ನು ಸಖ್ಯಭಕ್ತಿ ಎನ್ನುತ್ತಾರೆ. ಶ್ರೀಕೃಷ್ಣನ ಮೇಲೆ ಅರ್ಜುನನಿಗಿದ್ದ ಭಕ್ತಿಯು ಸಖ್ಯಭಕ್ತಿಯ ಅನುಪಮ ಉದಾಹರಣೆಯಾಗಿದೆ.

ಆತ್ಮನಿವೇದನೆ

ಎಲ್ಲವನ್ನೂ ಭಗವಂತನಲ್ಲಿ ಮುಕ್ತವಾಗಿ ಮಂಡಿಸುವುದು ಹಾಗೂ ತನ್ನ ಎಲ್ಲ ಭಾರವನ್ನೂ ಭಗವಂತನಿಗೆ ಒಪ್ಪಿಸುವುದೇ ಆತ್ಮನಿವೇದನಭಕ್ತಿ. ತಾನು ಮಾಡುವ ಎಲ್ಲ ಕೃತಿಗಳನ್ನೂ, ಸಾಧನೆಯಲ್ಲಿ ಬರುವ ಅಡಚಣೆಗಳನ್ನೂ, ತನ್ನ ಮನಸ್ಸಿನಲ್ಲಿ ಬರುವ ವಿಕಲ್ಪಗಳನ್ನೂ ಗುರುಗಳಿಗೆ ಹೇಳಿಕೊಳ್ಳಬೇಕು.