ದೇವಸ್ಥಾನ ಇನಾಮು ಭೂಮಿಗಳ ಕುರಿತಾದ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ದೇವಸ್ಥಾನಗಳ ಪ್ರತಿನಿಧಿಗಳ ಸೇರ್ಪಡೆ!

ಕಂದಾಯ ಸಚಿವ ಚಂದ್ರಶೇಖರ ಬಾವನಕುಲೆ

ಮುಂಬಯಿ, ಜೂನ್ 19 (ಸುದ್ದಿ) – ದೇವಸ್ಥಾನಗಳ ಇನಾಮು ಭೂಮಿಗಳ ಮಾರಾಟಕ್ಕಾಗಿ ಸಿದ್ಧಪಡಿಸಲಾಗಿದ್ದ ‘ಮಹಾರಾಷ್ಟ್ರ ದೇವಸ್ಥಾನ ಇನಾಮು ನಿರ್ಮೂಲನಾ ಅಧಿನಿಯಮ 2026’ಕ್ಕೆ ರಾಜ್ಯದ ದೇವಸ್ಥಾನಗಳು ಮತ್ತು ಹಿಂದುತ್ವನಿಷ್ಠರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರಕಾರವು ಈ ಕರಡನ್ನು ರದ್ದುಗೊಳಿಸಿದೆ. ಈ ವಿಷಯದಲ್ಲಿ ದೇವಸ್ಥಾನಗಳ ಹಿತರಕ್ಷಣೆ ಮಾಡುವ ಸುಧಾರಿತ ಕರಡನ್ನು ತರುವುದಾಗಿ ಕಂದಾಯ ಸಚಿವ ಚಂದ್ರಶೇಖರ ಬಾವನ್‌ಕುಳೆ ಅವರು ಭರವಸೆ ನೀಡಿದ್ದಾರೆ. ಸುಧಾರಿತ ಕರಡನ್ನು ಸಿದ್ಧಪಡಿಸಲು ರಚಿಸಲಾದ ಸಮಿತಿಯಲ್ಲಿ ರಾಜ್ಯದ ದೇವಸ್ಥಾನಗಳ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಲಾಗಿದೆ.

https://drive.google.com/file/d/1c3BJVEszJVoh3lSFpRRj0XH-o-2Y9qEN/view

ಕಂದಾಯ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಈ ಸಮಿತಿಯನ್ನು ಸ್ಥಾಪಿಸಲಾಗಿದೆ. ಜೂನ್ 17 ರಂದು ಕಂದಾಯ ಇಲಾಖೆಯು ಈ ಕುರಿತಾದ ಸರಕಾರಿ ಆದೇಶವನ್ನು ಹೊರಡಿಸಿದ್ದು, ಇದರಲ್ಲಿ ಸಮಿತಿಗೆ ಸೇರ್ಪಡೆಗೊಳಿಸಲಾದ ಸದಸ್ಯರ ಹೆಸರುಗಳನ್ನು ನೀಡಲಾಗಿದೆ.

‘ಮಹಾರಾಷ್ಟ್ರ ಮಂದಿರ ಮಹಾಸಂಘ’ದ ಮಹತ್ವದ ಪಾತ್ರ!

ರಾಜ್ಯ ಸರಕಾರವು ಈ ಹಿಂದೆ ಸಿದ್ಧಪಡಿಸಿದ್ದ ‘ಮಹಾರಾಷ್ಟ್ರ ದೇವಸ್ಥಾನ ಇನಾಮು ನಿರ್ಮೂಲನಾ ಅಧಿನಿಯಮ 2026’ ರಿಂದಾಗಿ ‘ಅನೇಕ ದೇವಸ್ಥಾನಗಳ ಭೂಮಿಯನ್ನು ಭೂಮಾಫಿಯಾಗಳು ನುಂಗಿಹಾಕಲಿವೆ’ ಎಂಬ ಅಪಾಯವನ್ನು ಮೊದಲ ಬಾರಿಗೆ ‘ಮಹಾರಾಷ್ಟ್ರ ಮಂದಿರ ಮಹಾಸಂಘ’ವು ಸರಕಾರದ ಗಮನಕ್ಕೆ ತಂದಿತ್ತು. ಮಹಾರಾಷ್ಟ್ರ ಮಂದಿರ ಮಹಾಸಂಘದ ನೇತೃತ್ವದಲ್ಲಿ ರಾಜ್ಯದ ಅನೇಕ ದೇವಸ್ಥಾನಗಳು ಈ ಕರಡಿಗೆ ವಿರೋಧ ವ್ಯಕ್ತಪಡಿಸಿದ್ದವು.

ಕಂದಾಯ ಸಚಿವ ಚಂದ್ರಶೇಖರ್ ಬಾವನ್‌ಕುಳೆ ಅವರು ಮಹಾರಾಷ್ಟ್ರ ಮಂದಿರ ಮಹಾಸಂಘದ ಪ್ರತಿನಿಧಿಗಳೊಂದಿಗೆ ಮೇ 26 ರಂದು ಸಚಿವಾಲಯದಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ ರಾಜ್ಯದ ವಿವಿಧ ದೇವಸ್ಥಾನಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಇದರಲ್ಲಿ ಚಂದ್ರಶೇಖರ್ ಬಾವನ್‌ಕುಳೆ ಅವರು ದೇವಸ್ಥಾನಗಳ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದರು. ಜೂನ್ 6 ರಂದು ಈ ಕರಡಿಗೆ ತಡೆ ನೀಡಲಾಗುತ್ತಿದೆ ಎಂದು ಅವರು ಘೋಷಿಸಿದ್ದರು.

ಮಹಾರಾಷ್ಟ್ರ ಮಂದಿರ ಮಹಾಸಂಘ ಮತ್ತು ಹಿಂದೂ ವಿಧಿಜ್ಞ ಪರಿಷತ್ ಸೇರಿದಂತೆ ಇತರ ಸಂಸ್ಥೆಗಳ ಪ್ರತಿನಿಧಿಗಳೂ ಸೇರ್ಪಡೆ!

ಈ ಸಮಿತಿಯಲ್ಲಿ ಮಹಾರಾಷ್ಟ್ರ ಮಂದಿರ ಮಹಾಸಂಘದ ರಾಷ್ಟ್ರೀಯ ಸಂಯೋಜಕರಾದ ಶ್ರೀ. ಸುನೀಲ್ ಘನವಟ್, ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್ ಅವರೊಂದಿಗೆ ನ್ಯಾಯವಾದಿ ಆಶಿಷ್ ಸೋನವಣೆ (ಪುಣೆ), ಶ್ರೀ. ಸಂಜೀವ್ ದೇಶಪಾಂಡೆ (ಛತ್ರಪತಿ ಸಂಭಾಜಿನಗರ), ಶ್ರೀ. ಸಂದೀಪ್ ಮಹಾಜನ್ (ಛತ್ರಪತಿ ಸಂಭಾಜಿನಗರ), ಶ್ರೀ. ಅನಿಲ್ ಸಾಂಬರೆ (ನಾಗಪುರ), ನ್ಯಾಯವಾದಿ ರಾಜೇಶ್ ಮುಧೋಳ್ಕರ್ (ಠಾಣೆ), ಶ್ರೀ. ಜಗದೀಶ್ ಪಾಟೀಲ್ (ಸೋಲಾಪುರ), ನ್ಯಾಯವಾದಿ ರವೀಂದ್ರ ಕ್ಷೀರಸಾಗರ್ (ಪುಣೆ), ಹಿರಿಯ ವಿಧಿಜ್ಞ ಎಸ್.ಕೆ. ಜೈನ್, ವಿದರ್ಭ ದೇವಸ್ಥಾನ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಅನೂಪ್ ಜೈಸ್ವಾಲ್, ಶ್ರೀ. ವಿಜಯ್ ಪೋರೆ (ಸಾತಾರಾ) ಮತ್ತು ‘ಚಿಂಚವಡ ದೇವಸ್ಥಾನ ಟ್ರಸ್ಟ್’ನ ವಿಶ್ವಸ್ತರಾದ ಶ್ರೀ. ಕೇಶವ ವಿದ್ವಾನ್ಸ್ ಅವರು ಸೇರಿದ್ದಾರೆ.