ಗೋಹತ್ಯೆಯಿಂದ ಸಮಾಜದಲ್ಲಿ ತೀವ್ರ ಭಾವನೆಗಳು ಉಂಟಾಗುತ್ತವೆ! – ಅಲಹಾಬಾದ್ ಹೈಕೋರ್ಟ್

ಆರೋಪಿಯ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕೈಗೊಂಡ ಕ್ರಮ ಸರಿಯೆಂದು ಎತ್ತಿ ಹಿಡಿದ ನ್ಯಾಯಾಲಯ!

ನವದೆಹಲಿ – ಗೋಹತ್ಯೆಯು ಸಮಾಜದಲ್ಲಿ ತೀವ್ರ ಭಾವನೆಗಳನ್ನು ಕೆರಳಿಸುವ ಮತ್ತು ಹಿಂಸಾತ್ಮಕ ಪ್ರತಿಕ್ರಿಯೆಗಳಿಗೆ ಕಾರಣವಾಗುವ ವಿಷಯವಾಗಿದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಇತ್ತೀಚಿನ ವಿಚಾರಣೆಯೊಂದರಲ್ಲಿ ಅಭಿಪ್ರಾಯಪಟ್ಟಿದೆ. ಉಚ್ಚ ನ್ಯಾಯಾಲಯದ ಈ ತೀರ್ಪಿನಿಂದಾಗಿ, ಗೋಹತ್ಯೆ ಮತ್ತು ಅದರಿಂದ ಉಂಟಾಗುವ ಸಾಮಾಜಿಕ ಉದ್ವಿಗ್ನತೆಯ ಪ್ರಕರಣಗಳಲ್ಲಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲು ಆಡಳಿತ ಮಂಡಳಿಗೆ ಹೆಚ್ಚಿನ ಬಲ ಸಿಕ್ಕಂತಾಗಿದೆ.

ಮಾರ್ಚ್ 15, 2025 ರಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಹೋಳಿ ಹಬ್ಬದ ದಿನದಂದು ಹೊಲವೊಂದರಲ್ಲಿ ಗೋವಂಶದ ಅವಶೇಷಗಳು ಪತ್ತೆಯಾಗಿದ್ದವು. ಈ ಘಟನೆಯಿಂದ ಆ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಪೊಲೀಸರು ಈ ಪ್ರಕರಣದಲ್ಲಿ ಕೆಲವು ಆರೋಪಿಗಳನ್ನು ಬಂಧಿಸಿ ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ಕ್ರಮ ಕೈಗೊಂಡಿದ್ದರು. ಈ ಪೈಕಿ ಒಬ್ಬ ಆರೋಪಿಯು ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, “ಇದು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗಿದ್ದು, ಈ ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದು ತಪ್ಪು” ಎಂದು ವಾದಿಸಿದ್ದನು. ನ್ಯಾಯಾಲಯವು ಈ ವಾದವನ್ನು ತಿರಸ್ಕರಿಸಿತು.

ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆ!

ಗೋಹತ್ಯೆ ಮಾಡುವುದರಿಂದ ಸಮಾಜದ ಒಂದು ದೊಡ್ಡ ವರ್ಗದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದರಿಂದ ಸಾರ್ವಜನಿಕ ಶಾಂತಿ ಭಂಗವಾಗುವ ದೊಡ್ಡ ಅಪಾಯವಿರುತ್ತದೆ. ಈ ವಿಷಯವು ಕೇವಲ ಸಾಮಾನ್ಯ ಅಪರಾಧಕ್ಕೆ ಸೀಮಿತವಾಗಿರದೆ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತದ್ದಾಗಿದೆ; ಆದ್ದರಿಂದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕೈಗೊಂಡ ಕ್ರಮವು ಸರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಸಂವಿಧಾನದ 48ನೇ ವಿಧಿಯು ಗೋವಂಶದ ರಕ್ಷಣೆ ಮತ್ತು ಸಂವರ್ಧನೆಗೆ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡುತ್ತದೆ ಎಂಬ ಅಂಶವನ್ನೂ ವಿಚಾರಣೆಯ ಸಂದರ್ಭದಲ್ಲಿ ಒತ್ತಿಹೇಳಲಾಯಿತು.

ಕಾನೂನು ಮತ್ತು ಸಾಮಾಜಿಕ ಪರಿಣಾಮಗಳು!

ಕಾನೂನು ತಜ್ಞರ ಪ್ರಕಾರ, ನ್ಯಾಯಾಲಯದ ಈ ಟಿಪ್ಪಣಿಯು ಆಡಳಿತ ಮಂಡಳಿಗೆ ಹೆಚ್ಚಿನ ಜಾಗರೂಕತೆಯಿಂದ ಇರಲು ಸೂಚನೆ ನೀಡುತ್ತದೆ. ವಿಶೇಷವಾಗಿ ಹಬ್ಬ ಹರಿದಿನಗಳ ಸಮಯದಲ್ಲಿ ಇಂತಹ ಘಟನೆಗಳಿಂದ ಸಾಮಾಜಿಕ ಸಾಮರಸ್ಯ ಕೆಡದಂತೆ ತಡೆಯಲು ಈ ಟಿಪ್ಪಣಿ ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ, ಸಾಮಾಜಿಕ ಭಾವನೆಗಳನ್ನು ಪರಿಗಣಿಸುವಾಗ ಕಾನೂನಿನ ಆಳ್ವಿಕೆಯನ್ನು ಎತ್ತಿಹಿಡಿಯುವುದು ಆಡಳಿತದ ಪರಮೋಚ್ಚ ಜವಾಬ್ದಾರಿಯಾಗಿದೆ ಎಂದು ನ್ಯಾಯಾಂಗವು ಸೂಚಿಸಿದೆ.