ಯುದ್ಧವನ್ನು ಆರಂಭಿಸುವುದಿಲ್ಲ! – ಸ್ಪಷ್ಟಪಡಿಸಿದ ಟ್ರಂಪ್

ಚರ್ಚೆಗೆ ತೆರಳಲಿದ್ದ ಅಮೆರಿಕದ ಅಧಿಕಾರಿಗಳ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದ ಟ್ರಂಪ್ !

ವಾಷಿಂಗ್ಟನ್ (ಅಮೆರಿಕ) – ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಯು ಮತ್ತೊಮ್ಮೆ ವಿಫಲವಾಗಿದೆ. ಪಾಕಿಸ್ತಾನಕ್ಕೆ ಆಗಮಿಸಿದ್ದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಚಿ ನೇತೃತ್ವದ ನಿಯೋಗವು ಅಮೆರಿಕದ ಅಧಿಕಾರಿಗಳನ್ನು ಭೇಟಿಯಾಗದೆಯೇ ಮರಳಿದೆ. ಇದರಿಂದ ಆಕ್ರೋಶಗೊಂಡ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜ್ಯಾರೆಡ್ ಕುಶ್ನರ್ ಮತ್ತು ವಿಶೇಷ ದೂತ ಸ್ಟೀವ್ ವಿಟ್ಕಾಫ್ ರವರ ಪ್ರಸ್ತಾವಿತ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಈ ಕುರಿತು ಮಾತನಾಡಿದ ಟ್ರಂಪ್, ನಾನು ನಮ್ಮ ಅಧಿಕಾರಿಗಳ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದ್ದೇನೆ ಎಂದರೆ ಅದರರ್ಥ ನಾವು ಇರಾನ್ ಜೊತೆ ಮತ್ತೆ ಯುದ್ಧ ಆರಂಭಿಸುತ್ತೇವೆ ಎಂದಲ್ಲ. ಯುದ್ಧ ಆರಂಭಿಸುವ ಬಗ್ಗೆ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇರಾನ್ ಬಯಸಿದಾಗ ಚರ್ಚೆಗಾಗಿ ನಮ್ಮನ್ನು ಸಂಪರ್ಕಿಸಬಹುದು. ಆದರೆ ಇರಾನ್‌ ನಲ್ಲಿ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದರು.

ಪಾಕಿಸ್ತಾನ-ಇರಾನ್ ನಡುವೆ ೫ ಗಂಟೆಗಳ ಕಾಲ ಚರ್ಚೆ!

ಇದಕ್ಕೂ ಮೊದಲು, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ರವರು ಏಪ್ರಿಲ್ ೨೪ ರಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಚಿ ನೇತೃತ್ವದ ನಿಯೋಗದೊಂದಿಗೆ ಹೋಟೆಲೊಂದರಲ್ಲಿ ೫ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದರು. ಈ ವೇಳೆ ಇರಾನ್‌ ನ ಷರತ್ತುಗಳು ಮತ್ತು ಅಮೆರಿಕದ ಬೇಡಿಕೆಗಳ ಬಗ್ಗೆ ಇರಾನ್‌ ಗೆ ಇರುವ ಆಕ್ಷೇಪಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ರವರು ಪ್ರತಿಕ್ರಿಯಿಸಿ, ನಾವು ಒತ್ತಡ ಮತ್ತು ಬೆದರಿಕೆಗಳ ವಾತಾವರಣದಲ್ಲಿ ಅಮೆರಿಕದೊಂದಿಗೆ ಬಲವಂತದ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಟ್ರಂಪ್ ರವರು ಹಡಗುಗಳ ಸಂಚಾರದ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸುವ ಅಗತ್ಯವಿದೆ ಎಂದು ಪೆಜೆಶ್ಕಿಯಾನ್ ಅಭಿಪ್ರಾಯಪಟ್ಟಿದ್ದಾರೆ.