ಚಾತುರ್ಮಾಸ

ಅನೇಕ ಸ್ತ್ರೀಯರು ಚಾತುರ್ಮಾಸ ದಲ್ಲಿ ‘ಧರಣೆ-ಪಾರಣೆ ಎಂಬ ಹೆಸರಿನ ವ್ರತವನ್ನು ಮಾಡುತ್ತಾರೆ. ಈ ವ್ರತದಲ್ಲಿ ಒಂದು ದಿನ ಭೋಜನ ಮತ್ತು ಮರುದಿನ ಉಪವಾಸ ಹೀಗೆ ಸತತವಾಗಿ ನಾಲ್ಕು ತಿಂಗಳು ಮಾಡಬೇಕಾಗುತ್ತದೆ. ಅನೇಕ ಸ್ತ್ರೀಯರು ಚಾತುರ್ಮಾಸದಲ್ಲಿ ಒಂದು ಅಥವಾ ಎರಡು ಧಾನ್ಯಗಳ ಆಹಾರವನ್ನು ಮಾತ್ರ ಸೇವಿಸುತ್ತಾರೆ. ಕೆಲವರು ಒಪ್ಪೊತ್ತು ಊಟ ಮಾಡುತ್ತಾರೆ. ನಾನಾ ಭಾಗಗಳಲ್ಲಿ ಚಾತುರ್ಮಾಸದಲ್ಲಿ ವಿವಿಧ ಆಚಾರಗಳು ಕಂಡು ಬರುತ್ತವೆ.

೬. ವರ್ಜ್ಯಾವರ್ಜ್ಯ

೬ ಅ. ವರ್ಜ್ಯ

೧. ಚಾತುರ್ಮಾಸದಲ್ಲಿ ಪ್ರಾಣಿಗಳ ಮೂಳೆಯಿಂದ ತಯಾರಿಸಿದ ಸುಣ್ಣ, ಚರ್ಮಪಾತ್ರೆಯಲ್ಲಿನ ನೀರು, ಗಜಲಿಂಬೆ, ಮಹಾಳುಂಗ, ವೈಶ್ವದೇವ ಮಾಡದ ಮತ್ತು ವಿಷ್ಣುವಿಗೆ ಅರ್ಪಿಸದಿರುವ ಆಹಾರ, ಚನ್ನಂಗಿಬೇಳೆ (ಮಸ್ಸೂರಿ ಬೇಳೆ), ಮಾಂಸ, ಬಿಳಿ ಅವರೆಕಾಯಿ, ಅವರೆಕಾಯಿ, ಅಲಸಂದೆ, ಉಪ್ಪಿನ ಕಾಯಿ, ಬದನೆ, ಕಲ್ಲಂಗಡಿ, ಬಹಳಷ್ಟು ಬೀಜವಿದ್ದ ಅಥವಾ ಬೀಜವಿಲ್ಲದ ಫಲ, ಮೂಲಂಗಿ, ಹಾಲುಗುಂಬಳ, ಬೋರೇಹಣ್ಣು, ನೆಲ್ಲಿಕಾಯಿ, ಹುಣಸೆಹಣ್ಣು, ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಪದಾರ್ಥಗಳು ವರ್ಜ್ಯ.

೨. ಮಂಚದ ಮೇಲೆ ಮಲಗುವುದು

೩. ಋತುಕಾಲ ಬಿಟ್ಟು ಸ್ತ್ರೀಸಂಗ

೪. ಪರಾನ್ನ

೫. ವಿವಾಹ ಮತ್ತು ಇತರ ತತ್ಸಮ ಕಾರ್ಯಗಳು

೬. ಚಾತುರ್ಮಾಸದಲ್ಲಿ ಸಾಧು-ಸಂನ್ಯಾಸಿಗಳಿಗೆ ಕೂದಲನ್ನು ಕತ್ತರಿಸುವುದು ನಿಷೇಧಿಸಲಾಗಿದೆ. ಅವರು ನಾಲ್ಕು ತಿಂಗಳುಗಳ ಕಾಲ ಅಥವಾ ಕನಿಷ್ಠ ಎರಡು ತಿಂಗಳಾದರೂ ಒಂದೇ ಸ್ಥಳದಲ್ಲಿ ಇರಬೇಕು ಎಂದು ಧರ್ಮಸಿಂಧು ಮತ್ತು ಇತರ ಕೆಲವು ಧರ್ಮಗ್ರಂಥಗಳಲ್ಲಿಯೂ ಹೇಳಲಾಗಿದೆ.

೬ ಆ. ಅವರ್ಜ್ಯ : ಚಾತುರ್ಮಾಸದಲ್ಲಿ ಹವಿಷ್ಯಾನ್ನವನ್ನು ಸೇವಿಸಬೇಕೆಂದು ಹೇಳಲಾಗಿದೆ. ಅಕ್ಕಿ, ಹೆಸರು, ಜವೆ, ಎಳ್ಳು, ಬಟಾಣಿ, ಗೋಧಿ, ಸಮುದ್ರದ ಉಪ್ಪು, ಹಸುವಿನ ಹಾಲು, ಮೊಸರು, ತುಪ್ಪ, ಹಲಸು, ಮಾವು, ತೆಂಗಿನಕಾಯಿ, ಬಾಳೆಹಣ್ಣು ಮುಂತಾದ ಪದಾರ್ಥಗಳನ್ನು ಹವಿಷ್ಯಾನ್ನಗಳೆಂದು ತಿಳಿಯಬೇಕು.

(ವರ್ಜ್ಯ ಪದಾರ್ಥಗಳು ರಜ-ತಮಮೋಗುಣಯುಕ್ತವಾಗಿರುತ್ತವೆ ಮತ್ತು ಹವಿಷ್ಯಾನ್ನಗಳು ಸತ್ತ್ವಗುಣಪ್ರಧಾನವಾಗಿರುತ್ತವೆ.)

೭. ತಪ್ತಮುದ್ರೆ

ವೈಷ್ಣವರು ಆಷಾಢ ಮತ್ತು ಕಾರ್ತಿಕ ಏಕಾದಶಿಯಂದು ತಪ್ತಮುದ್ರೆಯನ್ನು ಧರಿಸಬೇಕೆಂದು ‘ರಾಮಾರ್ಚನಚಂದ್ರಿಕಾ ಗ್ರಂಥದಲ್ಲಿ ಹೇಳಲಾಗಿದೆ. (ಕೆಲವು ಉಪಸಂಪ್ರದಾಯಗಳ ಸ್ವಾಮಿಗಳು ಮುದ್ರೆಯನ್ನು ಬಿಸಿಮಾಡಿ ಅದನ್ನು ಇತರರ ಶರೀರದ ಮೇಲೆ ಅಚ್ಚೊತ್ತುತ್ತಾರೆ; ಇದಕ್ಕೆ ತಪ್ತಮುದ್ರೆ ಎಂದು ಹೇಳುತ್ತಾರೆ.) ತಪ್ತಮುದ್ರೆ ಬಗ್ಗೆ ಪ್ರಶಂಸೆಯ ವಿಧಿವಾಕ್ಯಗಳು ಮತ್ತು ನಿಂದನಾಪರ ನಿಷೇಧವಾಕ್ಯಗಳು ಸಾಕಷ್ಟು ಕಂಡುಬರುತ್ತವೆ. ಆದುದರಿಂದ ಶಿಷ್ಟಾಚಾರದಂತೆ ಇದರ ವ್ಯವಸ್ಥೆಯನ್ನು ಅರಿಯಬೇಕೆಂದು ಧರ್ಮಸಿಂಧುಕಾರರು ಹೇಳುತ್ತಾರೆ. (ಮುಂದುವರಿಯುವುದು)

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)