US-IRAN Peace Deal : ಅಮೆರಿಕ-ಇರಾನ್ ಯುದ್ಧ ಅಂತ್ಯ!

ವಾಷಿಂಗ್ಟನ್/ಟೆಹರಾನ್ – ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಟ್ರುತ್ ಸೋಶಿಯಲ್’ ಸಾಮಾಜಿಕ ಮಾಧ್ಯಮದ ಮೂಲಕ ಅಮೆರಿಕ ಮತ್ತು ಇರಾನ್ ನಡುವೆ 14 ಅಂಶಗಳ ಶಾಂತಿ ಒಪ್ಪಂದವಾಗಿದೆ ಎಂದು ಘೋಷಿಸಿದ್ದಾರೆ. ಇದರಿಂದಾಗಿ ಅಮೆರಿಕ ಮತ್ತು ಇರಾನ್ ನಡುವೆ ಕಳೆದ 107 ದಿನಗಳಿಂದ ನಡೆಯುತ್ತಿದ್ದ ಯುದ್ಧ ಕೊನೆಗೊಳ್ಳಲಿದೆ ಎಂಬುದು ಅಂತಿಮವಾಗಿ ಸ್ಪಷ್ಟವಾಗಿದೆ. ಜೂನ್ 19 ರಂದು ಸ್ವಿಟ್ಜರ್‌ ಲ್ಯಾಂಡ್‌ ನ ಜಿನೀವಾ ನಗರದಲ್ಲಿ ಟ್ರಂಪ್ ಅವರ ಸಮ್ಮುಖದಲ್ಲಿ ಈ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು. ತದನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇದಕ್ಕೆ ಅಂತಿಮ ಮುದ್ರೆ ಒತ್ತಲಿದ್ದು, ಆ ಬಳಿಕ ಈ ಯುದ್ಧ ಅಧಿಕೃತವಾಗಿ ಮುಕ್ತಾಯವಾಗಲಿದೆ.

ಹಾರ್ಮುಜ್ ಜಲಸಂಧಿ ದಿಗ್ಬಂಧನ ತೆರವುಗೊಳಿಸಲಾಗುವುದು ! – ಟ್ರಂಪ್

ಹಾರ್ಮುಜ್ ಜಲಸಂಧಿಯ (ಎರಡು ಜಲರಾಶಿಗಳನ್ನು ಸಂಪರ್ಕಿಸುವ ಜಲಮಾರ್ಗ) ಸುತ್ತ ಅಮೆರಿಕ ನೌಕಾಪಡೆಯು ಹೇರಿದ್ದ ದಿಗ್ಬಂಧನವನ್ನು ಸಂಪೂರ್ಣವಾಗಿ ತೆರವುಗೊಳಿಸುವಂತೆ ಟ್ರಂಪ್ ಅವರು ತಮ್ಮ ನೌಕಾಪಡೆಗೆ ಆದೇಶಿಸಿದ್ದಾರೆ. ಹೀಗಾಗಿ ಹಾರ್ಮುಜ್‌ ನಿಂದ ಮೊದಲಿನಂತೆ ಮತ್ತೆ ತೈಲ ಸಾರಿಗೆ ನಡೆಯಲಿದೆ. ಪರಿಣಾಮವಾಗಿ ವಿಶ್ವದ ಹಲವು ದೇಶಗಳಲ್ಲಿ ಉಂಟಾಗಿದ್ದ ಇಂಧನ ಬಿಕ್ಕಟ್ಟು ನಿವಾರಣೆಯಾಗಿ, ಕುಸಿದಿದ್ದ ಆರ್ಥಿಕತೆಗೆ ಚೇತರಿಕೆ ಸಿಗಲಿದೆ.

ಇರಾನ್ ಮೌನ ವಹಿಸಿರುವುದರಿಂದ ಶಾಂತಿ ಒಪ್ಪಂದದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ !

ಟ್ರಂಪ್ ಮಾಡಿದ ಘೋಷಣೆಗೆ ಇರಾನ್ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ನಡೆದಿದೆ ಎಂದು ಪಾಕಿಸ್ತಾನವೂ ಹೇಳಿದೆ; ಆದರೆ ಇರಾನ್ ಅದಕ್ಕೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ ಶಾಂತಿ ಒಪ್ಪಂದದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮುಂದುವರಿದಿದೆ.

ಡೊನಾಲ್ಡ್ ಟ್ರಂಪ್ ಏನು ಹೇಳಿದರು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ‘ಟ್ರುತ್ ಸೋಶಿಯಲ್’ ಸಾಮಾಜಿಕ ಮಾಧ್ಯಮದ ಮೂಲಕ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವನ್ನು ಘೋಷಿಸಿದ್ದಾರೆ. ಟ್ರಂಪ್ ಮಾತನಾಡಿ, ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆಗಿನ ಒಪ್ಪಂದ ಪೂರ್ಣಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು. ಈ ಮಾಧ್ಯಮದ ಮೂಲಕ ಹಾರ್ಮುಜ್ ಜಲಸಂಧಿಯೂ ಪುನರಾರಂಭಗೊಳ್ಳಲಿದೆ ಎಂದು ನಾನು ಘೋಷಿಸುತ್ತೇನೆ. ನೌಕಾಪಡೆಯ ದಿಗ್ಬಂಧನವನ್ನು ತೆರವುಗೊಳಿಸಲು ನಾನು ಅಮೆರಿಕ ನೌಕಾಪಡೆಗೆ ಸಮ್ಮತಿ ನೀಡುತ್ತಿದ್ದೇನೆ. ಈ ಜಲಸಂಧಿಯ ಮೂಲಕ ಇಂಧನ ಪೂರೈಕೆಯಾಗುವ ದೇಶಗಳು ತೈಲ ಸಾರಿಗೆಯನ್ನು ಪ್ರಾರಂಭಿಸಬೇಕು’ ಎಂದು ಬರೆದಿದ್ದಾರೆ.

ತೈಲ ಬೆಲೆಯಲ್ಲಿ ಭಾರಿ ಕುಸಿತ : ಷೇರು ಮಾರುಕಟ್ಟೆಯೂ ಚೇತರಿಕೆ

ಟ್ರಂಪ್ ಅವರ ಘೋಷಣೆಯಿಂದಾಗಿ ತೈಲ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 83 ಡಾಲರ್‌ ಗೆ (7,854 ರೂಪಾಯಿಗಳಿಗೆ) ಇಳಿದಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಕಳೆದ ಹಲವು ದಿನಗಳಿಂದ ಕುಸಿತ ಕಂಡಿದ್ದ ಷೇರು ಮಾರುಕಟ್ಟೆಯೂ ಚೇತರಿಸಿಕೊಂಡಿದೆ.

ಇಸ್ರೇಲ್‌ ಗೆ ಒಪ್ಪಂದ ಅಮಾನ್ಯ !

ಅಮೆರಿಕ ಮಾಡಿಕೊಂಡಿರುವ ಈ ಒಪ್ಪಂದವು ಇಸ್ರೇಲ್‌ ಗೆ ಸಂಪೂರ್ಣವಾಗಿ ಸಮ್ಮತವಿಲ್ಲ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ಅಮೆರಿಕವು ಲೆಬನಾನ್ ಮೇಲಿನ ಆಕ್ರಮಣವನ್ನು ನಿಲ್ಲಿಸಲು ಮಾಡಿಕೊಂಡಿರುವ ಒಪ್ಪಂದಕ್ಕೆ ಇಸ್ರೇಲ್ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಈ ಒಪ್ಪಂದದ ಕುರಿತು ಇಸ್ರೇಲ್‌ ನ ಸಚಿವರೊಬ್ಬರು ‘ಇಸ್ರೇಲ್ ಅಮೆರಿಕದ ಗುಲಾಮನಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಂಪೂರ್ಣ ಪ್ರದೇಶದಲ್ಲಿ ಮತ್ತೆ ಸ್ಥಿರತೆ ಬರಲಿದೆ ! – ಪ್ರಧಾನಮಂತ್ರಿ ನರೇಂದ್ರ ಮೋದಿ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವನ್ನು ಸ್ವಾಗತಿಸಿದ್ದಾರೆ. ಅವರು ಮಾತನಾಡಿ, ‘ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಉಭಯ ದೇಶಗಳ ನಡುವೆ ನಡೆದಿರುವ ಒಪ್ಪಂದವು ಅತ್ಯಂತ ಶ್ಲಾಘನೀಯ ಹೆಜ್ಜೆಯಾಗಿದೆ. ಈ ಯುದ್ಧದಿಂದಾಗಿ ವಿಶ್ವಾದ್ಯಂತ ಗಂಭೀರ ಆರ್ಥಿಕ ಬಿಕ್ಕಟ್ಟು ನಿರ್ಮಾಣವಾಗಿದ್ದು, ಹಲವು ದೇಶಗಳಲ್ಲಿ ಜೀವ ಮತ್ತು ಆಸ್ತಿ-ಪಾಸ್ತಿಗಳಿಗೆ ಭಾರಿ ನಷ್ಟ ಉಂಟಾಗಿದೆ. ಈ ಶಾಂತಿ ಒಪ್ಪಂದದಿಂದ ಸಂಪೂರ್ಣ ಪ್ರದೇಶದಲ್ಲಿ ಮತ್ತೆ ಸ್ಥಿರತೆ ಬರಲಿದ್ದು, ಸಮುದ್ರದಲ್ಲಿ ಸುರಕ್ಷಿತ ನೌಕಾಯಾನ ಮತ್ತು ವ್ಯಾಪಾರ ಯಥಾಸ್ಥಿತಿಗೆ ಬರಲಿದೆ. ಉಳಿದ ಅಂಶಗಳ ಕುರಿತು ಉಭಯ ದೇಶಗಳು ಚರ್ಚೆ ಮುಂದುವರಿಸಬೇಕು ಮತ್ತು ಭವಿಷ್ಯದಲ್ಲಿ ಒಂದು ಶಾಶ್ವತ ಹಾಗೂ ಸಕ್ಷಮ ಅಂತಿಮ ಒಪ್ಪಂದವಾಗಬೇಕು ಎಂಬುದು ಭಾರತದ ನಿರೀಕ್ಷೆಯಾಗಿದೆ’ ಎಂದಿದ್ದಾರೆ.

ಒಪ್ಪಂದದಲ್ಲಿನ 14 ಅಂಶಗಳು ಯಾವುವು ?

1. ಕಚ್ಚಾ ತೈಲ ಮತ್ತು ಪೆಟ್ರೋಕೆಮಿಕಲ್ಸ್ ಸಂಬಂಧಿಸಿದಂತೆ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಲಾಗುವುದು.

2. ಇರಾನ್‌ ನ ಹಣಕಾಸು ಸಂಸ್ಥೆಗಳಿಗೆ ಪೂರ್ಣ ಅಧಿಕಾರ ಸಿಗಲಿದೆ, ಅಮೆರಿಕ ತನ್ನ ನಿರ್ಬಂಧಗಳನ್ನು ಹಿಂಪಡೆಯಲಿದೆ.

3. 60 ದಿನಗಳಲ್ಲಿ ಇರಾನ್‌ ನ ಮುಟ್ಟುಗೋಲು ಹಾಕಿಕೊಳ್ಳಲಾದ 24 ಬಿಲಿಯನ್ ಡಾಲರ್ (ಅಂದಾಜು 2 ಲಕ್ಷದ 28 ಸಾವಿರ ಕೋಟಿ ರೂಪಾಯಿ) ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಲಾಗುವುದು.

4. ಇರಾನ್‌ ಪುನರ್ನಿರ್ಮಾಣಕ್ಕಾಗಿ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಇರಾನ್‌ ಗೆ 300 ಬಿಲಿಯನ್ ಡಾಲರ್ (ಅಂದಾಜು 28 ಲಕ್ಷದ 39 ಸಾವಿರದ 59 ಕೋಟಿ ರೂಪಾಯಿ) ಗಳ ವಿವಿಧ ಯೋಜನೆಗಳ ಮೂಲಕ ಸಹಾಯ ಮಾಡಲಿವೆ.

5. ಲೆಬನಾನ್ ವಿರುದ್ಧದ ಯುದ್ಧವನ್ನು ತಕ್ಷಣ ನಿಲ್ಲಿಸಲಾಗುವುದು.

6. ಇರಾನ್‌ ನ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರಲು ಮತ್ತು ಇರಾನ್‌ ನ ಸಾರ್ವಭೌಮತ್ವವನ್ನು ಗೌರವಿಸಲು ಅಮೆರಿಕ ಮಾತು ನೀಡಲಿದೆ.

7. ಅಮೆರಿಕವು ಹಾರ್ಮುಜ್ ಬಳಿ ಹೇರಿದ್ದ ದಿಗ್ಬಂಧನವನ್ನು 30 ದಿನಗಳ ಒಳಗೆ ಸಂಪೂರ್ಣವಾಗಿ ತೆರವುಗೊಳಿಸಲಾಗುವುದು.

8. ಅಮೆರಿಕದ ಸೈನ್ಯ ಇರಾನ್‌ ನಿಂದ ಹಿಂತಿರುಗಲಿದೆ. 9. ಪೂರ್ಣ ಸುರಕ್ಷತೆಯನ್ನು ಪರಿಗಣಿಸಿ 30 ದಿನಗಳ ಒಳಗೆ ಹಾರ್ಮುಜ್ ಜಲಸಂಧಿ ಪುನರಾರಂಭಗೊಳ್ಳಲಿದೆ.

10. ಇರಾನ್‌ ನ ಪರಮಾಣು ಯೋಜನೆಯ ಕುರಿತು ನಿರ್ಧಾರ ತೆಗೆದುಕೊಳ್ಳಲು 60 ದಿನಗಳ ಚರ್ಚೆಯ ಅವಧಿ ಇರಲಿದೆ.

11. ಇರಾನ್ ಪರಮಾಣು ಅಸ್ತ್ರಗಳನ್ನು ಸಿದ್ಧಪಡಿಸುವುದಿಲ್ಲ ಎಂಬ ಬದ್ಧತೆಯನ್ನು ಪುನರುಚ್ಚರಿಸಲಿದೆ.

12. ಈ ಪ್ರದೇಶದಲ್ಲಿ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸದಿರಲು ಅಥವಾ ಹೊಸ ನಿರ್ಬಂಧಗಳನ್ನು ಹೇರದಿರಲು ಅಮೆರಿಕ ಒಪ್ಪಿಗೆ ಸೂಚಿಸಲಿದೆ.

13. ಈ ಒಪ್ಪಂದದ ಅನುಷ್ಠಾನದ ಉಸ್ತುವಾರಿಗಾಗಿ ಒಂದು ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಯಾವುದೇ ಅಂತಿಮ ಒಪ್ಪಂದವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಮೂಲಕ ಅನುಮೋದಿಸಲಾಗುವುದು.

14. ಇರಾನ್‌ ನ ಕ್ಷಿಪಣಿ ಯೋಜನೆ ಈ ಒಪ್ಪಂದದ ಭಾಗವಾಗಿರುವುದಿಲ್ಲ.

ಸಂಪಾದಕೀಯ ನಿಲುವು

  • ಉಭಯ ದೇಶಗಳ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದೆ ಎಂದು ಟ್ರಂಪ್ ಘೋಷಣೆ
  • ಜೂನ್ 19 ರಂದು ಉಭಯ ದೇಶಗಳಿಂದ ಒಪ್ಪಂದಕ್ಕೆ ಸಹಿ
  • ಹಾರ್ಮುಜ್‌ನಿಂದ ತೈಲ ಸಾರಿಗೆ ಪುನರಾರಂಭಗೊಳ್ಳಲಿದೆ
  • ಇರಾನ್‌ ನಿಂದ ಇನ್ನೂ ಮೌನ, ಇಸ್ರೇಲ್‌ ಗೂ ಒಪ್ಪಂದ ಅಮಾನ್ಯ