ಹರದೋಯಿ (ಉತ್ತರಪ್ರದೇಶ): ಶಾಲೆಯ ಹೊರಗಿನಿಂದ ಪುಸ್ತಕ ಖರೀದಿ; ಮಗುವನ್ನು ಶಾಲೆಯಿಂದ ಹೊರಹಾಕುವುದಾಗಿ ಮುಖ್ಯೋಪಾಧ್ಯಾಯಿನಿಯ ಬೆದರಿಕೆ

ಹರದೋಯಿ (ಉತ್ತರಪ್ರದೇಶ) – ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ವಿಡಿಯೋವೊಂದರಲ್ಲಿ ಇಲ್ಲಿನ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿ ಮಮತಾ ಮಿಶ್ರಾ ಅವರು ವಿದ್ಯಾರ್ಥಿನಿಯೊಬ್ಬಳ ತಾಯಿಯ ಮೇಲೆ ಜೋರಾಗಿ ಕಿರುಚುತ್ತಾ ಮತ್ತು ಅವರೊಂದಿಗೆ ಅಸಭ್ಯವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ. ‘ಇವರ ಮಗುವಿನ ಹೆಸರನ್ನು ಈಗಲೇ ‘ರಿಜಿಸ್ಟರ್’ನಿಂದ (ನೋಂದಣಿ ಪುಸ್ತಕದಿಂದ) ತೆಗೆದುಹಾಕಿ, ಇಲ್ಲಿಂದ ಹೊರನಡೆಯಿರಿ’, ‘ಶಟ್ ಅಪ್’, ‘ಗೆಟ್ ಲಾಸ್ಟ್’ ಎಂದು ಅವರು ಪಾಲಕರನ್ನು ಅವಮಾನಿಸಿದ್ದಾರೆ. ಹಿರಿಯ ಶಿಶು ವರ್ಗದಲ್ಲಿ ಓದುತ್ತಿರುವ ಮಗುವಿನ ಹೆಸರನ್ನು ತೆಗೆದುಹಾಕುವುದಾಗಿ ಮುಖ್ಯೋಪಾಧ್ಯಾಯಿನಿ ಬೆದರಿಕೆ ಹಾಕಿದ್ದಾರೆ. ಈ ವಿದ್ಯಾರ್ಥಿನಿಯ ತಾಯಿಯು ಶಾಲೆಯಲ್ಲಿ ಸಿಗುವ ಪಠ್ಯ-ಪುಸ್ತಕಗಳ ಬದಲು ಹೊರಗಿನಿಂದ ಪಠ್ಯ-ಪುಸ್ತಕಗಳನ್ನು ಖರೀದಿಸಿದ್ದಕ್ಕಾಗಿ ಮಿಶ್ರಾ ಅವರು ಈ ಬೆದರಿಕೆ ಹಾಕಿದ್ದಾರೆ.

ವಿದ್ಯಾರ್ಥಿನಿಯ ತಾಯಿ ನೀಲಂ ವರ್ಮಾ ಅವರು ಮಗುವಿಗೆ ಬೇಕಾದ ಪಠ್ಯ-ಪುಸ್ತಕಗಳನ್ನು ಹೊರಗಿನಿಂದ ಖರೀದಿಸಿದ್ದರು. ಆದರೆ ಶಾಲೆಯ ಅಧಿಕಾರಿಗಳು ಈ ನೋಟ್ಬುಕ್ ಗಳನ್ನು ಬಳಸಲು ನಿರಾಕರಿಸಿದರು. ಪಾಲಕರು ಎಲ್ಲಾ ಶೈಕ್ಷಣಿಕ ಸಾಮಗ್ರಿಗಳನ್ನು ಶಾಲೆಯಿಂದಲೇ ಖರೀದಿಸಬೇಕೆಂದು ಶಾಲೆ ಅಧಿಕಾರಿಗಳು ಒತ್ತಾಯಿಸುತ್ತಿದ್ದರು. ಇದೇ ವಿಷಯದ ಬಗ್ಗೆ ಚರ್ಚಿಸಲು ಹೋದ ನೀಲಂ ವರ್ಮಾ ಅವರು ಮುಖ್ಯೋಪಾಧ್ಯಾಯಿನಿಯ ಕೋಪಕ್ಕೆ ತುತ್ತಾಗಬೇಕಾಯಿತು. ಶಾಲಾ ಆಡಳಿತ ಮಂಡಳಿಯು ತನ್ನ ಸ್ವಂತ ಲಾಭಕ್ಕಾಗಿ ನಿರ್ದಿಷ್ಟ ಅಂಗಡಿಗಳಿಂದಲೇ ಸಾಮಗ್ರಿಗಳನ್ನು ಖರೀದಿಸುವಂತೆ ಒತ್ತಾಯಿಸುತ್ತಿದೆ ಎಂದು ಪಾಲಕರು ಆರೋಪಿಸುತ್ತಿದ್ದಾರೆ.

ನನ್ನ ಅಪಕೀರ್ತಿಗಾಗಿ ನಡೆದ ಸಂಚು! – ಮುಖ್ಯೋಪಾಧ್ಯಾಯಿನಿಯ ವಾದ

ವಿಡಿಯೋ ಪ್ರಸಾರವಾದ ನಂತರ ಮುಖ್ಯೋಪಾಧ್ಯಾಯಿನಿ ಮಮತಾ ಮಿಶ್ರಾ ಅವರು ಪ್ರತಿಕ್ರಿಯಿಸಿ, ವಿಡಿಯೋದಲ್ಲಿ ನನ್ನ ಭಾಷೆ ತಪ್ಪಾಗಿ ಕಾಣಿಸಬಹುದು; ಆದರೆ ಅದರ ಹಿಂದಿನ ಸತ್ಯವೇ ಬೇರೆ ಇದೆ. ಸಂಬಂಧಪಟ್ಟ ಪಾಲಕರು ಕಳೆದ ಹಲವು ದಿನಗಳಿಂದ ಶುಲ್ಕ ಪಾವತಿಸದೆ ತೊಂದರೆ ನೀಡುತ್ತಿದ್ದರು. ಶಾಲೆಯಲ್ಲಿ ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದಾಗ ಅವರು ಉದ್ದೇಶಪೂರ್ವಕವಾಗಿ ಗೊಂದಲ ನಿರ್ಮಿಸಿದರು, ಎಂದು ಹೇಳಿದ್ದಾರೆ.

ಆಡಳಿತ ಮಂಡಳಿಯಿಂದ ತನಿಖೆಗೆ ಆದೇಶ

ಈ ಪ್ರಕರಣವನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಶಿಕ್ಷಕರ ಭಾಷೆಯು ಸಂಯಮ ಮತ್ತು ಮಿತಿಯಲ್ಲಿರಬೇಕು, ಪಾಲಕರೊಂದಿಗೆ ಈ ರೀತಿ ವರ್ತಿಸುವುದು ನಮ್ಮ ಸಂಸ್ಕೃತಿಯಲ್ಲ ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಶಾಲೆಗೆ ಕೇವಲ ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಮಾತ್ರ ಮಾನ್ಯತೆ ಇರುವುದು ಬೆಳಕಿಗೆ ಬಂದಿದ್ದು, ಅದಕ್ಕಿಂತ ಕೆಳಗಿನ ತರಗತಿಗಳು ಅಕ್ರಮವಾಗಿ ನಡೆಯುತ್ತಿವೆಯೇ ಎಂಬ ಬಗ್ಗೆಯೂ ಈಗ ತನಿಖೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಇಂತಹ ಶಾಲೆಗಳ ವಿರುದ್ಧ ಕ್ರಮವಾಗಲೇಬೇಕು !