ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ

ದೇಶದ 19 ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ಮಾಫಿಯಾ

ನವದೆಹಲಿ – ಜಂತರ ಮಂತರನಲ್ಲಿ ‘ಕಾಕ್ರೋಚ್ ಜನತಾ ಪಕ್ಷ’ ನಡೆಸುತ್ತಿದ್ದ ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧದ ಪ್ರತಿಭಟನೆ ಮುಕ್ತಾಯಗೊಂಡಿದ್ದರೂ, 2014 ರಿಂದ ಜುಲೈ 2026 ರವರೆಗೆ ಪ್ರಶ್ನೆಪತ್ರಿಕೆ ಸೋರಿಕೆಯ ಕನಿಷ್ಠ 116 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪ್ರಕರಣಗಳಿಂದಾಗಿ ಸುಮಾರು ಏಳೂವರೆ ಕೋಟಿ ಅಭ್ಯರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಈ ಪ್ರಶ್ನೆಪತ್ರಿಕೆ ಸೋರಿಕೆ ಮಾಡುವ ಮಾಫಿಯಾಗಳ ಜಾಲವು 19 ರಾಜ್ಯಗಳಲ್ಲಿ ಹರಡಿಕೊಂಡಿದೆ.

1. 2014 ರಿಂದ 2024 ರ ಅವಧಿಯಲ್ಲಿ 89 ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇವುಗಳಲ್ಲಿ 21 ಕೇಂದ್ರೀಯ ಸಂಸ್ಥೆಗಳಿಗೆ ಮತ್ತು 68 ರಾಜ್ಯಮಟ್ಟದ ಪರೀಕ್ಷೆಗಳಿಗೆ ಸಂಬಂಧಿಸಿದ್ದವು. ತದನಂತರ 2025 ರಲ್ಲಿ 20 ಮತ್ತು 2026 ರ ಜುಲೈವರೆಗೆ ‘ನೀಟ್-ಯುಜಿ’ ಸೇರಿದಂತೆ ಪ್ರಶ್ನೆಪತ್ರಿಕೆ ಸೋರಿಕೆಯ 7 ಪ್ರಕರಣಗಳು ದಾಖಲಾಗಿವೆ.

2. ಜನವರಿ 2019 ರಿಂದ ಜೂನ್ 2024 ರ ಅವಧಿಯಲ್ಲಿ ದೇಶಾದ್ಯಂತ 19 ರಾಜ್ಯಗಳಲ್ಲಿ 65 ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದವು. ಇದರಲ್ಲಿ ಸರಕಾರಿ ನೇಮಕಾತಿಯಿಂದ ಹಿಡಿದು ಪ್ರವೇಶ ಪರೀಕ್ಷೆ, ಬೋರ್ಡ್ ಮತ್ತು ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಸೇರಿವೆ. ಈ 65 ಪ್ರಕರಣಗಳ ಪೈಕಿ 45 ಸರಕಾರಿ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸಿದವುಗಳಾಗಿದ್ದವು. ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ಕನಿಷ್ಠ 27 ಪರೀಕ್ಷೆಗಳನ್ನು ರದ್ದುಗೊಳಿಸಲಾಯಿತು ಅಥವಾ ಮುಂದೂಡಲಾಯಿತು. ಇದರಿಂದಾಗಿ 3 ಲಕ್ಷಕ್ಕೂ ಅಧಿಕ ಸರಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ. ಶಿಕ್ಷಕರ ಮತ್ತು ಪೊಲೀಸ್ ನೇಮಕಾತಿ ಪರೀಕ್ಷೆಗಳೇ ಹೆಚ್ಚಾಗಿ ಇವರ ಗುರಿಯಾಗಿದ್ದವು.

3. ಪ್ರಶ್ನೆಪತ್ರಿಕೆ ಸೋರಿಕೆಯ ಉತ್ತರ ಪ್ರದೇಶದಲ್ಲಿ 11, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ತಲಾ 9, ಮಹಾರಾಷ್ಟ್ರದಲ್ಲಿ 6 ಮತ್ತು ಗುಜರಾತ್‌ ನಲ್ಲಿ 5 ಪ್ರಕರಣಗಳು ದಾಖಲಾಗಿವೆ.

4. ಕೇಂದ್ರ ಸರಕಾರದ ಶಾಲಾ ಪರೀಕ್ಷೆಗಳು, ಕೇಂದ್ರೀಯ ವಿದ್ಯಾಲಯ ಸಂಘಟನೆ, ಕೇಂದ್ರ ಲೋಕಸೇವಾ ಆಯೋಗ, ಸೇನೆ, ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯಂತಹ 8 ನೇಮಕಾತಿ ಪರೀಕ್ಷೆಗಳನ್ನು ರದ್ದುಗೊಳಿಸಬೇಕಾಯಿತು. ಇದರಿಂದಾಗಿ ನೇಮಕಾತಿ ಪ್ರಕ್ರಿಯೆ 2 ರಿಂದ 8 ತಿಂಗಳು ವಿಳಂಬವಾಯಿತು.

5. 2025-26 ರಲ್ಲಿ ಬೋರ್ಡ್, ನೇಮಕಾತಿ, ಅರ್ಹತಾ ಪರೀಕ್ಷೆ, ವಿಶ್ವವಿದ್ಯಾಲಯ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಲೇ ಇದ್ದವು.

6. ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ 21 ಯುವಕರ ಆತ್ಮಹತ್ಯೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷಗಳ ಕಾರಣದಿಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರಿಗೆ ರಾಜೀನಾಮೆ ನೀಡುವಂತೆ ಮಾಡಲಾಯಿತು.

ಸಂಪಾದಕೀಯ ನಿಲುವು

ಪ್ರಶ್ನೆಪತ್ರಿಕೆ ಸೋರಿಕೆ ಮಾಡುವವರಿಗೆ ಈಗ ಗಲ್ಲು ಶಿಕ್ಷೆಯನ್ನೇ ನೀಡಲು ಕಾನೂನಿನಲ್ಲಿ ಬದಲಾವಣೆ ಮಾಡುವುದು ಅತ್ಯಗತ್ಯವಾಗಿದೆ !