ಮಹಾರಾಷ್ಟ್ರ : ಖಾಸಗಿ ಬಸ್ ಮಾಲೀಕರಿಂದ ನಡೆಯುತ್ತಿರುವ ಲೂಟಿಯನ್ನು ತಡೆಯಲು ರಾಜ್ಯ ಸರಕಾರದಿಂದ ಕಾನೂನು ಜಾರಿ ಆಗುವುದು!

  • ಅನೇಕ ವರ್ಷಗಳ ‘ಸುರಾಜ್ಯ ಅಭಿಯಾನ’ದ ಬೇಡಿಕೆಗೆ ಯಶಸ್ಸು!

  • ಸಾರಿಗೆ ಸಚಿವರಿಂದ ‘ಸುರಾಜ್ಯ ಅಭಿಯಾನ’ದ ನಿಯೋಗಕ್ಕೆ ಭರವಸೆ!

ಎಡದಿಂದ ಶ್ರೀ. ಸತೀಶ್ ಸೋನಾರ್, ಡಾ. ಅಂಜೇಶ್ ಕಣಂಗಲೇಕರ್, ಸಾರಿಗೆ ಸಚಿವ ಶ್ರೀ. ಪ್ರತಾಪ್ ಸರ್ನಾಯಕ್, ಶ್ರೀ. ಅಭಿಷೇಕ್ ಮುರುಕುಟೆ, ಶ್ರೀ. ಸುನಿಲ್ ಘನವಟ್ ಮತ್ತು ಶ್ರೀ. ಅರವಿಂದ ಪಾನಸರೆ.

ಮುಂಬಯಿ – ಖಾಸಗಿ ಪ್ರವಾಸಿ ವಾಹನಗಳು ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯ (ಎಸ್.ಟಿ.) ದರಕ್ಕಿಂತ ಶೇ. 50 ರಷ್ಟು ಮಾತ್ರ ಹೆಚ್ಚಿನ ಟಿಕೆಟ್ ದರವನ್ನು ವಿಧಿಸಬಹುದು ಎಂಬ ಸರಕಾರಿ ಆದೇಶವಿದೆ. ಆದರೂ ಬೇಸಿಗೆ ರಜೆ, ಗಣೇಶೋತ್ಸವ, ದೀಪಾವಳಿಯಂತಹ ಹಬ್ಬಗಳ ಸಮಯದಲ್ಲಿ ಖಾಸಗಿ ಬಸ್ ಮಾಲೀಕರು ಮತ್ತು ಆನ್‌ಲೈನ್ ಟ್ರಾವೆಲ್ ಆ್ಯಪ್‌ಗಳು ಮನಬಂದಂತೆ ದರ ಏರಿಸಿ ಪ್ರಯಾಣಿಕರನ್ನು ಲೂಟಿ ಮಾಡುತ್ತಿವೆ. ಈ ಲೂಟಿಗೆ ಕಡಿವಾಣ ಹಾಕಲು ರಾಜ್ಯ ಸರಕಾರವು ಕಠಿಣ ಕಾನೂನನ್ನು ರೂಪಿಸಲಿದ್ದು, ಮುಂಬರುವ ಅಧಿವೇಶನದಲ್ಲಿ ಅದನ್ನು ಮಂಡಿಸಲು ಪ್ರಯತ್ನಿಸಲಾಗುವುದು ಎಂದು ರಾಜ್ಯದ ಸಾರಿಗೆ ಸಚಿವ ಶ್ರೀ. ಪ್ರತಾಪ್ ಸರ್ನಾಯಕ್ ಅವರು ‘ಸುರಾಜ್ಯ ಅಭಿಯಾನ’ದ ನಿಯೋಗಕ್ಕೆ ಭರವಸೆ ನೀಡಿದರು. ‘ಸುರಾಜ್ಯ ಅಭಿಯಾನ’ವು ಕಳೆದ ಹಲವು ವರ್ಷಗಳಿಂದ ಈ ವಿಷಯದಲ್ಲಿ ನಡೆಸುತ್ತಿದ್ದ ನಿರಂತರ ಬೆಂಬೆತ್ತುವಿಕೆಗೆ ಈಗ ದೊಡ್ಡ ಯಶಸ್ಸು ಸಿಕ್ಕಿದೆ.

ಸಭೆಯ ಇತರ ಪ್ರಮುಖ ನಿರ್ಧಾರಗಳು ಮತ್ತು ಬೇಡಿಕೆಗಳು!

ಮಾನ್ಯ ಸಾರಿಗೆ ಸಚಿವ ಶ್ರೀ ಪ್ರತಾಪ್ ಸರ್ನಾಯಕ್ ಅವರೊಂದಿಗಿನ ಸಭೆಯಲ್ಲಿ ಪಾಲ್ಗೊಂಡ ಸುರಾಜ್ಯ ಅಭಿಯಾನದ ನಿಯೋಗ

1. ಪ್ರಯಾಣಿಕರ ಲೂಟಿಯನ್ನು ತಡೆಯಲು ಸರಕಾರಿ ಸಮಿತಿಯನ್ನು ಸ್ಥಾಪಿಸಲಾಗುವುದು. ಅದರಲ್ಲಿ ‘ಸುರಾಜ್ಯ ಅಭಿಯಾನ’ದ 3 ಪ್ರತಿನಿಧಿಗಳನ್ನು ಸೇರಿಸಲಾಗುವುದು.

2. ‘ರೆಡ್ ಬಸ್’, ‘ಮೇಕ್ ಮೈ ಟ್ರಿಪ್’ ನಂತಹ ಒಟ್ಟು 18 ಖಾಸಗಿ ಟ್ರಾವೆಲ್ ಆ್ಯಪ್‌ಗಳನ್ನು ಬಂದ್ ಮಾಡುವಂತೆ ಪುಣೆಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು 6 ಮಾರ್ಚ್ 2024 ರಂದು ಮಹಾರಾಷ್ಟ್ರ ಸರಕಾರಕ್ಕೆ ಸೂಚನೆ ನೀಡಿದ್ದಾರೆ. ಅದನ್ನು ಜಾರಿಗೆ ತರುವಂತೆ ‘ಸುರಾಜ್ಯ ಅಭಿಯಾನ’ ಬೇಡಿಕೆ ಇಟ್ಟಿತ್ತು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.

3. ಬಸ್ ನಿಲ್ದಾಣಗಳಲ್ಲಿನ ಸ್ವಚ್ಛತೆ, ಕುಡಿಯುವ ನೀರು ಮತ್ತು ಶೌಚಾಲಯಗಳ ಸೌಲಭ್ಯವನ್ನು ಸುಧಾರಿಸಲು ವಿಧಿಸಲಾಗಿರುವ ಶೇ. 2 ರಷ್ಟು ಸರ್‌ಚಾರ್ಜ್ (ಅಧಿಭಾರ) ಹಣವನ್ನು ಸಮರ್ಪಕವಾಗಿ ಬಳಸಲಾಗುವುದು.

4. ‘ಬೆಸ್ಟ್’ (BEST) ಮತ್ತು ‘ಎಸ್.ಟಿ.’ ಬಸ್‌ಗಳಲ್ಲಿನ ಸೂಚನೆಗಳಲ್ಲಿರುವ ಮರಾಠಿ ಭಾಷೆಯ ವ್ಯಾಕರಣ ದೋಷಗಳನ್ನು ಸರಿಪಡಿಸುವುದಾಗಿ ಸಚಿವರು ಭರವಸೆ ನೀಡಿದರು.

5. ಸಾರಿಗೆ ಸಂಸ್ಥೆಯ ಬಸ್ ಡಿಪೋಗಳಲ್ಲಿನ ಶೇ. 70 ರಷ್ಟು ದೂರವಾಣಿ ಸೇವೆಗಳು ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವಾಗಿ ತಕ್ಷಣವೇ ‘ಟೋಲ್ ಫ್ರೀ’ (ಉಚಿತ ಕರೆ) ಸಂಖ್ಯೆಯನ್ನು ಪ್ರಾರಂಭಿಸುವಂತೆ ಸಚಿವ ಶ್ರೀ. ಸರ್ನಾಯಕ್ ಅವರು ಅಧಿಕಾರಿಗಳಿಗೆ ಆದೇಶಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಮತ್ತು ಪದಾಧಿಕಾರಿಗಳು!

ಸಚಿವಾಲಯದಲ್ಲಿ ಸಾರಿಗೆ ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಆಯೋಜಿಸಲಾಗಿದ್ದ ಸಭೆಯಲ್ಲಿ ಸಾರಿಗೆ ಸಚಿವ ಶ್ರೀ. ಪ್ರತಾಪ್ ಸರ್ನಾಯಕ್, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು, ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ರಾಜ್ಯ ಸಂಘಟಕ ಶ್ರೀ. ಸುನಿಲ್ ಘನವಟ್, ‘ಸುರಾಜ್ಯ ಅಭಿಯಾನ’ದ ಮಹಾರಾಷ್ಟ್ರ ಸಮನ್ವಯಕ ಶ್ರೀ. ಅಭಿಷೇಕ್ ಮುರುಕುಟೆ, ಸಮನ್ವಯಕಾರ ಡಾ. ಅಂಜೇಶ್ ಕಣಂಗಲೇಕರ್, ಶ್ರೀ. ಸತೀಶ್ ಸೋನಾರ್, ಶ್ರೀ. ರವಿ ನಲಾವಡೆ ಮುಂತಾದವರು ಉಪಸ್ಥಿತರಿದ್ದರು.

‘ಸುರಾಜ್ಯ ಅಭಿಯಾನ’ವು ನಿಸ್ವಾರ್ಥ ಭಾವನೆಯಿಂದ ಕಾರ್ಯನಿರ್ವಹಿಸುತ್ತಿದೆ! – ಸಾರಿಗೆ ಸಚಿವರು

ಸಚಿವ ಸರ್ನಾಯಕ್ ಅವರು ಮಾತನಾಡಿ, “ಸುರಾಜ್ಯ ಅಭಿಯಾನವು ಕಳೆದ ಕೆಲವು ವರ್ಷಗಳಿಂದ ಸಾರಿಗೆ ಇಲಾಖೆಯ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಅತ್ಯಂತ ನಿಸ್ವಾರ್ಥ ಭಾವನೆಯಿಂದ ಪ್ರಯತ್ನಿಸುತ್ತಿದೆ. ಅವರ ಈ ಪ್ರಯತ್ನಗಳನ್ನು ನಾವು ಶ್ಲಾಘಿಸುತ್ತೇವೆ. ಸುರಾಜ್ಯ ಅಭಿಯಾನವು ನಡೆಸಿರುವ ಆಳವಾದ ಅಧ್ಯಯನದ ಪ್ರಯೋಜನ ಖಂಡಿತವಾಗಿಯೂ ಸಾರಿಗೆ ಇಲಾಖೆಗೆ ಸಿಗಲಿದೆ,” ಎಂದರು.