ಭಾರತೀಯ ಸೇನೆಯ ವಸಾಹತುಶಾಹಿ ಸಂಪ್ರದಾಯಗಳಲ್ಲಿ ಬದಲಾವಣೆ: ಸೇನಾ ಸಮವಸ್ತ್ರದ ಹೊಸ ನಿಯಮಾವಳಿ ಜಾರಿ : Army Uniform 2026

ರಸ್ತೆ ಮತ್ತು ಕಟ್ಟಡಗಳ ಹೆಸರುಗಳೂ ಬದಲಾವಣೆ

ನವದೆಹಲಿ – ಭಾರತೀಯ ಸೇನೆಯು ಸಂಪ್ರದಾಯಗಳಲ್ಲಿನ ವಸಾಹತುಶಾಹಿ ಗುರುತುಗಳನ್ನು ಅಳಿಸಿಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದ್ದು, ಸೇನಾ ಸಮವಸ್ತ್ರದ (‘ಆರ್ಮಿ ಯೂನಿಫಾರ್ಮ್-2026’) ಹೊಸ ನಿಯಮಾವಳಿಯನ್ನು ಜಾರಿಗೆ ತಂದಿದೆ. 174 ಪುಟಗಳ ಈ ನಿಯಮಾವಳಿಯಲ್ಲಿ ಬ್ರಿಟಿಷ್ ಕಾಲದ ಹಲವು ಪದ್ಧತಿಗಳನ್ನು ಬದಲಾಯಿಸಲಾಗಿದ್ದು, ಈ ಬದಲಾವಣೆಗಳು ಭಾರತದ ಸಾರ್ವಭೌಮ ಗುರುತು ಮತ್ತು ರಾಷ್ಟ್ರೀಯ ಭಾವನೆಗಳಿಗೆ ಪೂರಕವಾಗಿವೆ ಎಂದು ಸೇನೆ ಸ್ಪಷ್ಟಪಡಿಸಿದೆ.

ಹೊಸ ನಿಯಮಗಳ ಪ್ರಕಾರ, ಪಥಸಂಚಲನವನ್ನು ವೀಕ್ಷಿಸುವ ಅಧಿಕಾರಿಗಳಿಗೆ (‘ರಿವ್ಯೂಯಿಂಗ್ ಆಫೀಸರ್’) ಕತ್ತಿ ಹಿಡಿಯುವುದು ಈಗ ಐಚ್ಛಿಕವಾಗಿರುತ್ತದೆ. ಸೇನಾ ಔತಣಕೂಟಗಳಲ್ಲಿ ಧರಿಸುವ ಔಪಚಾರಿಕ ಉಡುಗೆಯೊಂದಿಗೆ (‘ಮೆಸ್ ಡ್ರೆಸ್’) ಬಳಸಲಾಗುವ ‘ಪೌಚ್ ಬೆಲ್ಟ್’ ಕಡ್ಡಾಯವನ್ನು ರದ್ದುಪಡಿಸಲಾಗಿದೆ ಮತ್ತು ‘ರಾಯಲ್’ ನಂತಹ ಶಬ್ದಗಳ ಬಳಕೆಯನ್ನು ನಿಲ್ಲಿಸಲಾಗಿದೆ. ಔಪಚಾರಿಕ ನಾಗರಿಕ ಉಡುಗೆಯಲ್ಲಿ ಮೊದಲ ಬಾರಿಗೆ ಸ್ವದೇಶಿ ಬಂದ್ ಕುತ್ತಿಗೆಯ ಸದಾರಾವನ್ನು (‘ಬಂದಿ ಜಾಕೆಟ್’) ಸೇರಿಸಲಾಗಿದೆ. ಈ ಜಾಕೆಟ್ ಅನ್ನು ಫುಲ್ ಸ್ಲೀವ್ ಶರ್ಟ್ ಮತ್ತು ಪ್ಯಾಂಟ್ ಮೇಲೆ ಧರಿಸಬಹುದಾಗಿದೆ.

ಸೈನಿಕರ ವೈಯಕ್ತಿಕ ಜೀವನಶೈಲಿಯ ಬಗ್ಗೆಯೂ ಮಾರ್ಗದರ್ಶಿ ತತ್ವಗಳು!

ನಿಯಮಾವಳಿಯಲ್ಲಿ ಸೈನಿಕರ ವೈಯಕ್ತಿಕ ಜೀವನಶೈಲಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗದರ್ಶಿ ತತ್ವಗಳನ್ನು ನೀಡಲಾಗಿದೆ. ಅನುಮತಿಯಿಲ್ಲದೆ ಗಡ್ಡ ಬಿಡುವುದು, ಅಸಹಜ ಕೇಶವಿನ್ಯಾಸ, ಗೋಚರಿಸುವ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ, ‘ಟ್ಯಾಟೂ’ (ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು) ಇತ್ಯಾದಿಗಳಿಗೆ ನಿಷೇಧ ಹೇರಲಾಗಿದೆ. ಅಲ್ಲದೆ ವಿವಾಹ ಸಮಾರಂಭಗಳು, ಖಾಸಗಿ ಔತಣಕೂಟಗಳು (ಪಾರ್ಟಿಗಳು), ರಾಜಕೀಯ ಅಥವಾ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಪ್ರತಿಭಟನೆಗಳಲ್ಲಿ ಪೂರ್ವಾನುಮತಿಯಿಲ್ಲದೆ ಸಮವಸ್ತ್ರ ಧರಿಸುವುದನ್ನು ನಿಷೇಧಿಸಲಾಗಿದೆ.

2023 ರಲ್ಲಿ ಹಲವು ಹಳೆಯ ಪದ್ಧತಿಗಳು ಬಂದ್

ಭಾರತೀಯ ಸೇನೆಯು ಫೆಬ್ರವರಿ 2023ರಲ್ಲಿ ಹಲವು ಹಳೆಯ ಪದ್ಧತಿಗಳನ್ನು ಬಂದ್ ಮಾಡಿತ್ತು. ಇದರಲ್ಲಿ ಸಮಾರಂಭಗಳ ಸಮಯದಲ್ಲಿ ಕುದುರೆ ಗಾಡಿಗಳ ಬಳಕೆ, ನಿವೃತ್ತಿಯ ಸಮಯದಲ್ಲಿ ನಡೆಸಲಾಗುವ ‘ಪುಲ್-ಔಟ್’ ಸಮಾರಂಭ ಮತ್ತು ರಾತ್ರಿಯ ಭೋಜನದ ಸಮಯದಲ್ಲಿ ನುಡಿಸಲಾಗುವ ‘ಪೈಪ್ ಬ್ಯಾಂಡ್’ ಸೇರಿವೆ.

ರಸ್ತೆ ಮತ್ತು ಕಟ್ಟಡಗಳಿಗೆ ಸ್ವದೇಶಿ ಹೆಸರುಗಳು

ಸೇನೆಯು ಈ ವರ್ಷ ವಿವಿಧ ನೆಲೆಗಳಲ್ಲಿನ 246 ರಸ್ತೆಗಳು, ಕಟ್ಟಡಗಳು ಮತ್ತು ಸೌಲಭ್ಯಗಳ ಹೆಸರುಗಳನ್ನು ಬದಲಾಯಿಸುವ ಮೂಲಕ ವಸಾಹತುಶಾಹಿ ಪರಂಪರೆಯನ್ನು ಅಳಿಸಿಹಾಕುವ ಕೆಲಸವನ್ನು ಮಾಡಿದೆ. ಅದರ ಬದಲಾಗಿ ಶೌರ್ಯ ಪ್ರಶಸ್ತಿ ವಿಜೇತರು, ಯುದ್ಧ ವೀರರು ಮತ್ತು ಪ್ರತಿಷ್ಠಿತ ಸೇನಾ ನಾಯಕರ ಹೆಸರುಗಳಿಗೆ ಆದ್ಯತೆ ನೀಡಲಾಗಿದೆ. ಅಂಬಾಲಾ, ಮಥುರಾ, ಜೈಪುರ, ಬರೇಲಿ, ಮಹೂ, ಡೆಹ್ರಾಡೂನ್ ಮತ್ತು ಕೋಲಕಾತಾದಲ್ಲಿನ ವಿವಿಧ ಸೇನಾ ನೆಲೆಗಳಿಗೆ ಇದ್ದ ಬ್ರಿಟಿಷ್ ಹೆಸರುಗಳನ್ನು ಬದಲಾಯಿಸಲಾಗಿದೆ.