ಶ್ರೀರಾಮ ಮಂದಿರದ 10 ಕೋಟಿ ಮೌಲ್ಯದ ಜಮೀನು ಪ್ರಕರಣ: ಅತಿಕ್ರಮಣದಾರರ ದಾವೆ ವಜಾ : Achalapur Sri Rama Temple

  • ಮಹಾರಾಷ್ಟ್ರ ದೇವಸ್ಥಾನ ಮಹಾಸಂಘ’ದ ಕಾನೂನು ಬೆಂಬಲಕ್ಕೆ ದೊರೆತ ಭಾರಿ ಜಯ!

  • ದೇವಸ್ಥಾನದ ಭೂಮಿಯನ್ನು ಕಬಳಿಸುವ ಸಂಚು ವಿಫಲ!

ಅಚಲಪುರ (ಅಮರಾವತಿ ಜಿಲ್ಲೆ) – ಇಲ್ಲಿನ ಐತಿಹಾಸಿಕ ಮತ್ತು ಪ್ರಾಚೀನ ‘ಶ್ರೀ ಸೀತಾರಾಮಚಂದ್ರ ಸಂಸ್ಥಾನ ಉಪಾಖ್ಯ ಶ್ರೀರಾಮಮಂದಿರ (ಬುಂದೇಲಪುರ)’ ಈ ದೇವಸ್ಥಾನಕ್ಕೆ ಸೇರಿದ ಮೌಜಾ ಖೇಲ್ ತ್ರ್ಯಂಬಕನಾರಾಯಣ ಇಲ್ಲಿನ 3.5 ಎಕರೆ (1.43 ಹೆಕ್ಟೇರ್) ವಿಸ್ತೀರ್ಣದ, 10 ಕೋಟಿ ರೂಪಾಯಿ ಮೌಲ್ಯದ ಅಮೂಲ್ಯವಾದ ಕೃಷಿ ಭೂಮಿಯನ್ನು ಕಬಳಿಸುವ ಸಂಚನ್ನು ಅಚಲಪುರದ ಕಂದಾಯ ನ್ಯಾಯಾಲಯವು ವಿಫಲಗೊಳಿಸಿದೆ. ಅಚಲಪುರದ ತಹಶೀಲ್ದಾರ ಹಾಗೂ ಕೃಷಿ ಭೂಮಿ ನ್ಯಾಯಾಧಿಕರಣದ ಅಧ್ಯಕ್ಷರಾದ ಸುದರ್ಶನ ಶಹಾರೆ ಅವರು ದೇವಸ್ಥಾನದ ಪ್ರಾಥಮಿಕ ಆಕ್ಷೇಪಣೆಯನ್ನು ಪುರಸ್ಕರಿಸಿ, ಅರ್ಜಿದಾರ ಮಹಿಳಾ ಅತಿಕ್ರಮಣದಾರರ ಗೇಣಿದಾರಿಕೆ ಖರೀದಿ ಪ್ರಕರಣವನ್ನು ಕಾನೂನುಬದ್ಧವಾಗಿ ವಜಾಗೊಳಿಸಿದ್ದಾರೆ.

ಯಾವುದೇ ದೇವಸ್ಥಾನದ ಪ್ರಕರಣದಲ್ಲಿ ಕೇವಲ ಪ್ರಾಥಮಿಕ ಆಕ್ಷೇಪಣೆಯ ಕಾನೂನು ಬದ್ಧತೆಯನ್ನು ಪರಿಗಣಿಸಿ, ಸಂಪೂರ್ಣ ದಾವೆಯನ್ನು ಆರಂಭದಲ್ಲೇ ವಜಾಗೊಳಿಸಿ ದೇವಸ್ಥಾನದ ಪರವಾಗಿ ತೀರ್ಪು ಬಂದಿರುವುದು ಮಹಾರಾಷ್ಟ್ರ ರಾಜ್ಯದಲ್ಲೇ ಇಂತಹ ಮೊದಲ ಐತಿಹಾಸಿಕ ನಿರ್ಧಾರವಾಗಿದೆ. ಈ ಹೋರಾಟದಲ್ಲಿ ‘ಮಹಾರಾಷ್ಟ್ರ ದೇವಸ್ಥಾನ ಮಹಾಸಂಘ’ವು ಸಂಸ್ಥಾನದ ನೂತನ ಟ್ರಸ್ಟಿಗಳಿಗೆ (ವಿಶ್ವಸ್ತರಿಗೆ) ನೀಡಿದ ಭದ್ರವಾದ ಕಾನೂನು ಬೆಂಬಲ ಮತ್ತು ಸಹಕಾರದಿಂದಾಗಿಯೇ ಮಂದಿರದ ಭೂಮಿಯು ಸುರಕ್ಷಿತವಾಗಿದೆ.

ಮಹಾರಾಷ್ಟ್ರ ದೇವಾಲಯ ಒಕ್ಕೂಟ

ಮೃತ ಟ್ರಸ್ಟಿಗಳ ಹೆಸರಿನಲ್ಲಿ ಭೂಮಿ ಕಬಳಿಸುವ ಸಂಚು ನಡೆದಿತ್ತು!

ಸಂಬಂಧಪಟ್ಟ ಭೂಮಿಯು ಶ್ರೀರಾಮಮಂದಿರ ಸಂಸ್ಥಾನದ ಮಾಲೀಕತ್ವಕ್ಕೆ ಸೇರಿದ್ದಾಗಿದೆ. ಅದರ ಆದಾಯದಿಂದ ಮಂದಿರದ ನೈವೇದ್ಯ, ಪೂಜೆ-ಪುನಸ್ಕಾರ, ಜೀರ್ಣೋದ್ಧಾರ ಮತ್ತು ಅರ್ಚಕರ ವೆಚ್ಚಗಳನ್ನು ಭರಿಸಬೇಕಾಗಿದೆ; ಆದರೆ ಪ್ರಸ್ತುತ ಮಂದಿರವು ಅತ್ಯಂತ ಶೀಥಿಲಾವಸ್ಥೆಯಲ್ಲಿದ್ದು, ಅತಿಕ್ರಮಣದಾರರಿಂದ ದೇವಸ್ಥಾನಕ್ಕೆ ಒಂದು ರೂಪಾಯಿಯ ಪ್ರತಿಫಲವೂ ಸಿಗುತ್ತಿರಲಿಲ್ಲ. 7/12 ಪಹಣಿಯಲ್ಲಿ (ಉತಾರಾ) ಹೆಸರಿದ್ದ ಹಳೆಯ ಟ್ರಸ್ಟಿಗಳು ನಿಧನರಾಗಿರುವುದರ ದುರುಪಯೋಗವನ್ನು ಪಡೆದುಕೊಂಡು, ಅರ್ಜಿದಾರರಾದ ಅನಿತಾ ಲಖನಸಿಂಗ್ ತರವಲೆ ಅವರು ನೈಜ ಪರಿಸ್ಥಿತಿಯನ್ನು ಮರೆಮಾಚಿ ಭೂಮಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಧರ್ಮಾದಾಯ ಆಯುಕ್ತರ ಕಾರ್ಯಾಲಯದ (ಧಾರ್ಮಿಕದತ್ತಿ ಆಯುಕ್ತರು) ಆದೇಶದಂತೆ ದೇವಸ್ಥಾನಕ್ಕೆ ನೂತನ ಟ್ರಸ್ಟಿಗಳನ್ನು ನೇಮಕ ಮಾಡಲಾಗಿತ್ತು. ಆದರೂ ನೂತನ ಟ್ರಸ್ಟಿಗಳನ್ನು ಪಕ್ಷಗಾರರನ್ನಾಗಿ ಮಾಡದೆ ಈ ಅಕ್ರಮ ಕಾರ್ಯವನ್ನು ಮುಂದುವರಿಸಲಾಗಿತ್ತು.

ಈ ಪ್ರಕರಣದಲ್ಲಿ ಮಹಾರಾಷ್ಟ್ರ ದೇವಸ್ಥಾನ ಮಹಾಸಂಘದ ರಾಜ್ಯ ಪದಾಧಿಕಾರಿಗಳಾದ ಶ್ರೀ. ಅನೂಪ ಜೈಸ್ವಾಲ್ ಮತ್ತು ವಿನೀತ ಪಾಖೋಡೆ ಅವರು ತಕ್ಷಣ ಮಧ್ಯಪ್ರವೇಶಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು ಮತ್ತು ಈ ಭೂಮಿಯ ಇತಿಹಾಸವನ್ನು ಮುನ್ನೆಲೆಗೆ ತಂದರು. ಅಮರಾವತಿಯ ಧರ್ಮಾದಾಯ ಸಹ-ಆಯುಕ್ತರ ವರದಿಯ ಪ್ರಕಾರ, ನೋಂದಾಯಿತ ದೇವಸ್ಥಾನದ ಭೂಮಿಯನ್ನು ಖರೀದಿ ಅಥವಾ ಮಾರಾಟ ಮಾಡಲು ಧರ್ಮಾದಾಯ ಆಯುಕ್ತರ ಪೂರ್ವಾನುಮತಿ ಕಡ್ಡಾಯವಾಗಿದೆ ಮತ್ತು ಅರ್ಜಿದಾರರ ಬಳಿ ಅಂತಹ ಯಾವುದೇ ಅನುಮತಿ ಇರಲಿಲ್ಲ.

ಉಭಯ ಪಕ್ಷಗಳ ವಾದ-ಪ್ರತಿವಾದ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರ, ತಹಶೀಲ್ದಾರ ಸುದರ್ಶನ ಶಹಾರೆ ಅವರು ಅರ್ಜಿದಾರ ಮಹಿಳೆಯು ಗೇಣಿದಾರಿಕೆ ಕಾಯ್ದೆಯ ಷರತ್ತುಗಳನ್ನು ಪೂರೈಸಿಲ್ಲ ಮತ್ತು ದೇವಸ್ಥಾನದ ಭೂಮಿಯನ್ನು ಖರೀದಿಸಲು ಆಕೆಗೆ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ಅರ್ಜಿದಾರರ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದ ಅವರು, ಭೂಮಿಯು ಸಂಸ್ಥಾನದ ಮಾಲೀಕತ್ವಕ್ಕೇ ಸೇರಿದ್ದು ಎಂದು ತೀರ್ಪು ನೀಡಿದರು.

ಈ ಸಂಪೂರ್ಣ ನ್ಯಾಯಾಲಯದ ಹೋರಾಟದಲ್ಲಿ ಸಂಸ್ಥಾನದ ಪರವಾಗಿ ನೂತನ ಟ್ರಸ್ಟಿಗಳಾದ ಸರ್ವಶ್ರೀ ಮಯೂರ ದೀಕ್ಷಿತ್, ಅಜಯ ತಿವಾರಿ, ಪುರುಷೋತ್ತಮ ದುಬೆ, ರಾಜಕುಮಾರ ಮಿಶ್ರಾ, ಲೋಕನಾಥ ವಾಜಪೇಯಿ, ಸಚಿನ ಅವಸ್ಥಿ ಮತ್ತು ನಿತಿನ ಮಾಹೇಶ್ವರಿ ಅವರು ಅತ್ಯಂತ ದೃಢವಾಗಿ ಕಾನೂನು ಬದ್ಧವಾಗಿ ವಾದವನ್ನು ಮಂಡಿಸಿದ್ದರು.