ಸಂತ ತುಲಸೀದಾಸರು
ಹಸ್ತಿನಾಪುರದಲ್ಲಿ ಆತ್ಮಾರಾಮ ದುಬೆ ಎಂಬ ಒಬ್ಬ ಬ್ರಾಹ್ಮಣನು ಅಕ್ಬರನ ಆಸ್ಥಾನದಲ್ಲಿದ್ದನು. ಅವನ ಪತ್ನಿಯ ಹೆಸರು ಹುಲಸಿ. ಈ ದಂಪತಿಗಳಿಗೆ ಮೂಲಾ ನಕ್ಷತ್ರದಲ್ಲಿ ಒಂದು ಮಗುವಿನ ಜನನವಾಯಿತು. ಹನ್ನೆರಡು ತಿಂಗಳ ನಂತರ ಜನಿಸಿದ ಮಗುವದು. ಅದರ ಬಾಯಲ್ಲಿ ಮೂವತ್ತೆರಡು ಹಲ್ಲುಗಳಿದ್ದವು. ಜನನವಾಗುತ್ತಲೇ ಈ ಮಗುವಿನ ಬಾಯಿಯಿಂದ ‘ರಾಮ’ ಎಂಬ ಸ್ವರ ಬಂತು. ಗಾಬರಿಗೊಂಡ ತಂದೆ-ತಾಯಿ ಆ ಮಗುವನ್ನು ಸುವರ್ಣದಾನಗಳ ಸಹಿತ ಚುನಿಯಾ ಎಂಬ ಹೆಸರಿನ ದಾಸಿಗೆ ಕೊಟ್ಟು ಬಿಟ್ಟರು. ಮಗುವಿನ ತಾಯಿ ಹುಲಸಿಯು ನಂತರ ನಿಧನ ಹೊಂದಿದಳು. ಚುನಿಯಾ ದಾಸಿಯು ಮಗುವನ್ನು ಐದು ವರ್ಷಗಳವರೆಗೆ ಜೋಪಾನ ಮಾಡಿದಳು. ನಂತರ ಆಕೆಯೂ ಮೃತಪಟ್ಟಳು. ಜಗಜ್ಜನನಿ ಪಾರ್ವತಿಯು ಒಬ್ಬ ಬ್ರಾಹ್ಮಣ ಸ್ತ್ರೀಯ ವೇಷದಲ್ಲಿ ಬಂದು ಆ ಮಗುವಿನ ಆರೈಕೆ ಮಾಡಿದಳು ಮತ್ತು ನರಹರಿದಾಸ ಎಂಬ ಸಾಧುಗೆ ಹಸ್ತಾಂತರಿಸಿದಳು. ಮುಂದೆ ಶ್ರೀ ಶಿವಶಂಕರನು ನರಹರಿದಾಸರಿಗೆ ದೃಷ್ಟಾಂತವನ್ನು ನೀಡಿ ಆ ಮಗುವಿನ ಉಪನಯನ ಮಾಡಲು ಹೇಳಿದನು. ಉಪನಯನದ ನಂತರ ಮಗುವಿನ ರಾಮಬೋಲಾ ಎಂದು ನಾಮಕರಣ ಮಾಡಲಾಯಿತು. ಅವರೇ ತುಲಸಿದಾಸರು.
ಅಯೋಧ್ಯೆಯಲ್ಲಿ ಹನ್ನೆರಡು ವರ್ಷಗಳವರೆಗೆ ಶ್ರೀ ಗುರುಗಳ ಸನ್ನಿಧಿಯಲ್ಲಿದ್ದು ಅವರು ವೇದಶಾಸ್ತ್ರಗಳ ಅಧ್ಯಯನ ಪೂರ್ಣ ಮಾಡಿದರು. ನಂತರ ಅವರು ಹಸ್ತಿನಾಪುರಕ್ಕೆ ಹೋದರು. ಅಲ್ಲಿ ಅವರ ತಂದೆ ಆತ್ಮಾರಾಮ ಇವರ ಭೇಟಿಯಾಯಿತು. ಆತ್ಮಾರಾಮರು ತುಲಸೀದಾಸರನ್ನು ಅಕ್ಬರನ ಬಳಿಗೆ ಕರೆದೊಯ್ದರು. ಅಕ್ಬರನಿಗೆ ತುಲಸೀದಾಸರ ಬಗ್ಗೆ ಆತ್ಮೀಯತೆ ಮತ್ತು ವಿಶ್ವಾಸ ಬೆಳೆಯಿತು. ಅಕ್ಬರ ತುಲಸೀದಾಸರಿಗೆ ಬೇಟೆಯಾಡಲು ಸಹ ತನ್ನ ಜೊತೆ ಕರೆದುಕೊಂಡು ಹೋಗುತ್ತಿದ್ದನು ಎಂದು ಹೇಳಲಾಗುತ್ತದೆ.
ಆತ್ಮಾರಾಮರು ತುಲಸೀದಾಸರ ವಿವಾಹವನ್ನು ಒಂದು ಶ್ರೀಮಂತ ಮನೆತನದಲ್ಲಿ ಬೆಳೆದ ರತ್ನಾವಲಿ ಎಂಬ ಕನ್ಯೆಯ ಜೊತೆ ಸಡಗರ ಸಂಭ್ರಮದಿಂದ ನೆರವೇರಿಸಿದರು. ಈ ಪತಿ-ಪತ್ನಿಯರಲ್ಲಿ ಅಪಾರ ಪ್ರೇಮವಿತ್ತು. ತುಲಸೀದಾಸರಿಗೆ ಪತ್ನಿಯಿಂದ ಒಂದೇ ಒಂದು ಕ್ಷಣವೂ ದೂರವಿರಲು ಆಗುತ್ತಿರಲಿಲ್ಲ.
ಒಮ್ಮೆ ತುಲಸೀದಾಸರು ಅಕ್ಬರ ಬಾದಶಾಹನ ಜೊತೆ ದೂರ ದೇಶಕ್ಕೆ ಹೋದರು. ರತ್ನಾವಲಿಗೆ ಕರೆ ಬಂದಿದ್ದರಿಂದ ಅವಳು ತವರಿಗೆ ಹೋದಳು. ತುಲಸೀದಾಸರು ಮರಳಿ ಮನೆಗೆ ಬಂದರು. ರತ್ನಾವಲಿಯು ತವರಿಗೆ ಹೋಗಿರುವ ಬಗ್ಗೆ ಅವರಿಗೆ ತಿಳಿಸಲಾಯಿತು. ತಕ್ಷಣ ಅವರು ಮಾವನ ಊರಿಗೆ ಹೊರಟರು. ಅಲ್ಲಿ ತಲುಪುವುದರಲ್ಲಿ ರಾತ್ರಿಯಾಗಿತ್ತು. ಮನೆಯಲ್ಲಿನ ಎಲ್ಲರೂ ಬಾಗಿಲು ಮುಚ್ಚಿ ಮಲಗಿದ್ದರು. ತುಲಸೀದಾಸರು ‘ಮನೆಯೊಳಗೆ ಹೇಗೆ ಹೋಗುವುದು ?’ ಎಂದು ವಿಚಾರ ಮಾಡತೊಡಗಿದರು. ರತ್ನಾವಯನ್ನು ಭೇಟಿಯಾಗಲು ಕಾತುರರಾಗಿದ್ದರು. ಒಂದು ಸರ್ಪವು ಕಿಟಕಿಗೆ ಸುತ್ತಿ ನೇತಾಡುತ್ತಿರುವುದು ಅವರ ದೃಷ್ಟಿಗೆ ಬಿತ್ತು. ಅದು ಹಗ್ಗವೆಂದು ಭಾವಿಸಿ ಹಿಡಿದು ತುಲಸೀದಾಸರು ಕಿಟಿಕಿಯಿಂದ ಮನೆಯೊಳಗೆ ಸೇರಿದರು ! ಮನೆಯ ಜನರು ಎಚ್ಚೆತ್ತುಕೊಂಡರು. ತುಲಸೀದಾಸರು ಬಂದಿರುವ ಬಗ್ಗೆ ರತ್ನಾವಲಿಗೆ ಅವಳ ತಾಯಿಯು ತಿಳಿಸಿದಳು. ಅವಳು ತುಲಸೀದಾಸರಿಗೆ – ‘ಎಲ್ಲ ಬಾಗಿಲುಗಳು ಮುಚ್ಚಿರುವಾಗ ನೀವು ಒಳಗಡೆ ಹೇಗೆ ಪ್ರವೇಶಿಸಿದಿರಿ ?’ ಎಂದು ಕೇಳಿದಳು. ಆಗ ತುಲಸೀದಾಸರು ‘ನೀನು ನನಗಾಗಿ ಇಳಿಬಿಟ್ಟ ಹಗ್ಗದ ಸಹಾಯದಿಂದ ನಾನು ಬಂದೆನು’ ಎಂದು ಉತ್ತರಿಸಿದರು. ಇದನ್ನು ಕೇಳಿ ರತ್ನಾವಲಿಗೆ ಆಶ್ಚರ್ಯವಾಯಿತು. ಅವಳು ಕಿಟಿಕಿಯ ಹತ್ತಿರ ಹೋಗಿ ನೋಡಿದಾಗ, ಅಲ್ಲಿ ಅವಳಿಗೆ ಒಂದು ದೊಡ್ಡ ಸರ್ಪವು ನೇತಾಡುತ್ತಿರುವುದು ಕಂಡುಬಂತು ! ಆಗ ಅವಳು ‘ಪ್ರಾಣನಾಥಾ, ನೀವು ನನ್ನನ್ನು ಎಷ್ಟು ಪ್ರೀತಿಸುವಿರೋ, ಅಷ್ಟೇ ಪ್ರೀತಿಯನ್ನು ನೀವು ಶ್ರೀರಾಮನ ಮೇಲೆ ಇಟ್ಟರೆ ನಿಮ್ಮ ಜನ್ಮ ಸಾರ್ಥಕವಾಗುತ್ತಿತ್ತು’ ಎಂಬ ಉದ್ಗಾರ ತೆಗೆದಳು. ಅವಳ ಆ ಮಾತು ಕೇಳಿ ತುಲಸೀದಾಸರು ವಿರಕ್ತಿ ಹೊಂದಿದರು ಅಂದರೆ ಅವರ ಮನಸ್ಸಿನಲ್ಲಿ ವೈರಾಗ್ಯ ಉತ್ಪನ್ನವಾಯಿತು.
ತುಲಸೀದಾಸರು ತಕ್ಷಣ ಅಲ್ಲಿಂದ ಹೊರಟು ಆನಂದವನಕ್ಕೆ ಹೋದರು. ಅಲ್ಲಿ ಅವರು ಹನ್ನೆರಡು ವರ್ಷ ತಪಸ್ಸು ಆಚರಿಸಿದರು. ನಂತರ ಅವರು ರಾಮಕಥೆಯ ಕಥನ ಮಾಡತೊಡಗಿದರು. ಒಮ್ಮೆ ತುಲಸೀದಾಸರಿಗೆ ಪಿಶಾಚಿಯ ಭೇಟಿಯಾಯಿತು. ಪಿಶಾಚಿಯು ‘ನಿನಗೆ ಏನು ಬೇಕು ?’ ಎಂದು ಕೇಳಿತು. ‘ರಾಮನ ಭೇಟಿ ಮಾಡಿಸು’ ಎಂದು ತುಲಸೀದಾಸರು ಹೇಳುತ್ತಲೇ ಅದು ಹಿಂದೆ ಹಿಂದೆ ಹೋಯಿತು. ದೂರ ಹೋಗಿ ಅವರಿಗೆ ಹೇಳಿತು. ‘ನೀನು ಯಾವ ಸ್ಥಳದಲ್ಲಿ ಪುರಾಣ ಕೇಳಲು ಹೋಗುತ್ತಿಯೋ, ಅಲ್ಲಿ ಕೈಯಲ್ಲಿ ಕೋಲು ಹಿಡಿದ ಒಬ್ಬ ವೃದ್ಧ ಬ್ರಾಹ್ಮಣನು ಎಲ್ಲರಿಗಿಂತ ಮುಂಚೆ ಬಂದು ಕುಳಿತುಕೊಳ್ಳುವನು. ಎಲ್ಲರೂ ಹೋದ ನಂತರ ಹೊರಟು ಹೋಗುವ ಆ ವೃದ್ಧ ಬ್ರಾಹ್ಮಣನು ನಿನಗೆ ರಾಮನ ದರ್ಶನ ಮಾಡಿಸುವನು. ಅವನು ಸಾಕ್ಷಾತ್ ಹನುಮಂತನಾಗಿದ್ದಾನೆ’. ಹೀಗೆ ಹೇಳಿ ಪಿಶಾಚಿಯು ಮಾಯವಾಯಿತು.
ಮಾರನೇ ದಿನ ಪುರಾಣ ಕಥನ ಮುಗಿದ ನಂತರ ಆ ವೃದ್ಧ ಬ್ರಾಹ್ಮಣ ಹೊರಡುತ್ತಿದ್ದಂತೆ ತುಲಸೀದಾಸರು ಅವನಿಗೆ ದಾರಿಯಲ್ಲಿ ನಿಲ್ಲಿಸಿ ಸಾಷ್ಟಾಂಗ ನಮಸ್ಕಾರ ಮಾಡಿದರು. ‘ನಾನು ಒಬ್ಬ ಬಡ ಬ್ರಾಹ್ಮಣ, ನಿನಗೆ ಕೊಡಲು ನನ್ನ ಹತ್ತಿರ ಏನೂ ಇಲ್ಲ’ ಎಂದು ಬ್ರಾಹ್ಮಣನು ಹೇಳುತ್ತಲೇ ತುಲಸೀದಾಸರು, ‘ಹನುಮಂತ ! ನೀನೇ ನನಗೆ ಪ್ರಭು ಶ್ರೀರಾಮನ ದರ್ಶನ ಮಾಡಿಸಬಹುದು’ ಬೇಡಿಕೊಂಡರು.
ವಾಲ್ಮೀಕಿಯು ತುಲಸೀದಾಸರ ಅವತಾರ ತಾಳಿ ಬಂದಿರುವರೆಂದು ಹನುಮಂತನು ಗುರುತಿಸಿದನು. ಅವರನ್ನು ಪ್ರೀತಿಯಿಂದ ಆಲಿಂಗಿಸಿದ ಹನುಮಂತನು ‘ಬೇಗನೇ ಶ್ರೀರಾಮನ ಭೇಟಿ ಮಾಡಿಸುವೆ’ ಎಂದು ಹೇಳಿ ಅದೃಶ್ಯನಾದನು. ಹನುಮಂತನು ಶ್ರೀರಾಮಚಂದ್ರನಿಗೆ ಹೇಳಿದನು, ‘ನಿಮ್ಮ ಆಜ್ಞೆಯಂತೆ ವಾಲ್ಮೀಕಿಯು ತುಲಸೀದಾಸ ಎಂಬ ಹೆಸರಿನಿಂದ ಅವತಾರ ತಾಳಿರುವರು. ಅವರಿಗೆ ನಿಮ್ಮ ದರ್ಶನದ ತೀವ್ರ ತಳಮಳವಾಗಿದೆ’. ಆಗ ಪ್ರಭು ಶ್ರೀರಾಮಚಂದ್ರನು ತುಲಸೀದಾಸರಿಗೆ ವಾಲ್ಮೀಕಿಯು ವರ್ಣಿಸಿದ ರೂಪದಲ್ಲಿ ದರ್ಶನವಿತ್ತನು. ತುಲಸೀದಾಸರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿ ಪ್ರಭು ಶ್ರೀರಾಮಚಂದ್ರನು ಅದೃಶ್ಯರಾದನು.
ತುಲಸೀದಾಸರು ರಾಮನ ಭಜನೆ-ಕೀರ್ತನೆ ಮಾಡಲು ಪ್ರಾರಂಭಿಸಿದರು. ಕಾಶಿ ಕ್ಷೇತ್ರದಲ್ಲಿ ಅವರ ಕೀರ್ತಿ ಹಬ್ಬಿತು. ಜನರು ತುಲಸೀದಾಸರಿಗೆ ಮಠ ಕಟ್ಟಿಕೊಟ್ಟರು. ಧರ್ಮಕಾರ್ಯಕ್ಕಾಗಿ ಶ್ರೀಮಂತ ಜನರು ತುಲಸೀದಾಸರಿಗೆ ತಮ್ಮ ಸಂಪತ್ತನ್ನು ಅರ್ಪಿಸಿದರು.
ಒಮ್ಮೆ ಬ್ರಾಹ್ಮಣರೊಂದಿಗೆ ತುಲಸೀದಾಸರು ಭೋಜನಕ್ಕೆ ಕುಳಿತಿದ್ದರು. ಅಷ್ಟರಲ್ಲಿ ‘ಜಯ ಸೀತಾ-ರಾಮ’ ಎಂದು ಹೇಳುತ್ತ ಒಬ್ಬ ಬ್ರಾಹ್ಮಣನು ಭಿಕ್ಷೆ ಬೇಡಲು ಬಂದನು. ಆಗ ತುಲಸೀದಾಸರು ಅವನನ್ನು ತಮ್ಮೊಂದಿಗೆ ಕುಳಿತುಕೊಳ್ಳಲು ಹೇಳಿದರು. ಇದರಿಂದ ಎಲ್ಲ ಬ್ರಾಹ್ಮಣರು ಎದ್ದು ಹೊರಟರು. ‘ನೀವು ಏಕೆ ಎದ್ದಿರಿ ?’ ಎಂದು ತುಲಸೀದಾಸರು ವಿಚಾರಿಸಲು ಆ ಬ್ರಾಹ್ಮಣರು, ‘ಇವನ ಕೈಯಿಂದ ಬ್ರಹ್ಮಹತ್ಯೆಯಾಗಿದೆ. ಇಂತಹ ಪಾಪಿ ಮನುಷ್ಯನ ಜೊತೆಯಲ್ಲಿ ನಾವು ಕುಳಿತುಕೊಳ್ಳುವುದಿಲ್ಲ’ ಎಂದರು. ‘ರಾಮನ ನಾಮಸ್ಮರಣೆಯಿಂದ ಇವನು ಪುಣ್ಯವಂತನಾಗಿದ್ದಾನೆ. ನಾಮಸ್ಮರಣೆಯಿಂದ ಭಸ್ಮವಾಗದಂತಹ ಪಾತಕ ಯಾವುದೂ ಇಲ್ಲ, ಹೀಗೆ ಶ್ರೀಕೃಷ್ಣನು ಉದ್ಧವನಿಗೆ ಹೇಳಿದ್ದಾನೆ’ ಎಂದು ತುಲಸೀದಾಸರು ಹೇಳಿದರು. ಆಗ ಆ ಬ್ರಾಹ್ಮಣರು, ‘ನೀವು ಎದುರಿನಲ್ಲಿರುವ ಶಿವ ಮಂದಿರದ ನಂದಿಯಿಂದ ನೈವೇದ್ಯ ಭಕ್ಷಣೆ ಮಾಡಿಸಿ ತೋರಿಸಿದ್ದಲ್ಲಿ ನಾವು ಇವನ ಪಾತಕವು ಹೋಗಿದೆ ಎಂದು ತಿಳಿಯುವೆವು ! ನಮಗೆ ಬ್ರಹ್ಮಜ್ಞಾನ ಬೇಡ, ಪ್ರಮಾಣ ಬೇಕು’ ಎಂದರು. ಇದನ್ನು ಕೇಳುತ್ತಲೇ ತುಲಸೀದಾಸರು ಒಂದು ಪತ್ರಾವಳಿಯಲ್ಲಿ ನೈವೇದ್ಯ ತೆಗೆದುಕೊಂಡು ಶಿವ ಮಂದಿರಕ್ಕೆ ಹೋದರು. ನಂದಿಯ ಎದುರಿಗೆ ಆ ನೈವೇದ್ಯ ಇಟ್ಟರು ಹಾಗೂ ಕೈಮುಗಿದು ಹೇಳಿದರು. ‘ದೇವರೇ, ಸಮುದ್ರ ಮಂಥನದ ಸಮಯದಲ್ಲಿ ನೀನು ವಿಷವನ್ನು ಸೇವಿಸಿರುವೆ. ಆಗ ನಿನ್ನ ವಿಷದಿಂದ ನೀಲಿಗಟ್ಟಿದಾಗ ರಾಮ ನಾಮದ ಉಚ್ಚಾರ ಮಾಡುತ್ತಲೇ ಉರಿಯು ಶಾಂತವಾಯಿತು. ಅದೇ ರಾಮನ ಹೆಸರು ಈ ಬ್ರಾಹ್ಮಣನು ಉಚ್ಚರಿಸಿ ಇವನು ಬ್ರಹ್ಮಹತ್ಯೆಯಿಂದ ಮುಕ್ತನಾಗಿಲ್ಲವೇ ? ಆ ಸಾಕ್ಷಿಯನ್ನು ಎಲ್ಲರಿಗೂ ತೋರಿಸಲೆಂದು ಹಾಲುಗಲ್ಲಿನ ಈ ನಂದಿಯು ಎಲ್ಲರ ಮುಂದೆ ನೈವೇದ್ಯ ಭಕ್ಷಣೆ ಮಾಡಲಿ ಎಂದು ಈ ದಾಸನು ನಿಮಗೆ ವಿನಂತಿಸುತ್ತಿರುವನು ಹಾಗೂ ಪ್ರಾರ್ಥನೆ ಮಾಡುತ್ತಿರುವನು’. ಆಗ ಎಲ್ಲರ ಎದುರಿನಲ್ಲಿ ಆ ನಂದಿಯು ನೈವೇದ್ಯವನ್ನು ಪತ್ರಾವಳಿ ಸಹಿತ ತಿಂದಿತು. ಈ ಪವಾಡ ಕಂಡು ಎಲ್ಲ ಬ್ರಾಹ್ಮಣರು ತುಲಸೀದಾಸರ ಚರಣಗಳಲ್ಲಿ ಬಿದ್ದು ನಮಸ್ಕರಿಸಿದರು.
ಒಮ್ಮೆ ಜೈನಪಾಳನೆಂಬ ಹೆಸರಿನ ಒಬ್ಬ ಸಾಹುಕಾರನು ಮೃತಪಟ್ಟನು. ಅವನ ಪತ್ನಿಯು ಸತಿ ಹೋಗಲಿಕ್ಕೆ ಮನೆಯಿಂದ ಹೊರಟಳು. ಹೋಗುವಾಗ ಹಾದಿಯಲ್ಲಿ ಅವಳಿಗೆ ತುಲಸೀದಾಸರ ಮಠ ಕಾಣಿಸಿತು. ತುಲಸೀದಾಸರಿಗೆ ನಮಸ್ಕರಿಸಲೆಂದು ಅವಳು ಮಠಕ್ಕೆ ಹೋದಳು. ಅವಳು ತುಲಸೀದಾಸರಿಗೆ ಭಕ್ತಿಭಾವದಿಂದ ನಮಸ್ಕಾರ ಮಾಡಿದಳು. ‘ಅಷ್ಟಪುತ್ರ ಸೌಭಾಗ್ಯವತಿ ಭವ !’ ಎಂದು ತುಲಸೀದಾಸರು ಅವಳಿಗೆ ಆಶೀರ್ವದಿಸಿದರು. ಆಗ ಅವಳು ‘ಮಹಾರಾಜ, ನನ್ನ ಪತಿಯು ನಿಧನ ಹೊಂದಿದನೆಂದು ನಾನು ಸಹಗಮನ ಮಾಡಲು ಹೊರಟಿದ್ದೇನೆ. ಆಗ ನಿಮ್ಮ ಆಶೀರ್ವಾದವು ಹೇಗೆ ಸತ್ಯವಾದೀತು ?’ ಅದನ್ನು ಕೇಳಿ ತುಲಸೀದಾಸರು ‘ಶ್ರೀರಾಮನ ಚಿಂತನೆಯಲ್ಲಿ ಮಗ್ನನಾಗಿರುವಾಗ ನಿನಗೆ ಆಶೀರ್ವಾದ ಸಿಕ್ಕಿದೆ, ಇದರರ್ಥ ಅದನ್ನು ಶ್ರೀರಾಮನೇ ಕೊಟ್ಟಿರುವನು ಎಂದು ತಿಳಿ, ಸರ್ವಸಮರ್ಥನಾದ ಪ್ರಭುವೇ ನಿನಗೆ ಸಿಕ್ಕ ಆಶೀರ್ವಾದವನ್ನು ಪೂರ್ಣಗೊಳಿಸುವನು’ ಎಂದು ಹೇಳಿದರು. ಇದನ್ನು ಕೇಳಿ ಆ ಸ್ತ್ರೀಯು ತನ್ನ ಪತಿಯ ಹೆಣದ ಬಳಿಗೆ ಬಂದಳು. ಅಷ್ಟರಲ್ಲಿ ಅವಳ ಪತಿಯು ಎದ್ದು ಕುಳಿತನು. ಆ ಪವಾಡವನ್ನು ಕಂಡು ಜನರು ಆಶ್ಚರ್ಯಚಕಿತರಾದರು. ಅವಳು ಪತಿಯನ್ನು ತನ್ನ ಜೊತೆ ಕರೆದುಕೊಂಡು ಮಠಕ್ಕೆ ಹೋಗಿ ಇಬ್ಬರೂ ತುಲಸೀದಾಸರ ಕಾಲಿಗೆ ಬಿದ್ದು ನಮಸ್ಕರಿಸಿದರು. ಅವರಿಬ್ಬರೂ ತುಲಸೀದಾಸರ ಸೇವಕರಾದರು. ಆ ಮಠದಲ್ಲಿದ್ದು ತುಲಸೀದಾಸರು ಅನೇಕರಿಗೆ ಭಕ್ತಿ ಮಾರ್ಗದಲ್ಲಿ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ನಂತರ ಗೋಕುಲ, ಮಥುರಾ ಮುಂತಾದ ತೀರ್ಥಕ್ಷೇತ್ರಗಳಿಗೆ ಹೋಗುತ್ತಾ ಅವರು ವೃಂದಾವನಕ್ಕೆ ತೆರಳಿದರು. ಅಲ್ಲಿ ಮೀರಾಬಾಯಿಯ ಭೇಟಿ ಕೂಡ ಆಯಿತು.
ಸಂತ ತುಲಸೀದಾಸರು ವಾಲ್ಮೀಕಿ ರಾಮಾಯಣವನ್ನು ಹಿಂದಿಯಲ್ಲಿ ಬರೆದರು. ತುಲಸೀದಾಸರು ಬರೆದ ‘ಶ್ರೀರಾಮಚರಿತಮಾನಸ’. ತುಲಸೀ ರಾಮಾಯಣವು ಬಡವರಿಂದ ಹಿಡಿದು ಶ್ರೀಮಂತರ ಅರಮನೆಗಳವರೆಗೆ ಎಲ್ಲೆಡೆ ಸಮಾನವಾಗಿ ಪ್ರವೇಶ ಮಾಡಿದೆ. ತುಲಸೀದಾಸರಿಗೆ ಹನುಮಂತನು ವಿನಯ ಪದಗಳನ್ನು ಬರೆಯಲು ಆಜ್ಞೆ ಮಾಡಿದನು. ಅದನ್ನು ಸ್ವೀಕರಿಸಿ ಅವರು ‘ವಿನಯ-ಪತ್ರಿಕೆ’ ಎಂಬ ಶ್ರೇಷ್ಠ ಕಾವ್ಯ ರಚಿಸಿದರು. ತುಲಸೀದಾಸರರಂತಹ ಬೇರೆ ಜನಪ್ರಿಯ ಕವಿ ಭಾರತದಲ್ಲಿ ಮಧ್ಯಯುಗದಲ್ಲಿ ಯಾರೂ ಆಗಲಿಲ್ಲ.
ತುಲಸಿ ಅಯೋಧ್ಯಾಪತಿ ಭಜೊ | ಜುವೊ ನ ದೂಜಿ ಕೋರ ||
ರಾಮ ವದನ ಪುರಾಣ ಶಶಿ | ಕರನೀಜ ನೈನ ಚಕೋರ ||
ಶಕೆ ೧೬೬೧ ಯ ರಾಮನವಮಿಯ ದಿನ ತುಲಸೀದಾಸರು ‘ಶ್ರೀರಾಮಚರಿತಮಾನಸ’ ಬರೆಯಲು ಪ್ರಾರಂಭಿಸಿದರು. ಎರಡು ವರ್ಷ ಏಳು ತಿಂಗಳು ಇಪ್ಪತ್ತೇಳು ದಿನಗಳ ನಂತರ ಈ ರಚನೆಯು ಪೂರ್ಣಗೊಂಡಿತು. ಶಕೆ ೧೬೩೩ ನ ಮಾರ್ಗಶಿರ ಶುಕ್ಲ ಪಕ್ಷದಲ್ಲಿ ಶ್ರೀರಾಮ-ಸೀತಾ ವಿವಾಹದಂದು ಏಳೂ ಕಾಂಡಗಳು ಬರೆದು ಪೂರ್ಣವಾದವು.
ಭಗವಾನ ಶ್ರೀರಾಮನ ಆಜ್ಞೆಯ ಮೇರೆಗೆ ತುಲಸೀದಾಸರು ಕಾಶಿಗೆ ಹೋಗಿ ಶ್ರೀ ವಿಶ್ವನಾಥ ಹಾಗೂ ಅನ್ನಪೂರ್ಣಾದೇವಿಗೆ ತಮ್ಮ ಕಾವ್ಯವನ್ನು ಓದಿ ಹೇಳಿದರು ಹಾಗೂ ಗ್ರಂಥವನ್ನು ವಿಶ್ವನಾಥನ ಗರ್ಭಗುಡಿಯೊಳಗೆ ಇಟ್ಟರು. ಮಾರನೆಯ ದಿನ ಗ್ರಂಥದ ಮೇಲೆ ‘ಸತ್ಯಂ ಶಿವಂ ಸುದರಮ್’ ಎಂದೂ ಅದರ ಕೆಳಗೆ ‘ಶ್ರೀಶಂಕರ’ ಎಂಬ ಅಕ್ಷರಗಳು ಕಂಡವು. ತುಲಸೀದಾಸರ ಈ ಕಾವ್ಯ ನಷ್ಟ ಮಾಡಲು ಕೆಲವು ಪಂಡಿತರು ಪ್ರಯತ್ನಿಸಿದರು. ಆ ಗ್ರಂಥವನ್ನು ಕದಿಯಲು ಅವರ ಮನೆಗೆ ಕಳ್ಳರನ್ನೂ ಕಳುಹಿಸಿದರು. ಆದರೆ ಇಬ್ಬರು ಧನುರ್ಧಾರಿಗಳು ಅಲ್ಲಿ ಕಾವಲು ಕಾಯುತ್ತಿರುವುದು ಅವರಿಗೆ ಕಾಣಿಸಿತು. ಅವರು ಓಡಿ ಹೋದರು. ನಂತರ ತುಲಸೀದಾಸರು ಆ ಗ್ರಂಥವನ್ನು ತಮ್ಮ ಅತ್ಯಂತ ಪ್ರೀತಿಯ ಸ್ನೇಹಿತ ತೋಡರಮಲ್‌ರಿಗೆ ಒಪ್ಪಿಸಿದರು.
ಆನಂದ ಕಾನನೆ ಯಸ್ಮಿನ್ ಜಂಗಮಸ್ತುಲಸೀ ತರೂಃ |
ಕವಿತಾ ಮಂಜರಿ ಭಾತಿ ರಾಮಭ್ರಮರ ಭೂಷಿತಾ ||
ಎಂದು ಶ್ರೀ ಮದುಸೂಧನ ಸರಸ್ವತಿಯವರು ಅಭಿಪ್ರಾಯ ನೀಡಿದ್ದಾರೆ.
ಅರ್ಥ : ಈ ಕಾಶೀವನದಲ್ಲಿ, ಈ ಆನಂದವನದಲ್ಲಿ ಒಂದು ತಿರುಗಾಡುವ ತುಳಸೀ ಗಿಡವಿದೆ. ಅದರ ಕವಿತೆಯ ರೂಪದಲ್ಲಿನ ಮಂಜರಿಯು ಅತಿ ಸುಂದರವಾಗಿವೆ. ಆ ಮಂಜರಿಯ ಮೇಲೆ ರಾಮರೂಪದ ಭ್ರಮರವು ನಿತ್ಯ ಹಾರಾಡುತ್ತ ಇರುತ್ತದೆ.
ಶಕೆ ೧೬೮೦ ಶ್ರಾವಣ ಕೃಷ್ಣ ಪಕ್ಷ ತೃತೀಯಾ, ಶನಿವಾರದಂದು ತುಲಸೀದಾಸರು ಆಸಿ ಘಾಟನಲ್ಲಿ ಶ್ರೀರಾಮ ಹೆಸರನ್ನು ಹೇಳುತ್ತ ಶ್ರೀರಾಮನ ಚರಣಗಳಲ್ಲಿ ಲೀನವಾದರು.
(ಆಧಾರ : www.HinduJagruti.org ಜಾಲತಾಣ)