ಅತಿ ಮುಟ್ಟಿನ ರಕ್ತಸ್ರಾವ (ರಕ್ತಪದರ) ಮತ್ತು ಆಯುರ್ವೇದ

ಕೆಲವು ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಬಹಳಷ್ಟು ರಕ್ತಸ್ರಾವವಾಗುತ್ತದೆ. ಮುಟ್ಟು ಬಹಳಷ್ಟು ದಿನಗಳ ವರೆಗೆ ಮುಂದುವರಿಯುವುದು, ಮೇಲಿಂದ ಮೇಲೆ ‘ಪ್ಯಾಡ್‌’ಗಳನ್ನು ಬದಲಾಯಿಸಬೇಕಾಗುವುದು, ದೊಡ್ಡ ರಕ್ತದ ಗಂಟುಗಳು ಬೀಳುವುದು, ತಲೆಸುತ್ತು (ಗಿಡಿನೆಸ್‌), ಶಕ್ತಿಹೀನವಾಗುವುದು (ದೌರ್ಬಲ್ಯ) ಅಥವಾ ಮುಟ್ಟಿನ ನಂತರವೂ ಸುಸ್ತು ಕಡಿಮೆಯಾಗದಿರುವುದು ಇಂತಹ ಲಕ್ಷಣಗಳು ಕಂಡುಬರುತ್ತವೆ. ಅನೇಕ ಬಾರಿ ಮಹಿಳೆಯರು ಇದನ್ನು ‘ನಾರ್ಮಲ್’ (ಸಾಮಾನ್ಯ) ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ; ಆದರೆ ವಾಸ್ತವದಲ್ಲಿ ಅತಿಯಾದ ರಕ್ತಸ್ರಾವವು ದೇಹದೊಳಗಿನ ಗಂಭೀರ ಅಸಮತೋಲನದ ಮುನ್ಸೂಚನೆಯಾಗಿರಬಹುದು. ಆಯುರ್ವೇದದಲ್ಲಿ ಈ ಸ್ಥಿತಿಯನ್ನು ‘ಅತಿಪ್ರವೃತ್ತಿ’ ಅಥವಾ ‘ರಕ್ತಪ್ರದರ’ ಎಂಬ ಹೆಸರುಗಳಿಂದ ಗುರುತಿಸಲಾಗುತ್ತದೆ.
(ಲೇಖನ ೩ )

೧. ಹೆಚ್ಚು ರಕ್ತಸ್ರಾವ ಆಗುವುದರ ಕಾರಣಗಳು ಮತ್ತು ಅದರ ತೊಂದರೆಗಳು

ಆಯುರ್ವೇದದ ಪ್ರಕಾರ, ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವವು ಪ್ರಮುಖವಾಗಿ ಪಿತ್ತದೋಷದ ಹೆಚ್ಚಳದಿಂದ ಆಗುತ್ತದೆ. ಪಿತ್ತದೋಷದ ಸ್ವಭಾವವು ಉಷ್ಣ ಮತ್ತು ದ್ರವವಾಗಿದ್ದರಿಂದ, ಅದು ರಕ್ತಧಾತುವಿನ ಮೇಲೆ ಪರಿಣಾಮ ಬೀರಿ ರಕ್ತಸ್ರಾವವನ್ನು ಹೆಚ್ಚಿಸುತ್ತದೆ. ಅತಿಯಾದ ಖಾರ, ಹುಳಿ, ಎಣ್ಣೆ ಮತ್ತು ಮಸಾಲೆ ಪದಾರ್ಥಗಳ ಸೇವನೆ, ಸತತ ಮಾನಸಿಕ ಒತ್ತಡ, ಕೋಪ, ಬಿಸಿಲಿನಲ್ಲಿ ಅತಿಯಾದ ಓಡಾಟ, ನಿದ್ರೆಯ ಅಭಾವ ಮತ್ತು ಹಾರ್ಮೋನುಗಳ ಬದಲಾವಣೆಯಿಂದ ಪಿತ್ತದೋಷ ಹೆಚ್ಚಾಗುತ್ತದೆ. ಇದರ ನೇರ ಪರಿಣಾಮ ಗರ್ಭಾಶಯದ ರಕ್ತನಾಳಗಳ ಮೇಲೆ ಉಂಟಾಗಿ ರಕ್ತಸ್ರಾವದ ಪ್ರಮಾಣ ಹೆಚ್ಚುತ್ತದೆ.

ಅತಿಯಾದ ರಕ್ತಸ್ರಾವದ ಸಮಯದಲ್ಲಿ ಕೆಲವು ಮಹಿಳೆಯರಿಗೆ ಹೊಟ್ಟೆಯಲ್ಲಿ ಉರಿ, ಮೈಯಲ್ಲಿ ಉಷ್ಣತೆ, ಕಿರಿಕಿರಿ, ಅತಿಯಾದ ಬೆವರು, ತಲೆನೋವು ಅಥವಾ ಎದೆಯ ಬಡಿತ ಹೆಚ್ಚಾದಂತೆ ಭಾಸವಾಗುತ್ತದೆ. ಈ ಸ್ಥಿತಿಯು ದೀರ್ಘಕಾಲ ಮುಂದುವರಿದರೆ ರಕ್ತಧಾತು ಕಡಿಮೆಯಾಗಿ ದೌರ್ಬಲ್ಯ, ರಕ್ತಹೀನತೆ (ಎನಿಮಿಯಾ), ತಲೆಸುತ್ತು ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾಗುವಂತಹ ತೊಂದರೆಗಳು ನಿರ್ಮಾಣವಾಗಬಹುದು.
ಆದ್ದರಿಂದಲೇ ಆಯುರ್ವೇದವು ಈ ಸಮಸ್ಯೆಯನ್ನು ಕೇವಲ ಮುಟ್ಟಿನ ವಿಷಯದಲ್ಲಿ ನೋಡದೆ, ಇಡೀ ಶರೀರದ ಆರೋಗ್ಯದ ದೃಷ್ಟಿಕೋನದಿಂದ ನೋಡುತ್ತದೆ.

೨. ಆಯುರ್ವೇದದ ಪ್ರಕಾರ ಚಿಕಿತ್ಸೆ ಮತ್ತು ಅಗತ್ಯ ಮನೆಮದ್ದುಗಳು

ಆಯುರ್ವೇದ ಚಿಕಿತ್ಸೆಯ ಮುಖ್ಯ ಉದ್ದೇಶ ಪಿತ್ತದೋಷವನ್ನು ಶಮನಗೊಳಿಸುವುದು, ರಕ್ತಧಾತುವನ್ನು ಶುದ್ಧೀಕರಿಸಿ ಸ್ಥಿರಗೊಳಿಸುವುದು ಮತ್ತು ಗರ್ಭಾಶಯವನ್ನು ಬಲ ಪಡಿಸುವುದಾಗಿರುತ್ತದೆ. ಅಶೋಕ, ಲೋಧ್ರ, ಪದ್ಮಕ, ಉಶೀರ, ಪ್ರವಾಳದಂತಹ ಔಷಧೀಯ ದ್ರವ್ಯಗಳು ರಕ್ತಸ್ರಾವದ ನಿಯಂತ್ರಣಕ್ಕೆ ಉಪಯುಕ್ತವೆಂದು ಪರಿಗಣಿಸಲಾಗಿದೆ. ವೈದ್ಯರ ಸಲಹೆಯ ಮೇರೆಗೆ ‘ಅಶೋಕಾರಿಷ್ಟ’ ಅಥವಾ ‘ಲೋಧ್ರಾಸವ’ದಂತಹ ಔಷಧಿಗಳನ್ನು ಸೇವಿಸುವುದರಿಂದ ರಕ್ತಸ್ರಾವವು ಸಮತೋಲನಕ್ಕೆ ಬರಲು ಸಹಾಯವಾಗುತ್ತದೆ. (ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೇನೆಂದರೆ, ಎಲ್ಲ ಮಹಿಳೆಯರಿಗೂ ಒಂದೇ ರೀತಿಯ ಔಷಧಿ ಇರುವುದಿಲ್ಲ. ಅವರ ದೇಹದ ಪ್ರಕೃತಿ ಮತ್ತು ಕಾಯಿಲೆಯ ಕಾರಣಕ್ಕೆ ತಕ್ಕಂತೆ ಚಿಕಿತ್ಸೆಯು ಬದಲಾಗುತ್ತದೆ.)

ಮನೆಮದ್ದುಗಳ ಕೆಲವು ಪರಿಹಾರಗಳು ಪಿತ್ತಶಮನಕ್ಕಾಗಿ ಮತ್ತು ರಕ್ತಸ್ರಾವವನ್ನು ಕಡಿಮೆ ಮಾಡಲು ಉಪಯುಕ್ತವಾಗಿವೆ. ಮುಟ್ಟಿನ ಸಮಯದಲ್ಲಿ ತಂಪು, ಹಗುರ ಮತ್ತು ತಾಜಾ ಆಹಾರ ಸೇವಿಸಬೇಕು. ದಾಳಿಂಬೆ, ಮೊಸಂಬಿಯಂತಹ ಹಣ್ಣುಗಳನ್ನು ಮಿತವಾಗಿ ಸೇವಿಸುವುದು ಲಾಭದಾಯಕ. ಕೊತ್ತಂಬರಿ ಮತ್ತು ಬಡಿಸೊಪ್ಪಿನ (ಸೋಂಪು) ಕಷಾಯ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಆದರೆ, ಸ್ವಯಂಪ್ರಯೋಗ ಮಾಡದೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

೩. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಲಹೆ ಮತ್ತು ಆರ್ಯುವೇದೀಯ ಚಿಕಿತ್ಸೆ ಪಡೆಯುವುದು ಮಹತ್ವದ್ದು

ರಕ್ತಸ್ರಾವ ಹೆಚ್ಚಾಗುತ್ತಿರುವಾಗ ದೇಹಕ್ಕೆ ಪೂರ್ಣ ವಿಶ್ರಾಂತಿ ಅತ್ಯಗತ್ಯ. ಈ ಸಮಯದಲ್ಲಿ ಅತಿಯಾದ ಶ್ರಮ, ಪ್ರಯಾಣ, ಉಪವಾಸ ಅಥವಾ ಮಾನಸಿಕ ಒತ್ತಡವನ್ನು ತಪ್ಪಿಸಬೇಕು. ಅತ್ಯಂತ ಸೌಮ್ಯವಾದ ಯೋಗ ಮತ್ತು ಪ್ರಾಣಾಯಾಮಗಳನ್ನು ಆರಿಸಿಕೊಳ್ಳಬೇಕು. ಸತತ ತಲೆಸುತ್ತು, ಅತಿಯಾದ ರಕ್ತಸ್ರಾವ ಅಥವಾ ಮುಟ್ಟು ೧೦ ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯುವುದು ಆವಶ್ಯಕ.
ಒಟ್ಟಾರೆ, ಅತಿ ರಕ್ತಸ್ರಾವವು ನಿರ್ಲಕ್ಷಿಸುವ ವಿಷಯವಲ್ಲ. ಆಯುರ್ವೇದವು ಈ ಸಮಸ್ಯೆಯನ್ನು ತಾತ್ಕಾಲಿಕ ಪರಿಹಾರಗಳಿಗಿಂತ ದೀರ್ಘಕಾಲದ ಆರೋಗ್ಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡುತ್ತದೆ. ಸರಿಯಾದ ಆಹಾರ-ವಿಹಾರ, ಮಾನಸಿಕ ಶಾಂತಿ ಮತ್ತು ಆಯುರ್ವೇದ ಚಿಕಿತ್ಸೆಯ ಮೂಲಕ ಮಹಿಳೆಯ ಆರೋಗ್ಯವನ್ನು ಸುರಕ್ಷಿತವಾಗಿರಿಸಿ ಕೊಳ್ಳಬಹುದು.

– ವೈದ್ಯೆ (ಸೌ.) ಸಾರಿಕಾ ನೀಲೇಶ ಲೊಂಡೆ, ‘ನಿರ್ವಿಕಾರ ಆಯುರ್ವೇದ ಹಾಸ್ಪಿಟಲ್‌’, ಭೋಸರಿ, ಪುಣೆ.