ಪಂದ್ಯ ಮುಗಿದ ನಂತರ ಜಪಾನಿನ ವೀಕ್ಷಕರು ಕ್ರೀಡಾಂಗಣದಲ್ಲಿ ಬಿದ್ದಿದ್ದ ಕಸವನ್ನು ಸ್ವತಃ ಎತ್ತಿ ಪರಿಸರವನ್ನು ಸ್ವಚ್ಛಗೊಳಿಸಿದರು!

  • ಕೆನಡಾ, ಅಮೇರಿಕಾ ಮತ್ತು ಮೆಕ್ಸಿಕೋದಲ್ಲಿ ನಡೆಯುತ್ತಿರುವ ಫುಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಯ ಘಟನೆ

  • 'ಮೈವಾಕು' ಸಂಸ್ಕೃತಿಯಿಂದ ಜಪಾನಿನ ವೀಕ್ಷಕರ ಜಗತ್ತಿನಾದ್ಯಂತ ಶ್ಲಾಘನೆ

ಜಪಾನಿನ ಅಭಿಮಾನಿಗಳು ಕ್ರೀಡಾಂಗಣವನ್ನು ಸ್ವಚ್ಛಗೊಳಿಸುತ್ತಿದ್ದಾರೆ.

ಡಲ್ಲಾಸ್ (ಅಮೇರಿಕಾ) – ಸಾಮಾಜಿಕ ಜವಾಬ್ದಾರಿಯ ಅರಿವು ಮತ್ತು ಕರ್ತವ್ಯಪ್ರಜ್ಞೆಗೆ ಹೆಸರಾದ ಜಪಾನಿನ ನಾಗರಿಕರ ಶಿಸ್ತಿನ ಅನುಭವವನ್ನು ಇಡೀ ಜಗತ್ತು ಮತ್ತೊಮ್ಮೆ ಇತ್ತೀಚೆಗೆ ಪಡೆದಿದೆ. ಪ್ರಸ್ತುತ ಕೆನಡಾ, ಅಮೇರಿಕಾ ಮತ್ತು ಮೆಕ್ಸಿಕೋದಲ್ಲಿ ನಡೆಯುತ್ತಿರುವ ಫಿಫಾ ಫುಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಡಲ್ಲಾಸ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯವು 2-2 ಅಂತರದಲ್ಲಿ ಡ್ರಾ ಆದ ನಂತರ ಜಪಾನಿನ ವೀಕ್ಷಕರು ಕ್ರೀಡಾಂಗಣದಲ್ಲಿ (ವೀಕ್ಷಕರು ಕುಳಿತುಕೊಳ್ಳುವ ಭಾಗ) ಬಿದ್ದಿದ್ದ ಕಸವನ್ನು ಸ್ವತಃ ಎತ್ತಿ ಪರಿಸರವನ್ನು ಸ್ವಚ್ಛಗೊಳಿಸಿದರು. ಅವರ ಈ ಕೃತಿಗೆ ಜಗತ್ತಿನಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.

ಜಪಾನಿನ ಸಂಸ್ಕೃತಿಯಲ್ಲಿ ಒಂದು ಸ್ಥಳವನ್ನು ಹೇಗೆ ಕಂಡುಕೊಳ್ಳುತ್ತಾರೋ, ಹಾಗೆಯೇ ಬಿಟ್ಟು ಹೋಗಬೇಕು ಎಂಬ ತತ್ತ್ವಜ್ಞಾನವನ್ನು ಹೇಳಲಾಗಿದೆ. ಈ ತತ್ತ್ವಜ್ಞಾನವನ್ನು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲೆಯಲ್ಲಿ ಕಲಿಸಲಾಗುತ್ತದೆ. ಈ ಕಲಿಕೆಯ ಪ್ರಕಾರ ಪಂದ್ಯ ಮುಗಿದ ನಂತರವೂ ವೀಕ್ಷಕರು ಕ್ರೀಡಾಂಗಣದ ಕಸವನ್ನು ಎತ್ತಲು ನಿಂತರು. ಅವರು ಕಸ ಆರಿಸಲು ಆರಂಭಿಸುತ್ತಿದ್ದಂತೆ ಅಲ್ಲಿ ಹಾಜರಿದ್ದ ಇತರ ವೀಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿ ಅವರಿಗೆ ಗೌರವ ಸಲ್ಲಿಸಿದರು.

‘ಮೈವಾಕು’ ಎಂದರೆ ನಿಖರವಾಗಿ ಏನು?

ಜಪಾನಿನ ಸಂಸ್ಕೃತಿಯಲ್ಲಿ ‘ಮೈವಾಕು’ ಒಂದು ಪ್ರಮುಖ ಪರಿಕಲ್ಪನೆಯಾಗಿದೆ. ಇದರರ್ಥ ಇತರರಿಗೆ ಅನಾನುಕೂಲವಾಗದಂತೆ, ಅವರಿಗೆ ತೊಂದರೆಯಾಗದಂತೆ ಕಾಳಜಿ ವಹಿಸುವುದು. ಸಾರ್ವಜನಿಕ ಸ್ಥಳವನ್ನು ಕೊಳಕಾಗಿಡುವುದು ಅಥವಾ ಇತರರಿಗೆ ಹೆಚ್ಚುವರಿ ಕೆಲಸ ಸೃಷ್ಟಿಸುವುದು, ಇದು ‘ಮೈವಾಕು’ ತತ್ವಗಳಿಗೆ ವಿರುದ್ಧವೆಂದು ಪರಿಗಣಿಸಲಾಗುತ್ತದೆ. ಈ ಬಗ್ಗೆ ಜಪಾನಿನ ಯುವತಿಯೊಬ್ಬಳನ್ನು ಕೇಳಿದಾಗ, ಇದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ನಮ್ಮನ್ನು ಸ್ವಾಗತಿಸುವ ಆತಿಥೇಯ ದೇಶದ ಬಗ್ಗೆ ಮತ್ತು ನಮ್ಮ ಕ್ರೀಡಾಪಟುಗಳ ಬಗ್ಗೆ ಗೌರವ ವ್ಯಕ್ತಪಡಿಸುವ ಒಂದು ಮಾರ್ಗವೂ ಇದಾಗಿದೆ. ಇಲ್ಲಿ ಬರುವುದು ನಮಗೆ ಗೌರವದ ವಿಷಯ. ಆದ್ದರಿಂದ ಎಲ್ಲವನ್ನೂ ಅಸ್ತವ್ಯಸ್ತವಾಗಿ ಬಿಟ್ಟು ಹೋಗುವುದು ನಮಗೆ ಸರಿಯೆಂದು ಅನಿಸುವುದಿಲ್ಲ, ಎಂದು ಹೇಳಿದಳು.

ಈ ಹಿಂದೆಯೂ ಶಿಸ್ತು ಪ್ರದರ್ಶಿಸಿದ್ದಾರೆ!

2022 ರಲ್ಲಿ ಕತಾರ್‌ನಲ್ಲಿ ನಡೆದ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಒಂದು ಪಂದ್ಯದ ನಂತರ ಜಪಾನಿನ ನಾಗರಿಕರು ಅಲ್ಲಿನ ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ಇದೇ ರೀತಿ ಸ್ವಚ್ಛಗೊಳಿಸಿ ಜಗತ್ತಿನ ಗಮನ ಸೆಳೆದಿದ್ದರು. ವಿಶೇಷವೆಂದರೆ ಆ ಸಮಯದಲ್ಲಿ ಕತಾರ್ ಮತ್ತು ಈಕ್ವೆಡಾರ್ ನಡುವೆ ಪಂದ್ಯ ನಡೆದಿತ್ತು. ಜಪಾನ್ ತಂಡ ಆಡದಿದ್ದರೂ ಜಪಾನಿನ ನಾಗರಿಕರು ಮೈದಾನದ ಕಸವನ್ನು ಎತ್ತಿದ್ದರು. 2018 ರಲ್ಲಿ ರಷ್ಯಾದಲ್ಲಿ, ಮತ್ತು 2014 ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ಪಂದ್ಯಾವಳಿಗಳಲ್ಲಿಯೂ ಜಪಾನಿನ ನಾಗರಿಕರು ಶಿಸ್ತನ್ನು ಪ್ರದರ್ಶಿಸಿದ್ದರು.

ಸಂಪಾದಕೀಯ ನಿಲುವು

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವ, ಕಸ ಹಾಕುವ ಮತ್ತು ಅದರ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ಭಾರತೀಯ ನಾಗರಿಕರು ಜಪಾನಿನ ನಾಗರಿಕರಿಂದ ಈ ಕರ್ತವ್ಯ ಪ್ರಜ್ಞೆಯನ್ನು ಕಲಿಯುತ್ತಾರೆಯೇ?