ರಾಜ್ಯದ ಕಾಂಗ್ರೆಸ್ ಸರಕಾರದಿಂದ ಶಾಲೆಗಳಲ್ಲಿ ಹಿಜಾಬ್ ನಿಷೇಧದ ಆದೇಶವನ್ನು ಹಿಂಪಡೆ : Karnataka Hijab Row

  • ಹೊಸ ಆದೇಶದಲ್ಲಿ ಮಣಿಕಟ್ಟಿನ ದಾರ, ರುದ್ರಾಕ್ಷಿ ಮತ್ತು ಜನಿವಾರಕ್ಕೆ ಅನುಮತಿ, ಆದರೆ ಕೇಸರಿ ಶಾಲು ಧರಿಸುವುದನ್ನು ನಿಷೇಧಿಸಲಾಗಿದೆ

  • 2022ರಲ್ಲಿ ಅಂದಿನ ಭಾಜಪ ಸರಕಾರವು ಹಿಜಾಬ್ ಮೇಲೆ ನಿಷೇಧ ಹೇರಿತ್ತು

(ಹಿಜಾಬ್ ಮುಸ್ಲಿಂ ಮಹಿಳೆಯರು ತಮ್ಮ ತಲೆ ಮತ್ತು ಕುತ್ತಿಗೆಯನ್ನು ಮುಚ್ಚಿಕೊಳ್ಳಲು ಧರಿಸುವ ಉಡುಪು)

ಬೆಂಗಳೂರು – ರಾಜ್ಯದ ಕಾಂಗ್ರೆಸ್ ಸರಕಾರವು ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿದ್ದ 2022ರ ನಿರ್ಧಾರವನ್ನು ಹಿಂಪಡೆದಿದೆ. ಹೊಸ ಆದೇಶದ ಪ್ರಕಾರ ವಿದ್ಯಾರ್ಥಿಗಳಿಗೆ ಹಿಜಾಬ್ ಹೊರತುಪಡಿಸಿ ಕಲಾವಾ (ಮಣಿಕಟ್ಟಿನ ದಾರ), ರುದ್ರಾಕ್ಷಿ, ಪೇಟ ಮತ್ತು ಜನಿವಾರ ಧರಿಸಲು ಅನುಮತಿ ನೀಡಲಾಗಿದೆ; ಆದರೆ ಕೇಸರಿ ಶಾಲು ಧರಿಸಲು ಅನುಮತಿ ಇಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ. ರಾಜ್ಯದ ಅಂದಿನ ಭಾಜಪ ಸರಕಾರವು ಫೆಬ್ರವರಿ 2022 ರಲ್ಲಿ ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಿಗದಿತ ಸಮವಸ್ತ್ರ ಪಾಲಿಸುವುದನ್ನು ಕಡ್ಡಾಯಗೊಳಿಸಿತ್ತು. ಇದೇ ಆದೇಶದ ನಂತರ ಅನೇಕ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು.

ಮಕ್ಕಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಶಿಕ್ಷಣದಲ್ಲಿ ಯಾವುದೇ ತಾರತಮ್ಯ ಇರಬಾರದು ಎಂದು ಸರಕಾರ ತನ್ನ ಆದೇಶದಲ್ಲಿ ತಿಳಿಸಿದೆ. ‘ಕೇಸರಿ ಶಾಲು ಧಾರ್ಮಿಕ ವಿಷಯಗಳಲ್ಲಿ ಬರುವುದಿಲ್ಲ. ಆದ್ದರಿಂದ ಶಾಲೆ ಮತ್ತು ಕಾಲೇಜುಗಳಲ್ಲಿ ಕೇಸರಿ ಶಾಲಿಗೆ ಅನುಮತಿ ಇಲ್ಲ’ ಎಂದು ಸರಕಾರ ಸ್ಪಷ್ಟನೆ ನೀಡಿದೆ.

ಹಿಜಾಬ್ ಧರಿಸಲು ಅವಕಾಶವಿದ್ದರೆ, ಕೇಸರಿ ಶಾಲು ಧರಿಸಲು ಸಹ ಅನುಮತಿ ನೀಡಬೇಕು! – ಪಕ್ಷೇತರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿದ್ದರೆ, ಹಿಂದೂಗಳಿಗೂ ಕೇಸರಿ ಶಾಲು ಧರಿಸಲು ಅನುಮತಿ ನೀಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

ಶಾಲಾ ಹುಡುಗಿಯರು ಹಿಜಾಬ್ ಧರಿಸಬಹುದೇ ಅಥವಾ ಇಲ್ಲವೇ? ಎಂಬ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವಾಗಲೇ, ಶಾಲಾ ಹುಡುಗಿಯರು ತಮ್ಮ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಬಹುದು ಎಂಬ ರಾಜ್ಯ ಸರಕಾರದ ನಿಲುವು ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಮತ್ತೊಂದು ಪ್ರಯತ್ನವಾಗಿದೆ ಎಂದು ಅವರು ಟೀಕಿಸಿದರು.

ಶಾಸಕ ಯತ್ನಾಳ್ ಮಾತು ಮುಂದುವರೆಸುತ್ತಾ,

ಹಿಂದೂ ವಿದ್ಯಾರ್ಥಿಗಳಿಗೆ ನಾನೇ ಕೇಸರಿ ಶಾಲು ನೀಡುವ ವ್ಯವಸ್ಥೆ ಮಾಡುತ್ತೇನೆ. ಹಾಗೆಯೇ ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ಶ್ರೀ ಗಣಪತಿ ಮತ್ತು ಶ್ರೀ ಸರಸ್ವತಿಯ ಮೂರ್ತಿಗಳನ್ನು ಸ್ಥಾಪಿಸಿ ಪ್ರತಿದಿನ ಪೂಜೆ ಮಾಡುವ ವ್ಯವಸ್ಥೆ ಮಾಡುತ್ತೇವೆ ಎಂದರು.

ಸಂಪಾದಕೀಯ ನಿಲುವು

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಇಂತಹ ನಿರ್ಧಾರ ತೆಗೆದುಕೊಳ್ಳಲು 4 ವರ್ಷಗಳು ಬೇಕಾಗಿರುವುದು ಆಶ್ಚರ್ಯಕರ ಸಂಗತಿಯೇ ಸರಿ! ಮುಂದಿನ ಚುನಾವಣೆಯಲ್ಲಿ ಹಿಂದೂಗಳು ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಬರುವ ಹಿಂದುತ್ವವಾದಿ ಸರಕಾರವು ಮತ್ತೆ ಹಿಜಾಬ್ ನಿಷೇಧಿಸಿದರೆ ಅದರಲ್ಲಿ ತಪ್ಪೇನಿದೆ?