ಗುರುಕುಲ ಶಿಕ್ಷಣಪದ್ಧತಿಯ ಅವಶ್ಯಕತೆ !

೧. ಭಗವದ್ಗೀತೆ, ರಾಮಾಯಣ, ಉಪನಿಷತ್ತುಗಳು ಮತ್ತು ಪುರಾಣಗಳ ಮಹತ್ವ

‘ಕಳೆದ ಸಾವಿರಾರು ವರ್ಷಗಳಲ್ಲಿ ಶ್ರೀಕೃಷ್ಣನ ಭಗವದ್ಗೀತೆಗೆ ಸರಿಸಾಟಿ ಆಗುವಂತಹ, ಬೇರೊಂದು ಗ್ರಂಥವನ್ನು ಯಾರೂ ರಚಿಸಿಲ್ಲ. ಅದೇ ರೀತಿ ರಾಮಾಯಣ, ಉಪನಿಷತ್ತುಗಳು ಮತ್ತು ಪುರಾಣಗಳಿಗೆ ಸರಿಸಮಾನವಾದ ಯಾವುದೇ ರಚನೆ ಆಗಲಿಲ್ಲ.

೨. ಮನುಷ್ಯಜನ್ಮದ ಮಹತ್ವ ಮತ್ತು ಅವನ ಧ್ಯೇಯ

ಇಂದು ಮನುಷ್ಯನ ಬುದ್ಧಿಯು ತುಂಬಾ ಕೆಳಮಟ್ಟಕ್ಕೆ ಇಳಿದಿದೆ. ಪಕ್ಷಿಗಳು ತಿಂದು-ಕುಡಿದು, ಕೋಲಾಹಲ ಮಾಡಿ, ಹಾಗೆಯೇ ಜೀವ-ಜಂತುಗಳು ಮತ್ತು ಪಶುಗಳನ್ನು ತಿಂದು, ತೆವಳುತ್ತ-ತಿರುಗುತ್ತ ತಮ್ಮ ಜೀವನವನ್ನು ಮುಗಿಸುತ್ತವೆ. ಮನುಷ್ಯನು ತಿನ್ನುತ್ತಾನೆ-ಕುಡಿಯುತ್ತಾನೆ, ಓಡಾಡುತ್ತಾನೆ ಮತ್ತು ಐಷಾರಾಮದ ಜೀವನ ನಡೆಸುತ್ತಾನೆ. ಆದರೆ ಮನುಷ್ಯನ ಜೀವನದಲ್ಲಿ ಇದಕ್ಕಿಂತಲೂ ದೊಡ್ಡ ಸಾಧ್ಯತೆ ಅಡಗಿದೆ, ಅವನು ಸೃಷ್ಟಿಕರ್ತನಾದ ಪರಮಾತ್ಮನ ಖಜಾನೆಯಾಗಿರುವ, ಅಂದರೆ ಆನಂದ, ಜ್ಞಾನ, ಸಾಮರ್ಥ್ಯ ಮತ್ತು ಮಾಧುರ್ಯ ಇತ್ಯಾದಿಗಳನ್ನು ಪಡೆಯಬಹುದು. ಇಷ್ಟೇ ಅಲ್ಲ, ತನ್ನನ್ನು ತಾನು ಅರಿತುಕೊಂಡು ಸೃಷ್ಟಿಕರ್ತನೊಂದಿಗೆ ಏಕರೂಪವಾಗುವ ಸಾಮರ್ಥ್ಯವೂ ಮನುಷ್ಯನಲ್ಲಿ ಬೀಜರೂಪದಲ್ಲಿ ಅಡಗಿದೆ. ಬೀಜಕ್ಕೆ ಮಣ್ಣು, ಗೊಬ್ಬರ ಮತ್ತು ನೀರು ಸಿಕ್ಕರೆ, ಹೇಗೆ ಮರವಾಗುತ್ತದೆಯೋ, ಹಾಗೆಯೇ ಮನುಷ್ಯನಿಗೆ ಸದ್ಗುರು, ಶಾಸ್ತ್ರ ಮತ್ತು ಸಾಧನೆ ದೊರೆತರೆ, ಅವನು ಬ್ರಹ್ಮನಾಗುತ್ತಾನೆ.

ನಾವು ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿ ಬದುಕುವ ಎರಡು ಕಾಲಿನ ಪಶುಗಳಂತೆ ಉಳಿಯಬಾರದು, ಮನಸ್ಸಿನಿಂದ ಭಗವಂತನೊಂದಿಗೆ ಸಂಬಂಧ ಜೋಡಿಸಿ ಮನುಷ್ಯನಾಗಬೇಕು. ಮಾನವನು ಮಾನವನಿಂದ ಮಹಾಮಾನವನಾಗಬಹುದು. ದೇವರ ದೇವ ‘ಪರಮದೇವನಾಗಿ ಪರಬ್ರಹ್ಮ-ಪರಮಾತ್ಮ, ಬ್ರಹ್ಮ-ವಿಷ್ಣು-ಮಹೇಶ, ಜಗದಂಬಾ ಮುಂತಾದವರು ಯಾರಲ್ಲಿ ಸ್ಥಿರವಾಗಿದ್ದಾರೋ, ಅವರಲ್ಲಿ ಸ್ಥಿರವಾಗಲು ಸಾಧ್ಯವಾಗುತ್ತದೆ.

೩. ಗುರುಕುಲದ ಮಹತ್ವ

ಪ್ರಾಚೀನ ಕಾಲದಲ್ಲಿ ಒಂದು ಗುರುಕುಲದಲ್ಲಿ ಅಥವಾ ಋಷಿಗಳ ಆಶ್ರಮದಲ್ಲಿ ೧೦ ಸಾವಿರ ವಿದ್ಯಾರ್ಥಿಗಳು ಒಟ್ಟಿಗೆ ಕಲಿಯುತ್ತಿದ್ದರು. ಅಲ್ಲಿನ ವಿದ್ಯಾರ್ಥಿಗಳು ರಾಜಕುಮಾರನಾಗಲಿ ಅಥವಾ ಸಾಮಾನ್ಯ ಬಡವರ ಮನೆಯ ಮಗನಾಗಲಿ, ಎಲ್ಲರಿಗೂ ಸಾಮೂಹಿಕ ಜೀವನವನ್ನು ಸಾಗಿಸುವ ಮತ್ತು ತಿತಿಕ್ಷಾ (ದೈಹಿಕ, ಮಾನಸಿಕ, ಭಾವನಿಕ ಅಥವಾ ಬಾಹ್ಯ ಅಡಚಣೆಗಳನ್ನು) ಸಹಿಸಿಕೊಳ್ಳುವ ಅವಕಾಶ ಸಿಗುತ್ತಿತ್ತು; ಆದ್ದರಿಂದ ವಿದ್ಯಾರ್ಥಿಗಳು ಪರಿಪಕ್ವವಾಗಿ ಸಮಾಜದಲ್ಲಿ ಬರುತ್ತಿದ್ದರು.

ಯಾವ ಆಶ್ರಮ ಮತ್ತು ಗುರುಕುಲ ಇತ್ಯಾದಿಗಳಲ್ಲಿ ಪರಮೇಶ್ವರನನ್ನು ಪಡೆಯುವ ಕ್ಷಮತೆ ಮತ್ತು ಯೋಗ್ಯತೆಯು ವಿಕಸಿತವಾಗುತ್ತಿತ್ತೋ, ಅಂತಹ ಗುರುಕುಲಗಳು ಈಗ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ ಆಗಿವೆ. ದುರ್ಗುಣಗಳನ್ನು ತ್ಯಜಿಸುವುದರಿಂದಲೇ ಸಂಕಲ್ಪಶಕ್ತಿ ಪವಿತ್ರವಾಗುತ್ತದೆ. ಗುರುಕುಲಗಳಲ್ಲಿ ಮೊದಲು ದುರ್ಗುಣಗಳನ್ನು ಬಿಡಿಸಿ ವಿದ್ಯಾರ್ಥಿಗಳ ಸಂಕಲ್ಪಶಕ್ತಿಯನ್ನು ವಿಕಸಿತಗೊಳಿಸಲಾಗುತ್ತಿತ್ತು. ಈಗ ಮಾತ್ರ ಕಂಠಸ್ಥ ಮಾಡಿ ಅಥವಾ ಇತರ ವಿದ್ಯಾರ್ಥಿಗಳು ಬರೆದಿದ್ದನ್ನು ಕದ್ದು ನೋಡಿ ಪರೀಕ್ಷೆ ಕೊಡಲಾಗುತ್ತದೆ. ನೌಕರಿಗಾಗಿ ಲಂಚ ಕೊಡುತ್ತಾರೆ. ನಂತರ ನೌಕರಿ ಮಾಡಿ ಜನರಿಂದ ಬಹಳಷ್ಟು ಹಣ ತೆಗೆದುಕೊಂಡು ಐಷಾರಾಮದ ಜೀವನವನ್ನು ನಡೆಸುತ್ತಾರೆ. ಆದ್ದರಿಂದ (ಅತಿಸುಖದಿಂದ) ರೋಗಗಳು ಹೆಚ್ಚಾದವು. ಇದರಿಂದ ಸಮಾಜದಲ್ಲಿ ದುಃಖ ಹೆಚ್ಚುತ್ತಾ ಹೋಯಿತು. ಜಗಳಾಡುವುದು-ಜಗಳಗಳಿಗೆ ಕಾರಣವಾಗುವುದು ನಡೆಯುತ್ತಿವೆ. ಒಡಕಿನಿಂದಾಗಿ ಶಕ್ತಿಯು ವ್ಯರ್ಥವಾಗುತ್ತಿದೆ. ಪರಸ್ಪರ ಸಹಾಯ ಮಾಡಿ ಶಕ್ತಿ ಮತ್ತು ಸಂಕಲ್ಪಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಭಾರತೀಯ ಸಂಸ್ಕೃತಿಯು ಜನರ ಒಳಿತನ್ನೇ ಬಯಸುತ್ತದೆ ಹಾಗೂ ಪಶು-ಪಕ್ಷಿಗಳ ಮತ್ತು ಗಿಡಮರಗಳ ಹೀಗೆ ಎಲ್ಲರ ಒಳಿತನ್ನೇ ಬಯಸುತ್ತದೆ !

(ಆಧಾರ : ಮಾಸಿಕ ‘ಋಷಿಪ್ರಸಾದ)