ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !

ಮಕ್ಕಳಿಗೆ ಪೌಷ್ಟಿಕ ಆಹಾರದ ಅಭ್ಯಾಸವನ್ನು ಬೆಳೆಸಲು ರಾಜ್ಯ ಸರಕಾರದ ತೀರ್ಮಾನ

ಮಂಗಳೂರು – ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರದ ಅಭ್ಯಾಸವನ್ನು ಬೆಳೆಸಲು ಶಾಲೆಗಳ ಹತ್ತಿರ ಪಿಜ್ಜಾ ಮತ್ತು ಬರ್ಗರ್ ಮಾರಾಟದ ಮೇಲೆ ಶೀಘ್ರದಲ್ಲೇ ನಿಷೇಧ ಹೇರಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಇಲ್ಲಿ ಘೋಷಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್ ಅವರು, ವಿದ್ಯಾರ್ಥಿಗಳಿಗೆ ಬರುವ ಅನೇಕ ಕಾಯಿಲೆಗಳ ಹಿಂದಿನ ನಿಜವಾದ ಕಾರಣ ‘ಜಂಕ್ ಫುಡ್’ (ಸಂಸ್ಕರಿಸಿದ ಮತ್ತು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾದ ಆಹಾರ ಪದಾರ್ಥಗಳು) ಸೇವನೆಯಾಗಿದೆ. ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯಗತ್ಯವಾಗಿದ್ದು, ಶಾಲಾ ಮಟ್ಟದಲ್ಲಿ ಇಂತಹ ಪದಾರ್ಥಗಳ ಮೇಲೆ ನಿರ್ಬಂಧ ಹೇರಿದರೆ ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಆರೋಗ್ಯಕರ ಅಭ್ಯಾಸಗಳು ಬೆಳೆಯುತ್ತವೆ. ಸರಕಾರವು ಆಹಾರ ಸುರಕ್ಷತೆಯ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿಸುವುದರ ಜೊತೆಗೆ ಆಹಾರ ತಪಾಸಣಾ ಪ್ರಯೋಗಾಲಯಗಳನ್ನು ಹೆಚ್ಚು ಸಕ್ಷಮಗೊಳಿಸಲಿದೆ. ಕಲಬೆರಕೆ ಮತ್ತು ಕಳಪೆ ಆಹಾರ ಪದಾರ್ಥಗಳನ್ನು ನಿಯಂತ್ರಿಸಲು ಪ್ರಸ್ತುತ ಇರುವ ಪ್ರಯೋಗಾಲಯಗಳ ಆಧುನೀಕರಣ ಹಾಗೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅತ್ಯಾಧುನಿಕ ಪ್ರಯೋಗಾಲಯಗಳನ್ನು ಸ್ಥಾಪಿಸುವ ಕೆಲಸವನ್ನೂ ಕೈಗೆತ್ತಿಕೊಳ್ಳಲಾಗಿದೆ. ‘ಜಂಕ್ ಫುಡ್’ ಮೇಲಿನ ನಿಷೇಧದ ಆದೇಶವನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಖಾದರ್ ಅವರು ಸ್ಪಷ್ಟಪಡಿಸಿದರು.

ಸಂಪಾದಕೀಯ ನಿಲುವು

  • ಎಲ್ಲಿಯ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿಡುವ ಭಾರತೀಯ ಆಹಾರ ಮತ್ತು ಎಲ್ಲಿಯ ಆರೋಗ್ಯವನ್ನು ಕೆಡಿಸುವ ಪಾಶ್ಚಾತ್ಯ ಆಹಾರ ! ಭಾರತೀಯರಿಗೆ ಈಗಲಾದರೂ ತಮ್ಮ ಆಹಾರದ ಮಹತ್ವ ತಿಳಿಯುವುದೇ ?
  • ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಇಂತಹ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದಾದರೆ, ಇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಇದನ್ನು ಏಕೆ ತೆಗೆದುಕೊಳ್ಳಲಾಗುತ್ತಿಲ್ಲ ?