ಸಲಿಂಗಕಾಮಿ ವಿವಾಹಗಳಿಗೆ ಮಾನ್ಯತೆಯನ್ನು ನೀಡಬೇಕೆಂದು ಸಲ್ಲಿಸಿರುವ ಅರ್ಜಿ ಮತ್ತು ಪಾಪಕ್ಕೆ ಭಯಪಡುವ ಜನರಿಗೆ ನ್ಯಾಯಾಲಯದಿಂದ ಅಪೇಕ್ಷೆ !

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

‘ದೆಹಲಿ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಸಲಿಂಗಕಾಮಿ ಜೋಡಿಗಳ ಅರ್ಜಿಗೆ ಸಂಬಂಧಿಸಿದಂತೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ ಮತ್ತು ಈ ವಿಷಯದಲ್ಲಿ ತಮ್ಮ ಹೇಳಿಕೆಯನ್ನು ನೀಡಲು ಹೇಳಿದೆ. ಇತ್ತೀಚೆಗಷ್ಟೇ ಸಲಿಂಗಕಾಮಿ ಜೋಡಿಗಳ ವಿವಾಹಕ್ಕೆ ಮಾನ್ಯತೆಯನ್ನು ನೀಡುವ ಬಗ್ಗೆ ಒಂದು ಅರ್ಜಿಯನ್ನು ದಾಖಲಿಸಲಾಗಿದೆ. ಇದರ ಬಗ್ಗೆ ಭಾರತದ ಕಾನೂನುಗಳು ಮತ್ತು ಹಿಂದೂ ಸಂಸ್ಕೃತಿಯ ಸತ್ತ್ವ ಪರೀಕ್ಷೆಯ ವಿಶ್ಲೇಷಣೆಯನ್ನು ನಾವು ನೋಡಲಿದ್ದೇವೆ. 

೧. ಅರ್ಜಿಯಲ್ಲಿದ್ದ ವಿಷಯ ಮತ್ತು ಅರ್ಜಿದಾರರ ಯುಕ್ತಿವಾದ (ತರ್ಕ)

೧ ಅ. ಎಲ್‌ಜಿಬಿಟಿ (ಲೆಸ್ಬಿಯನ್ ಗೇ ಬೈಸೆಕ್ಶ್ಯುಅಲ್ ಟ್ರಾನ್ಸ್‌ಜೆಂಡರ್)ಗೆ ಸಂಬಂಧಿಸಿದ ಕಾರ್ಯಕರ್ತೆಯರಾದ ಗೋಪಿಶಂಕರ, ಅಭಿಜಿತ ಮಿತ್ರಾ/ಅಯ್ಯರ್, ಗೀತಿ ಥಡಾನಿ, ಜೀ ಊರ್ವಶಿ ಹೀಗೆ ೪ ಜನರು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದಾರೆ. ಈ ಅರ್ಜಿಯಲ್ಲಿ, ‘ಸ್ತ್ರೀ-ಪುರುಷರಲ್ಲಿಯೇ ವಿವಾಹವಾಗಬೇಕು, ಎಂದು ‘ಹಿಂದೂ ವಿವಾಹ ಕಾನೂನು ಹೇಳುವುದಿಲ್ಲ ಮತ್ತು ೨೦೧೮ ರಲ್ಲಿ ಸರ್ವೋಚ್ಚ ನ್ಯಾಯಾಲಯವು ವಿವಾಹಬಾಹ್ಯ ಸಂಬಂಧಗಳಿಗೆ ಮನ್ನಣೆಯನ್ನು ನೀಡಿದೆ. ಆದ್ದರಿಂದ ಎಲ್‌ಜಿಬಿಟಿ ಸಮುದಾಯದ ವಿವಾಹಗಳಿಗೆ ಮನ್ನಣೆಯನ್ನು ಕೊಡದಿರುವುದು, ಸಂವಿಧಾನ ವ್ಯವಸ್ಥೆಯ ಉಲ್ಲಂಘನೆಯಾಗುತ್ತದೆ ಎಂದು ಹೇಳಲಾಗಿದೆ.

ಅರ್ಜಿದಾರರ ಹೇಳಿಕೆಗನುಸಾರ  ಇಬ್ಬರು ಪುರುಷರು ಅಥವಾ  ಇಬ್ಬರು ಸ್ತ್ರೀಯರು ಪರಸ್ಪರ ಒಟ್ಟಾಗಿ ವಾಸಿಸಲು ಪ್ರಾರಂಭಿಸಿದ ಮೇಲೆ ಅವರ ವಿವಾಹದ ದಾಖಲೆಯನ್ನು ಮಾಡಿಕೊಳ್ಳುವುದಿಲ್ಲ.  ಇದರಿಂದ ಸಮಾಜದಲ್ಲಿ ಅಥವಾ ಸರಕಾರಿ ಕಾರ್ಯಾಲಯಗಳಲ್ಲಿ ಅವರ ಸಂಬಂಧಕ್ಕೆ ಮನ್ನಣೆ ಸಿಗುವುದಿಲ್ಲ.

೧ ಆ. ‘ಸಲಿಂಗಕಾಮಿ ವಿವಾಹಗಳಿಗೆ ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಬ್ರಾಝಿಲ್, ಕೆನಡಾ, ಸ್ಪೇನ್, ದಕ್ಷಿಣ ಆಫ್ರಿಕಾ  ಈ ದೇಶಗಳಲ್ಲಿ ಮನ್ನಣೆಯಿದೆ. ಭಾರತದಲ್ಲಿ ‘ಟ್ರಾನ್ಸ್‌ಜೆಂಡರ್ ಪರ್ಸನ್ಸ್ ಮಸೂದೆ ೨೦೧೬ ಸಮ್ಮತವಾಗಿದೆ. ಆದ್ದರಿಂದ ಇಂತಹ ವಿವಾಹಗಳಿಗೆ ಭಾರತದಲ್ಲಿಯೂ ಮನ್ನಣೆ ಸಿಗಬೇಕು, ಎಂಬುದು ಅರ್ಜಿದಾರರ ಯುಕ್ತಿವಾದವಾಗಿದೆ.

೧ ಇ. ‘ಹಿಂದೂ ವಿವಾಹ ಕಾನೂನು ೧೯೫೫ ಅಥವಾ ವಿಶೇಷ ವಿವಾಹ ಕಾನೂನು ನೋಂದಣಿಯ ವಿಷಯದಲ್ಲಿ ಅಥವಾ ಈ ಮೇಲಿನ ವ್ಯಕ್ತಿಗಳನ್ನು ಪತಿ-ಪತ್ನಿ ಎಂದು ಹೇಳಲು ಯಾವುದೇ ರೀತಿಯ ಅಡ್ಡಿ ಇಲ್ಲ; ಇಂತಹ ದಾಖಲೆಗಳನ್ನು ‘ಡೆಥ್ ಎಂಡ್ ಬರ್ಥ್ಸ್ ರಿಜಿಸ್ಟ್ರೇಶನ್ ಏಕ್ಟ್ಗನುಸಾರ ಸ್ವೀಕರಿಸಬೇಕು. ಆದರೆ ಅವರು ಸ್ವೀಕರಿಸುವುದಿಲ್ಲ, ಆದುದರಿಂದ ಈ ಅರ್ಜಿ ಇದೆ.

೨. ಅರ್ಜಿದಾರರ ತಪ್ಪು ಯುಕ್ತಿವಾದ !

೨ ಅ. ಹಿಂದೂ ವಿವಾಹ ಕಾನೂನಿನ ಕಲಮ್ ೫ ರಲ್ಲಿ ವರನ ವಯಸ್ಸು ೨೧ ಮತ್ತು ವಧುವಿನ ವಯಸ್ಸು ೧೮ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ವಿವಾಹವು ಸ್ತ್ರೀ ಮತ್ತು ಪುರುಷರಲ್ಲಿ ನಡೆಯುತ್ತದೆ. ‘ಚಿಕ್ಕಮ್ಮ, ಚಿಕ್ಕಪ್ಪ ಅಥವಾ ದೊಡ್ಡಪ್ಪ, ದೊಡ್ಡಮ್ಮನ ಮಕ್ಕಳ ನಡುವೆ ವಿವಾಹ ನಡೆಯುವುದಿಲ್ಲ, ಎನ್ನುವ ನಿರ್ಣಯವನ್ನು ಪಂಜಾಬ್ ಉಚ್ಚ ನ್ಯಾಯಾಲಯ ನೀಡಿದೆ. ಯಾರ ನಡುವೆ ವಿವಾಹ ನಡೆಯಬಹುದು ಎನ್ನುವ ವಿಷಯದಲ್ಲಿ ಹಿಂದೂ ವಿವಾಹ ಕಾನೂನಿನ ಕಲಮ್ ೧೧ ಮತ್ತು ೧೨ ರಲ್ಲಿ ವಿಸ್ತಾರವಾಗಿ ಬರೆಯಲಾಗಿದೆ. ವಿವಾಹದ ವಿಧಿಗಳನ್ನು ಕೂಡ ಕಾನೂನಿನಲ್ಲಿ ಹೇಳಲಾಗಿದೆ.

೨ ಆ.  ರಾಜ್ಯಗಳು ತಮ್ಮ ನಿಯಮಗಳನ್ನು ತಯಾರಿಸಬೇಕು ಮತ್ತು ಅವುಗಳಿಗನುಸಾರ ವಿವಾಹದ ದಾಖಲೆಗಳನ್ನು ಸ್ವೀಕರಿಸಬೇಕು ಎಂದು ಕಲಮ್ ೮ ಹೇಳುತ್ತದೆ ಮತ್ತು ಆ ವಿಷಯದಲ್ಲಿ ನಿಯಮಗಳನ್ನೂ ಈಗಾಗಲೇ ತಯಾರಿಸಲಾಗಿದೆ. ಆದ್ದರಿಂದ ‘ಕಲಮ್ ೫ ಅಡ್ಡಿಪಡಿಸುವುದಿಲ್ಲ, ಎನ್ನುವ ಯುಕ್ತಿವಾದವು ತಪ್ಪಾಗಿದೆ.

೨ ಇ. ನ್ಯಾಯಾಲಯವು ಎಲ್ಲ ಕಲಮ್‌ಗಳ ವಿಚಾರವನ್ನು ಮಾಡುತ್ತದೆ. ಹೇಗೆ ಆಸ್ತಿ ಅಥವಾ ಇತರ ದಾಖಲೆಗಳಿಗಾಗಿ ‘ದ ರಿಜಿಸ್ಟ್ರೇಶನ್ ಆಕ್ಟ್ ೧೯೦೮ ಇದೆಯೋ ಹಾಗೆಯೇ ‘ಡೆಥ್ ಎಂಡ್ ಬರ್ಥ್ ಆಕ್ಟ್ ವು ಒಂದು ಸ್ವತಂತ್ರ ಕಾನೂನಾಗಿದೆ. ಅದಕ್ಕನುಸಾರ ದಾಖಲೆಗಳನ್ನು ಸ್ವೀಕರಿಸಲಾಗುತ್ತದೆ.

೩. ಹಿಂದೂ ಧರ್ಮದಲ್ಲಿ ವಿವಾಹ ಒಂದು ಸಂಸ್ಕಾರವಾಗಿದೆ ಮತ್ತು ಇತರ ಪಂಥಗಳಲ್ಲಿ ಅದೊಂದು ಒಪ್ಪಂದವಾಗಿದೆ !

೩ ಅ. ಹಿಂದೂ ಅಥವಾ ಭಾರತೀಯ ಸಂಸ್ಕೃತಿಯಲ್ಲಿ ಗರ್ಭಧಾರಣೆಯಿಂದ ಹಿಡಿದು ಮೃತ್ಯುವಿನವರೆಗಿನ ೨೧ ಸಂಸ್ಕಾರಗಳಲ್ಲಿ ವಿವಾಹವು ಒಂದು ಮಹತ್ವದ ಸಂಸ್ಕಾರವಾಗಿದೆ. ಹುಡುಗನಿಗೆ ‘ಮದುಮಗ ಮತ್ತು ಹುಡುಗಿಗೆ ‘ಮದುಮಗಳು ಎಂದು ಹೇಳಲಾಗುತ್ತದೆ. ಕಾನೂನಿನಂತೆ ‘ಸ್ತ್ರೀಧನ ಎನ್ನುವ ಸಂಕಲ್ಪನೆಯನ್ನೂ ಸ್ವೀಕರಿಸಲಾಗಿದೆ ಮತ್ತು ತಂದೆಯ ಸಂಪತ್ತಿನಲ್ಲಿ ಅವಳಿಗೆ ಕೂಡ ಪಾಲು ಸಿಗುತ್ತದೆ.

೩ ಆ. ಮೂಲತಃ ಯಾವುದೇ ಕಾನೂನನ್ನು ಮಾಡುವಾಗ ಆ ದೇಶದ ಸಮಾಜದಲ್ಲಿನ ರೂಢಿ-ಪರಂಪರೆಗಳು, ಆದರ್ಶ ಮೌಲ್ಯಗಳು, ಧಾರ್ಮಿಕ ಗ್ರಂಥ ಇವುಗಳ ಆಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಇತರ ಪಂಥದವರಲ್ಲಿ ವಿವಾಹವನ್ನು ಒಂದು ಒಪ್ಪಂದವೆಂದು ತಿಳಿದುಕೊಳ್ಳಲಾಗುತ್ತದೆ; ಆದ್ದರಿಂದ ಅವರ ವರ್ತನೆಯು ಪಶುಗಳಂತಿರುತ್ತದೆ. ಸಂಪೂರ್ಣ ಜಗತ್ತು ಇಂದು ಅದನ್ನೇ ಅನುಭವಿಸುತ್ತಿದೆ.

೪. ಸಲಿಂಗಕಾಮಿ ಸಂಬಂಧಗಳಿಗೆ ಮನ್ನಣೆ, ಎಂದರೆ ವಿವಾಹಕ್ಕೆ ಮನ್ನಣೆಯಲ್ಲ, ಇದನ್ನು ಗಮನದಲ್ಲಿಡಿ !

‘ಕಾನೂನಿನಲ್ಲಿ ಲಿಂಗಪರಿವರ್ತನೆಗೆ ಅನುಮತಿ ಸಿಕ್ಕಿದೆ ಎಂದರೆ ಸಲಿಂಗಕಾಮಿ ವಿವಾಹವೂ ಆಗಬಹುದು, ಎಂದು ಹೇಳುವುದೆಂದರೆ, ‘ಸೂತಾವರುನ ಸ್ವರ್ಗ ಗಾಠಣೆ (ಮರಾಠಿ ಹೇಳಿಕೆ) ಅರ್ಥ: ದಾರವನ್ನು ಹಿಡಿದುಕೊಂಡು ಸ್ವರ್ಗಕ್ಕೆ ಹೋದಂತೆ ಆಗಿದೆ  ‘ಸರ್ವೋಚ್ಚ ನ್ಯಾಯಾಲಯವು ಭಾರತೀಯ ದಂಡಸಂಹಿತೆ ಕಲಮ್ ೩೭೭ ನ್ನು ರದ್ದುಪಡಿಸಿದೆ; ಹೀಗಿರುವಾಗ ಇಂತಹ ವಿವಾಹಗಳಿಗೆ ಸಮ್ಮತಿಯನ್ನು ನಿರಾಕರಿಸುವುದಕ್ಕೆ ಯಾವುದೇ ಕಾರಣವಿಲ್ಲ, ಇಂತಹ ಭೇದಭಾವವನ್ನು ಕಾನೂನಿನಿಂದ ಮಾಡಲು ಸಾಧ್ಯವಿಲ್ಲ. ಜವಾಹರಲಾಲ್ ನೆಹರುರವರಿಗೆ ‘ಮಾಡರ್ನಿಟಿ ಇನ್ ಮ್ಯಾರೇಜ್ ಈ ಸಂಕಲ್ಪನೆಯನ್ನು ಬಿಂಬಿಸಲು ‘ಹಿಂದೂ ಕೋಡ್ ಬಿಲ್ನಲ್ಲಿ ಸುಧಾರಣೆಗಳನ್ನು ಮಾಡಲಿಕ್ಕಿತ್ತು. (ನೆಹರುರವರ ಇಂತಹ ಸುಧಾರಣೆಗಳು ಮತ್ತು ಅನೇಕ ಸಂಕಲ್ಪನೆಗಳು ಸರ್ವಸಾಮಾನ್ಯ ವ್ಯಕ್ತಿಗಳಿಗೆ ಅಥವಾ ಪಾಪಗಳಿಗೆ ಹೆದರುವವರಿಗೆ ಒಪ್ಪಿಗೆ ಇರಲಿಲ್ಲ.) ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ, ಪಶು, ಪಕ್ಷಿ, ಪ್ರಾಣಿಗಳು ಕೂಡ ನೀತಿ-ನಿಯಮಗಳನ್ನು ಪಾಲಿಸುತ್ತವೆ; ಆದರೆ ಇಂತಹ ವ್ಯಕ್ತಿಗಳು ಅದನ್ನು ಕೂಡ ಬಿಟ್ಟುಬಿಟ್ಟಿದ್ದಾರೆ.

೫. ಕೇಂದ್ರ ಸರಕಾರದ ಯುಕ್ತಿವಾದ

ಈ ಅರ್ಜಿಯ ಆಲಿಕೆಯ ಸಮಯದಲ್ಲಿ ಯುಕ್ತಿವಾದವನ್ನು ಮಾಡುವಾಗ ನ್ಯಾಯವಾದಿ  ತುಷಾರ ಮೆಹತಾ ಇವರು, ಇಂತಹ ವಿವಾಹಗಳಿಗೆ ಸಮಾಜ ಮತ್ತು ಕಾನೂನು ವ್ಯವಸ್ಥೆಯು ಮನ್ನಣೆಯನ್ನು ಕೊಡುವುದಿಲ್ಲ. ‘ಪುತ್ರಾರ್ಥೆ ಕ್ರಿಯತೇ ಭಾರ್ಯಾ | ಅಂದರೆ ‘ಪುತ್ರಪ್ರಾಪ್ತಿಗಾಗಿ ವಿವಾಹ ಮಾಡಿ ಕೊಳ್ಳಲಾಗುತ್ತದೆ. ಈ ಸಂಸ್ಕೃತ ವಚನಕ್ಕನುಸಾರ ವಿವಾಹದ ಅರ್ಥವನ್ನು ನೋಡಿದರೆ, ವಿವಾಹ ಒಂದು ಹುಡುಗಿ (ಸ್ತ್ರೀ) ಮತ್ತು ಒಬ್ಬ ಹುಡುಗ (ಪುರುಷ) ಇವರಲ್ಲಿಯೇ ಆಗಬಹುದು. ಹಿಂದೂ ವಿವಾಹ ಕಾನೂನು ಸಲಿಂಗಕಾಮಿ ವಿವಾಹಗಳಿಗೆ ಮನ್ನಣೆಯನ್ನು ಕೊಡುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಏಕೆಂದರೆ ಪತಿ-ಪತ್ನಿ ಈ ಶಬ್ದಗಳೂ ಕಾನೂನಿನಲ್ಲಿ ಬರುವುದು ಅಪೇಕ್ಷಿತವಾಗಿದೆ ಎಂದು ಸ್ಪಷ್ಟವಾಗಿ ಹೇಳಿದರು.

೬. ವಿವಾಹ ಬಾಹ್ಯ ಸಂಬಂಧ ಅಥವಾ ಸಲಿಂಗ ಸಂಬಂಧಗಳಿಗೆ ಮನ್ನಣೆಯನ್ನು ಕೊಡುವ ವಿಷಯದಲ್ಲಿ ನ್ಯಾಯಾಲಯದ ಸಮಯ ವ್ಯರ್ಥವಾಗುವುದು, ಭಾರತೀಯ ನ್ಯಾಯವ್ಯವಸ್ಥೆಗೆ ದುಬಾರಿಯಾಗಿದೆ !

ನಮ್ಮ ದೇಶವಾಸಿಗಳಿಗೆ ತಮ್ಮ ಮೇಲಾದ ಅನ್ಯಾಯಕ್ಕೆ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ, ಎನ್ನುವ ದೃಢ ವಿಶ್ವಾಸವಿದೆ. ಆದ್ದರಿಂದ ನ್ಯಾಯಾಲಯದ ಮುಂದೆ ಲಕ್ಷಗಟ್ಟಲೆ ಖಟ್ಲೆಗಳು ದಾಖಲಾಗಿವೆ ಮತ್ತು ಅವು ನೆನೆಗುದಿಯಲ್ಲಿವೆ. ಆಡಳಿತದವರು (ಸರಕಾರ) ಜನಸಂಖ್ಯೆಯ ಪ್ರಮಾಣದಲ್ಲಿ ನ್ಯಾಯಾಧೀಶರನ್ನು ನೇಮಿಸಿಲ್ಲ, ಆದ್ದರಿಂದ ಪ್ರತಿಯೊಂದು ನ್ಯಾಯಾಲಯದಲ್ಲಿ ಸಾವಿರಾರು ಖಟ್ಲೆಗಳು ನೆನೆಗುದಿಯಲ್ಲಿವೆ. ವಿವಾಹಬಾಹ್ಯ ಸಂಬಂಧ ಅಥವಾ ಸಲಿಂಗ ಸಂಬಂಧಗಳಿಗೆ ಮನ್ನಣೆಯನ್ನು ಕೊಡುವ ಬಗ್ಗೆ ನ್ಯಾಯಾಲಯದ ಸಮಯವನ್ನು ವ್ಯರ್ಥಗೊಳಿಸುವುದು ಭಾರತೀಯ ನ್ಯಾಯವ್ಯವಸ್ಥೆಗೆ ದುಬಾರಿಯಾಗಿದೆ. ವಿವಿಧ ರಾಜಕೀಯ ನೇತಾರರು, ಆಟಗಾರರು, ಚಲನಚಿತ್ರ ನಟ ನಟಿಯರು ಮುಂತಾದವರ ಖಟ್ಲೆಗಳು ನ್ಯಾಯಾಲಯದ ಸಮಯವನ್ನು ಹೆಚ್ಚು ತೆಗೆದುಕೊಳ್ಳುತ್ತವೆ. ಇದಲ್ಲದೆ ಇತ್ತೀಚೆಗೆ ಪ್ರಸಿದ್ದಿಪಡೆದಿರುವ, ಸುಖಲೋಲುಪ ಜೀವನಕ್ಕಾಗಿ ದಾಖಲಿಸಿದ ಖಟ್ಲೆಗಳು, ನಿರರ್ಥಕ ಅಥವಾ ಅರ್ಥಹೀನ ವಿಷಯಗಳ ಖಟ್ಲೆಗಳ ವಿಷಯದಲ್ಲಿ ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸಲಾಗುತ್ತದೆ. ಆದ್ದರಿಂದ ನ್ಯಾಯಾಲಯವು ಇಂತಹ ವಿಷಯಗಳಿಗೆ ಸಮಯ ಕೊಡಬಾರದು ಮತ್ತು ಇಂತಹ ಪ್ರವೃತ್ತಿಗಳಿಗೆ ಆಶ್ರಯ ನೀಡಬಾರದು, ಎಂದು ೧೩೦ ಕೋಟಿ ಜನರಿಗೆ ಅನಿಸಿದರೆ, ಅದರಲ್ಲಿ ತಪ್ಪೇನಿದೆ ? ಇವೆಲ್ಲವನ್ನು ನೋಡಿ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಧರ್ಮಜಾಗೃತಿ ಮಾಡುವ ಅವಶ್ಯಕತೆಯಿದೆ, ಎಂದು ಅನಿಸುತ್ತದೆ. ತ್ರಿಕಾಲಜ್ಞಾನಿ ಸಂತರು ಹೇಳಿದಂತೆ ಶೀಘ್ರದಲ್ಲಿಯೇ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿಕ್ಕಿದೆ. ಅನಂತರ ಬರುವ ಆದರ್ಶ ರಾಜ್ಯವ್ಯವಸ್ಥೆಯಲ್ಲಿ ಇಂತಹ ಪಿಡುಗುಗಳಿಗೆ ತಾನಾಗಿಯೇ ಕಡಿವಾಣ ಬೀಳುವುದು ಎಂದು ಆಶಿಸೋಣ.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ. (೨೪.೧೦.೨೦೨೦)