ಎಲ್ಲ ಭಾರತೀಯರಲ್ಲಿ ಭಗವಾನ್ ಮಹಾದೇವನ ಡಿ.ಎನ್.ಎ. ಇದೆ ! – ಮಝಹರ್ ಆಸಿಫ್

  • ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಕುಲಪತಿ ಮಝಹರ್ ಆಸಿಫ್ ಅವರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಹೇಳಿಕೆ !

  • ಹೇಳಿಕೆಯ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ

(ಡಿ.ಎನ್.ಎ. ಎಂದರೆ ಡಿಆಕ್ಸಿರೈಬೋ ನ್ಯೂಕ್ಲಿಕ್ ಆಸಿಡ್ ಅಂದರೆ ವ್ಯಕ್ತಿಯ ಮೂಲ ಗುರುತನ್ನು ಪತ್ತೆಹಚ್ಚುವ ಶರೀರದ ಘಟಕ)

ನವ ದೆಹಲಿ – ಇಲ್ಲಿನ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಕುಲಪತಿ ಮಝಹರ್ ಆಸಿಫ್ ಅವರು ಎಲ್ಲ ಭಾರತೀಯರಲ್ಲಿ ಭಗವಾನ್ ಮಹಾದೇವನ ಡಿ.ಎನ್.ಎ. ಇದೆ ಎಂದು ಹೇಳಿಕೆ ನೀಡಿದ ನಂತರ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ೧೦೦ ವರ್ಷಗಳ ಪೂರ್ತಿಯ ನಿಮಿತ್ತ ಜಾಮಿಯಾದಲ್ಲಿ ಆಯೋಜಿಸಲಾಗಿದ್ದ ‘ಯುವ ಕುಂಭ’ ಕಾರ್ಯಕ್ರಮದಲ್ಲಿ ಕುಲಪತಿ ಮಝಹರ್ ಆಸಿಫ್ ಅವರು ನೀಡಿದ ಮೇಲಿನ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ ಅವರ ಮೇಲೆ ಟೀಕೆಗಳ ಸುರಿಮಳೆಯಾಗುತ್ತಿದೆ.

ಕುಲಪತಿ ಮಝಹರ್ ಆಸಿಫ್ ಅವರು ಹೇಳಿದ್ದೇನು ?

ಈ ವಿಡಿಯೋದಲ್ಲಿ ಕುಲಪತಿ ಮಝಹರ್ ಅವರು, ಇಲ್ಲಿ ಕುಳಿತಿರುವ ಎಲ್ಲರನ್ನೂ ನೋಡಿದಾಗ ನನಗೆ ಎಲ್ಲರ ಮಾತೃಭಾಷೆ, ಬೆಳೆದು ಬಂದ ರೀತಿ ಅಥವಾ ಸಂಸ್ಕೃತಿ ಒಂದೇ ಎಂದು ಅನ್ನಿಸುವುದಿಲ್ಲ. ನಾನು ಇದನ್ನು ಭೌಗೋಳಿಕವಾಗಿ ಹೇಳುತ್ತಿದ್ದೇನೆ, ಬಹುಶಃ ಅವರು ಒಂದೇ ಪ್ರದೇಶದವರಾಗಿಲ್ಲದಿರಬಹುದು. ಅವರ ಧರ್ಮಗಳೂ ಬೇರೆ ಇರಬಹುದು. ಇವೆಲ್ಲದರ ನಂತರವೂ ನಾವೆಲ್ಲರೂ ಭಾರತೀಯರೇ ಆಗಿದ್ದೇವೆ. ನಾವು ಭಾರತೀಯರಾಗಿದ್ದೇವೆ; ಏಕೆಂದರೆ ನಮ್ಮ ಡಿ.ಎನ್.ಎ.ನಲ್ಲಿ ಭಗವಾನ್ ಮಹಾದೇವನ ಡಿ.ಎನ್.ಎ. ಇದೆ ಎಂದು ಹೇಳಿದ್ದಾರೆ.

ಜಾಮಿಯಾ ವಿದ್ಯಾರ್ಥಿಗಳಿಂದ ವಿರೋಧ !

ಮೂಲತಃ ಸಂಘದ ಕಾರ್ಯಕ್ರಮಕ್ಕೆ ಜಾಮಿಯಾ ಆಡಳಿತ ಮಂಡಳಿಯು ಅನುಮತಿ ನೀಡಿದ್ದಕ್ಕೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈಗ ಈ ಹೇಳಿಕೆಯ ನಂತರ ಜಾಮಿಯಾದ ‘ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ’ ಘಟಕವು ಈ ಘಟನೆಯನ್ನು ಖಂಡಿಸಿದೆ. ನಾವು ಕುಲಪತಿ ಮಝಹರ್ ಆಸಿಫ್ ಅವರು ಜಾಮಿಯಾದಲ್ಲಿ ನೀಡಿರುವ ಆ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಇದು ಶೈಕ್ಷಣಿಕ ಮತ್ತು ವೈಜ್ಞಾನಿಕ ಉತ್ಕೃಷ್ಟತೆಗೆ ಹೆಸರಾದ ಸಂಸ್ಥೆಯಾಗಿದೆ. ಕುಲಪತಿಗಳ ಹೇಳಿಕೆಯು ಅಶಾಸ್ತ್ರೀಯ ಮತ್ತು ಸತ್ಯಕ್ಕೆ ದೂರವಾಗಿದೆ ಎಂದು ಈ ಸಂಘಟನೆಯು ಹೇಳಿದೆ. (ಒಂದು ವೇಳೆ ಯಾರಾದರೂ ಹಿಂದೂ ಕುಲಪತಿಗಳು ಹಿಂದೂ ಧರ್ಮದ ಬಗ್ಗೆ ಟೀಕೆ ಮಾಡಿದ್ದರೆ, ಆ ವಿಶ್ವವಿದ್ಯಾಲಯದ ಹಿಂದೂ ವಿದ್ಯಾರ್ಥಿಗಳು ಈ ರೀತಿ ವಿರೋಧ ವ್ಯಕ್ತಪಡಿಸುತ್ತಿದ್ದರೇ ? – ಸಂಪಾದಕರು)

ಭಾಜಪದಿಂದ ಹೇಳಿಕೆಗೆ ಬೆಂಬಲ !

ಭಾಜಪದ ಮಾಹಿತಿ ತಂತ್ರಜ್ಞಾನ ಘಟಕದ ಮುಖ್ಯಸ್ಥ ಅಮಿತ ಮಾಳವೀಯ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ಈ ಹೇಳಿಕೆಯ ಶಬ್ದಶಃ ಅರ್ಥವನ್ನು ತೆಗೆದುಕೊಂಡು ಇದನ್ನು ಅಶಾಸ್ತ್ರೀಯ ಎಂದು ತಳ್ಳಿಹಾಕುವುದು ಸಂಪೂರ್ಣವಾಗಿ ತಪ್ಪು. ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ನಿರಂತರವಾಗಿ, ಭಾರತೀಯ ಮುಸಲ್ಮಾನರು ಭಾರತದ ಮಿಶ್ರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದಾರೆ, ಅವರು ಹಿಂದೂಗಳಂತೆಯೇ ಈ ಭೂಮಿ ಮತ್ತು ವಂಶಕ್ಕೆ ಬದ್ಧರಾಗಿದ್ದಾರೆ ಎಂದು ವಾದಿಸುತ್ತಿದ್ದರು. ಮೌಲಾನಾ ವಹೀದುದ್ದೀನ್ ಖಾನ್ ಅವರು ಈ ದೃಷ್ಟಿಕೋನವನ್ನು ಇನ್ನಷ್ಟು ಬಲಪಡಿಸುತ್ತಾ, ಮತಾಂತರದಿಂದ ವಂಶಾವಳಿ ಅಥವಾ ಮೂಲ ಬದಲಾಗುವುದಿಲ್ಲ ಎಂದು ಒತ್ತಿ ಹೇಳಿದ್ದರು. ಪಾಕಿಸ್ತಾನದ ನಿರ್ಮಾಣದ ವೈಚಾರಿಕ ಸಂಸ್ಥಾಪಕರೆಂದು ಕರೆಯಲ್ಪಡುವ ಮಹಮ್ಮದ್ ಇಕ್ಬಾಲ್ ಕೂಡ ಭಾರತದ ಸಾಮೂಹಿಕ ಸಾಂಸ್ಕೃತಿಕ ಪರಂಪರೆಯನ್ನು ಒಪ್ಪಿಕೊಂಡಿದ್ದರು ಮತ್ತು ಭಗವಾನ್ ರಾಮನನ್ನು ‘ಇಮಾಮ್-ಎ-ಹಿಂದ್’ ಅಂದರೆ ‘ಈ ಭೂಮಿಯ ಜನರ ಆಧ್ಯಾತ್ಮಿಕ ಮಾರ್ಗದರ್ಶಕ’ ಎಂದು ವರ್ಣಿಸಿದ್ದರು. ಈ ದೃಷ್ಟಿಕೋನದಿಂದ ನೋಡಿದರೆ, ಕುಲಪತಿಗಳ ಟಿಪ್ಪಣಿಯು ವಿಭಜಕವಾಗಿರದೆ ಏಕತೆಯ ಸಂಕೇತವಾಗಿದೆ. ಇದು ಸುದೀರ್ಘ ಕಾಲದ ಬೌದ್ಧಿಕ ಪರಂಪರೆಯ ಪ್ರತಿಧ್ವನಿಯಾಗಿದ್ದು, ಧಾರ್ಮಿಕ ಗಡಿಗಳನ್ನು ಮೀರಿ ಭಾರತದ ಜನರನ್ನು ಒಂದು ಸಾಮೂಹಿಕ ನಾಗರಿಕತೆಯ ಪರಂಪರೆಯ ವಾರಸುದಾರರನ್ನಾಗಿ ಗುರುತಿಸುತ್ತದೆ ಎಂದು ಹೇಳಿದ್ದಾರೆ.

ಇದು ಭಾರತದಲ್ಲಿ ಶಿಕ್ಷಣವನ್ನು ‘ಹಿಂದೂಕರಣ’ ಮಾಡುವ ಪ್ರಯತ್ನವಂತೆ ! – ಪಾಕಿಸ್ತಾನ

ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ತಾಹಿರ್ ಅಂದ್ರಬಿ ಅವರು ಈ ಬಗ್ಗೆ ಮಾತನಾಡಿ, ಭಾರತದ ಮುಸಲ್ಮಾನರ ಭಾಷೆ ಮತ್ತು ಗುರುತನ್ನು ಉಳಿಸಲು ಜಗತ್ತು ಮುಂದೆ ಬರಬೇಕು. ಜಗತ್ತು ಈ ವಿಷಯದಲ್ಲಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಜಾಮಿಯಾ ಮಿಲಿಯಾದಲ್ಲಿ ಸಂಘದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದು ಭಾರತದ ಶಿಕ್ಷಣವನ್ನು ‘ಹಿಂದೂಕರಣ’ ಮಾಡುವ ಪ್ರಯತ್ನ ಮತ್ತು ಭಾರತದ ಅಲ್ಪಸಂಖ್ಯಾತರ ಸಂಸ್ಥೆಗಳ ಮೇಲೆ ನಡೆದ ಆಕ್ರಮಣವಾಗಿದೆ ಎಂದು ಆರೋಪಿಸಿದ್ದಾರೆ. (ಪಾಕಿಸ್ತಾನವು ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಅದು ತನ್ನ ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಗಮನ ಹರಿಸಲಿ. – ಸಂಪಾದಕರು)

ಸಂಪಾದಕೀಯ ನಿಲುವು

  • ೧ ಸಾವಿರದ ೪೦೦ ವರ್ಷಗಳ ಹಿಂದೆ ಭಾರತದಲ್ಲಿ ಮಾತ್ರವಲ್ಲ, ಇಡೀ ಪೃಥ್ವಿಯ ಮೇಲೆ ಇಸ್ಲಾಂ ಎಂಬ ಪಂಥವೇ ಅಸ್ತಿತ್ವದಲ್ಲಿರಲಿಲ್ಲ. ೨ ಸಾವಿರ ವರ್ಷಗಳ ಹಿಂದೆ ಕ್ರೈಸ್ತ ಪಂಥವಿರಲಿಲ್ಲ. ಪೃಥ್ವಿಯ ಮೇಲೆ ಕೇವಲ ಮತ್ತು ಕೇವಲ ಸನಾತನ ವೈದಿಕ ಧರ್ಮವೇ ಅಸ್ತಿತ್ವದಲ್ಲಿತ್ತು, ಇದೆ ಮತ್ತು ಮುಂದೆಯೂ ಕೇವಲ ಅದೇ ಇರಲಿದೆ. ಹೀಗಿರುವಾಗ, ಇದಕ್ಕೆ ಯಾರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಅಥವಾ ಟೀಕೆ ಮಾಡಿದರೂ, ಸತ್ಯವು ಸುಳ್ಳಾಗಲು ಸಾಧ್ಯವಿಲ್ಲ !
  • ಕುಲಪತಿಗಳಿಗೆ ಈ ಸತ್ಯ ಮನವರಿಕೆಯಾಗಿರುವುದು ಶ್ಲಾಘನೀಯವೇ ಸರಿ ! ಮುಸಲ್ಮಾನ ಧರ್ಮಗುರುಗಳು ಅವರಿಂದ ಮಾರ್ಗದರ್ಶನ ಪಡೆಯುವುದು ಅತ್ಯವಶ್ಯಕವಾಗಿದೆ !