‘ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ (‘ಪಿ.ಸಿ.ಒ.ಡಿ.’) ಅಥವಾ ‘ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (‘ಪಿ.ಸಿ.ಓ.ಸಿ.’) ಮತ್ತು ಆಯುರ್ವೇದ !

ಇಂದು ಅನೇಕ ಯುವತಿಯರು ಮತ್ತು ಮಹಿಳೆಯರಲ್ಲಿ ಮುಟ್ಟು (ಮಾಸಿಕ ಸರದಿ)ಗೆ ಸಂಬಂಧಿಸಿದ ಕಾಯಿಲೆಗಳಾದ ‘ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ ‘ಪಿ.ಸಿ.ಒ.ಡಿ.’ ಅಥವಾ ‘ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ‘ಪಿ.ಸಿ.ಒ.ಸ್.’ ಸಮಸ್ಯೆಗಳು ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಮುಟ್ಟು ಅನಿಯಮಿತವಾಗುವುದು, ಮುಟ್ಟು ಬಾರದೇ ಇರುವುದು ಅಥವಾ ತಡವಾಗಿ ಬರುವುದು, ತೂಕ ಹೆಚ್ಚಾಗುವುದು, ಮುಖದ ಮೇಲೆ ‘ಪಿಂಪಲ್ಸ್’ (ಮೊಡವೆಗಳು) ಬರುವುದು, ಕೂದಲು ಉದುರುವುದು, ಮೈಮೇಲೆ ಅನಗತ್ಯ ಕೂದಲು ಬೆಳೆಯುವುದು ಮತ್ತು ಗರ್ಭಧರಿಸುವಲ್ಲಿ ತೊಂದರೆಗಳು ಉಂಟಾಗುವುದು ಈ ಸ್ಥಿತಿಯ ಪ್ರಮುಖ ಲಕ್ಷಣಗಳಾಗಿವೆ. ಅನೇಕರು ಈ ಕಾಯಿಲೆಯ ಹೆಸರನ್ನು ಕೇಳಿಯೇ ಭಯಪಡುತ್ತಾರೆ; ಆದರೆ ಸರಿಯಾದ ಸಮಯದಲ್ಲಿ ಇದನ್ನು ಅರ್ಥಮಾಡಿಕೊಂಡು, ಯೋಗ್ಯ ಚಿಕಿತ್ಸೆ ಪಡೆದರೆ ಈ ಸಮಸ್ಯೆಯನ್ನು ನಿಯಂತ್ರಿಸುವುದು ಖಂಡಿತವಾಗಿಯೂ ಸಾಧ್ಯವಿದೆ.                                               (ಲೇಖನ ೮)

ಹಿಂದಿನ ಲೇಖನ ಸಂಖ್ಯೆ ೭ ಓದಲು ಇಲ್ಲಿ ಲಿಂಕ್ ಮೇಲೆ ಕ್ಲಿಕ್‌ ಮಾಡಿ : https://sanatanprabhat.org/kannada/182875.html

೧. ಆಯುರ್ವೇದದ ದೃಷ್ಟಿಕೋನದಲ್ಲಿ ‘ಪಾಲಿಸಿಸ್ಟಿಕ್ ಓವರಿಯನ್ ಡಿಸಿಸ್ (ಪಿ.ಸಿ.ಓ.ಡಿ.)’ ಅಥವಾ ‘ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (ಪಿ.ಸಿ.ಓ.ಎಸ್.)’

ಆಧುನಿಕ ವೈದ್ಯಕೀಯಶಾಸ್ತ್ರವು ಇದನ್ನು ‘ಹಾರ್ಮೋನಲ್’ (ಸಂಪ್ರೇರಕಗಳು) ಅಸಮತೋಲನಕ್ಕೆ ಸಂಬಂಧಿಸಿದ ಸಮಸ್ಯೆಯೆಂದು ಪರಿಗಣಿಸಿದರೆ, ಆಯುರ್ವೇದವು ಈ ಸ್ಥಿತಿಯನ್ನು ಸಂಪೂರ್ಣ ದೇಹದ ಅಸಮತೋಲನದ ದೃಷ್ಟಿಯಿಂದ ನೋಡುತ್ತದೆ. ಆಯುರ್ವೇದದ ಪ್ರಕಾರ, ‘ಪಾಲಿಸಿಸ್ಟಿಕ್ ಓವರಿಯನ್ ಡಿಸಿಸ್ (ಪಿ.ಸಿ.ಓ.ಡಿ.)’ ಅಥವಾ ‘ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (ಪಿ.ಸಿ.ಓ.ಎಸ್.)’ ಇವುಗಳಲ್ಲಿ ಮುಖ್ಯವಾಗಿ ಕಫ ಮತ್ತು ವಾತ ದೋಷಗಳ ವೈಪರೀತ್ಯ ಕಂಡುಬರುತ್ತದೆ. ಕಫದೋಷ ಹೆಚ್ಚಾದಾಗ ದೇಹದಲ್ಲಿ ಜಡತ್ವ, ತೂಕ ಹೆಚ್ಚಳ ಮತ್ತು ಅಂಡೋತ್ಪತ್ತಿಯಲ್ಲಿ ಅಡಚಣೆ ಉಂಟಾಗುತ್ತದೆ ಮತ್ತು ವಾತದೋಷವು ಅಸಮತೋಲನಗೊಂಡಾಗ ಋತುಚಕ್ರವು ಅನಿಯಮಿತವಾಗುತ್ತದೆ. ಇದರೊಂದಿಗೆ ಜೀರ್ಣಶಕ್ತಿ ಕಡಿಮೆಯಾಗಿ ದೇಹದಲ್ಲಿ ‘ಆಮ’ (ನಂಜು ಅಥವಾ ಜೀರ್ಣವಾಗದ ಅಂಶ) ಶೇಖರಣೆಯಾಗುತ್ತದೆ, ಇದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ.

‘ಪಿ.ಸಿ.ಓ.ಡಿ.’ಯಲ್ಲಿ ಮುಟ್ಟು ಅನಿಯಮಿತವಾಗುವುದು ಎಲ್ಲದರಲ್ಲಿ ಸಾಮಾನ್ಯ ಲಕ್ಷಣ. ಕೆಲವು ಮಹಿಳೆಯರಲ್ಲಿ ತಿಂಗಳುಗಟ್ಟಲೆ ಮುಟ್ಟು ಬರುವುದಿಲ್ಲ, ಇನ್ನು ಕೆಲವರಲ್ಲಿ ಅತೀ ಕಡಿಮೆ ಅಥವಾ ಅತೀ ಹೆಚ್ಚು ರಕ್ತಸ್ರಾವವಾಗುತ್ತದೆ. ಆಯುರ್ವೇದದ ಪ್ರಕಾರ, ಈ ಸ್ಥಿತಿಯು ಕೇವಲ ಗರ್ಭಾಶಯಕ್ಕೆ ಸೀಮಿತವಾಗಿರದೆ ಜೀರ್ಣಾಂಗವ್ಯೂಹ, ಹಾರ್ಮೋನುಗಳು, ಮಾನಸಿಕ ಒತ್ತಡ ಮತ್ತು ಜೀವನಶೈಲಿಯ ಒಟ್ಟು ಪರಿಣಾಮವಾಗಿದೆ. ಆದ್ದರಿಂದ ಚಿಕಿತ್ಸೆ ನೀಡುವಾಗ ಕೇವಲ ಮುಟ್ಟನ್ನು ನಿಯಮಿತಗೊಳಿಸುವುದು ಮಾತ್ರ ಉದ್ದೇಶವಾಗಿರದೆ, ದೇಹದ ಒಟ್ಟಾರೆ ಸಮತೋಲನವನ್ನು ಸಾಧಿಸುವುದು ಮುಖ್ಯವಾಗಿರುತ್ತದೆ.

೨. ಆಯುರ್ವೇದ ಮತ್ತು ಯೋಗ ಚಿಕಿತ್ಸೆ

ವೈದ್ಯ (ಸೌ.) ಸಾರಿಕಾ ನೀಲೇಶ ಲೊಂಢೆ

ಆಯುರ್ವೇದ ಚಿಕಿತ್ಸೆಯ ಮುಖ್ಯ ಉದ್ದೇಶ ಕಫ ದೋಷವನ್ನು ಶಮನಗೊಳಿಸುವುದು, ವಾತದೋಷವನ್ನು ಸಮತೋಲನ ಗೊಳಿಸುವುದು, ಜೀರ್ಣಶಕ್ತಿಯನ್ನು ಸುಧಾರಿಸುವುದು ಮತ್ತು ಅಂಡಾಶಯಗಳ ಕಾರ್ಯವನ್ನು ನೈಸರ್ಗಿಕವಾಗಿ ಸುಧಾರಿಸುವುದಾಗಿದೆ.

 ‘ಕುಮಾರಿ (ಲೋಳೆಸರ)’, ‘ಶತಾವರಿ’, ‘ಅಶ್ವಗಂಧ’, ‘ತ್ರಿಫಲ’ ಅಂತಹ ಔಷಧೀಯ ದ್ರವ್ಯಗಳು ‘ಪಿ.ಸಿ.ಓ.ಡಿ.’ಯಲ್ಲಿ ಉಪಯುಕ್ತವಾಗಿವೆ ಎಂದು ನಂಬಲಾಗಿದೆ. ವೈದ್ಯರ ಸಲಹೆಯಂತೆ ‘ಕುಮಾರಿ ಆಸವ’, ‘ಶತಾವರಿ ಕಲ್ಪ’ ಅಥವಾ ‘ತ್ರಿಫಲ ಚೂರ್ಣ’ ಬಳಸುವುದರಿಂದ ಮಾಸಿಕ ಸರದಿಯ ಕ್ರಮಬದ್ಧತೆ ಮತ್ತು ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಇಲ್ಲಿ ಗಮನದಲ್ಲಿಡಬೇಕಾದ ಅಂಶವೆಂದರೆ, ‘ಪಿ.ಸಿ.ಓ.ಡಿ.’ಯಲ್ಲಿ ಚಿಕಿತ್ಸೆಯು ದೀರ್ಘಕಾಲದ ವರೆಗೆ ಇರುತ್ತದೆ ಮತ್ತು ನಿರಂತರ ಮಾಡುವುದು ಮಹತ್ವದ್ದಾಗಿರುತ್ತದೆ. ಜೀವನಶೈಲಿಯಲ್ಲಿ ಬದಲಾವಣೆಯಾಗಲು ‘ಪಿ.ಸಿ.ಓ.ಡಿ.’ಯನ್ನು ನಿಯಂತ್ರಣದಲ್ಲಿಡುವುದು ಅತ್ಯಂತ ಮಹತ್ವದ್ದಾಗಿದೆ. ಜಂಕ್ ಫುಡ್ (ಪಿಜ್ಜಾ, ಬರ್ಗರ್), ಅತಿಯಾದ ಸಿಹಿ ಪದಾರ್ಥಗಳು, ತಂಪು ಪಾನೀಯಗಳು ಮತ್ತು ಸೋಮಾರಿ ಜೀವನಶೈಲಿಯನ್ನು ತ್ಯಜಿಸಬೇಕು. ಲಘುವಾದ, ಸುಲಭವಾಗಿ ಜೀರ್ಣವಾಗುವ ಪೌಷ್ಠಿಕ ಆಹಾರ ಮತ್ತು ನಿಯಮಿತ ನಡಿಗೆ ಅಥವಾ ಸುಲಭವಾದ ವ್ಯಾಯಾಮ ಮಾಡುವುದರಿಂದ ಕಫದೋಷವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅತಿಯಾದ ಉಪವಾಸ ಅಥವಾ ಅತಿಯಾದ ವ್ಯಾಯಾಮ ಎರಡನ್ನೂ ತಪ್ಪಿಸಬೇಕು.

ಮಾನಸಿಕ ಒತ್ತಡ, ಚಿಂತೆ ಮತ್ತು ಸತತ ಮಾನಸಿಕ ಒತ್ತಡ, ಚಿಂತೆ, ಇವುಗಳು ‘ಪಿ.ಸಿ.ಓ.ಡಿ.’ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಆದ್ದರಿಂದ ಧ್ಯಾನ, ಪ್ರಾಣಾಯಾಮ ಮತ್ತು ಯೋಗದ ನಿಯಮಿತ ಅಭ್ಯಾಸವು ಹಾರ್ಮೋನ್ ಸಮತೋಲನಕ್ಕೆ ಸಹಕಾರಿಯಾಗಿದೆ. ಯೋಗ್ಯ ಮಾರ್ಗದರ್ಶನದಲ್ಲಿ ಭುಜಂಗಾಸನ, ಬದ್ಧಕೋನಾಸನ ಮತ್ತು ಕಪಾಲಭಾತಿ ಮಾಡುವುದು ಉಪಯುಕ್ತ. ಸರಿಯಾದ ನಿದ್ರೆ ಮತ್ತು ನಿಯಮಿತ ದಿನಚರಿ ಕೂಡ ಚಿಕಿತ್ಸೆಯ ಭಾಗವೇ ಆಗಿದೆ.

೩. ‘ಪಿ.ಸಿ.ಓ.ಡಿ.’ ನಿಯಂತ್ರಣಕ್ಕಾಗಿ…

ಒಟ್ಟಾರೆಯಾಗಿ ‘ಪಿ.ಸಿ.ಓ.ಡಿ.’/‘ಪಿ.ಸಿ.ಓ.ಎಸ್.’ ಇವು ಜೀವನಪರ್ಯಂತ ಇರುವ ಕಾಯಿಲೆಗಳಲ್ಲ, ಬದಲಾಗಿ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳಾಗಿವೆ. ಆಯುರ್ವೇದವು ಈ ಸಮಸ್ಯೆಯನ್ನು ಎಲ್ಲ ರೀತಿಯಿಂದ ನೋಡುತ್ತದೆ ಮತ್ತು ಮೂಲ ಕಾರಣಗಳಿಗೆ ಚಿಕಿತ್ಸೆ ನೀಡುತ್ತದೆ. ಯೋಗ್ಯ ಆಹಾರ-ವಿಹಾರ, ಮಾನಸಿಕ ಸಮತೋಲನ, ನಿರಂತರ ಆಯುರ್ವೇದ ಚಿಕಿತ್ಸೆ ಮತ್ತು ವೈದ್ಯರ ಮಾರ್ಗದರ್ಶನದಲ್ಲಿ ಕಾಳಜಿ ವಹಿಸುವುದರಿಂದ ‘ಪಿ.ಸಿ.ಓ.ಡಿ.’ ನಿಯಂತ್ರಣಕ್ಕೆ ಬಂದು ಮಹಿಳೆಯರ ಆರೋಗ್ಯ, ಆತ್ಮವಿಶ್ವಾಸ ಮತ್ತು ಪ್ರಜನನ ಸಾಮರ್ಥ್ಯ ಸುಧಾರಿಸಲು ಸಾಧ್ಯವಾಗುವುದು.

– ವೈದ್ಯೆ (ಸೌ.) ಸಾರಿಕಾ ನೀಲೇಶ ಲೋಂಡೆ, ನಿರ್ವಿಕಾರ ಆಯುರ್ವೇದ ಹಾಸ್ಪಿಟಲ್, ಭೋಸರಿ, ಪುಣೆ.