
ಮನೋವಿಜ್ಞಾನದ ಪ್ರಕಾರ ದೊಡ್ಡ ಬಂಗಲೆಗಳು ಮತ್ತು ಐಷಾರಾಮಿ ಮನೆಗಳಲ್ಲಿ ವಾಸಿಸುವ ಜನರು ಚಿಕ್ಕ ಮನೆಗಳಲ್ಲಿ ವಾಸಿಸುವವರಿಗಿಂತ ಹೆಚ್ಚು ದುಃಖಿಯಾಗಿರುತ್ತಾರೆ. ಇದರ ಹಿಂದಿನ ಕಾರಣಗಳು ಏನಿರಬಹುದು ? ಎಂಬುದನ್ನು ತಿಳಿದುಕೊಳ್ಳಲು ಮಾನಸಶಾಸ್ತ್ರಜ್ಞರಲ್ಲಿ ಕೇಳಲಾಯಿತು. ಇಂದಿನ ಧಾವಂತದ ಜೀವನದಲ್ಲಿ ದೊಡ್ಡ ಮನೆ, ಐಷಾರಾಮಿ ಕಾರು ಮತ್ತು ಶ್ರೀಮಂತ ಜೀವನಶೈಲಿಯೇ ಯಶಸ್ಸಿನ ಅಳತೆಗೋಲುಗಳಾಗಿವೆ. ನಗರದ ಅತ್ಯಂತ ಪ್ರತಿಷ್ಠಿತ ಬಡಾವಣೆಯಲ್ಲಿ ಪಂಚತಾರಾ ಬಂಗಲೆ ಅಥವಾ ದೊಡ್ಡ ಫ್ಲಾಟ್ ಪಡೆಯಲು ನಾವು ಹಗಲಿರುಳು ಶ್ರಮಿಸುತ್ತೇವೆ; ಆದರೆ ಇಷ್ಟೆಲ್ಲಾ ಇದ್ದರೂ ಆ ದೊಡ್ಡ ಕೋಣೆಗಳು ಮತ್ತು ಎತ್ತರದ ಛಾವಣಿಗಳ ನಡುವೆ ಮೌನವೇಕೆ ಆವರಿಸುತ್ತಿದೆ ? ಐಷಾರಾಮಿ ಬಂಗಲೆಗಳಲ್ಲಿ ವಾಸಿಸುವವರು ಹೆಚ್ಚಾಗಿ ಒಂಟಿತನ ಮತ್ತು ದುಃಖವನ್ನು ಅನುಭವಿಸುವುದು ಏಕೆ ? ಇದರ ಬಗ್ಗೆ ನೀವು ಎಂದಾದರೂ ವಿಚಾರ ಮಾಡಿದ್ದೀರಾ ? ಇದರ ಹಿಂದಿನ ಕಾರಣಗಳನ್ನು ತಜ್ಞರ ದೃಷ್ಟಿಕೋನದಿಂದ ತಿಳಿದುಕೊಳ್ಳೋಣ.
ಮನೋವಿಜ್ಞಾನದ ಪ್ರಕಾರ ಒಂದು ಆಶ್ಚರ್ಯದ ಸಂಗತಿಯೆಂದರೆ, ಇಂದಿನ ಗೇಟ್‌ಗಳಿರುವ ಸೊಸೈಟಿಗಳ ಮುಚ್ಚಿದ ಬಾಗಿಲುಗಳ ಹಿಂದೆ ಒಂಟಿತನ ಮತ್ತು ಖಿನ್ನತೆಯಂತಹ ಸಮಸ್ಯೆಗಳು ಅತ್ಯಂತ ವೇಗವಾಗಿ ಹರಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿರುವ ಅನೇಕ ಜನರು ಇಂದು ಚಿಕಿತ್ಸೆಗಾಗಿ ವಿವಿಧ ತಜ್ಞರು ಮತ್ತು ಮನೋವಿಜ್ಞಾನಿಗಳ ಮೊರೆ ಹೋಗುತ್ತಿದ್ದಾರೆ. ದೊಡ್ಡ ಬಂಗಲೆಗಳು ಮತ್ತು ಸಣ್ಣ ಫ್ಲಾಟ್‌ಗಳು ಮನುಷ್ಯನ ಜೀವನದ ಗುಣಮಟ್ಟವನ್ನು ಹೇಗೆ ಸಂಪೂರ್ಣವಾಗಿ ಬದಲಾಯಿಸಬಹುದು ಎಂಬುದನ್ನು ತಜ್ಞರ ದೃಷ್ಟಿಕೋನದಿಂದ ತಿಳಿದುಕೊಳ್ಳೋಣ.

೧. ವಾಸಿಸುವ ಜಾಗದಲ್ಲಿ ನಿರಂತರವಾಗಿ ಮಾಡಿದ ಹೆಚ್ಚಳವು ಸಮಾಧಾನದಲ್ಲಿ ಶಾಶ್ವತವಾದ ಲಾಭವನ್ನು ತಂದುಕೊಡುವುದಿಲ್ಲ ಎಂಬುದು ಸಂಶೋಧನೆಯಿಂದ ಸ್ಪಷ್ಟವಾಗಿದೆ
ಹೆಚ್ಚು ವಿಶಾಲವಾದ ಮತ್ತು ನಿರ್ಜನ ಪ್ರದೇಶದಲ್ಲಿ ಮನೆ ಇರುವುದು ಇದು ಕೇವಲ ಗೊಂದಲ ಮತ್ತು ಒಂಟಿತನಕ್ಕೆ ಜನ್ಮ ನೀಡುತ್ತದೆ. ದೊಡ್ಡ ಮತ್ತು ಹೊಸ ಮನೆಗಳು ನೋಡಲು ಚೆನ್ನಾಗಿ ಕಾಣಿಸಬಹುದು; ಆದರೆ ಅವುಗಳಿಂದ ಸಿಗುವ ಆನಂದವು ಕೇವಲ ಸೀಮಿತವಾಗಿರುತ್ತದೆ. ಸಂಶೋಧಕರ ವರದಿಗಳ ಪ್ರಕಾರ, ಮನೆಗಳು ದೊಡ್ಡದಾಗುತ್ತಿದ್ದಂತೆ, ಅದರಲ್ಲಿ ವಾಸಿಸುವ ಜನರು ಹೆಚ್ಚು ಸಂತೋಷವಾಗಿ ಕಾಣಿಸುವುದಿಲ್ಲ. ಬಹುಶಃ ಅವರ ಮಾನಸಿಕ ಸ್ಥಿತಿ ಹದಗೆಡುತ್ತಿರಬಹುದು. ಅಮೇರಿಕಾದಲ್ಲಿ ಸರಾಸರಿ ಒಂದು ಮನೆಯಲ್ಲಿ ಪ್ರತಿ ವ್ಯಕ್ತಿಗೆ ೯೪೦ ಚದರ ಅಡಿಗಿಂತ ಹೆಚ್ಚು ಜಾಗವಿದೆ. ಆದರೆ ಸುಮಾರು ೫ ದಶಕಗಳ ಹಿಂದೆ, ಅಂದರೆ ೧೯೭೩ ರಲ್ಲಿ, ಇದೇ ಜಾಗವು ಪ್ರತಿ ವ್ಯಕ್ತಿಗೆ ಅಂದಾಜು ೫೫೦ ಚದರ ಅಡಿ ಇತ್ತು. ವಾಸದ ಜಾಗದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಏರಿಕೆಯಾಗಿದ್ದರೂ, ಜೀವನದ ಸಮಾಧಾನದಲ್ಲಿ ಯಾವುದೇ ಶಾಶ್ವತವಾದ ಸುಧಾರಣೆ ಕಂಡುಬಂದಿಲ್ಲ ಎಂದು ಸಂಶೋಧನೆ ತೋರಿಸುತ್ತದೆ.
೨. ದೊಡ್ಡ ಮನೆಯಲ್ಲಿ ಐಷಾರಾಮಿ ಜೀವನ ಲಭಿಸಿದರೂ, ಹೊರಗಿನ ಜಗತ್ತಿನಿಂದ ದೈಹಿಕ ಅಂತರದಲ್ಲಿ ಹೆಚ್ಚಳ !
ಮುಂಬೈನ ‘ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ’ಯಲ್ಲಿ ಮನೋವೈದ್ಯರಾಗಿರುವ ಡಾ. ಪಾರ್ಥ ನಾಗ್ಡಾ ಅವರು ಹೀಗೆ ಹೇಳುತ್ತಾರೆ, ‘ದೊಡ್ಡ ಮನೆ, ಸ್ಥಿರವಾದ ಉದ್ಯೋಗ ಮತ್ತು ಹೊಸ ಕಾರುಗಳಂತಹ ಸಾಮಾಜಿಕ ದೃಷ್ಟಿಕೋನದ ಜೀವನದ ಎಲ್ಲಾ ಹಂತಗಳನ್ನು’ ಸಾಧಿಸಿದ ಅನೇಕ ರೋಗಿಗಳನ್ನು ನಾನು ಭೇಟಿಯಾಗುತ್ತೇನೆ; ಆದರೆ ಅವರ ಈ ಭೌತಿಕ ಸುಖವು ಜನರಿಂದ ಅವರನ್ನು ಒಂಟಿ ಮಾಡುತ್ತಿದೆ ಎಂಬ ಹೊಸ ಟ್ರೆಂಡ್ ಈಗ ಕಂಡುಬರುತ್ತಿದೆ. ದೊಡ್ಡ ಮನೆ ಮತ್ತು ಐಷಾರಾಮಿ ಜೀವನವು ನಿಮಗೆ ಆರಾಮವನ್ನು ನೀಡಬಹುದು; ಆದರೆ ಇದು ಹೊರಗಿನ ಪ್ರಪಂಚದೊಂದಿಗಿನ ನಿಮ್ಮ ದೈಹಿಕ ದೂರವನ್ನೂ ಹೆಚ್ಚಿಸುತ್ತದೆ. ಸಣ್ಣ ಮನೆಗಳಲ್ಲಿ ನೀವು ನೆರೆಹೊರೆಯವರನ್ನು ಅಥವಾ ಇತರ ಜನರನ್ನು ಭೇಟಿಯಾಗಲು ಇಷ್ಟಪಡದಿದ್ದರೂ ಜನರ ಧ್ವನಿ ಕೇಳಿಸುತ್ತದೆ, ಸಂಭಾಷಣೆಗಳು ನಡೆಯುತ್ತವೆ; ಆದರೆ ದೊಡ್ಡ ಮನೆಗಳಲ್ಲಿ ಅದರ ಸ್ಥಾನವನ್ನು ಕೇವಲ ‘ಮೌನ’ ಆಕ್ರಮಿಸುತ್ತದೆ. ಇದರಿಂದಾಗಿ ವ್ಯಕ್ತಿಯಲ್ಲಿ ಶೂನ್ಯತೆ ಸೃಷ್ಟಿಯಾಗುತ್ತದೆ.’
ಡಾ. ಪಾರ್ಥ ಹೇಳುತ್ತಾರೆ, ”ಮನೋವಿಜ್ಞಾನದ ಭಾಷೆಯಲ್ಲಿ ಇದನ್ನು ‘ಬದುಕಿನ ಒತ್ತಡ’ದಿಂದ ‘ಅಸ್ತಿತ್ವದ ಒತ್ತಡ’ ಎನ್ನುತ್ತಾರೆ. ದೈಹಿಕ ಅವಶ್ಯಕತೆಗಳು ಪೂರೈಕೆಯಾದಾಗ, ಮನಸ್ಸಿನ ಗಮನವು ಸುರಕ್ಷತೆಯಿಂದ ಸಂಬಂಧಗಳ ಕಡೆಗೆ ಹೊರಳುತ್ತದೆ. ಆಗ ನೀವು ಹಣ ಗಳಿಸುವ ಓಟದಲ್ಲಿ ಆ ಎಲ್ಲಾ ಸಂಬಂಧಗಳನ್ನು ಹಿಂದೆ ಬಿಟ್ಟು ಬಂದಿದ್ದೀರಿ ಎಂಬ ಭಾವನೆ ಮೂಡುತ್ತದೆ. ನಿಜ ಹೇಳಬೇಕೆಂದರೆ, ನಾವು ಮನುಷ್ಯರು ಪರಸ್ಪರ ಅವಲಂಬಿತರಾಗಿರಲು ಸಿದ್ಧರಾಗಿದ್ದೇವೆ; ಆದರೆ ನಾವು ಸ್ವತಂತ್ರರಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವೇ ಪ್ರತ್ಯೇಕಿಸಿಕೊಂಡಿದ್ದೇವೆ. ಈ ಮೌನವು ಈಗ ಒಂದು ಖಾಲಿ ಅಥವಾ ಶೂನ್ಯತೆಯಾಗಿ ಕಾಣಿಸಿಕೊಳ್ಳುತ್ತಿದೆ.’
೩. ಸಾಲ ತೀರಿಸುವ ಒತ್ತಡದಿಂದ ಮನೆಯಲ್ಲಿ ಆನಂದ ಸಿಗದಿರುವುದು ಮತ್ತು ಸೊಸೈಟಿಗಳಿಂದ ನೆರೆಹೊರೆಯವರ ಮಹತ್ವ ಕಡಿಮೆಯಾಗುವುದು
ಡಾ. ಪಾರ್ಥ ಅವರು ಹೇಳಿದರು, ”ಸಾಲದ ನಿಯಮಿತ ಕಂತು (ಈ.ಎಮ್.ಐ.) ಮತ್ತು ‘ಗೇಟೆಡ್’ ಸೊಸೈಟಿ (ಬಂದೋಬಸ್ತಿನ ಸೊಸೈಟಿ) ಕೂಡ ಇದಕ್ಕೆ ಕಾರಣವಾಗಿವೆ. ಇತ್ತೀಚಿನ ದಿನಗಳಲ್ಲಿ ಜನರು ಅತ್ಯಗತ್ಯ ಮತ್ತು ಅನಗತ್ಯ ಎಂಬ ಎರಡೂ ಕಾರಣಗಳಿಗಾಗಿ ಸಾಲ ಪಡೆಯುತ್ತಿದ್ದಾರೆ. ಐಷಾರಾಮಿ ಮನೆಗಳಿಗಾಗಿ ಪಡೆದ ದೊಡ್ಡ ಮೊತ್ತದ ಸಾಲವು ವ್ಯಕ್ತಿಯನ್ನು ಕೇವಲ ಬದುಕುಳಿಯುವ ಸ್ಥಿತಿಗೆ ತಂದು ನಿಲ್ಲಿಸುತ್ತದೆ. ಇಂದಿನ ಕಾಲದಲ್ಲಿ ಗೃಹಸಾಲವು ೨೦ ರಿಂದ ೩೦ ವರ್ಷಗಳ ವರೆಗೆ ಇರುತ್ತದೆ ಮತ್ತು ಎಲ್ಲಿಯವರೆಗೆ ಈ ನಿಯಮಿತ ಕಂತುಗಳು ಮುಗಿಯುವುದಿಲ್ಲವೋ, ಅಲ್ಲಿಯವರೆಗೆ ಮನಸ್ಸು ಈ ಸಾಲವನ್ನು ಒಂದು ಅಪಾಯ ಎಂಬಂತೆಯೇ ನೋಡುತ್ತಿರುತ್ತದೆ. ಈ ಒತ್ತಡದಿಂದಾಗಿ ಜನರು ತಮಗೆ ಇಷ್ಟವಿಲ್ಲದಿದ್ದರೂ ಅತಿಯಾದ ಒತ್ತಡವಿರುವ ಕೆಲಸಗಳನ್ನು ಮಾಡಲು ಅನಿವಾರ್ಯವಾಗಿ ಸಿಲುಕಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ, ಯಾವ ಮನೆಗಾಗಿ ಅವರು ಹಣ ಪಾವತಿಸುತ್ತಿದ್ದಾರೋ, ಅದೇ ಮನೆಯಲ್ಲಿ ಸಮಯ ಕಳೆಯುವ ಆನಂದ ಅವರಿಗೆ ಸಿಗುತ್ತಿಲ್ಲ.
‘ಗೇಟೆಡ್’ ಸೊಸೈಟಿ (ಬಂದಿಸ್ತ ಸೊಸೈಟಿ) ಮತ್ತು ದೊಡ್ಡ ಮನೆಗಳು ಅಚಾತುರ್ಯದಿಂದ ನೆರೆಹೊರೆಯವರ ಪ್ರಾಮುಖ್ಯತೆಯನ್ನು ಕಡಿಮೆ ಮಾಡಿವೆ. ಮುಚ್ಚಿದ ಮನೆಗಳು, ನಗರದ ಹೊರವಲಯದ ವಸತಿ ಪ್ರದೇಶಗಳು ಮತ್ತು ಅನೇಕ ಕಿಲೋಮೀಟರ್ ದೂರದ ಮನೆಗಳಿಂದಾಗಿ ಈಗ ಜನರನ್ನು ಭೇಟಿಯಾಗಲು ‘ಕಠಿಣ ಪರಿಶ್ರಮ’ ಪಡಬೇಕಾಗುತ್ತದೆ. ಇದರಿಂದಾಗಿ ಅನೌಪಚಾರಿಕ ಭೇಟಿಗಳು ಕೂಡ ಕಡಿಮೆಯಾಗಿವೆ. ಸಣ್ಣ ಮನೆಗಳ ಬಗ್ಗೆ ಹೇಳುವುದಾದರೆ, ಸಾಯಂಕಾಲದ ಸಮಯದಲ್ಲಿ ಜನರು ಮನೆಯ ಹೊರಗೆ ಕುಳಿತುಕೊಳ್ಳುತ್ತಾರೆ, ಪರಸ್ಪರ ಮಾತನಾಡುತ್ತಾರೆ ಮತ್ತು ಎಲ್ಲ ಹಬ್ಬಗಳನ್ನು ಒಟ್ಟಾಗಿ ಆಚರಿಸುತ್ತಾರೆ; ಆದರೆ ಐಷಾರಾಮಿ ಬಂಗಲೆಗಳಲ್ಲಿ ವಾಸಿಸುವ ಜನರು ಇವೆಲ್ಲವುಗಳಿಂದ ದೂರವಾಗಿದ್ದಾರೆ.’
೪. ದೊಡ್ಡ ಮನೆಗಳಲ್ಲಿ ವಾಸಿಸುವ ಜನರ ಸಾಮಾಜಿಕ ಸಂಪರ್ಕ ಕಡಿಮೆಯಾಗುವುದರಿಂದ ಅವರಿಗೆ ನಿರಾಶೆ ಆವರಿಸುವ ಸಾಧ್ಯತೆ ಇರುತ್ತದೆ
ನೋಯ್ಡಾದ ‘ಅಪೊಲೊ ಆಸ್ಪತ್ರೆ’ಯ ಮನೋವೈದ್ಯರಾದ ಡಾ. ಮನೀಷಾ ಸಿಂಘಲ್ ಅವರು ಹೀಗೆ ಹೇಳುತ್ತಾರೆ, ”ನಮ್ಮ ದೇಹದಲ್ಲಿ ‘ಆಕ್ಸಿಟೋಸಿನ್’, ‘ಸೆರೊಟೋನಿನ್’ ಮತ್ತು ‘ಡೋಪಮೈನ್’ನಂತಹ ‘ಸಂತೋಷದ ಹಾರ್ಮೋನ್‌ಗಳು’ ಇವೆ, ಇವು ಕೇವಲ ಸಾಮಾಜಿಕ ಸಂವಹನದ ಮೂಲಕ ಮಾತ್ರ ಬಿಡುಗಡೆಯಾಗುತ್ತವೆ. ‘ಆಕ್ಸಿಟೋಸಿನ್’ಅನ್ನು ‘ಪ್ರೀತಿಯ ಹಾರ್ಮೋನ್’ ಎಂದು ಕರೆಯಲಾಗುತ್ತದೆ. ನಾವು ನಮ್ಮ ಪ್ರೀತಿ ಪಾತ್ರರನ್ನು ಭೇಟಿಯಾದಾಗ ಅಥವಾ ಸ್ನೇಹಪರವಾಗಿ ವರ್ತಿಸಿದಾಗ ಅದು ಬಿಡುಗಡೆಯಾಗುತ್ತದೆ. ದೊಡ್ಡ ಮನೆಗಳಲ್ಲಿ ಏಕಾಂಗಿಯಾಗಿ ವಾಸಿಸುವ ಜನರಿಗೆ ಈ ಹಾರ್ಮೋನ್‌ನ ಕೊರತೆ ಕಂಡುಬರುತ್ತದೆ. ಅದೇ ರೀತಿ, ನಾವು ಸ್ನೇಹಿತರೊಂದಿಗೆ ಹಳೆಯ ನೆನಪುಗಳನ್ನು ಹಂಚಿಕೊಂಡಾಗ ಅಥವಾ ಅವರೊಂದಿಗೆ ಸಕ್ರಿಯರಾಗಿದ್ದಾಗ ‘ಸೆರೊಟೋನಿನ್’ ಮತ್ತು ‘ಡೋಪಮೈನ್’ ಬಿಡುಗಡೆಯಾಗುತ್ತವೆ. ಈ ಹಾರ್ಮೋನ್‌ಗಳು ನಮಗೆ ಮಾನಸಿಕ ಶಾಂತಿಯನ್ನು ನೀಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಅವರ ಏಕಾಂಗಿತನವು ಆ ವ್ಯಕ್ತಿಯನ್ನು ಖಿನ್ನತೆಯತ್ತ ತಳ್ಳಬಹುದು. ದೊಡ್ಡ ಮನೆಗಳ ಒಂದು ದೊಡ್ಡ ಅನಾನುಕೂಲವೆಂದರೆ ‘ಭಾವನಾತ್ಮಕ ಅಂತರ’. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಕೌಟುಂಬಿಕ ದೌರ್ಜನ್ಯ ಮತ್ತು ಕೌಟುಂಬಿಕ ಒತ್ತಡದ ಹೆಚ್ಚಿನ ಪ್ರಕರಣಗಳು ದೊಡ್ಡ ಮನೆಗಳಲ್ಲಿ ವಾಸಿಸುವವರಿಂದಲೇ ನನ್ನ ಬಳಿ ಬಂದವು. ಅವರು ಪರಸ್ಪರ ಹೆಚ್ಚು ಸಮಯ ಕಳೆಯುತ್ತಿರಲಿಲ್ಲ. ದೊಡ್ಡ ಮನೆಗಳಲ್ಲಿ ಪ್ರತಿಯೊಬ್ಬ ಸದಸ್ಯನಿಗೂ ತನ್ನದೇ ಆದ ಪ್ರತ್ಯೇಕ ಕೋಣೆಯಲ್ಲಿ ವಾಸಿಸುವ ಅಭ್ಯಾಸವಾಗುತ್ತದೆ. ಇದರಿಂದಾಗಿ ಪರಸ್ಪರ ಸಂಬಂಧಗಳು ಕೊನೆಗೊಳ್ಳಲು ಪ್ರಾರಂಭಿಸುತ್ತವೆ.’
೫. ದೊಡ್ಡ ಮನೆಗಳಲ್ಲಿ ಸ್ವಚ್ಛತೆ ಮತ್ತು ನಿರ್ವಹಣೆಗಾಗಿ ಹೆಚ್ಚಿನ ಸಮಯ ನೀಡಬೇಕಾಗುವುದರಿಂದ ಆನಂದದ ಪ್ರಮಾಣ ಕಡಿಮೆಯಾಗುವುದು
ಕೆಲವೊಮ್ಮೆ ಜನರು ಆರ್ಥಿಕ ತೃಪ್ತಿ ಮತ್ತು ಪ್ರತಿಷ್ಠೆಗಾಗಿ ದೊಡ್ಡ ಮನೆಯನ್ನು ಕಟ್ಟುತ್ತಾರೆ; ಆದರೆ ಅವರ ಗಮನ ಭೌತಿಕ ವಸ್ತುಗಳ ಮೇಲೆ ಹೆಚ್ಚು ಮತ್ತು ಭಾವನೆಗಳ ಮೇಲೆ ಕಡಿಮೆ ಇರುತ್ತದೆ. ಇದರಿಂದಾಗಿ ಅವರು ಕಡಿಮೆ ಪ್ರಮಾಣದಲ್ಲಿ ಸಂತೋಷವಾಗಿರುತ್ತಾರೆ. ಡಾ. ಮನೀಷಾ ಸಿಂಘಲ್ ಅವರಿಗೆ, ‘ಕುಟುಂಬದ ಆನಂದಕ್ಕಾಗಿ ಎಷ್ಟು ಜಾಗ ಸಾಕಾಗುತ್ತದೆ ?’ ಎಂದು ಕೇಳಿದಾಗ, ಅವರು ಹೀಗೆ ಹೇಳಿದರು, ‘ಒಂದು ಕುಟುಂಬದಲ್ಲಿ ೪ ಜನರಿದ್ದರೆ, ಅವರಿಗಾಗಿ ಒಂದು ಕೊಠಡಿ, ಒಂದು ಸಾಮಾನ್ಯ ಸಭಾಂಗಣ (ಹಾಲ್) ಮತ್ತು ಅಡುಗೆಮನೆ ಸಾಕಾಗುತ್ತದೆ; ಆದರೆ ನಾವು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ೧೦ ರಿಂದ ೧೨ ಕೊಠಡಿಗಳ ಬಂಗಲೆಯನ್ನು ಕಟ್ಟಿದರೆ (ಉದಾಹರಣೆಗೆ, ಭವಿಷ್ಯದ ಯೋಜನೆ ಅಥವಾ ಅತಿಥಿಗಳ ಆಗಮನದ ಹೆಸರಿನಲ್ಲಿ), ಅದು ಕೇವಲ ಹಣದ ಅಪವ್ಯಯವಾಗಿದೆ. ದೊಡ್ಡ ಮನೆಗಳಲ್ಲಿ ವಾಸಿಸುವ ಮಹಿಳೆಯರು ಮತ್ತು ವೃದ್ಧರಿಗೆ ಅನೇಕ ಬಾರಿ ಸ್ವಚ್ಛತೆಯ ಬಗ್ಗೆ ಅತಿಯಾದ ವ್ಯಾಮೋಹ ಅಥವಾ ಒತ್ತಡವಿರುತ್ತದೆ. ಅವರಿಗೆ ಮನೆ ಯಾವಾಗಲೂ ಅಸ್ವಚ್ಛವಾಗಿಯೇ ಕಾಣುತ್ತದೆ. ಇದರಿಂದ ಅವರ ಮಾನಸಿಕ ಶಾಂತಿಯೂ ಕೆಡುತ್ತದೆ.’
೬. ವಾಸ್ತುಶಿಲ್ಪತಜ್ಞರ ಅಭಿಪ್ರಾಯ : ‘ಸಣ್ಣ ಮನೆಯು ಅರ್ಥಪೂರ್ಣ ಜೀವನ ಜೀವಿಸುವುದರತ್ತ ಕೊಂಡೊಯ್ಯುತ್ತವೆ !’
ವಿದೇಶದ ವಾಸ್ತುಶಿಲ್ಪ ತಜ್ಞರಾದ ಲಿಬರ್ಟಿ ಕೋಹೆನ್ ಅವರು ಹೀಗೆ ನಂಬುತ್ತಾರೆ, ‘ಸಣ್ಣ ಮನೆಗಳು ನಮ್ಮನ್ನು ‘ಅರ್ಥಪೂರ್ಣ ಜೀವನ ನಡೆಸುವತ್ತ’ ಕೊಂಡೊಯ್ಯುತ್ತವೆ. ನಿಮ್ಮ ಬಳಿ ಜಾಗದ ಕೊರತೆಯಿದ್ದಾಗ, ನೀವು ನಿಜವಾಗಿಯೂ ಅಗತ್ಯವಿರುವುದನ್ನು ಮಾತ್ರ ಇಟ್ಟುಕೊಳ್ಳುತ್ತೀರಿ, ಇದನ್ನೇ ‘ಡಿಕ್ಲಟರಿಂಗ್’ (ಅನಗತ್ಯ ವಸ್ತುಗಳನ್ನು ತೆಗೆದು ಹಾಕುವುದು) ಎನ್ನಲಾಗುತ್ತದೆ, ಇದು ನಿಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ. ಅದೇ ಸಮಯದಲ್ಲಿ ನಿಮ್ಮ ಮನೆ ದೊಡ್ಡದಾಗಿದ್ದಾಗ, ನೀವು ಮನೆಯಲ್ಲಿ ಅನಗತ್ಯ ವಸ್ತುಗಳನ್ನು ಇಡಲು ಬಯಸುತ್ತೀರಿ, ಇದರಿಂದ ಅಲ್ಲಲ್ಲಿ ಬಿದ್ದಿರುವ ವಸ್ತುಗಳನ್ನು ನೋಡಿ ನೀವು ಒತ್ತಡಕ್ಕೆ ಒಳಗಾಗುತ್ತೀರಿ.’
೭. ಸಣ್ಣ ಮನೆಗಳು ಸೋಮಾರಿತನವನ್ನು ದೂರ ಮಾಡಿ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ! – ಜೇಮ್ಸ್ ಮಾರ್ಸ್ಡೆನ್, ಸ್ಮಾರ್ಟ್ ಹೋಮ್ ಡಿಸೈನರ್
‘ಸ್ಮಾರ್ಟ್ ಹೋಮ್ ಡಿಸೈನರ್’ (ಆಧುನಿಕ ತಂತ್ರಜ್ಞಾನ ದೊಂದಿಗೆ ಸುಸಜ್ಜಿತ ಮನೆಗಳ ವಿನ್ಯಾಸಕರು) ಜೇಮ್ಸ್ ಮಾರ್ಸ್ಡೆನ್ ಹೀಗೆ ಯುಕ್ತಿವಾದವನ್ನು ಮಾಡುತ್ತಾರೆ, ‘ಸಣ್ಣ ಮನೆಗಳು ಸೋಮಾರಿತನವನ್ನು ದೂರ ಮಾಡುತ್ತವೆ; ಏಕೆಂದರೆ ಮನೆಯಲ್ಲಿ ಜಾಗವಿಲ್ಲದ ಕಾರಣ ಜನರು ಹೆಚ್ಚಾಗಿ ಹೊರಗೆ ಅಡ್ಡಾಡಲು ಹೋಗುತ್ತಾರೆ ಅಥವಾ ಉದ್ಯಾನವನಗಳನ್ನು ಬಳಸಲು ಇಷ್ಟ ಪಡುತ್ತಾರೆ, ಇದರಿಂದ ಅವರ ದೈಹಿಕ ಚಟುವಟಿಕೆಯು ಶೇಕಡಾ ೩೦ ರಷ್ಟು ಹೆಚ್ಚಾಗುತ್ತದೆ. ದೊಡ್ಡ ಮನೆ ಮತ್ತು ವಿಲಾಸಿ ಜೀವನ ಇರುವುದು ಕೆಟ್ಟದ್ದಲ್ಲ; ಆದರೆ ಅದು ಸಾಮಾಜಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಕಡೆಗಣಿಸುತ್ತಿದ್ದರೆ, ಅದು ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು.’
ಇತರರಿಗಿಂತ ನಾವು ಮುಂದೆ ಇರಬೇಕು ಎಂಬ ಸ್ಪರ್ಧೆಯಿಂದ ದುಃಖವನ್ನು ಅನುಭವಿಸುವುದು
ಹೊಸ ಮನೆ ಖರೀದಿಸುವ ಹಂಬಲವಿರುವವರಿಗೆ, ಮನೆ ಕೊಂಡ ಬಹಳ ದಿನಗಳ ನಂತರವಷ್ಟೇ ‘ನಿಜವಾದ ತೃಪ್ತಿಗಾಗಿ ನಾವು ಯಾವ ವಿಷಯಗಳಿಗೆ ಆದ್ಯತೆ ನೀಡಬೇಕಿತ್ತು’ ಎಂಬ ಅರಿವಾಗುತ್ತದೆ. ಸಾಕಷ್ಟು ಸುರಕ್ಷತೆ ಮತ್ತು ಆರಾಮ ಸಿಕ್ಕ ನಂತರವೂ, ಮನೆಯಲ್ಲಿನ ಪ್ರತಿಯೊಂದು ಹೆಚ್ಚುವರಿ ಕೋಣೆ ಅಥವಾ ಹಾಸುಗಲ್ಲಿನಿಂದ ಜೀವನದಲ್ಲಿನ ಸಮಾಧಾನವು ಕಡಿಮೆಯಾಗುತ್ತದೆ ಮತ್ತು ಒತ್ತಡ ಹೆಚ್ಚಾಗುತ್ತದೆ. ಇತರರನ್ನು ಹಿಂದೆ ಹಾಕುವ ಈ ಓಟವು ಕೂಡ ಒಂದು ಗಂಭೀರ ಸಮಸ್ಯೆಯಾಗಿದೆ. ಯಾವಾಗ ಒಬ್ಬ ವ್ಯಕ್ತಿಯು ಇತರರಿಗಿಂತ ತಮ್ಮ ಬಳಿ ಇರುವ ವಸ್ತುಗಳ (ಉದಾಹರಣೆಗೆ ದೊಡ್ಡ ಮನೆ, ಕಾರು ಮತ್ತು ಇತರ ದುಬಾರಿ ವಸ್ತುಗಳು) ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾನೋ, ಆಗ ಅವರಿಗೆ ಹೆಚ್ಚಿನ ಬಾರಿ ದುಃಖದ ಅನುಭವವಾಗುತ್ತದೆ.
ಸಣ್ಣ ಮನೆಗಳಿಂದ ಮಾನಸಿಕ ಹೊರೆ ಕಡಿಮೆಯಾಗಿ ‘ಕಾರ್ಟಿಸೋಲ್’ (ಒತ್ತಡಕ್ಕೆ ಸಂಬಂಧಿತ ಹಾರ್ಮೋನ್) ಮಟ್ಟ ಕಡಿಮೆಯಾಗುವುದು
ಮಾನಸಿಕ ಆರೋಗ್ಯ ತಜ್ಞೆ ಡಾ. ಕ್ರಿಸ್ಟಿನ್ ಲ್ಯೂಕ್ ಅವರ ಪ್ರಕಾರ, ‘ದೊಡ್ಡ ಮನೆಗಳ ಸ್ವಚ್ಛತೆ ಮತ್ತು ನಿರ್ವಹಣೆಯ ಒತ್ತಡವು ಮನೆಯಲ್ಲಿರುವ ಮಹಿಳೆಯರು ಮತ್ತು ವೃದ್ಧರಲ್ಲಿ ಆತಂಕಕ್ಕೆ ಪ್ರಮುಖ ಕಾರಣವಾಗಿದೆ. ಸಣ್ಣ ಮನೆಯು ಮಾನಸಿಕ ಹೊರೆಯನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ‘ಕಾರ್ಟಿಸೋಲ್’ ಮಟ್ಟವು ಕಡಿಮೆಯಾಗಿರುತ್ತದೆ. ಇದರ ಹಿಂದಿನ ಕಾರಣವೆಂದರೆ, ಮನೆಯ ಹಿರಿಯರಿಗೆ ತಮ್ಮ ಮನೆಯ ವಸ್ತುಗಳ ಬಗ್ಗೆ ಅಪಾರ ಆಕರ್ಷಣೆ ಇರುವುದನ್ನು ನೀವು ಗಮನಿಸಿರಬಹುದು. ಅವರು ಮನೆಯಲ್ಲೇ ಇರುತ್ತಾರೆ, ಯಾವಾಗಲೂ ಸ್ವಚ್ಛತೆಯಲ್ಲಿ ತೊಡಗಿರುತ್ತಾರೆ ಮತ್ತು ಎಷ್ಟೇ ಚೆನ್ನಾಗಿ ಸ್ವಚ್ಛಗೊಳಿಸಿದರೂ ಅವರಿಗೆ ಮನೆ ಅಶುದ್ಧವಾಗಿದೆ ಎಂದೇ ಅನಿಸುತ್ತದೆ.’
ಲೇಖಕ : ಶ್ರೀ. ಮೃದೂಲ್ ರಜಪೂತ್, ನವದೆಹಲಿ (೨.೨.೨೦೨೬)
(ಆಧಾರ : ‘ಆಜ ತಕ್’ನ ಜಾಲತಾಣ)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು