ರಾತ್ರಿ ಮಲಗುವಾಗ ಹಾಲು ಕುಡಿಯುವುದರಿಂದ ಪಚನಶಕ್ತಿ ಮಂದವಾಗುತ್ತದೆ ಹಾಗೂ ಕಫದ ರೋಗವಾಗುತ್ತದೆ. ಆದ್ದರಿಂದ ರಾತ್ರಿ ಹಾಲು ಕುಡಿಯುವ ಬದಲು ಬೆಳಗ್ಗೆ ಎದ್ದು ಸ್ನಾನವಾದ ನಂತರ ಹಾಲು ಕುಡಿಯಬೇಕು. ಹಾಲು ಕುಡಿದ ನಂತರ ಅಥವಾ ಹಾಲಿನ ಜೊತೆಗೆ ಏನೂ ತಿನ್ನಬಾರದು; ಏಕೆಂದರೆ ಇತರ ಪದಾರ್ಥಗಳಲ್ಲಿ ಉಪ್ಪಿನ ಅಂಶವಿರುತ್ತದೆ. ಅದು ಹಾಲಿನೊಂದಿಗೆ ಮಿಶ್ರಣವಾದಾಗ ಶರೀರಕ್ಕೆ ಅಪಾಯವಾಗಬಹುದು. ಹಾಲು ಕುಡಿದ ನಂತರ ಏನಾದರೂ ತಿನ್ನಲಿಕ್ಕಿದ್ದರೆ ಅದನ್ನು ಒಂದು ಗಂಟೆಯ ನಂತರ ತಿನ್ನಬೇಕು. ರಾತ್ರಿ ಹಾಲು ಕುಡಿಯಲಿಕ್ಕಿದ್ದರೆ, ಅದರಲ್ಲಿ ಒಂದು ಕಪ್ ಹಾಲಿಗೆ ಅರ್ಧ ಚಮಚದಷ್ಟು ಅರಸಿನ ಚೂರ್ಣವನ್ನು ಹಾಕಿ ಕುಡಿಯಬಹುದು.
ಹಾಲು ಕುಡಿಯುವಾಗ ಅದನ್ನು ಬಿಸಿ ಇರುವಾಗಲೇ ಕುಡಿಯಬೇಕು. ಒಮ್ಮೆ ಒಂದು ಕಪ್‌ನಷ್ಟೇ ಹಾಲು ಕುಡಿಯಬಹುದು. ಹೆಚ್ಚು ಹಾಲು ಕುಡಿದರೆ ಅದು ಜೀರ್ಣವಾಗದೆ ಇರಲೂ ಬಹುದು. ಅನೇಕ ಜನರು ಆಮ್ಲಪಿತ್ತದ ತೊಂದರೆಯಿದೆಯೆಂದು ತಣ್ಣಗಿನ ಹಾಲು ಕುಡಿಯುತ್ತಾರೆ. ಆಮ್ಲಪಿತ್ತದಲ್ಲಿ ತಣ್ಣಗಿನ ಹಾಲು ಕುಡಿಯುವುದರಿಂದ ತಾತ್ಕಾಲಿಕ ಲಾಭವಾದರೂ ತಣ್ಣಗಿನ ಹಾಲು ಪಚನಶಕ್ತಿಯನ್ನು ಕೆಡಿಸುತ್ತದೆ. ಅದರಿಂದ ಮಲಬದ್ಧತೆ ಪ್ರಾರಂಭವಾಗುತ್ತದೆ ಹಾಗೂ ಅಜೀರ್ಣವಾಗಿ ಆಮ್ಲಪಿತ್ತದ ತೊಂದರೆಯು ಇನ್ನೂ ಹೆಚ್ಚಾಗುತ್ತದೆ. ಆದ್ದರಿಂದ ತಣ್ಣಗಿನ ಹಾಲು ಕುಡಿಯಲೇ ಬಾರದು.