೨೦೦೬ ರ ಬಾಂಬ್ ಸ್ಫೋಟದ ಪ್ರಕರಣವು ಸ್ಥಗಿತ ಸ್ಥಿತಿಯಲ್ಲಿದೆ ! – ಮುಂಬಯಿ ಉಚ್ಚ ನ್ಯಾಯಾಲಯ

  • ರಾಷ್ಟ್ರೀಯ ತನಿಖಾ ಸಂಸ್ಥೆಯು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಮತ್ತು ಕೇಂದ್ರ ತನಿಖಾ ದಳದ ಪುರಾವೆಗಳನ್ನು ನಿರ್ಲಕ್ಷಿಸಿದೆ

  • ನ್ಯಾಯಾಲಯವು ನ್ಯಾಯಾಂಗ ವಿವೇಚನೆಯನ್ನು ಬಳಿಸಿಲ್ಲ ಎಂದು ಅಭಿಪ್ರಾಯ

ಮಾಲೆಗಾಂವ – ಮುಂಬಯಿ ಉಚ್ಚ ನ್ಯಾಯಾಲಯವು ಇಲ್ಲಿ ೨೦೦೬ ರಲ್ಲಿ ನಡೆದ ಬಾಂಬ್ ಸ್ಫೋಟದ ವಿಚಾರಣೆಯು ಸಂಪೂರ್ಣವಾಗಿ ಸ್ಥಗಿತಗೊಂಡ ಸ್ಥಿತಿಯಲ್ಲಿದೆ ಎಂದು ಈ ಪ್ರಕರಣದ ನಾಲ್ವರು ಆರೋಪಿಗಳನ್ನು ದೋಷಮುಕ್ತಗೊಳಿಸುವ ಸಂದರ್ಭದಲ್ಲಿ ತನ್ನ ತೀರ್ಪಿನಲ್ಲಿ ದಾಖಲಿಸಿದೆ. ‘ಸಂಬಂಧಿತ ಸಂಸ್ಥೆಗಳು ಸಂಗ್ರಹಿಸಿದ ಪುರಾವೆಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ತನಿಖೆಯಲ್ಲಿನ ಇಂತಹ ವ್ಯತ್ಯಾಸಗಳನ್ನು ವಿಶೇಷ ಎನ್‌. ಐ. ಎ. ನ್ಯಾಯಾಲಯವೂ ಕೂಡ ನಿರ್ಲಕ್ಷಿಸಿದೆ’, ಎಂಬ ಗಂಭೀರವಾದ ನಿರೀಕ್ಷಣೆಯನ್ನು ಉಚ್ಚ ನ್ಯಾಯಾಲಯವು ನೋಂದಾಯಿಸಿದೆ.

ಸೆಪ್ಟೆಂಬರ್ ೮ , ೨೦೦೬ ರಂದು ನಾಸಿಕ್ ಜಿಲ್ಲೆಯ ಮಾಲೆಗಾಂವ್‌ ನಲ್ಲಿ ೪ ಬಾಂಬ್ ಸ್ಫೋಟಗಳು ನಡೆದವು. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎ. ಟಿ. ಎಸ್.) ಮತ್ತು ಕೇಂದ್ರೀಯ ತನಿಖಾ ದಳಗಳು ೯ ಜನ ಮುಸ್ಲಿಂ ಯುವಕರನ್ನು ಬಂಧಿಸಿ ಅವರ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದವು; ಆದರೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಅವರಿಗೆ ‘ಕ್ಲೀನ್ ಚೀಟ್’ (ದೋಷಮುಕ್ತ) ನೀಡಿ ರಾಜೇಂದ್ರ ಚೌಧರಿ, ಧನಸಿಂಗ, ಮನೋಹರ ನರವಾರಿಯಾ ಮತ್ತು ಲೋಕೇಶ ಶರ್ಮಾ ಎಂಬ ೪ ಜನ ಆರೋಪಿಗಳನ್ನು ಬಂಧಿಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು.

ಈ ಬಗ್ಗೆ ನ್ಯಾಯಪೀಠವು ಹೀಗೆ ಹೇಳಿದೆ,

೧. ಭಯೋತ್ಪಾದನಾ ನಿಗ್ರಹ ದಳದ ತನಿಖೆಯಲ್ಲಿ ೯ ಜನ ಮುಸ್ಲಿಂ ಆರೋಪಿಗಳು ಸ್ಫೋಟದ ಸಂಚು ರೂಪಿಸಿದ್ದರ ಬಗ್ಗೆ ಸ್ಪಷ್ಟ ವಿವರಣೆಯಿತ್ತು. ಮಣ್ಣಿನ ಮಾದರಿಗಳು ಮತ್ತು ೯ ಆರೋಪಿಗಳಲ್ಲಿ ಒಬ್ಬನ ಗೋದಾಮಿನಲ್ಲಿ ಸಿಕ್ಕ ಮಾದರಿಗಳಲ್ಲಿ ಆರ್.ಡಿ.ಎಕ್ಸ್.ನ ಅಂಶಗಳನ್ನು ದಳವು ಪತ್ತೆಹಚ್ಚಿತ್ತು; ಆದರೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಆ ತನಿಖೆ ಮತ್ತು ದೋಷಾರೋಪ ಪಟ್ಟಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು.

೨. ಈ ೪ ಜನ ಆರೋಪಿಗಳು ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳುವ ಯಾವುದೇ ಸಾಕ್ಷ್ಯಗಳಿರಲಿಲ್ಲ. ಹಾಗಿರುವಾಗ ರಾಷ್ಟ್ರೀಯ ತನಿಖಾ ಸಂಸ್ಥೆಯು ಹೆಚ್ಚಿನ ತನಿಖೆ ನಡೆಸಿ ಪುರಾವೆಗಳನ್ನು ಏಕೆ ಸಂಗ್ರಹಿಸಲಿಲ್ಲ?, ಎಂಬುದು ನಿಗೂಢ ಪ್ರಶ್ನೆಯಾಗಿದೆ.

೩. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ ದೋಷಾರೋಪ ಪಟ್ಟಿಗಳಲ್ಲಿ ಪರಸ್ಪರ ವಿರೋಧಾಭಾಸದ ಸಂಗತಿಗಳನ್ನು ಮಂಡಿಸಲಾಯಿತು. ಪರಿಣಾಮವಾಗಿ ಈ ಪ್ರಕರಣವು ಪ್ರಸ್ತುತ ಸ್ಥಗಿತಗೊಂಡ ಸ್ಥಿತಿಯಲ್ಲಿದೆ.

೪. ಕೊಲೆಯಂತಹ ಗಂಭೀರ ಅಪರಾಧದಲ್ಲಿ ದೋಷಾರೋಪಗಳನ್ನು ನಿರ್ಧರಿಸುವಾಗ ಕಿರಿಯ ನ್ಯಾಯಾಲಯವು ಸಾಕಷ್ಟು ಪುರಾವೆಗಳಿವೆಯೇ ಅಥವಾ ಇಲ್ಲವೇ?, ಎಂಬುದನ್ನು ಜಾಗರೂಕತೆಯಿಂದ ಪರಿಶೀಲಿಸುವುದು ಅತ್ಯಗತ್ಯ; ಆದರೆ ತನಿಖಾ ಸಂಸ್ಥೆಯು ಮಂಡಿಸಿದ ಸೂತ್ರಗಳಲ್ಲಿನ ಅಸಂಗತತೆಗಳನ್ನು ನಿರ್ಲಕ್ಷಿಸಿ, ೪ ಆರೋಪಿಗಳ ಮೇಲಿನ ಆರೋಪಗಳು ಕೇವಲ ಸಂದರ್ಭೋಚಿತ ಪುರಾವೆಗಳ ಮೇಲೆ ಆಧಾರಿತವಾಗಿದ್ದರೂ ನ್ಯಾಯಾಲಯವು ಅವುಗಳನ್ನು ಖಚಿತಪಡಿಸಿತು.

೫. ನ್ಯಾಯಾಲಯವು ನ್ಯಾಯಿಕ ವಿವೇಕವನ್ನು ಬಳಸಿಲ್ಲ. ಆರೋಪಿಗಳ ಮೇಲೆ ವಿಚಾರಣೆ ನಡೆಸಲು ಸಾಕಷ್ಟು ಪುರಾವೆಗಳೇ ಇಲ್ಲದಿರುವುದರಿಂದ ಆರೋಪ ಖಚಿತಪಡಿಸುವ ಆದೇಶವನ್ನು ರದ್ದುಗೊಳಿಸಿ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗುತ್ತಿದೆ.