ಛತ್ರಪತಿ ಶಿವಾಜಿ ಮಹಾರಾಜರನ್ನು ಏಕವಚನದಲ್ಲಿ ಸಂಬೋಧಿಸುವುದನ್ನು ಸಹಿಸುವುದಿಲ್ಲ! – ಶಾಸಕ ಸಂಜಯ ಗಾಯಕವಾಡ, ಶಿವಸೇನೆ

ಕಾ. ಗೋವಿಂದ ಪಾನಸರೆ ಅವರ ‘ಶಿವಾಜಿ ಕೋಣ ಹೋತಾ?’ ಪುಸ್ತಕದ ಪ್ರಕಾಶಕರಿಗೆ ಛೀಮಾರಿ!

ಬುಲ್ಡಾಣಾ – ಹಿಂದವಿ ಸ್ವರಾಜ್ಯದ ಸಂಸ್ಥಾಪಕರು ಮತ್ತು ಹಿಂದೂಗಳ ಶ್ರದ್ಧಾಕೇಂದ್ರವಾಗಿರುವ ಛತ್ರಪತಿ ಶಿವಾಜಿ ಮಹಾರಾಜರನ್ನು ಏಕವಚನದಲ್ಲಿ ಉಲ್ಲೇಖಿಸುವ ಮೂಲಕ ಅವರಿಗೆ ಅಪಮಾನ ಮಾಡಲಾಗಿದೆ. ಸಾಮ್ಯವಾದಿ ವಿಚಾರಧಾರೆಯುಳ್ಳ ದಿವಂಗತ ನಾಯಕ ಕಾ. ಗೋವಿಂದ ಪಾನಸರೆ ಅವರು ೩೭ ವರ್ಷಗಳ ಹಿಂದೆ ಬರೆದ ‘ಶಿವಾಜಿ ಕೋಣ ಹೋತಾ?’ (ಶಿವಾಜಿ ಯಾರು?) ಎಂಬ ಪುಸ್ತಕದ ವಿವಾದಾತ್ಮಕ ಶೀರ್ಷಿಕೆಯ ಕುರಿತು ಇಲ್ಲಿನ ಶಿವಸೇನೆಯ ಶಾಸಕ ಶ್ರೀ.. ಸಂಜಯ ಗಾಯಕವಾಡ ಅವರು ಪ್ರಕಾಶಕ ಪ್ರಶಾಂತ ಅಂಬಿ ಅವರಿಗೆ ತೀವ್ರ ಶಬ್ದಗಳಿಂದ ಛೀಮಾರಿ ಹಾಕಿದರು. ‘ಛತ್ರಪತಿ ಶಿವಾಜಿ ಮಹಾರಾಜರನ್ನು ಏಕವಚನದಲ್ಲಿ ಉಲ್ಲೇಖಿಸುವುದನ್ನು ಸಹಿಸುವುದಿಲ್ಲ. ಅವರನ್ನು ಅಗೌರವಿಸುವವರಿಗೆ ಮತ್ತು ಏಕವಚನದಲ್ಲಿ ಕರೆಯುವವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಅವರು ತಮ್ಮ ನಿಲುವನ್ನು ವ್ಯಕ್ತಪಡಿಸಿದರು. ಶ್ರೀ.. ಗಾಯಕವಾಡ ಅವರು ವಿಡಿಯೋ ಒಂದನ್ನು ಬಿಡುಗಡೆ ಮಾಡುವ ಮೂಲಕ ಈ ವಿಚಾರವನ್ನು ಮಂಡಿಸಿದ್ದಾರೆ.

ನಿಖರವಾಗಿ ಏನಿದು ಪ್ರಕರಣ?

‘ವಿಶ್ವ ಪುಸ್ತಕ ದಿನ’ದ ನಿಮಿತ್ತ ಈ ಪುಸ್ತಕದ ವಿಷಯವು ಪುನಃ ಮುನ್ನೆಲೆಗೆ ಬಂದಿದೆ. ಶಿವಸೇನೆಯ ಶಾಸಕ ಶ್ರೀ. ಸಂಜಯ ಗಾಯಕವಾಡ ಅವರು ಪ್ರಕಾಶಕರನ್ನು ಸಂಪರ್ಕಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “‘ಶಿವಾಜಿ ಕೋಣ ಹೋತಾ?’ ಈ ಪುಸ್ತಕವನ್ನು ೩೭ ವರ್ಷಗಳ ಹಿಂದೆಯೇ ಬರೆದಿದ್ದರೂ ಸಹ ಪುಸ್ತಕದ ಶೀರ್ಷಿಕೆಯಲ್ಲಿ ಮಹಾರಾಜರ ಹೆಸರನ್ನು ಏಕವಚನದಲ್ಲಿ ಏಕೆ ಬಳಸಲಾಗಿದೆ? ಛತ್ರಪತಿ ಶಿವಾಜಿ ಮಹಾರಾಜರನ್ನು ಏಕವಚನದಲ್ಲಿ ಉಲ್ಲೇಖಿಸಲು ಗೋವಿಂದ ಪಾನಸರೆ ಯಾರು? ನನಗೆ ಈ ಪುಸ್ತಕವನ್ನು ಓದುವ ಅಗತ್ಯವಿಲ್ಲ. ನಿಮ್ಮಂತಹ ಜನರು ಛತ್ರಪತಿ ಶಿವಾಜಿ ಮಹಾರಾಜರನ್ನು ಏಕವಚನದಲ್ಲಿ ಉಲ್ಲೇಖಿಸುತ್ತೀರಿ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಪ್ರಕಾಶಕ ಪ್ರಶಾಂತ ಅಂಬಿ ಪ್ರತಿಕ್ರಿಯಿಸಿ, “‘ಶಿವಾಜಿ ಕೋಣ ಹೋತಾ?’ ಈ ಪುಸ್ತಕವನ್ನು ನಾನು ಬರೆದಿಲ್ಲ, ಗೋವಿಂದ ಪಾನಸರೆ ಬರೆದಿದ್ದಾರೆ. ಇದು ೧೯೮೮ ರಲ್ಲಿ ಪ್ರಕಟವಾಗಿತ್ತು. ಈ ಪುಸ್ತಕದಲ್ಲಿ ಶಿವರಾಯರಿಗೆ ಅಪಮಾನ ಮಾಡುವ ಯಾವುದೇ ಉದ್ದೇಶವಿಲ್ಲ, ನೀವು ಮೊದಲು ಆ ಪುಸ್ತಕವನ್ನು ಓದಿ,” ಎಂದರು.

ಆದಾಗ್ಯೂ, “ಮಹಾರಾಜರ ಸನ್ಮಾನಕ್ಕಿಂತ ಶ್ರೇಷ್ಠವಾದುದು ಇನ್ನೊಂದಿಲ್ಲ. ಛತ್ರಪತಿ ಶಿವಾಜಿ ಮಹಾರಾಜರ ಗೌರವಕ್ಕಾಗಿ ನಾವು ಯಾವುದೇ ಪರಿಣಾಮಗಳನ್ನು ಎದುರಿಸಲು ಸಿದ್ಧರಿದ್ದೇವೆ,” ಎಂದು ಹೇಳುತ್ತಾ ಶಾಸಕ ಗಾಯಕವಾಡ ಅವರು ಪ್ರಕಾಶಕರಿಗೆ ಕಠಿಣ ಶಬ್ದಗಳಲ್ಲಿ ಎಚ್ಚರಿಕೆ ನೀಡಿದರು.

ಶಾಸಕ ಗಾಯಕವಾಡ ಅವರ ಹೇಳಿಕೆಗೆ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಹರ್ಷವರ್ಧನ ಸಪಕಾಳ ಕಿಡಿ!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಹರ್ಷವರ್ಧನ ಸಪಕಾಳ ಅವರು ಶಾಸಕ ಗಾಯಕವಾಡ ಅವರ ವಿರುದ್ಧ ಟೀಕೆ ಮಾಡಿದ್ದಾರೆ. “ಗಾಯಕವಾಡ ಅವರು ಜಿಲ್ಲೆಯ ಹೆಸರನ್ನು ಅಪಕೀರ್ತಿಗೊಳಿಸಲು ಪಣ ತೊಟ್ಟಿದ್ದಾರೆ. ಜನಪ್ರತಿನಿಧಿಯೊಬ್ಬರು ಇಂತಹ ಭಾಷೆ ಬಳಸುವುದು ಗಂಭೀರ ವಿಷಯವಾಗಿದೆ. ಛತ್ರಪತಿ ಶಿವರಾಯರ ಮೌಲ್ಯಗಳಿಗೆ ಧಕ್ಕೆ ತರುವ ಕೆಲಸ ಇದರಿಂದ ಆಗುತ್ತಿದೆ,” ಎಂದರು. (ಶಿವಸೇನೆಯ ಶಾಸಕ ಶ್ರೀ. ಸಂಜಯ ಗಾಯಕವಾಡ ಅವರ ಪ್ರತಿಷ್ಠೆಗೆ ಕಳಂಕ ತರುವ ಪ್ರಯತ್ನ ಇದಾಗಿದೆ. ಧರ್ಮಕ್ಕಾಗಿ ಆಕ್ರಮಣಕಾರಿಯಾಗುವ ಜನಪ್ರತಿನಿಧಿಯನ್ನು ‘ಅನರ್ಹ’ ಎಂದು ಘೋಷಿಸುವುದು ಕಾಂಗ್ರೆಸ್ಸಿನ ಹಳೆಯ ತಂತ್ರವಾಗಿದೆ. ಯಾರು ಛತ್ರಪತಿ ಶಿವಾಜಿ ಮಹಾರಾಜರ ಸ್ವರಾಜ್ಯದ ಮೂಲ ವಿಚಾರಧಾರೆಯನ್ನು ಬಿಟ್ಟು ಕೇವಲ ಮತಗಳಿಗಾಗಿ ಓಲೈಕೆ ಮಾಡುತ್ತಾರೋ, ಅವರಿಗೆ ಮಹಾರಾಜರ ಗೌರವದ ಮೌಲ್ಯ ಹೇಗೆ ತಿಳಿಯಲು ಸಾಧ್ಯ? – ಸಂಪಾದಕರು)

“ಪಾನಸರೆ ಅವರಿಗೆ ಏನಾಯಿತೋ ಅದನ್ನೇ ನಿಮಗೂ ಮಾಡುತ್ತೇವೆ ಎಂದು ಗಾಯಕವಾಡ ಬೆದರಿಕೆ ಹಾಕಿದ್ದಾರೆ. ಈ ಹೇಳಿಕೆಯ ಬಗ್ಗೆ ಆಳವಾದ ತನಿಖೆಯಾಗಬೇಕು,” ಎಂದು ಸಪಕಾಳ ಒತ್ತಾಯಿಸಿದರು. (ಪುಸ್ತಕದ ಮೂಲಕ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸದ ವಿಕೃತೀಕರಣದ ಪ್ರಯತ್ನ ನಡೆದಾಗ ಅದರ ಬಗ್ಗೆ ಚಕಾರವೆತ್ತದ ಸಪಕಾಳ, ಪುಸ್ತಕದ ಶೀರ್ಷಿಕೆಯಲ್ಲಿ ಮಹಾರಾಜರಿಗೆ ಆದ ಅಗೌರವದ ಬಗ್ಗೆ ಏಕೆ ಸುಮ್ಮನಿದ್ದಾರೆ? – ಸಂಪಾದಕರು)

‘ಕಾಮ್ರೇಡ್ ಗೋವಿಂದ್ ಪನ್ಸಾರೆ ಅವರ ಪುಸ್ತಕವನ್ನು ಬುಲ್ಡಾಣಾದಲ್ಲಿ ಬಹಿರಂಗವಾಗಿ ಓದುತ್ತೇವೆ!’(ಅಂತೆ) – ನ್ಯಾಯವಾದಿ ಅಸೀಮ್ ಸರೋದೆ

ಪುಣೆ – ‘ಕಾ. ಗೋವಿಂದ್ ಪನ್ಸಾರೆ ಅವರು ಬರೆದ ‘ಶಿವಾಜಿ ಕೋಣ ಹೋತಾ’ (ಶಿವಾಜಿ ಯಾರು) ಎಂಬ ವಿವಾದಾತ್ಮಕ ಪುಸ್ತಕವನ್ನು ಬುಲ್ಡಾಣಾದಲ್ಲಿ ಬಹಿರಂಗವಾಗಿ ಓದಲಾಗುವುದು. ಶಿವಸೇನೆಯ ಶಾಸಕ ಶ್ರೀ. ಸಂಜಯ ಗಾಯಕ್ವಾಡ್ ಏನು ಮಾಡುತ್ತಾರೆಂದು ನೋಡೋಣ’, ಎಂದು ನ್ಯಾಯವಾದಿ ಅಸೀಮ್ ಸರೋದೆ ಹೇಳಿಕೆ ನೀಡಿದ್ದಾರೆ. ಶಾಸಕ ಗಾಯಕ್ವಾಡ್ ಅವರ ವಿರುದ್ಧ ಶೀಘ್ರದಲ್ಲೇ ಪೊಲೀಸರಿಗೆ ದೂರು ದಾಖಲಿಸುವುದಾಗಿಯೂ ಅವರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ಸಮಾಜದಲ್ಲಿ ವೈಮನಸ್ಸು ಮೂಡಿಸಲು ಇಂತಹ ವಿಧ್ವಂಸಕ ಪ್ರವೃತ್ತಿಯವರು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದರೆ, ಕಾನೂನು-ಸುವ್ಯವಸ್ಥೆಯನ್ನು ಕಾಪಾಡಲು ಆಡಳಿತ ಮಂಡಳಿಯು ತಕ್ಷಣವೇ ಅದರ ಮೇಲೆ ನಿಷೇಧ ಹೇರಬೇಕು!
  • ಹಿಂದೂಗಳ ವಿರುದ್ಧ ಎಲ್ಲಾ ಪ್ರಗತಿಪರರು, ಕಮ್ಯುನಿಸ್ಟರು ಮತ್ತು ಹಿಂದೂ-ದ್ವೇಷಿಗಳು ಒಂದಾಗುತ್ತಿದ್ದಾರೆ ಎಂಬುದನ್ನು ಅರಿತು, ಹಿಂದೂಗಳೂ ಸಂಘಟಿತರಾಗುವುದು ಅತ್ಯಗತ್ಯ!