ಗುರುಕೃಪಾಯೋಗದ ಅಷ್ಟಾಂಗ ಸಾಧನೆಯ ಅಷ್ಟದಳ-ಕಮಲದ ಒಂದು ಸುಂದರ ದಳ ‘ಸತ್ಸಂಗ’ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ದೈವೀ ವಾಣಿಯಿಂದ ಭಕ್ತಿಸತ್ಸಂಗದಲ್ಲಿ ಹರಿದುಬಂದ ಅಮೃತಬಿಂದು !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

೧. ಸಂತ ತುಳಸೀದಾಸರು ಹೇಳಿರುವ ಸತ್ಸಂಗದ ಮಹತ್ವ

ಸಂತ ತುಳಸೀದಾಸರು ಹೀಗೆ ಹೇಳಿದ್ದಾರೆ;

‘ಏಕ ಘಡಿ ಆಧೀ ಘಡಿ, ಆಧೀ ಕೀ ಪುನಿ ಆಧ |

ತುಲಸೀ ಸಂಗತ ಸಾಧೂ ಕೀ, ಹರೇ ಕೋಟಿ ಅಪರಾಧ |’

ಅಂದರೆ ‘ಒಂದು ಅರ್ಧ ಘಳಿಗೆಯ ಅಥವಾ ಅದರ ಅರ್ಧದಷ್ಟು ಸಮಯ, ಅಂದರೆ ಕೇವಲ ೫-೬ ನಿಮಿಷಗಳ ಕಾಲ ನಮಗೆ ಸಂತರ ಸಹವಾಸ ಅಥವಾ ಸತ್ಸಂಗ ಲಭಿಸಿದರೂ, ನಮ್ಮ ಅನಂತ ಅಪರಾಧಗಳು ನಾಶವಾಗುತ್ತವೆ.’

೨. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಅನೇಕ ವರ್ಷಗಳಿಂದ ಸಾಧಕರಿಗೆ ಸತ್ಸಂಗದ ವಿವಿಧ ಮಾಧ್ಯಮಗಳನ್ನು ನೀಡಿದ್ದಾರೆ. ಈ ಎಲ್ಲಾ ಸತ್ಸಂಗಗಳು ಸಾಧಕರ ಉದ್ಧಾರಕ್ಕಾಗಿಯೇ ಇವೆ. ಗುರುಕೃಪಾಯೋಗಾನುಸಾರ ಅಷ್ಟಾಂಗ ಸಾಧನೆಯ ಅಷ್ಟದಳ-ಕಮಲದಲ್ಲಿ ‘ಸತ್ಸಂಗ’ವು ಒಂದು ಸುಂದರವಾದ ಪಕಳೆ(ಎಸಳು) ಆಗಿದೆ. ಸತ್ಸಂಗದಿಂದ ನಮ್ಮ ಎಷ್ಟೋ ಪಾಪಗಳು ಮತ್ತು ಪ್ರಾರಬ್ಧ ನಾಶವಾಗುತ್ತದೆ. ಆದ್ದರಿಂದ, ಸತ್ಸಂಗದ ವಿಷಯದಲ್ಲಿ ಮನಸ್ಸಿನಲ್ಲಿರುವ ಅಡಚಣೆಗಳನ್ನು ದೂರ ಮಾಡಿ, ಸತ್ಸಂಗದ ಲಾಭವನ್ನು ಮನಃಪೂರ್ವಕವಾಗಿ ಪಡೆಯಲು ತಳಮಳದಿಂದ ಪ್ರಯತ್ನಿಸಬೇಕು. ಸತ್ಸಂಗದಲ್ಲಿ ಹೇಳಲಾಗುವ ಅಂಶಗಳನ್ನು ಮನಸ್ಸಿನಿಂದ, ಏಕಾಗ್ರತೆಯಿಂದ ಕೇಳಿ ಹೃದಯದಲ್ಲಿ ಕೊರೆದಿಡಬೇಕು.

೩. ಸತ್ಸಂಗದ ಮಾಧ್ಯಮದಿಂದ ಭಗವಂತನ ದೈವೀ ವಾಣಿಯು ಕಾರ್ಯನಿರತವಾಗಿರುತ್ತದೆ. ಹೊರನೋಟಕ್ಕೆ ಮಾಧ್ಯಮವು ಬೇರೆ ಕಂಡರೂ, ಅವರ ವಾಣಿಯ ಮೂಲಕ ಭಗವಂತನ ಮತ್ತು ಗುರುದೇವರ ವಾಣಿಯೇ ಕೆಲಸ ಮಾಡುತ್ತಿರುತ್ತದೆ. ಆ ವಾಣಿಯಲ್ಲಿರುವ ದೈವೀ ಶಕ್ತಿಯು ಶಬ್ದಾತೀತವಾಗಿರುತ್ತದೆ. ಆ ‘ವಾಣಿಯ ಚೈತನ್ಯ’ವು ಹೃದಯದಲ್ಲಿ ಇಳಿಯುತ್ತಿರುತ್ತದೆ. ಯಾರಲ್ಲಿ ಕೇಳಿಕೊಳ್ಳುವ ತಳಮಳವಿದೆಯೋ, ಅವರಿಗಾಗಿ ಭಗವಂತನ ದೈವೀ ವಾಣಿಯು ಚೈತನ್ಯದೊಂದಿಗೆ ಪ್ರವಹಿಸಿ, ಆ ಚೈತನ್ಯದ ಸ್ಪರ್ಶವು ಅಂತಃಕರಣಕ್ಕೆ ಆಗುತ್ತದೆ. ಆದ್ದರಿಂದ ಸಾಧಕರು ಸತ್ಸಂಗದ ಅಂಶಗಳನ್ನು ಮನಃಪೂರ್ವಕವಾಗಿ ಕೇಳಲು ‘ಶುದ್ಧ ಗ್ರಹಣಶಕ್ತಿ’ಯನ್ನು ಇಡಬೇಕು.

೪. ಸತ್ಸಂಗಗಳಲ್ಲಿ ಕೇವಲ ಶಬ್ದಗಳಿಂದಲ್ಲ, ಬದಲಾಗಿ ಶಬ್ದಗಳ ಆಚೆಗಿನ ಚೈತನ್ಯದ ಲಾಭವು ನಮಗೆ ಆಗುತ್ತಿರುತ್ತದೆ. ಆ ದಿವ್ಯ ಶಕ್ತಿಯು ನಮ್ಮ ಅಂತರ್ಮನದಲ್ಲಿ ಪ್ರವಹಿಸುತ್ತಿರುತ್ತದೆ. ನಮಗೆ ಸತ್ಸಂಗದ ಪ್ರತಿಯೊಂದು ಶಬ್ದವನ್ನು ಹೃದಯದಿಂದ ಕೇಳಿ, ಆ ಶಬ್ದಗಳ ಆಚೆಗಿನ ಚೈತನ್ಯವನ್ನು ಅನುಭವಿಸಲು ಸಾಧ್ಯವಾಗಬೇಕು. ಅದರಿಂದ ನಮಗೆ ಸ್ಥೂಲ ಮತ್ತು ಸೂಕ್ಷ್ಮ ಎರಡೂ ಸ್ತರಗಳಲ್ಲಿ ಲಾಭವಾಗುತ್ತದೆ. ಇದಕ್ಕಾಗಿಯೇ ಭಗವಂತನ ಕೃಪೆಯಿಂದ ಲಭಿಸುತ್ತಿರುವ ಎಲ್ಲಾ ಸತ್ಸಂಗಗಳಿಗೆ ನಿಯಮಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಹಾಜರಿರುವುದರ ಜೊತೆಗೆ, ಅದರಲ್ಲಿನ ಎಲ್ಲಾ ಅಂಶಗಳನ್ನು ಮನಃಪೂರ್ವಕವಾಗಿ ಕೇಳಬೇಕು. ಆ ಅಂಶಗಳನ್ನು ಬರೆದಿಟ್ಟುಕೊಂಡು ಅವುಗಳ ಬಗ್ಗೆ ಮನನ ಮತ್ತು ಚಿಂತನೆ ಮಾಡಬೇಕು. ಇದರಿಂದ ಖಂಡಿತವಾಗಿಯೂ ನಮ್ಮ ಪರಮ ಕಲ್ಯಾಣವಾಗುವುದು.

೫. ಶ್ರವಣದ ನಿಜವಾದ ಅರ್ಥ

ಯಾವುದೇ ಸತ್ಸಂಗದಲ್ಲಿ ಅನೇಕ ಜನರು ವಿಷಯವನ್ನು ಕೇಳುತ್ತಿರುತ್ತಾರೆ. ಆದರೆ ಅವರಲ್ಲಿನ ಕೆಲವರಿಗೆ ಮಾತ್ರ ಶ್ರವಣದ ನಿಜವಾದ ಲಾಭವಾಗುತ್ತದೆ. ಶ್ರವಣವನ್ನು ಎಲ್ಲರೂ ಒಂದೇ ರೀತಿ ಮಾಡುತ್ತಾರೆ; ಆದರೆ ಪ್ರತಿಯೊಬ್ಬರೂ ಅದರ ಮನನ, ಚಿಂತನೆ ಮಾಡುವುದಿಲ್ಲ. ಆದ್ದರಿಂದ ಎಲ್ಲರಿಗೂ ಸಮಾನ ಫಲ ಸಿಗುವುದಿಲ್ಲ. ಏಕಾಗ್ರತೆಯಿಂದ ಮಾಡದಿರುವ ಶ್ರವಣ, ಸಂಶಯಾತ್ಮಕ ಮನಸ್ಸಿನಿಂದ ಮಾಡಿದ ಶ್ರವಣ ಮತ್ತು ಮನಸ್ಸು ಅತ್ತಿತ್ತ ಅಲೆದಾಡುತ್ತಿರುವಾಗ ಮಾಡಿದ ಶ್ರವಣವು ಯಾವುದೇ ಫಲವನ್ನು ನೀಡುವುದಿಲ್ಲ. ಗುರುಗಳ ವಚನಗಳಲ್ಲಿ ವಿಶ್ವಾಸವಿಟ್ಟು, ಅಂತಃಕರಣದಲ್ಲಿ ನಮ್ರತೆಯನ್ನು ಇಟ್ಟುಕೊಂಡು, ಮನಸ್ಸಿನ ವಿಕಾರ ಮತ್ತು ವಿಚಾರಗಳನ್ನು ಜಯಿಸಿ ಏಕಾಗ್ರಚಿತ್ತದಿಂದ ಶ್ರವಣ ಮಾಡಿದರೆ ಮಾತ್ರ ಶ್ರವಣದ ಫಲ ಸಿಗುತ್ತದೆ.

ಸಾಧಕರೇ, ಗುರುಕೃಪೆಯಿಂದ ನಮಗೆ ಲಭಿಸುತ್ತಿರುವ ಸತ್ಸಂಗಗಳಲ್ಲಿ ಯಾವ ಅಂಶಗಳನ್ನು ಹೇಳಲಾಗುತ್ತದೆಯೋ, ಅವುಗಳನ್ನು ‘ಗುರುವಚನ’ವೆಂದು ನಂಬಿ ನಿಷ್ಠೆಯಿಂದ ಕೇಳಿ. ಆ ಗುರುವಚನಗಳ ಮೇಲೆ ಶ್ರದ್ಧೆಯಿಟ್ಟು, ಮನಸ್ಸಿನ ವಿಕಾರ ಮತ್ತು ವಿಚಾರಗಳನ್ನು ಮೆಟ್ಟಿನಿಂತು ಏಕಾಗ್ರತೆಯಿಂದ ಆಲಿಸಿ. ಈ ನರದೇಹದ ಉದ್ಧಾರಕ್ಕಾಗಿ ಶ್ರೀಗುರುಕೃಪೆಯಿಂದ ಲಭಿಸುತ್ತಿರುವ ಸತ್ಸಂಗಗಳ ಲಾಭ ಪಡೆದುಕೊಳ್ಳಿ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೨೮.೨.೨೦೨೬)