ವಾಷಿಂಗ್ಟನ್: ಟ್ರಂಪ್ ಇದ್ದ ಕೊಠಡಿಯ ಹೊರಗೆ ಗುಂಡಿನ ದಾಳಿ!

ದುಷ್ಕರ್ಮಿಯಿಂದ 7 ಸುತ್ತು ಗುಂಡಿನ ದಾಳಿ, ಓರ್ವ ಭದ್ರತಾ ಸಿಬ್ಬಂದಿಗೆ ಗಾಯ

ವಾಷಿಂಗ್ಟನ್ (ಅಮೆರಿಕಾ) – ವಾಷಿಂಗ್ಟನ್‌ನ ಹಿಲ್ಟನ್ ಹೋಟೆಲ್‌ನಲ್ಲಿ ವಾರ್ಷಿಕ ‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್’ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಹಲವು ಹಿರಿಯ ನಾಯಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ನಡೆಯುತ್ತಿದ್ದ ಕೊಠಡಿಯ (‘ಬಾಲ್ ರೂಮ್’) ಹೊರಗೆ 31 ವರ್ಷದ ದಾಳಿಕೋರನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಏಪ್ರಿಲ್ 25ರ ರಾತ್ರಿ ಸ್ಥಳೀಯ ಕಾಲಮಾನ 8.40ಕ್ಕೆ ಈ ದಾಳಿ ನಡೆದಿದೆ. ದಾಳಿಕೋರ ಒಟ್ಟು 7 ಸುತ್ತು ಗುಂಡು ಹಾರಿಸಿದ್ದು, ಇದರಲ್ಲಿ ಓರ್ವ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ದಾಳಿಕೋರನನ್ನು ಬಂಧಿಸಲಾಗಿದೆ.

ಅಮೆರಿಕದ ಸಂವಿಧಾನದ ಮೇಲಿನ ದಾಳಿ! – ಟ್ರಂಪ್

ದಾಳಿಯ ಸುಮಾರು ಒಂದೂವರೆ ಗಂಟೆಯ ನಂತರ ಟ್ರಂಪ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. “ಇದು ಅಮೆರಿಕದ ಸಂವಿಧಾನದ ಮೇಲಿನ ದಾಳಿಯಾಗಿದೆ. ‘ಸೀಕ್ರೆಟ್ ಸರ್ವಿಸ್’ (ಅಧ್ಯಕ್ಷರ ಭದ್ರತಾ ಪಡೆ) ನನ್ನ ಪ್ರಾಣ ಉಳಿಸಿದೆ. ಗುಂಡೇಟು ತಗುಲಿದ ಅಧಿಕಾರಿ ಸುರಕ್ಷಿತವಾಗಿದ್ದಾರೆ,” ಎಂದು ಅವರು ಹೇಳಿದರು. ಘಟನೆಯ ಪ್ರತ್ಯಕ್ಷದರ್ಶಿ ಪತ್ರಕರ್ತೆ ಕ್ಯಾಟ್ಲಿನ್ ಕಾಲಿನ್ಸ್ ಮಾತನಾಡಿ, “ನಾವು ಹಿಲ್ಟನ್‌ನ ಬಾಲ್‌ರೂಮ್‌ನಲ್ಲಿದ್ದೆವು. ಗುಂಡಿನ ಸದ್ದು ಕೇಳಿದ ಕೆಲವೇ ನಿಮಿಷಗಳಲ್ಲಿ ಭದ್ರತಾ ಸಿಬ್ಬಂದಿ ಕೊಠಡಿಯನ್ನು ಸುತ್ತುವರೆದರು ಮತ್ತು ಮುಖ್ಯ ದಾರಿಯ ಮೂಲಕ ಒಳಗೆ ಧಾವಿಸಿ ಬಂದರು,” ಎಂದು ತಿಳಿಸಿದರು.

ದಾಳಿಯ ಹಿಂದೆ ಇರಾನ್ ಇರುವಂತೆ ತೋರುತ್ತಿಲ್ಲ! – ಟ್ರಂಪ್

“ದಾಳಿಕೋರನಿಗೂ ಇರಾನ್ ದೇಶಕ್ಕೂ ಯಾವುದೇ ನೇರ ಸಂಬಂಧವಿರುವಂತೆ ಕಾಣುತ್ತಿಲ್ಲ. ನನಗೂ ಹಾಗನ್ನಿಸುತ್ತಿಲ್ಲ; ಆದರೆ ಏನನ್ನೂ ಹೇಳಲು ಸಾಧ್ಯವಿಲ್ಲ. ನಮ್ಮ ತಂಡಗಳು ತನಿಖೆ ನಡೆಸುತ್ತಿದ್ದು, ಸತ್ಯ ಶೀಘ್ರದಲ್ಲೇ ಹೊರಬರಲಿದೆ,” ಎಂದು ಟ್ರಂಪ್ ಹೇಳಿದರು. ಇದುವರೆಗಿನ ಪ್ರಾಥಮಿಕ ತನಿಖೆಯಲ್ಲಿ ದಾಳಿಕೋರನಿಗೆ ಯಾವುದೇ ವಿದೇಶಿ ವ್ಯಕ್ತಿಗಳೊಂದಿಗೆ ಸಂಬಂಧವಿರುವುದು ಪತ್ತೆಯಾಗಿಲ್ಲ.

‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್’ ಎಂದರೇನು?

ಇದು ಮಾಧ್ಯಮ ಮತ್ತು ರಾಜಕೀಯ ಕ್ಷೇತ್ರದ ವಿಶೇಷ ವಾರ್ಷಿಕ ಕಾರ್ಯಕ್ರಮವಾಗಿದೆ. ವೈಟ್ ಹೌಸ್‌ನ ವರದಿ ಮಾಡುವ ಪತ್ರಕರ್ತರ ಸಂಘಟನೆಯಾದ ‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್’ ಇದನ್ನು ಆಯೋಜಿಸುತ್ತದೆ. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ತಮ್ಮ ಬಗ್ಗೆ, ವಿರೋಧ ಪಕ್ಷದವರ ಬಗ್ಗೆ ಮತ್ತು ಮಾಧ್ಯಮಗಳ ಬಗ್ಗೆ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾರೆ.

ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ! – ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ (X) ನಲ್ಲಿ ಪ್ರತಿಕ್ರಿಯಿಸಿ, “ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಇತರ ಅಧಿಕಾರಿಗಳ ನಿರಂತರ ಸುರಕ್ಷತೆ ಹಾಗೂ ಕ್ಷೇಮಕ್ಕಾಗಿ ನನ್ನ ಶುಭ ಹಾರೈಕೆಗಳನ್ನು ವ್ಯಕ್ತಪಡಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ ಮತ್ತು ಇಂತಹ ಹಿಂಸಾಚಾರವನ್ನು ನಿಸ್ಸಂದೇಹವಾಗಿ ಖಂಡಿಸಬೇಕು,” ಎಂದು ಹೇಳಿದ್ದಾರೆ.

ದಾಳಿಕೋರ ಯಾರು?

ದಾಳಿಕೋರನನ್ನು 31 ವರ್ಷದ ಶಿಕ್ಷಕ ಕೋಲ್ ಥಾಮಸ್ ಅಲೆನ್ ಎಂದು ಗುರುತಿಸಲಾಗಿದೆ. ಈತ ಕ್ಯಾಲಿಫೋರ್ನಿಯಾದ ಟಾರೆನ್ಸ್ ಪ್ರದೇಶದ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಶಿಕ್ಷಕನಾಗಿದ್ದಾನೆ. ಅಲ್ಲದೆ ‘ವಿಡಿಯೋ ಗೇಮ್ ಡೆವಲಪರ್’ ಆಗಿಯೂ ಕೆಲಸ ಮಾಡುತ್ತಿದ್ದಾನೆ. ಈತ ‘C2 ಎಜುಕೇಶನ್’ ಎಂಬ ಟೆಸ್ಟ್ ಪ್ರೆಪ್ ಮತ್ತು ಟ್ಯೂಟರಿಂಗ್ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದು, ಅಲ್ಲಿ ಅರೆಕಾಲಿಕ ಶಿಕ್ಷಕನಾಗಿದ್ದನು. ವಿಶೇಷವೆಂದರೆ ಡಿಸೆಂಬರ್ 2024 ರಲ್ಲಿ ಈತನಿಗೆ ‘ಟೀಚರ್ ಆಫ್ ದಿ ಮಂತ್’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅಲೆನ್ ಅಕ್ಟೋಬರ್ 2024 ರಲ್ಲಿ ಕಮಲಾ ಹ್ಯಾರಿಸ್ ಅವರ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕಾಗಿ 25 ಡಾಲರ್ ದೇಣಿಗೆ ನೀಡಿದ್ದನು. ಈತ ನೋಂದಾಯಿತ ‘ಡೆಮೋಕ್ರಾಟ್’ ಸದಸ್ಯ ಎಂದು ಹೇಳಲಾಗುತ್ತಿದೆ. ಅಲೆನ್ 2017 ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಇತ್ತೀಚೆಗೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಮಾಸ್ಟರ್ ಪದವಿ ಮುಗಿಸಿದ್ದಾನೆ.