ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸುವ ವಿಷಯದಲ್ಲಿ ಉಪಯುಕ್ತ ಮಾಹಿತಿ !

ಮಾಹಿತಿ ಸೇವಾ ಸಮಿತಿ ಮತ್ತು ದಾದಾ ಬಾಬಾಜಿ ವಾರಘಡೆ ಪ್ರತಿಷ್ಠಾನದ ವತಿಯಿಂದ ಜನಹಿತಾರ್ಥ ಪ್ರಸಾರ ಮಾಡಿರುವ ಮತ್ತು ಮಾಹಿತಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ. ಚಂದ್ರಕಾಂತ ವಾರಘಡೆ ಇವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸು ಸಮಯದಲ್ಲಿ ನಿಯಮಗಳ ಬಗ್ಗೆ ಸಂಕಲನ ಮಾಡಿರುವ ಮಾಹಿತಿಯನ್ನು ವಾಚಕರಿಗಾಗಿ ಪ್ರಕಟಿಸುತ್ತಿದ್ದೇವೆ. ಇದರಲ್ಲಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸುವಾಗಿನ ನಿಯಮಗಳು ಯಾವವು ?, ಹಾಗೆಯೇ ದೂರನ್ನು ದಾಖಲಿಸುವಾಗ ಏನೆಲ್ಲ ಕಾಳಜಿಯನ್ನು ವಹಿಸಬೇಕು ? ಎನ್ನುವ ವಿಷಯದ ಮಾರ್ಗದರ್ಶಕ ಮಾಹಿತಿಯನ್ನು ನೀಡಲಾಗಿದೆ.

೧. ಪೊಲೀಸ್ ಠಾಣೆಯಲ್ಲಿನ ದೂರುಗಳು

 ಅಪರಾಧಗಳಲ್ಲಿ ಸಂಜ್ಞೆ (ಕಾಗ್ನಿಜಬಲ್) ಮತ್ತು ಅಸಂಜ್ಞೆ (ಅನ್‌ಕಾಗ್ನಿಜಬಲ್) ಎಂಬ ಎರಡು ವಿಧಗಳಿವೆ. ನಾವು ಸಂಜ್ಞೆ ಅಪರಾಧದ ದೂರನ್ನು ಪೊಲೀಸ್ ಠಾಣೆಗೆ ನೀಡಿದಾಗ ಪೊಲೀಸರು ಅದನ್ನು ದಾಖಲಿಸಿಕೊಳ್ಳುತ್ತಾರೆ. ಅದಕ್ಕೆ ಎಫ್.ಐ.ಆರ್. (ಪ್ರಥಮ ವರ್ತಮಾನ ವರದಿ) ಎಂದು ಹೇಳುತ್ತಾರೆ. ಇದರಿಂದಲೇ ಅಪರಾಧದ ತನಿಖೆಯು ಪ್ರಾರಂಭವಾಗುತ್ತದೆ. ನ್ಯಾಯಾಲಯದಲ್ಲಿ ದೂರು ನೀಡುವವರ ಸತ್ಯವನ್ನು ಪತ್ತೆ ಹಚ್ಚುವಾಗ ಈ ವರದಿಯು ಮಹತ್ವದ್ದಾಗುತ್ತದೆ. ಪೊಲೀಸ್ ಠಾಣೆಯಲ್ಲಿ ದೂರನ್ನು ಲಿಖಿತ ಸ್ವರೂಪದಲ್ಲಿ ಅಥವಾ ಮೌಖಿಕವಾಗಿ ಕೊಡಬಹುದು. ಪೊಲೀಸರು ಮೌಖಿಕ ದೂರನ್ನು ಬರೆದುಕೊಳ್ಳಬೇಕು ಮತ್ತು ದೂರು ನೀಡುವವರಿಗೆ ಅದನ್ನು ಓದಿ ಹೇಳಬೇಕು. ದೂರು ನೀಡುವವರು ಅದರ ಮೇಲೆ ಸಹಿ ಮಾಡಬೇಕು. ದೂರು ದಾಖಲಿಸುವವರಿಗೆ ಅದರ ನಕಲುಪ್ರತಿಯನ್ನು ಕೂಡಲೇ ಉಚಿತವಾಗಿ ಕೊಡಬೇಕೆಂದು ಕಾನೂನು ಹೇಳುತ್ತದೆ. ಘಟನೆಯು ಅಸಂಜ್ಞೆ ಅಪರಾಧಕ್ಕೆ ಸಂಬಂಧಿಸಿದ್ದರೆ, ಪೊಲೀಸರು ಅದನ್ನು ಕ್ರಿಮಿನಲ್ ಪ್ರಕ್ರಿಯೆ ಕಾನೂನಿನ ಕಲಮ್ ೧೫೫ ಕ್ಕನುಸಾರ ಅಸಂಜ್ಞೆ ಅಪರಾಧಗಳನ್ನು ಬರೆದುಕೊಳ್ಳುವ ಪುಸ್ತಕದಲ್ಲಿ ಬರೆದಿಡುತ್ತಾರೆ. ಇಂತಹ ಅಪರಾಧಗಳಲ್ಲಿ ಪೊಲೀಸರಿಗೆ ಅಪರಾಧವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲು ಬರುವುದಿಲ್ಲ. ಅದಕ್ಕಾಗಿ ಪೊಲೀಸರು ದೂರು ನೀಡುವವರಿಗೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಖಟ್ಲೆಯನ್ನು ದಾಖಲಿಸಲು ಸೂಚನೆ ನೀಡಬೇಕು, ಎನ್ನುವ ವ್ಯವಸ್ಥೆ ಇದೆ. ಇದಕ್ಕೆ ಸಾಮಾನ್ಯವಾಗಿ ಎನ್.ಸಿ. ನೋಂದಾಯಿಸುವುದು, ಅಂದರೆ ಅಸಂಜ್ಞೆಯ ಅಪರಾಧವನ್ನು ದಾಖಲಿಸುವುದು, ಎಂದು ಹೇಳುತ್ತಾರೆ.

೧ ಅ. ದೂರನ್ನು ದಾಖಲಿಸಿಕೊಳ್ಳದಿದ್ದರೆ ಏನು ಮಾಡಬೇಕು ? : ಪೊಲೀಸ್ ಠಾಣೆಯ ಮುಖ್ಯಸ್ಥನು ದೂರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರೆ ಮತ್ತು ಅದರಿಂದ ಅನ್ಯಾಯವಾಗಿದೆ, ಎಂದು ಅನಿಸಿದರೆ, ಕಾನೂನಿಗನುಸಾರ ಜಿಲ್ಲಾಪೊಲೀಸ್ ಅಧೀಕ್ಷಕರಲ್ಲಿ ಅಥವಾ ಪೊಲೀಸ್ ಆಯುಕ್ತರಲ್ಲಿ (ಆಯುಕ್ತರು ಇರುವಲ್ಲಿ) ಅಂಚೆಯ ಮೂಲಕ ದೂರನ್ನು ದಾಖಲಿಸಬಹುದು. ಇವರು ಸ್ವತಃ ಅಪರಾಧದ ತನಿಖೆ ಮಾಡಬಹುದು ಆಥವಾ ಅವರ ಕೆಳಗಿನ ಅಧಿಕಾರಿಗಳಿಗೆ ತನಿಖೆಗೆ ಆದೇಶಿಸಬಹುದು.

೧ ಆ. ದೂರನ್ನು ದಾಖಲಿಸಿಕೊಳ್ಳದಿರುವ ಪೊಲೀಸರಿಗೆ ಆಗಬಹುದಾದ ಶಿಕ್ಷೆ : ಪೊಲೀಸ್ ಠಾಣೆಯ ಮುಖ್ಯಸ್ಥನು ದೂರನ್ನು ಸ್ವೀಕರಿಸದಿದ್ದರೆ, ಭಾ.ದಂ.ಸಂ. ೧೬೬ ಕ್ಕನುಸಾರ ಅವನ ವಿರುದ್ಧ ಕ್ರಮಕೈಗೊಳ್ಳಬಹುದು ಸಾಧ್ಯತೆಯಿದೆ. ಸರಕಾರಿ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಈ ಮೇಲಿನ ಕಲಂಗನುಸಾರ ೧ ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸುವ ವ್ಯವಸ್ಥೆ ಇದೆ. ಅಪರಾಧದ ಸ್ವರೂಪ ಗಂಭೀರವಾಗಿದ್ದರೂ ಉದ್ದೇಶಪೂರ್ವಕವಾಗಿ ಅಪರಾಧವನ್ನು ಹಗುರವಾಗಿ ಪರಿಗಣಿಸಿ ದಾಖಲಿಸಿಕೊಂಡರೆ, ಭಾ.ದಂ.ಸಂ. ೧೬೭ ಕ್ಕನುಸಾರ ಸರಕಾರಿ ನೌಕರನು ಅಯೋಗ್ಯಪದ್ಧತಿಯ ಕಾಗದಪತ್ರಗಳನ್ನು ತಯಾರಿಸಿರುವ ಅಪರಾಧವಾಗುತ್ತದೆ. ಅದಕ್ಕೆ ೩ ವರ್ಷ ಜೈಲು ಅಥವಾ ದಂಡವನ್ನು ವಿಧಿಸುವ ಶಿಕ್ಷೆಯ ವ್ಯವಸ್ಥೆಯಿದೆ. ಶಿಕ್ಷೆಯನ್ನು ತಪ್ಪಿಸುವ ಉದ್ದೇಶದಿಂದ ಕಾನೂನನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಭಾ.ದಂ.ಸಂ. ೨೧೭ ಕ್ಕನುಸಾರ ಅಪರಾಧವಾಗುತ್ತದೆ. ಇದಕ್ಕೆ ೨ ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ವ್ಯವಸ್ಥೆ ಇದೆ.

೧ ಇ. ದೂರು ನೀಡುವಾಗ ತೆಗೆದುಕೊಳ್ಳಬೇಕಾದ ಕಾಳಜಿ : ದೂರನ್ನು ದಾಖಲಿಸುವಾಗ ಘಟನೆ, ಘಟನೆ ನಡೆದ ದಿನ, ಸಮಯ, ಸ್ಥಳ, ಹಾನಿಯ ವರ್ಣನೆ, ಅಲ್ಲಿ ಉಪಸ್ಥಿತ ವ್ಯಕ್ತಿಗಳು ಇತ್ಯಾದಿಗಳನ್ನು ನಮೂದಿಸಬೇಕು. ಆದಷ್ಟು ಘಟನೆ ಘಟಿಸಿದ ಕೂಡಲೇ ದೂರನ್ನು ದಾಖಲಿಸಬೇಕು. ದೂರಿನಲ್ಲಿ ಘಟನೆಯ ಮಹತ್ವದ ಅಂಶಗಳನ್ನು ನಮೂದಿಸಲು ಮರೆಯಬಾರದು. ದೂರು ದಾಖಲಿಸಲು ವಿಳಂಬವಾದರೆ, ಅದರ ಯೋಗ್ಯ ಕಾರಣವನ್ನು ನಮೂದಿಸಬೇಕು, ಇಲ್ಲದಿದ್ದರೆ ಆರೋಪಿಗೆ ಸಂಶಯದ ಲಾಭ ದೊರೆತು ಅವನು ನಿರಪರಾಧಿಯೆಂದು ಬಿಡುಗಡೆಯಾಗಬಹುದು. ದೂರು ಸತ್ಯವಾಗಿರಬೇಕು. ಪೊಲೀಸರಲ್ಲಿ ಸುಳ್ಳು ದೂರು ನೀಡುವುದು ಭಾ.ದಂ.ಸಂ. ಕಲಮ್ ೨೧೧ ಕ್ಕನುಸಾರ ಅಪರಾಧವಾಗಿದ್ದು ಅದಕ್ಕೆ ೨ ವರ್ಷಗಳ ಜೈಲು ಮತ್ತು ದಂಡ ಹೀಗೆ ಶಿಕ್ಷೆಯ ವ್ಯವಸ್ಥೆಯಿದೆ. ಅದು ಕಲಮ್ ೧೮೨ ಕ್ಕನುಸಾರ ಅಪರಾಧವಾಗುತ್ತದೆ.

೧ ಈ. ಪೊಲೀಸರು ದೂರನ್ನು ಸ್ವೀಕರಿಸಿ ಯಾವುದೇ ಕ್ರಮಕೈಗೊಳ್ಳದಿದ್ದರೆ ಏನು ಮಾಡಬೇಕು ? : ದೂರನ್ನು ದಾಖಲಿಸಿಯೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ನ್ಯಾಯಾಲಯದಲ್ಲಿ ಖಾಸಗಿ ಕ್ರಿಮಿನಲ್ ಖಟ್ಲೆಯನ್ನು ದಾಖಲಿಸಬಹುದು. ನ್ಯಾಯಾಲಯ ಪೊಲೀಸರಿಗೆ ವಿಚಾರಣೆ ಮಾಡಲು ಆದೇಶ ನೀಡಬಹುದು ಅಥವಾ ನಾವು ನೀಡಿರುವ ದೂರು ಏನಾಗಿದೆ ?, ಎಂಬುದನ್ನು ಮಾಹಿತಿ ಅಧಿಕಾರದ ಕಾನೂನಿಗನುಸಾರ ನಿರ್ಧಿಷ್ಟ ನಮೂನೆಯಲ್ಲಿ ತಕರಾರು ಅರ್ಜಿ ಸಲ್ಲಿಸಿ ಮಾಹಿತಿಯನ್ನು ತರಿಸಿಕೊಳ್ಳಬಹುದು. ಮಾಹಿತಿ ಅಧಿಕಾರದ ಕಾನೂನಿಗನುಸಾರ ಯೋಗ್ಯ ನಮೂನೆಯಲ್ಲಿ ಯೋಗ್ಯ ಶುಲ್ಕದ ಕೋರ್ಟ್ ಫೀ ಸ್ಟಾಂಪ್ ಹಚ್ಚಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಸಂಬಂಧಪಟ್ಟ ಕಾರ್ಯಾಲಯದ ಮಾಹಿತಿ ಅಧಿಕಾರಿಯು ಮಾಹಿತಿಯನ್ನು ಕಡ್ಡಾಯವಾಗಿ ಕೊಡಬೇಕಾಗುತ್ತದೆ. ಮಾಹಿತಿಯನ್ನು ನೀಡದಿದ್ದರೆ ಅಥವಾ ತಪ್ಪು, ಅಪೂರ್ಣ ಮಾಹಿತಿಯನ್ನು ನೀಡಿದರೆ, ೩೦ ದಿನಗಳ ನಂತರ ಅಪೀಲ್ ಮಾಡಬಹುದು. ಅಪೀಲ್ ಅಧಿಕಾರಿಗಳನ್ನು ಅದೇ ಕಾರ್ಯಾಲಯದಲ್ಲಿ ನೇಮಿಸಿರುತ್ತಾರೆ. ಅವರನ್ನು ಹಿರಿಯ ಅಧಿಕಾರಿಗಳೆಂದು ರಾಜ್ಯಸ್ತರದ ಹಾಗೂ ರಾಷ್ಟ್ರೀಯ ಸ್ತರದಲ್ಲಿ ಮಾಹಿತಿ ಅಧಿಕಾರಿಗಳು ನೇಮಕ ಮಾಡಿರುತ್ತಾರೆ.

೨. ಪ್ರಥಮ ಮಾಹಿತಿ ವರದಿಯು ಸಾರ್ವಜನಿಕ ಕಾಗದಪತ್ರ

ಎಫ್.ಐ.ಆರ್. ವರದಿಯು ಕಾನೂನಿನ ಕಲಮ್ ೭೪ ಮತ್ತು ೭೬ ಕ್ಕನುಸಾರ ಸಾರ್ವಜನಿಕ ಕಾಗದಪತ್ರ (ಪಬ್ಲಿಕ್ ಡಾಕ್ಯುಮೆಂಟ್) ವಾಗಿದೆ. ಅದನ್ನು ಪರಿಶೀಲಿಸುವ ಹಕ್ಕು ನಾಗರಿಕರಿಗಿದೆ. ಯೋಗ್ಯ ಶುಲ್ಕ ಪಡೆದು ಅದರ ನಕಲನ್ನು ನೀಡಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯವು ಚನ್ನಪ್ಪಾ ವಿರುದ್ಧ ಕರ್ನಾಟಕ ರಾಜ್ಯ ಈ ಖಟ್ಲೆಯಲ್ಲಿ ಹೇಳಿದೆ. (೧೯೮೦ ಕ್ರಿಮಿನಲ್ ಲಾ ಜಜ್‌ಮೆಂಟ್, ಪುಟ ೧,೦೨೨)

೩. ಮಾಹಿತಿ ಅಧಿಕಾರದ ಅಂತರ್ಗತ ಮಾಹಿತಿ ತರಿಸುವ ಬಗ್ಗೆ

ಮಾಹಿತಿ ಅಧಿಕಾರದ ಅಂತರ್ಗತ ಮಾಹಿತಿಯನ್ನು ಅಂಚೆಯ ಮೂಲಕವೂ ತರಿಸಿಕೊಳ್ಳಬಹುದು; ಆದರೆ ತಡವಾಗುವುದನ್ನು ತಪ್ಪಿಸಲು ಮತ್ತು ಅರ್ಜಿಯಲ್ಲಿನ ಕೊರತೆಗಳನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ಕಾರ್ಯಾಲಯಕ್ಕೆ ಪ್ರತ್ಯಕ್ಷ ಹೋಗಿ ಅರ್ಜಿ ಮಾಡುವುದು ಯೋಗ್ಯವೆನಿಸುತ್ತದೆ. ಮಾಹಿತಿ ಅಧಿಕಾರಿಗಳು ವಿನಾಕಾರಣ ಮಾಹಿತಿಯನ್ನು ನೀಡದಿದ್ದರೆ ಅವರಿಗೆ ಶಿಕ್ಷೆಯಾಗುವ ವ್ಯವಸ್ಥೆಯಿದೆ. ಪೆನಾಲ್ಟಿಯ ಅರ್ಥ ಕನ್ನಡದಲ್ಲಿ ಶಿಕ್ಷೆಯೆಂದಾಗುತ್ತದೆ. ದೂರನ್ನು ಬರೆದುಕೊಳ್ಳಲು ನಿರಾಕರಿಸುವುದು, ಭಾ.ದಂ.ಸಂ. ಕಲಮ್ ೧೬೬ ಮತ್ತು ೨೧೭ ಕ್ಕನುಸಾರ ಅಪರಾಧವಾಗುತ್ತದೆ. ದೂರಿಗನುಸಾರ ಘಟನೆಯ ಗಾಂಭೀರ್ಯವನ್ನು ಬರೆದುಕೊಳ್ಳದೆ ಅಪರಾಧದ ಸ್ವರೂಪವನ್ನು ಸೌಮ್ಯಗೊಳಿಸುವುದು, ಭಾ.ದಂ.ಸಂ. ಕಲಮ್ ೧೬೭ ಮತ್ತು ೨೧೮ ಕ್ಕನುಸಾರ ಅಪರಾಧ ವಾಗುತ್ತದೆ. ಅಪರಾಧವನ್ನು ಬರೆದುಕೊಂಡ ನಂತರ ಪೊಲೀಸರು ಮೊದಲು ಸೂಚನೆಯ ವರದಿಯ ಒಂದು ನಕಲು ಪ್ರತಿಯನ್ನು ನ್ಯಾಯಾಲಯಕ್ಕೆ ಕಳುಹಿಸಬೇಕು. – ಶ್ರೀ. ಚಂದ್ರಕಾಂತ ವಾರಘಡೆ, ಅಧ್ಯಕ್ಷರು, ಮಾಹಿತಿ ಸೇವಾ ಸಮಿತಿ.