ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಕುರಿತಾದ ರಾಜ್ಯದ ಗೃಹ ಸಚಿವರ ಹೇಳಿಕೆಯ ಮೇಲೆ ಪ.ಪೂ. ಸರಸಂಘಚಾಲಕ್ ಡಾ. ಮೋಹನಜಿ ಭಾಗವತ್ ಅವರ ಹೇಳಿಕೆ

ಹಿಂದೂ ಧರ್ಮದ ನೋಂದಣಿಯೂ ಆಗಿಲ್ಲ!

ತ್ರಿಚೂರ್ (ಕೇರಳ) – ಸಂಘದ ಕಾರ್ಯವು ಅತ್ಯಂತ ಬಹಿರಂಗವಾಗಿ ನಡೆಯುತ್ತದೆ. ಸಂಘದ ನೋಂದಣಿಯ ಬಗ್ಗೆ ಮಾತನಾಡುವುದು ಇತ್ಯಾದಿ ರಾಜಕೀಯ ನಡೆಯುತ್ತಿದ್ದು, ಈಗ ನಮಗೆ ಇಂತಹ ವಿಷಯಗಳ ಅಭ್ಯಾಸವಾಗಿದೆ. ಸಂಘದ ಸ್ಥಾಪನೆಯಾದ ಕೇವಲ 10 ರಿಂದ 15 ವರ್ಷಗಳಲ್ಲಿಯೇ ಅದರ ನೋಂದಣಿಯ ಕುರಿತು ಬೇಡಿಕೆ ಮತ್ತು ವಿವಾದಗಳು ಆರಂಭವಾಗಿದ್ದವು. ಬದಲಾಗಿ ಇಂತಹ ಆರೋಪಗಳು ಬರದಿದ್ದರೆ, ನಮಗೆ ಏನೋ ಬಾಕಿಯಿದೆ ಎಂದು ಅನ್ನಿಸುತ್ತದೆ. ಸಂಘದ ಸ್ಥಾಪನೆ ಬ್ರಿಟಿಷರ ಕಾಲದಲ್ಲಿ ಆಯಿತು. ಮೂಲ ಹಿಂದೂ ಧರ್ಮದ ನೋಂದಣಿಯೂ ಎಲ್ಲಿಯೂ ಆಗಿಲ್ಲ; ಜಗತ್ತಿನಲ್ಲಿ ಅಂತಹ ಅನೇಕ ವಿಷಯಗಳ ನೋಂದಣಿ ಆಗಿಲ್ಲ. ಯಾರು ಸರಕಾರದಿಂದ ನಿಧಿ ಅಥವಾ ಆರ್ಥಿಕ ನೆರವು ಬಯಸುತ್ತಾರೋ ಅವರಿಗೆ ನೋಂದಣಿಯ ಅವಶ್ಯಕತೆ ಇರುತ್ತದೆ, ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ್ ಅವರು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಖರ್ಗೆ ಅವರು ಕರ್ನಾಟಕ ಸರಕಾರವು ಸಂಘಟನೆಗಳಿಗೆ ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಕಾನೂನು ಕ್ರಮಗಳ ಕುರಿತು ಯೋಚಿಸುತ್ತಿದೆ ಎಂದು ಹೇಳಿದ್ದಾರೆ.

ಪ.ಪೂ. ಸರಸಂಘಚಾಲಕರು ಮಂಡಿಸಿದ ಸೂತ್ರಗಳು

1. ಸರಕಾರಕ್ಕೆ ಸಂಘದ ಅಸ್ತಿತ್ವದ ಬಗ್ಗೆ ಸಂಪೂರ್ಣ ಅರಿವಿದೆ!

ಸರಕಾರಕ್ಕೆ ಸಂಘದ ಅಸ್ತಿತ್ವದ ಬಗ್ಗೆ ಸಂಪೂರ್ಣ ಅರಿವಿದೆ; ಅದಕ್ಕಾಗಿಯೇ ಸರಕಾರವು ಇಲ್ಲಿಯವರೆಗೆ ಸಂಘದ ಮೇಲೆ 2 ಬಾರಿ ನಿಷೇಧ ಹೇರಿತ್ತು. ನಂತರ ನ್ಯಾಯಾಲಯದ ಆದೇಶದಿಂದ ಮತ್ತು ಸ್ವಯಂಸೇವಕರು ಸತ್ಯಾಗ್ರಹ ನಡೆಸಿದ್ದರಿಂದ ಈ ನಿಷೇಧವನ್ನು ಹಿಂಪಡೆಯಲಾಯಿತು. ಸಂಘದ ಮೇಲೆ ನಿಷೇಧ ಹೇರಲಾಗಿತ್ತು ಎಂದರೆ, ಅದರ ಅಸ್ತಿತ್ವ ಸರಕಾರಕ್ಕೆ ತಿಳಿದಿದೆ ಎಂದರ್ಥ. ಆದ್ದರಿಂದ ಇಂತಹ ರಾಜಕೀಯ ವಿಷಯಗಳು ನಡೆಯುತ್ತಿರುತ್ತವೆ.

2. ಜನರಿಗೆ ನಾವು ಯಾರು? ಮತ್ತು ಏನು ಕೆಲಸ ಮಾಡುತ್ತೇವೆ? ಎಂಬುದು ಚೆನ್ನಾಗಿ ತಿಳಿದಿದೆ!

ಕಳೆದ 100 ವರ್ಷಗಳಲ್ಲಿ ನಮಗೆ ಯಾರೂ ನೀವು ನೋಂದಣಿ ಮಾಡಿಕೊಳ್ಳಲೇಬೇಕು ಎಂದು ಹೇಳಿಲ್ಲ. ಸಂಘದ ಲಿಖಿತ ಸಂವಿಧಾನ ಸರಕಾರಕ್ಕೆ ಲಭ್ಯವಿದ್ದು, ಅದನ್ನು ನಾವು 1950 ರಲ್ಲೇ ಸಲ್ಲಿಸಿದ್ದೆವು. ಆಗ ಸರಕಾರ ನೀವು ಮೊದಲು ನಿಮ್ಮ ಸಂಘಟನೆಯನ್ನು ನೋಂದಾಯಿಸಿ ಮತ್ತು ನಂತರವೇ ನಾವು ಈ ಸಂವಿಧಾನವನ್ನು ಒಪ್ಪಿಕೊಳ್ಳುತ್ತೇವೆ ಎಂದು ಹೇಳಬಹುದಿತ್ತು; ಆದರೆ ಅವರು ಹಾಗೆ ಹೇಳಲಿಲ್ಲ. ಹಾಗಾದರೆ ಈಗ ನಾನು ಇದಕ್ಕೆ ಏಕೆ ಉತ್ತರಿಸಲಿ? ಇದೆಲ್ಲವೂ ಕೇವಲ ರಾಜಕಾರಣ ಮತ್ತು ಈ ಪತ್ರವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವೇ ಇಲ್ಲ. ಇದರ ಮೂಲಕ ಜನರ ಮನಸ್ಸಿನಲ್ಲಿ ಸಂಶಯ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ; ಆದರೆ ಅದು ಸಾಧ್ಯವಿಲ್ಲ; ಏಕೆಂದರೆ ನಾವು ಯಾರು? ಮತ್ತು ಏನು ಕೆಲಸ ಮಾಡುತ್ತೇವೆ? ಎಂಬುದು ಜನರಿಗೆ ಚೆನ್ನಾಗಿ ತಿಳಿದಿದೆ.