ಕೆನಡಾದಲ್ಲಿನ ಪ್ರತಿಭಟನೆಗಾಗಿ ‘ಬಾಡಿಗೆ ಜನರನ್ನು’ ಸೇರಿಸಿದ ಖಲಿಸ್ತಾನಿಗಳು!

  • ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಆರೋಪ

  • ಹಲವೆಡೆ ಖಲಿಸ್ತಾನಿಗಳ ಪ್ರತಿಭಟನೆ ವಿಫಲ

ಟೊರೊಂಟೊ (ಕೆನಡಾ) – ಬ್ರಾಂಪ್ಟನ್ ನಗರದ ತ್ರಿವೇಣಿ ಮಂದಿರದ ಹೊರಗೆ ಖಲಿಸ್ತಾನಿಗಳು ಭಾರತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಖಲಿಸ್ತಾನಿಗಳು ಒಗ್ಗೂಡಿದ್ದರಿಂದ ನಗರದಲ್ಲಿ ೨ ಗಂಟೆಗಳ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೆನಡಾದ ಕೆಲವು ನಗರಗಳಲ್ಲಿ ಸ್ವತಂತ್ರ ಖಲಿಸ್ತಾನ್ ನಿರ್ಮಾಣಕ್ಕಾಗಿ ಜನಾಭಿಪ್ರಾಯ ಸಂಗ್ರಹಿಸಲು ಖಲಿಸ್ತಾನಿ ಸಂಘಟನೆಗಳು ಪಟ್ಟು ಹಿಡಿದಿವೆ. ಅದರದೇ ಒಂದು ಭಾಗವಾಗಿ, ದೇಶದಲ್ಲಿನ ಹಿಂದೂ ದೇವಾಲಯಗಳ ಹೊರಗೆ ಪ್ರತಿಭಟನೆ ನಡೆಸಲು ಖಲಿಸ್ತಾನಿಗಳು ಯತ್ನಿಸಿದರು; ಆದರೆ ಬಹುತೇಕ ಕಡೆ ಈ ಪ್ರತಿಭಟನೆಗಳು ವಿಫಲವಾದವು. ಗಮನಾರ್ಹ ಸಂಗತಿಯೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು, “ಖಲಿಸ್ತಾನಿ ಭಯೋತ್ಪಾದಕರು ಜನರನ್ನು ಒಟ್ಟುಗೂಡಿಸಲು ೧೦೦ ಕೆನಡಿಯನ್ ಡಾಲರ್‌ಗಳ ಆಮಿಷ ಒಡ್ಡಿದ್ದಾರೆ. ೪೦ ರಿಂದ ೫೦ ಜನರನ್ನು ಭಾರತದ ವಿರುದ್ಧ ಘೋಷಣೆ ಕೂಗಲು ಪ್ರಚೋದಿಸಲಾಗಿದೆ” ಎಂದು ಆರೋಪಿಸಿದ್ದಾರೆ.

೧. ಮಾರ್ಚ್ ೫ ರಂದು ಮಧ್ಯಾಹ್ನ ಭಕ್ತರು ದೇವಸ್ಥಾನದಲ್ಲಿ ಪೂಜೆ-ಪುನಸ್ಕಾರಗಳಿಗಾಗಿ ಸೇರುತ್ತಿದ್ದಾಗ, ಮಧ್ಯಾಹ್ನ ಸುಮಾರು ೧೨ ರಿಂದ ೨ ರ ಅವಧಿಯಲ್ಲಿ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಖಲಿಸ್ತಾನಿ ಬೆಂಬಲಿಗರು ಜಮಾಯಿಸಿದ್ದರು. ನಿಷೇಧಿತ ಸಂಘಟನೆ ‘ಸಿಖ್ ಫಾರ್ ಜಸ್ಟಿಸ್’ ದೇವಸ್ಥಾನದ ಹೊರಗೆ ಪ್ರತಿಭಟನೆ ನಡೆಸಿತು.

೨. ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಲಕ್ಷ್ಮೀನಾರಾಯಣ ಮಂದಿರದ ಹೊರಗೂ ಇದೇ ರೀತಿಯ ಪ್ರತಿಭಟನೆ ನಡೆಯಬೇಕಿತ್ತು; ಆದರೆ ಅಲ್ಲಿ ಖಲಿಸ್ತಾನಿಗಳಿಗೆ ಪ್ರತಿಭಟನೆ ಮಾಡಲು ಅವಕಾಶ ನೀಡಲಿಲ್ಲ.

ಕೆನಡಾದ ಮಾಧ್ಯಮಗಳ ನಿರ್ಲಕ್ಷ್ಯ

ಕೆನಡಾದ ಮಾಧ್ಯಮಗಳು ಖಲಿಸ್ತಾನಿಗಳ ಪ್ರತಿಭಟನೆಯನ್ನು ಹಾಗೂ ಹಿಂದೂಗಳು ಮಾಡಿದ ವಿರೋಧವನ್ನು ವರದಿ ಮಾಡಿಲ್ಲ. ಸ್ಥಳೀಯ ಹಿಂದೂ ಸಮುದಾಯದ ಆರೋಪವೇನೆಂದರೆ, ಕೆನಡಾದ ಮಾಧ್ಯಮಗಳು ಆಗಾಗ್ಗೆ ಇಂತಹ ಪ್ರಕರಣಗಳನ್ನು ನಿರ್ಲಕ್ಷಿಸುತ್ತವೆ.

ಪತ್ರಕರ್ತ ದರ್ಶನ್ ಮಹಾರಾಜ ಅವರಿಂದ ಖಲಿಸ್ತಾನಿಗಳ ಮೇಲೆ ಆರೋಪ!

ವಿಶ್ಲೇಷಕ ಮತ್ತು ಪತ್ರಕರ್ತ ದರ್ಶನ್ ಮಹಾರಾಜ ಅವರು ‘ಎಕ್ಸ್’ ನಲ್ಲಿ, ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ವ್ಯಕ್ತಿಯೊಬ್ಬರು ಅವರಿಗೆ ನೀಡಿದ ಮಾಹಿತಿಯ ಪ್ರಕಾರ, ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪ್ರತಿಯೊಬ್ಬ ವ್ಯಕ್ತಿಗೆ ೧೦೦ ಕೆನಡಿಯನ್ ಡಾಲರ್‌ಗಳನ್ನು ನೀಡಲಾಗುತ್ತಿದೆ. ತದನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಚರ್ಚೆಗೆ ಗ್ರಾಸವಾಯಿತು. ಅನೇಕರು ಖಲಿಸ್ತಾನವಾದಿಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು. ಕೆನಡಾದಲ್ಲಿ ಖಲಿಸ್ತಾನಿ ಚಳುವಳಿ ಜೀವಂತವಾಗಿದೆ ಎಂದು ತೋರಿಸಲು ಈಗ ಬಾಡಿಗೆ ಗುಂಪಿನ ಮೊರೆ ಹೋಗಲಾಗುತ್ತಿದೆ ಎಂಬುದು ಟೀಕಾಕಾರರ ಅಭಿಪ್ರಾಯವಾಗಿದೆ.

ದರ್ಶನ್ ಮಹಾರಾಜ ಅವರು ಕೆನಡಾದ ರಾಜಕಾರಣಿಗಳನ್ನೂ ಟೀಕಿಸಿದ್ದಾರೆ. ಕಳೆದ ೫೦ ವರ್ಷಗಳಿಂದ ಮತಗಳು ಮತ್ತು ದೇಣಿಗೆಗಳ ದುರಾಸೆಯಿಂದ ಇಲ್ಲಿನ ನಾಯಕರು ಇಂತಹ ಶಕ್ತಿಗಳಿಗೆ ರಕ್ಷಣೆ ನೀಡಿದ್ದಾರೆ ಎಂದು ಅವರು ಹೇಳಿದರು. ಅದರ ಪರಿಣಾಮವಾಗಿಯೇ ಇಂದು ಈ ಜನರು ಉದ್ಧಟರಾಗಿದ್ದಾರೆ.

ಹಿಂದೂ ಸಮುದಾಯದ ಖಂಡನೆ!

‘ಹಿಂದೂ ಕೆನೆಡಿಯನ್ ಫೌಂಡೇಶನ್’ ಮತ್ತು ತ್ರಿವೇಣಿ ಮಂದಿರ ಆಡಳಿತವು ಖಲಿಸ್ತಾನಿಗಳ ಪ್ರತಿಭಟನೆಯನ್ನು ಖಂಡಿಸಿದೆ. ಪ್ರಾರ್ಥನಾ ಸ್ಥಳಗಳ ಹೊರಗೆ ಇಂತಹ ರಾಜಕೀಯ ಪ್ರತಿಭಟನೆಗಳ ಏಕೈಕ ಉದ್ದೇಶ ಭಕ್ತರನ್ನು ಬೆದರಿಸುವುದು ಮತ್ತು ಶಾಂತಿಯನ್ನು ಕದಡುವುದು ಎಂದು ಸಮುದಾಯದ ಮುಖಂಡರು ಹೇಳಿದ್ದಾರೆ. ಯಾವುದೇ ರೀತಿಯ ಬೆದರಿಕೆ ಅಥವಾ ಪ್ರಚೋದನಕಾರಿ ಕೃತ್ಯವು ನಮ್ಮನ್ನು ನಮ್ಮ ನಂಬಿಕೆಯಿಂದ ದೂರ ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ‘ಹಿಂದೂ ಕೆನೆಡಿಯನ್ ಫೌಂಡೇಶನ್’ ತನ್ನ ಹೇಳಿಕೆಯಲ್ಲಿ ತಿಳಿಸಿದೆ.