ಕೆಲವು ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ತುಂಬಾ ಕಡಿಮೆ ಆಗುತ್ತದೆ. ಒಂದೆರಡು ದಿನಗಳಲ್ಲೇ ಮುಟ್ಟು ನಿಂತು ಹೋಗುತ್ತದೆ ಅಥವಾ ರಕ್ತದ ಕೇವಲ ಕಲೆಗಳು ಕಾಣಿಸಿಕೊಳ್ಳುತ್ತವೆ. ಅನೇಕ ಬಾರಿ ಇದರೊಂದಿಗೆ ಮುಟ್ಟು ತಡವಾಗಿ ಬರುವುದು, ಹೊಟ್ಟೆಯಲ್ಲಿ ಜಡತ್ವ, ನೋವು ಅಥವಾ ಮಾನಸಿಕ ಅಸ್ವಸ್ಥತೆ ಕಂಡುಬರುತ್ತದೆ. ಬಹಳಷ್ಟು ಮಹಿಳೆಯರು ಈ ಸಮಸ್ಯೆಯನ್ನು ಗಂಭೀರವಲ್ಲ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ; ಆದರೆ ಆಯುರ್ವೇದದ ದೃಷ್ಟಿಯಿಂದ ಕಡಿಮೆ ರಕ್ತಸ್ರಾವವಾಗುವುದು ದೇಹದಲ್ಲಿನ ಅಸಮತೋಲನದ ಮಹತ್ವದ ಲಕ್ಷಣವಾಗಿದೆ. ಆಯುರ್ವೇದದಲ್ಲಿ ಈ ಸ್ಥಿತಿಯನ್ನು ‘ಅಲ್ಪ ಆರ್ತವ’ ಅಥವಾ ‘ಕ್ಷೀಣಾರ್ತವ’ ಎಂದು ಕರೆಯಲಾಗುತ್ತದೆ. (ಲೇಖನ ೪)

೧. ಕಡಿಮೆ ರಕ್ತಸ್ರಾವದ ಮುಟ್ಟು ಬರುವುದರ ಹಿಂದಿನ ಕಾರಣಗಳು
ಆಯುರ್ವೇದದ ಪ್ರಕಾರ, ಮುಟ್ಟು ಸರಿಯಾದ ಪ್ರಮಾಣದಲ್ಲಿ ಆಗಲು ವಾತ, ಪಿತ್ತ ಮತ್ತು ಕಫ ಎಂಬ ಮೂರು ದೋಷಗಳ ಸಮತೋಲನ ಹಾಗೆಯೇ ರಕ್ತಧಾತು ಮತ್ತು ರಸಧಾತುಗಳ ಸರಿಯಾದ ಪೋಷಣೆ ಆವಶ್ಯಕವಾಗಿರುತ್ತದೆ. ಕಡಿಮೆ ರಕ್ತಸ್ರಾವದ ಮುಟ್ಟಿನಲ್ಲಿ ಮುಖ್ಯವಾಗಿ ವಾತದೋಷ ಅಥವಾ ಕಫದೋಷ ಹೆಚ್ಚಿರುವುದು ಕಂಡುಬರುತ್ತದೆ. ಅತಿಯಾದ ಉಪವಾಸ, ಅತೀ ಕಡಿಮೆ ಆಹಾರ ಸೇವನೆ, ವೇಗವಾಗಿ ತೂಕ ಇಳಿಸಿಕೊಳ್ಳುವುದು. ತಣ್ಣನೆಯ ಮತ್ತು ಒಣ ಪದಾರ್ಥಗಳ ಅತಿಯಾದ ಸೇವನೆ, ನಿರಂತರ ಒತ್ತಡ, ಚಿಂತೆ, ಭಯ ಅಥವಾ ಹಾರ್ಮೋನುಗಳ ಅಸಮತೋಲನದಿಂದ ವಾತ ಕೆಟ್ಟು ರಕ್ತಸ್ರಾವ ಕಡಿಮೆಯಾಗುತ್ತದೆ. ಕೆಲವೊಮ್ಮೆ ಕಫದೋಷ ಹೆಚ್ಚಾಗುವುದರಿಂದ ದೇಹದಲ್ಲಿ ಜಡತ್ವ ಉಂಟಾಗಿ ಮುಟ್ಟಿನ ನೈಸರ್ಗಿಕ ಪ್ರವೃತ್ತಿ ಮಂದವಾಗುತ್ತದೆ. ಈ ಸಮಸ್ಯೆ ದೀರ್ಘಕಾಲ ಮುಂದುವರಿದರೆ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇಂತಹ ಮಹಿಳೆಯರಲ್ಲಿ ಆಯಾಸ, ದೌರ್ಬಲ್ಯ, ಚರ್ಮದ ಶುಷ್ಕತೆ, ಕೂದಲು ಉದುರುವುದು ಅಥವಾ ಗರ್ಭಧರಿಸುವಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆಯುರ್ವೇದವು ಈ ಸಮಸ್ಯೆಯನ್ನು ಕೇವಲ ಗರ್ಭಾಶಯಕ್ಕೆ ಮಾತ್ರ ಸೀಮಿತಗೊಳಿಸದೆ, ಇಡೀ ದೇಹದ ಪೋಷಣೆ, ಜೀರ್ಣಶಕ್ತಿ ಮತ್ತು ಮಾನಸಿಕ ಸ್ಥಿತಿಯನ್ನು ಒಟ್ಟಾಗಿ ಪರಿಗಣಿಸುತ್ತದೆ.
೨. ಆಯುರ್ವೇದ ಚಿಕಿತ್ಸೆ

ಆಯುರ್ವೇದ ಚಿಕಿತ್ಸೆಯ ಮುಖ್ಯ ಉದ್ದೇಶ ವಾತ ಮತ್ತು ಕಫ ದೋಷಗಳನ್ನು ಶಮನಗೊಳಿಸುವುದು ಹಾಗೂ ರಕ್ತಧಾತುವನ್ನು ವೃದ್ಧಿಸಿ ಮುಟ್ಟಿನ ನೈಸರ್ಗಿಕ ಚಕ್ರವನ್ನು ಸುಧಾರಿಸುವುದಾಗಿದೆ. ಶತಾವರಿ, ಅಶ್ವಗಂಧ, ಕುಮಾರಿ (ಲೋಳೆಸರ), ದಶಮೂಲದಂತಹ ಔಷಧಿಗಳು ಈ ಸ್ಥಿತಿಯಲ್ಲಿ ಉಪಯುಕ್ತವಾಗಿರುತ್ತವೆ. ‘ಕುಮಾರಿ ಆಸವ’ ಅಥವಾ ‘ಶತಾವರಿ ಕಲ್ಪ’ದಂತಹ ಔಷಧಿಗಳನ್ನು ವೈದ್ಯರ ಸಲಹೆಯಂತೆ ಸೇವಿಸಿದರೆ ಮುಟ್ಟಿನ ಪ್ರಮಾಣ ಮತ್ತು ನಿಯಮಿತವಾಗಿ ಮುಟ್ಟು ಬರುವುದು ಸುಧಾರಿಸುತ್ತದೆ; ಆದರೆ ಪ್ರತಿಯೊಬ್ಬ ಮಹಿಳೆಯ ಪ್ರಕೃತಿ ಬೇರೆ ಬೇರೆ ಇರುವುದರಿಂದ ಚಿಕಿತ್ಸೆ ವೈಯಕ್ತಿಕವಾಗಿರುವುದು ಆವಶ್ಯಕವಾಗಿರುತ್ತದೆ.
೩. ಮನೆಮದ್ದು ಮತ್ತು ಯೋಗಾಸನ ಇವುಗಳ ಉಪಾಯ
ಮನೆಯ ಮಟ್ಟದಲ್ಲಿ ಆಹಾರ ಮತ್ತು ದಿನಚರಿಯಲ್ಲಿ ಯೋಗ್ಯ ಬದಲಾವಣೆ ಗಳನ್ನು ಮಾಡಿಕೊಂಡರೆ, ಕಡಿಮೆ ರಕ್ತಸ್ರಾವದ ಮುಟ್ಟಿನ ಸಮಸ್ಯೆಯಲ್ಲಿ ಸುಧಾರಣೆ ಕಂಡುಬರುತ್ತದೆ. ಪೌಷ್ಟಿಕ, ಉಷ್ಣ ಮತ್ತು ಸ್ನಿಗ್ಧ (ಜಿಡ್ಡಿನಂಶವಿರುವ) ಆಹಾರವನ್ನು ಸೇವಿಸಬೇಕು. ತುಪ್ಪ, ಹಾಲು, ಎಳ್ಳು, ಬೇಳೆಕಾಳುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಅತಿಯಾದ ಉಪವಾಸ, ಸತತವಾಗಿ ಮಾಡುವ ಡಯಟಿಂಗ್ ಅಥವಾ ಅತಿಯಾದ ವ್ಯಾಯಾಮವನ್ನು ತಪ್ಪಿಸಬೇಕು. ಉಗುರುಬೆಚ್ಚಗಿನ ನೀರನ್ನು ಕುಡಿಯು ವುದು ಮತ್ತು ಸರಿಯಾದ ಸಮಯಕ್ಕೆ ಊಟ ಮಾಡುವುದು ಹಿತಕರ. ಮಾನಸಿಕ ಒತ್ತಡ, ಚಿಂತೆ ಮತ್ತು ಭಯ ಇವುಗಳಿಂದ ಮಾಸಿಕ ಮುಟ್ಟಿನ ಮೇಲೆ ತುಂಬಾ ಪರಿಣಾಮವಾಗುತ್ತದೆ. ಆದ್ದರಿಂದ ಧ್ಯಾನ, ಪ್ರಾಣಾಯಾಮ ಮತ್ತು ಸೌಮ್ಯವಾದ ಯೋಗಾಸನ ಗಳನ್ನು ನಿಯಮಿತವಾಗಿ ಮಾಡುತ್ತಿದ್ದರೆ ಮನಸ್ಸನ್ನು ಶಾಂತಗೊಳಿಸಿ ಹಾರ್ಮೋನ್ ಸಮತೋಲನಕ್ಕೆ ಸಹಾಯ ಮಾಡುತ್ತವೆ. ಭುಜಂಗಾಸನ, ಬದ್ಧಕೋನಾಸನ ಮತ್ತು ಸೌಮ್ಯ ಪವನಮುಕ್ತಾಸನದಂತಹ ಯೋಗಾಸನ ಗಳು ಈ ಸಮಸ್ಯೆಗೆ ಲಾಭದಾಯಕವೆಂದು ತಿಳಿಯಲಾಗಿದೆ.
೪. ಮಾಸಿಕ ಮುಟ್ಟನ್ನು ನೈಸರ್ಗಿಕವಾಗಿ ಸುಧಾರಿಸಲು…
ಕಡಿಮೆ ರಕ್ತಸ್ರಾವವು ನಿರ್ಲಕ್ಷಿಸುವ ವಿಷಯವಲ್ಲ, ಇದು ದೇಹದ ಪೋಷಣೆ ಮತ್ತು ದೋಷಗಳ ಅಸಮತೋಲನದ ಸಂಕೇತವಾಗಿದೆ. ಸರಿಯಾದ ಆಹಾರ, ಸಮತೋಲಿತ ಜೀವನಶೈಲಿ, ಮಾನಸಿಕ ಶಾಂತಿ ಮತ್ತು ವೈದ್ಯರ ಮಾರ್ಗದರ್ಶನದೊಂದಿಗೆ ಪಡೆದ ಆಯುರ್ವೇದದ ಉಪಚಾರಗಳಿಂದ ಮುಟ್ಟಿನ ಸಮಸ್ಯೆಯನ್ನು ಹೋಗಲಾಡಿಸಿ ಮಹಿಳೆಯರು ಉತ್ತಮ ಆರೋಗ್ಯವನ್ನು ಪಡೆಯಬಹುದು.
– ವೈದ್ಯೆ (ಸೌ.) ಸಾರಿಕಾ ನೀಲೇಶ ಲೊಂಢೆ, ‘ನಿರ್ವಿಕಾರ ಆಯುರ್ವೇದ ಹಾಸ್ಪಿಟಲ್’, ಭೊಸರಿ, ಪುಣೆ.
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಮುಂದಿನ ಕಾಳಜಿ ವಹಿಸಿ !