ತಪಸ್ವೀ ಅನಸೂಯೆಯಿಂದ ಆದ ದತ್ತನ ಜನ್ಮದ ಅದ್ಭುತ ಕಥೆ

ಪ.ಪೂ. ಪಾಂಡೆ ಮಹಾರಾಜ

೧. ಮಾತೆ ಅನಸೂಯಾಳು ತಪಸ್ವೀ ಹಾಗೂ ಪತಿವ್ರತೆಯಾಗಿರುವುದರಿಂದ ಭಗವಂತನು ಬ್ರಹ್ಮಾ-ವಿಷ್ಣು-ಮಹೇಶನ ಸ್ವರೂಪದಲ್ಲಿ ಋಷಿಗಳ ವೇಶದಲ್ಲಿ ಅವಳಲ್ಲಿಗೆ ಭಿಕ್ಷೆ ಬೇಡಲು ಹೋದನು

ದತ್ತಾತ್ರೆಯರ ಜನ್ಮದ ಕಥೆ ಅದ್ಭುತವಾಗಿದೆ. ಒಮ್ಮೆ ಬ್ರಹ್ಮಾ,ವಿಷ್ಣು ಮತ್ತು ಮಹೇಶರು ಅನುಸೂಯಾಳಲ್ಲಿಗೆ ಋಷಿಗಳ ವೇಶದಲ್ಲಿ ಭಿಕ್ಷೆ ಬೇಡಲು ಹೋದರು; ಏಕೆಂದರೆ, ಭಗವಂತನು ಮಾತಾ ಅನುಸೂಯೆಗೆ ನಾನು ನಿನ್ನ ಉದರದಲ್ಲಿ ಜನ್ಮ ತಾಳುವೆನು, ಎಂದು ವರ ನೀಡಿದ್ದನು. ಅನಸೂಯೆಯ ಪತಿ ಅತ್ರಿ ಋಷಿ ಅಂದರೆ ಬ್ರಹ್ಮದೇವರ ಪುತ್ರರಾಗಿದ್ದರು. ಅವರು ತಪಸ್ವೀಯಾಗಿದ್ದರು. ಮಾತಾ ಅನುಸೂಯೆ ಕೂಡ ಹಾಗೆಯೇ ತಪಸ್ವೀ ಹಾಗೂ ಪತಿವ್ರತೆಯಾಗಿದ್ದಳು; ಆದ್ದರಿಂದಲೇ ಭಗವಂತನು ಬ್ರಹ್ಮಾ-ವಿಷ್ಣು ಮಹೇಶರ ಸ್ವರೂಪದಲ್ಲಿ ಋಷಿಗಳ ವೇಶಧಾರಣೆ ಮಾಡಿ ಅವಳಲ್ಲಿಗೆ ಭಿಕ್ಷೆ ಬೇಡಲು ಹೋದರು.

೨. ಋಷಿಗಳು ಹೇಳಿದಂತೆ ಅನಸೂಯಾಳು ನಗ್ನಾವಸ್ಥೆಯಲ್ಲಿ ಭೋಜನ ಬಡಿಸಲು ಹೋದಾಗ ಅವಳಿಗೆ ಆ ಋಷಿಗಳು ಬಾಲಕರ ರೂಪದಲ್ಲಿ ಕಾಣಿಸುತ್ತಾರೆ

ಆಗ ಅತ್ರಿಋಷಿಗಳು ಹೊರಗೆ ಹೋಗಿದ್ದರು. ಅನಸೂಯಾ ಒಬ್ಬಳೇ ಇದ್ದಳು. ಅವಳು ಮೂರೂ ಋಷಿಗಳನ್ನು ಸ್ವಾಗತಿಸಿ ಅವರಿಗೆ ಭೋಜನವನ್ನು ಬಡಿಸಲು ಹೋದಾಗ, ‘ನಮಗೆ ನಿನ್ನ ಕೈಯಿಂದ ತಯಾರಿಸಿದ ಭೋಜನ ಬೇಕು ಹಾಗೂ ನೀನು ನಗ್ನಾವಸ್ಥೆಯಲ್ಲಿ ನಮಗೆ ಬಡಿಸಬೇಕು, ಎಂದು ಋಷಿಗಳು ಹೇಳಿದರು. ಅವಳು ನಿಮ್ಮ ಇಚ್ಛೆಯಂತೆಯೇ ಆಗಲಿ ಎಂದು ಹೇಳಿದಳು. ಅನಂತರ ಅನಸೂಯೆ ಅಡುಗೆ ಮಾಡಿ ಅವಳು ನಗ್ನಾವಸ್ಥೆಯಲ್ಲಿ ಬಡಿಸಲು ಹೋದಾಗ ಅವಳಿಗೆ ಆ ಮೂರು ಋಷಿಗಳು ಬಾಲಕರ ರೂಪದಲ್ಲಿ ಕಾಣಿಸಿದರು. ನಂತರ ಅವಳು ಅವರನ್ನು ತೊಟ್ಟಿಲಿಗೆ ಹಾಕಿದಳು. ಆಗ ಅವರು ತ್ರಿಮುಖರಾಗಿ ಒಟ್ಟಿಗೆ ಕಾಣಿಸಿದರು. ಅದೇ ಈ ದತ್ತ ಸ್ವರೂಪ !

೩. ನಗ್ನಾವಸ್ಥೆಯೆಂದರೆ ಸರ್ವಸಂಗರಹಿತ ಶುದ್ಧ ಹಾಗೂ ತ್ರಿಗುಣಾತೀತ ಅವಸ್ಥೆ !

ಇಲ್ಲಿ ಋಷಿಗಳು ಸತಿ ಅನಸೂಯೆಗೆ ನಗ್ನವಾಗಿ ಬಡಿಸಲು ಹೇಳಿದರು. ನಗ್ನ ಎಂಬುದರ ನಿಜವಾದ ಅರ್ಥವೇನು ?, ಎಂಬುದನ್ನು ನೋಡುವ ಅವಶ್ಯಕತೆಯಿದೆ. ಭಗವಂತನ ಜನ್ಮವಾಗುವುದೆಂದರೆ, ಮೂಲ ಸ್ವರೂಪದ ಸ್ಥಿತಿ ನಿರ್ಮಾಣವಾಗುವುದು. ನಾವು ಯಾವಾಗ ಸರ್ವಸಂಗರಹಿತ ಶುದ್ಧ ಹಾಗೂ ತ್ರಿಗುಣಾತೀತ ಅವಸ್ಥೆಯಲ್ಲಿರುತ್ತೇವೆಯೋ ಆಗ ಅದರ ದರ್ಶನವಾಗುತ್ತದೆ. ಇದೇ ಆ ನಗ್ನಾವಸ್ಥೆ ! ದೇಹಾತೀತ ಅವಸ್ಥೆ ! ಕೇವಲ ಮೈಮೇಲಿನ ವಸ್ತ್ರವನ್ನು ತೆಗಯುವುದಕ್ಕೆ ನಗ್ನವೆಂದು ಹೇಳಲಾಗದು. ಇದು ವ್ಯಾಹಹಾರಿಕ ಅರ್ಥವಾಯಿತು; ಯಾವಾಗ ನಮ್ಮಲ್ಲಿ ಆವರಣ ನಾಶವಾಗುವುದೋ ಆಗ ಮೂಲ ಸ್ವರೂಪಸಂಧಾನವಾಗುತ್ತದೆ. ಆತ್ಮದ ಮೇಲೆ ಮತ್ತು ವಿವಿಧ ದೇಹಗಳ ಮೇಲೆ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ ಮತ್ತು ಆನಂದಮಯ ಕೋಶಗಳ ಆವರಣವಿರುತ್ತದೆ. ಈ ಆವರಣ ನಾಶವಾದಾಗ ಅದು ತ್ರಿಗುಣಾತೀತ, ದೇಹಾತೀತ ಹಾಗೂ ಶುದ್ಧ ಸ್ವರೂಪವನ್ನು ತಾಳುತ್ತದೆ. ಆಗ ಮಾತ್ರ ಆ ಭಗವಂತನ ದರ್ಶನವಾಗುತ್ತದೆ, ಇದೇ ಆ ಅವಸ್ಥೆಯಾಗಿದೆ.

ಶಿವಾಪರಾಧಕ್ಷಮಾಪನ ಸ್ತೋತ್ರದಲ್ಲಿ ಶ್ರೀಮದ್ ಆದಿಶಂಕರಾಚಾರ್ಯರು ಕೂಡ ಹೇಳುತ್ತಾರೆ,

ನಗ್ನೋ ನಿಃಸಙ್ಗಶುದ್ಧಸ್ತ್ರಿಗುಣವಿರಹಿತೋ ಧ್ವಸ್ತಮೋಹಾನ್ಧಕಾರೋ

ನಾಸಾಗ್ರೇ ನ್ಯಸ್ತದೃಷ್ಟಿರ್ವಿದಿತಭವಗುಣೋ ನೈವ ದೃಷ್ಟಃ ಕದಾಚಿತ್ |

ಉನ್ಮನ್ಯಾಽವಸ್ಥಯಾ ತ್ವಾಂ ವಿಗತಕಲಿಮಲಂ ಶಙ್ಕರಂ ನ ಸ್ಮರಾಮಿ

ಕ್ಷನ್ತವ್ಯೋ ಮೇಽಪರಾಧಃ ಶಿವ ಶಿವ ಶಿವ ಭೋ ಶ್ರೀ ಮಹಾದೇವ ಶಮ್ಭೋ ||  – ಶ್ಲೋಕ ೧೦

ಅರ್ಥ : ನಗ್ನ = ದಿಗಂಬರ (ದಿಕ್ + ಅಂಬರ) = ದಿಕ್ಕು ಯಾರ ವಸ್ತ್ರವಾಗಿದೆಯೋ, ಅವನು ಸರ್ವವ್ಯಾಪಿಯಾಗಿದ್ದಾನೆ.ಆಕಾಶದಂತೆ ನಿರ್ಮಲ, ಶುದ್ಧ, ಸ್ವಚ್ಛವಾಗಿದ್ದಾನೆ. ಅಂತಃರ್ಬಾಹ್ಯ ಶುದ್ಧವಾಗಿದೆ. ಸರ್ವಸಂಗರಹಿತ, ಶುದ್ಧ, ತ್ರಿಗುಣರಹಿತ, ಮೋಹರೂಪೀ ಅಂಧಃಕಾರವನ್ನು ನಾಶ ಮಾಡುವ, ನಾಸಾಗ್ರದ ಮೇಲೆ ದೃಷ್ಟಿಯನ್ನಿಟ್ಟು ಪದ್ಮಾಸನದಲ್ಲಿ ಕುಳಿತಿರುವ, ಇಡೀ ವಿಶ್ವದ ಗುಣಗಳನ್ನು ತಿಳಿದಿರುವ ಮಂಗಲಮಯ, ಧ್ಯಾನಾವಸ್ಥೆಯಲ್ಲಿರುವ, ಇಂತಹ ಸ್ವರೂಪದಲ್ಲಿ ನಾನೆಂದೂ ನಿಮ್ಮ ದರ್ಶನ ಪಡೆಯಲಿಲ್ಲ. ಉನ್ಮನಿ ಅವಸ್ಥೆಯಲ್ಲಿ ನಿಮ್ಮ ಕಲ್ಯಾಣಸ್ವರೂಪದ ಸ್ಮರಣೆ ಮಾಡಲಿಲ್ಲ. ಹೇ ದೇವಾಧಿದೇವಾ ಶಂಕರಾ, ಮಹಾದೇವಾ, ಶಂಭೋ, ನನ್ನ ಅಪರಾಧವನ್ನು ಕ್ಷಮಿಸಿ !

ಈ ಮೇಲಿನ ಶ್ಲೋಕದಲ್ಲಿ ಭಗವಾನ ಶಂಕರನ ಅವಸ್ಥೆಯನ್ನು ತೋರಿಸಲಾಗಿದೆ. ಮಾತಾ ಅನಸೂಯೆ ಕೂಡ ನಾಸಾಗ್ರದ ಮೇಲೆ ದೃಷ್ಟಿಯನ್ನಿಟ್ಟು, ಪದ್ಮಾಸನದಲ್ಲಿ ಧ್ಯಾನಾವಸ್ಥೆಯಲ್ಲಿ ಕುಳಿತು ಎದುರಿಗಿರುವ ಋಷಿಗಳಿಗೆ ಭೋಜನ ಸ್ವೀಕರಿಸಲು ಪ್ರಾರ್ಥನೆ ಮಾಡಿದಳು. ಆಗ ಅವಳು ಕಣ್ತೆರೆದು ಆ ಮೂರು ಋಷಿಗಳತ್ತ ನೋಡಿದಾಗ ಅವರು ಬಾಲಕಸ್ವರೂಪದಲ್ಲಿ ಕಾಣಿಸಿದರು. – ಪ.ಪೂ. ಪಾಂಡೆ ಮಹಾರಾಜರು