ಹಣವೇ ಸರ್ವಸ್ವವಾಗಿದೆಯೇ ?

ಭಾರತದಲ್ಲಿ ಪ್ರಸ್ತುತ ಅನೇಕ ಪೋಷಕರಿಗೆ ತಮ್ಮ ಮಕ್ಕಳನ್ನು ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳುಹಿಸುವುದು ಒಂದು ದೊಡ್ಡ ಧ್ಯೇಯವಾಗಿದೆ. ಇಲ್ಲಿಯವರೆಗೆ ಮಧ್ಯಮ ವರ್ಗದವರಲ್ಲಿ ವಿದೇಶಕ್ಕೆ ಕೆಲಸಕ್ಕಾಗಿ ಹೋಗುವ ಧ್ಯೇಯ ಇರುತ್ತಿತ್ತು. ಹಿಂದೆ ಶ್ರೀಮಂತರ ಮಕ್ಕಳು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದರು. ಈಗ ಮಧ್ಯಮ ವರ್ಗದ ಮಕ್ಕಳಿಗೂ ಕೇವಲ ಉದ್ಯೋಗ ಮಾತ್ರವಲ್ಲ, ಶಿಕ್ಷಣಕ್ಕಾಗಿಯೂ ವಿದೇಶಕ್ಕೆ ಹೋಗಬೇಕಿರುತ್ತದೆ. ‘ಸ್ನೇಹಿತ ಹೋಗುತ್ತಿದ್ದಾನೆ, ಆದ್ದರಿಂದ ನಾನು ಕೂಡ…’, ಇಂತಹ ಮಾನಸಿಕತೆ ಹೊಂದಿರುವ ಮಕ್ಕಳಿಗಾಗಿ ಪೋಷಕರು ‘ಸಾಲ’ ಮಾಡಿಯಾದರೂ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತಾರೆ.

ಎ.ಐ. ನಿರ್ಮಿತ ಚಿತ್ರ

ಬ್ರಿಟನ್‌ನಲ್ಲಿ ನೆಲೆಸಿರುವ ಒಬ್ಬ ಭಾರತೀಯ ಯುವಕನ ಬಳಿ ಎಲ್ಲಾ ಸುಖ-ಸೌಕರ್ಯಗಳು ಮತ್ತು ‘ಅಪಾರ ಸಂಬಳ’ ಇದ್ದರೂ ಒಂಟಿತನದಿಂದಾಗಿ ಅವನು ಭಾರತಕ್ಕೆ ಮರಳಿ ಬರುವ ವಿಚಾರ ಮಾಡುತ್ತಿದ್ದಾನೆ. ಅವನು ಈ ಬಗ್ಗೆ ‘ರೆಡ್ಡಿಟ್’ನಲ್ಲಿ ಬರೆದಿದ್ದಾನೆ. ಅವನ ಸುಖದ ಹಿಂದಿರುವ ನಿಜವಾದ ಸತ್ಯ ಎಲ್ಲರಿಗೂ ತಿಳಿಯಲಾರಂಭಿಸಿದೆ. ಕೆಲವರು ಈ ಬಗ್ಗೆ ಮತ್ತೊಮ್ಮೆ ಯೋಚಿಸುವಂತೆ ಅವನಿಗೆ ಸಲಹೆ ನೀಡಿದ್ದಾರೆ. ಕೆಲವರು, ಎಲ್ಲರೂ ಏನನ್ನು ಪಡೆದುಕೊಳ್ಳಲು ಪರದಾಡುತ್ತಾರೋ, ಅದು ಅವನ ಬಳಿ ಇದೆ; ಆದ್ದರಿಂದ ಅವನು ಅದನ್ನು ಬಿಟ್ಟು ಬರುವಾಗ ಯೋಚಿಸಬೇಕು ಎನ್ನುತ್ತಾರೆ.

ಆ ಯುವಕನು ೧೮ ನೇ ವಯಸ್ಸಿನಲ್ಲಿ ಶಿಕ್ಷಣಕ್ಕಾಗಿ ಬ್ರಿಟನ್‌ಗೆ ಹೋದಂತೆ, ಅನೇಕ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುತ್ತಾರೆ. ಕೆಲವು ವಿದ್ಯಾರ್ಥಿಗಳಿಗೆ ಅಲ್ಲಿನ ಶಿಕ್ಷಣ ಮತ್ತು ಜೀವನಶೈಲಿಯನ್ನು ನಿಭಾಯಿಸಲು ಸಾಧ್ಯವಾಗದೆ ಮರಳಿ ಬರುತ್ತಾರೆ; ಆದರೆ ಶಿಕ್ಷಣಕ್ಕಾಗಿ ಪಡೆದ ಸಾಲವನ್ನು ಮಾತ್ರ ಜೀವನವಿಡೀ ತೀರಿಸುತ್ತಾ ಕೂರುತ್ತಾರೆ. ಕೆಲವು ಜನರು ಯಶಸ್ವಿಯಾಗಿ ಅಲ್ಲಿ ಅಥವಾ ಭಾರತದಲ್ಲಿ ದೊಡ್ಡ ಸಂಬಳದ ಉದ್ಯೋಗ ಮಾಡುತ್ತಾರೆ; ಆದರೆ ಜೀವನದ ಅಂತಿಮ ಧ್ಯೇಯ ಹಣವಾಗಿರಲು ಸಾಧ್ಯವಿಲ್ಲ, ಎಂಬುದು ಅರ್ಥವಾಗದಿದ್ದರೆ ಮೇಲಿನ ಯುವಕನಂತಹ ಮನಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಪ್ರತಿಯೊಬ್ಬರೂ ಜೀವನದಲ್ಲಿ ಏನಾದರೂ ಧ್ಯೇಯವನ್ನು ನಿರ್ಧರಿಸಬೇಕು. ಆ ಧ್ಯೇಯವನ್ನು ಸಾಧಿಸುವುದರಲ್ಲಿ ಅವರಿಗೆ ಆನಂದ ಸಿಗುತ್ತದೆ. ‘ಮನುಷ್ಯನಿಗೆ ಈಶ್ವರಪ್ರಾಪ್ತಿಗಾಗಿ ಜನ್ಮ ಸಿಕ್ಕಿದೆ’, ಎಂಬ ಧರ್ಮಶಿಕ್ಷಣವನ್ನು ಹಿಂದೂಗಳಿಗೆ ಕಲಿಸಲಾಗುತ್ತಿಲ್ಲ. ಆದ್ದರಿಂದ ಹಣ ಸಿಕ್ಕಿದರೂ ಅವರ ಪರಿಸ್ಥಿತಿ ಹೀಗಾಗುತ್ತದೆ. ಭಾರತೀಯ ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಪ್ರೀತಿ, ಆಧಾರ, ರಕ್ಷಣೆ ಎಲ್ಲವೂ ಸಿಗುತ್ತದೆ. ಆದ್ದರಿಂದ ವಿದೇಶಕ್ಕೆ ಹೋದಾಗ ಎಲ್ಲಾ ಭೌತಿಕ ಸುಖಗಳು ಸಿಕ್ಕಿದರೂ ಒಂಟಿತನ ಕಾಡುವುದು ಸಹಜವೇ ಆಗಿರುತ್ತದೆ. ಅಲ್ಲಿ ‘ಪಬ್’ಗಳಂತಹ ಸಾರ್ವಜನಿಕ ಜೀವನ ಇರುತ್ತದೆ; ಆದರೆ ಆ ಕ್ಷಣಿಕ ಸುಖದ ಮಾರ್ಗವು ಒಬ್ಬ ಯುವಕನಿಗೆ ಕೌಟುಂಬಿಕ ಪ್ರೀತಿ ಮತ್ತು ರಕ್ಷಣೆ ಇತ್ಯಾದಿಗಳನ್ನು ನೀಡಲು ಸಾಧ್ಯವಿಲ್ಲ ಎಂಬುದು ಈ ಉದಾಹರಣೆಯಿಂದ ತಿಳಿಯುತ್ತದೆ. ಒಂಟಿತನದಿಂದ ನಕಾರಾತ್ಮಕತೆ ಜನ್ಮತಾಳುತ್ತದೆ ಮತ್ತು ಕೆಲವರು ಆತ್ಮಹತ್ಯೆ ಮಾಡಿಕೊಳ್ಳಬಹುದು. ಪ್ರತಿಯೊಂದು ಸುಖವನ್ನು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಸ್ನೇಹಿತರು, ಕುಟುಂಬದವರ ಪ್ರೀತಿಯ ಮೇಲೆ ಪ್ರತಿಯೊಬ್ಬರೂ ಬದುಕುತ್ತಿರುತ್ತಾರೆ. ಇಲ್ಲಿ ಮನಸ್ಸನ್ನು ಸುಸಂಸ್ಕೃತ, ವಿವೇಕಿ ಮತ್ತು ಭಕ್ತಿಮಾರ್ಗದತ್ತ ಕೊಂಡೊಯ್ಯುವ ಹಾಗೂ ಮನಃಶಕ್ತಿಯನ್ನು ಹೆಚ್ಚಿಸುವ ಸಾಧನೆಯ ಆವಶ್ಯಕತೆ ಇದೆ. ಹಣ ಸಾಕಷ್ಟಿದೆ; ಆದರೆ ಮನಸ್ಸು ಅಶಾಂತವಾಗಿದ್ದರೆ, ನಾವು ಆ ಸುಖವನ್ನು ಅನುಭವಿಸಲು ಸಾಧ್ಯವಿಲ್ಲ. ಆದ್ದರಿಂದ ಮನಸ್ಸನ್ನು ಸುಸಂಸ್ಕಾರ, ಸದ್ಗುಣ, ಶಿಸ್ತು ಮತ್ತು ಸಾಧನೆಯಿಂದ ರೂಪಿಸಿದರೆ, ಅದೇ ಜೀವನದ ನಿಜವಾದ ಆಸ್ತಿಯಾಗಬಲ್ಲದು !

– ಶ್ರೀ. ಸುನೀಲ ಮಾಳಗಾಂವಕರ, ದೇವದ, ಪನವೇಲ್.