ಹಾರ್ಮುಜ್ ತೆರೆಯಿರಿ, ಇಲ್ಲದಿದ್ದರೆ ವಿದ್ಯುತ್ ಯೋಜನೆ ಮತ್ತು ಸೇತುವೆಗಳನ್ನು ಇಂದು ಧ್ವಂಸಗೊಳಿಸುತ್ತೇವೆ!

ಡೊನಾಲ್ಡ್ ಟ್ರಂಪ್ ಅವರಿಂದ ಇರಾನ್ ಗೆ ಹೊಸ ಎಚ್ಚರಿಕೆ

ನವ ದೆಹಲಿ – ನಾಳೆ, ಮಂಗಳವಾರ (ಏಪ್ರಿಲ್ ೭) ಇರಾನ್ ನಲ್ಲಿ ‘ವಿದ್ಯುತ್ ಯೋಜನೆ ದಿನ’ ಮತ್ತು ‘ಸೇತುವೆ ದಿನ’ ಒಂದೇ ದಿನ ಬರುತ್ತಿವೆ, ಇದರರ್ಥ ಆಕ್ರಮಣ ನಡೆಯಲಿದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಬೇಕು, ಇಲ್ಲದಿದ್ದರೆ ನರಕಕ್ಕೆ ತಲುಪಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಗೆ ಹೊಸ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಅಮೆರಿಕವು ಇರಾನ್ ರಾಜಧಾನಿ ಟೆಹ್ರಾನ್ ಅನ್ನು ಕರಾಜ್ ನಗರಕ್ಕೆ ಸಂಪರ್ಕಿಸುವ ಬಿ ೧ ಹೆದ್ದಾರಿಯ ಸೇತುವೆಯ ಮೇಲೆ ದಾಳಿ ಮಾಡಿತ್ತು. ಈ ಸೇತುವೆಯು ಕೊಲ್ಲಿ ದೇಶಗಳಲ್ಲೇ ಅತ್ಯಂತ ಎತ್ತರದ ಸೇತುವೆ ಎಂದು ಪರಿಗಣಿಸಲ್ಪಟ್ಟಿದೆ.

ನರಕದಂತೆ ಅಮೆರಿಕದ ಸ್ಥಿತಿ ಮಾಡುತ್ತೇವೆ! – ಇರಾನ್

ಇರಾನ್ ಸೈನ್ಯದ ವಕ್ತಾರರು ಟೆಲಿಗ್ರಾಮ್ ನಲ್ಲಿ ಹೇಳಿಕೆಯೊಂದನ್ನು ಪ್ರಸಾರ ಮಾಡಿದ್ದಾರೆ. ‘ಅಮೆರಿಕವು ಒಂದು ವೇಳೆ ಇರಾನ್ ನಾಗರಿಕರನ್ನು ಗುರಿಯಾಗಿಸಿದರೆ, ನಾವು ಕೈಗೊಳ್ಳುವ ಕ್ರಮವು ವಿನಾಶಕಾರಿಯಾಗಿರಲಿದೆ ಮತ್ತು ವ್ಯಾಪಕ ಸ್ವರೂಪದ ಆಕ್ರಮಣ ಬೀರುತ್ತದೆ ಎಂಬುದನ್ನು ಅಮೆರಿಕ ಮರೆಯಬಾರದು’ ಎಂದು ಎಚ್ಚರಿಸಿದ್ದಾರೆ.

ಇನ್ನೊಂದೆಡೆ ಇರಾನ್ ಸಂಸತ್ತಿನ ಸಭಾಪತಿ ಮಹಮ್ಮದ್ ಬಘೇರ್ ಗಾಲಿಬಾಫ್ ಅವರು, ಅಮೆರಿಕವು ಸಾಮಾನ್ಯ ನಾಗರಿಕರನ್ನು ಗುರಿಯಾಗಿಸಿದರೆ, ಅಮೆರಿಕದ ಸ್ಥಿತಿಯನ್ನು ನಾವು ನರಕದಂತೆ ಮಾಡುತ್ತೇವೆ ಎಂಬುದನ್ನು ನೆನಪಿಟ್ಟುಕೊಳ್ಳಲಿ. ನಿಮ್ಮ ದೇಶದ ಪ್ರತಿಯೊಬ್ಬರಿಗೂ ನಾವು ಈ ನರಕದಲ್ಲಿ ಏಕೆ ವಾಸಿಸುತ್ತಿದ್ದೇವೆ ಎಂಬ ಪ್ರಶ್ನೆ ಉದ್ಭವಿಸಲಿದೆ. ಟ್ರಂಪ್ ಅವರು ನೆತನ್ಯಾಹು ಅವರ ಮಾತಿನಂತೆ ಈ ಎಲ್ಲಾ ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ, ಇದನ್ನು ಅವರು ನಿಲ್ಲಿಸಬೇಕೆಂದು ಗಾಲಿಬಾಫ್ ಹೇಳಿದ್ದಾರೆ.

ಅಮೆರಿಕ ಅಸಹಾಯಕತೆಯಿಂದ ಮತ್ತು ಭಯಗೊಂಡು ಎಚ್ಚರಿಕೆ ನೀಡುತ್ತಿದೆ! – ಇರಾನ್

ಹಾರ್ಮುಜ್ ತೆರೆಯುವಂತೆ ಟ್ರಂಪ್ ನೀಡಿದ್ದ ೪೮ ಗಂಟೆಗಳ ಗಡುವನ್ನು ಇರಾನ್ ತಿರಸ್ಕರಿಸಿದೆ. ಟ್ರಂಪ್ ಸಮಯ ಮುಗಿಯುತ್ತಿದೆ ಮತ್ತು ಒಂದು ವೇಳೆ ಹಾರ್ಮುಜ್ ತೆರೆಯದಿದ್ದರೆ ಇರಾನ್ ನ ಇಂಧನ ಕೇಂದ್ರಗಳನ್ನು ಗುರಿಯಾಗಿಸಿ ನಾಶಪಡಿಸಲಾಗುವುದು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್ ಸೈನ್ಯವು, ಅಮೆರಿಕ ಅಸಹಾಯಕತೆಯಿಂದ ಮತ್ತು ಭಯಗೊಂಡು ಇಂತಹ ಬೆದರಿಕೆಗಳನ್ನು ಹಾಕುತ್ತಿದೆ ಎಂದು ಹೇಳಿದೆ.

ಅಮೆರಿಕ ೪೭ ವರ್ಷಗಳಲ್ಲಿ ಏನನ್ನೂ ಮಾಡಲು ಸಾಧ್ಯವಾಗಿಲ್ಲ ಮತ್ತು ಈಗಲೂ ಏನನ್ನೂ ಮಾಡಲು ಸಾಧ್ಯವಿಲ್ಲ! – ಇರಾನ್

ಭಾರತದಲ್ಲಿನ ಇರಾನ್ ನ ಸರ್ವೋಚ್ಚ ನಾಯಕರ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಗೆ ನೀಡಿದ ಎಚ್ಚರಿಕೆಗೆ ಪ್ರತ್ಯುತ್ತರ ನೀಡಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ. ಕಳೆದ ೪೭ ವರ್ಷಗಳಲ್ಲಿಮೆರಿಕಗೆ ಏನನ್ನೂ ಮಾಡಲು ಸಾಧ್ಯವಾಗಿಲ್ಲ ಮತ್ತು ಈಗಲೂ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಅಮೆರಿಕವು ಇರಾನ್ ವಿರುದ್ಧದ ಯುದ್ಧವನ್ನು ಗೆದ್ದಿದೆ ಎಂಬ ಟ್ರಂಪ್ ಅವರ ಹೇಳಿಕೆಯ ಕುರಿತು ಇಲಾಹಿ ಅವರು ಮಾತನಾಡಿ, ಇದಕ್ಕೆ ನಾವು ರಣರಂಗದಲ್ಲಿ ಮತ್ತು ರಸ್ತೆಗಳಲ್ಲಿ ಉತ್ತರ ನೀಡಬಹುದು. ಅವರು ನಾವು ಮೂರು ದಿನಗಳಲ್ಲಿ ಎಲ್ಲವನ್ನೂ ಮಾಡುತ್ತೇವೆ ಎನ್ನುತ್ತಿದ್ದರು; ಆದರೆ ಈಗ ಒಂದು ತಿಂಗಳಿಗಿಂತ ಹೆಚ್ಚು ಕಾಲ ಕಳೆದಿದೆ ಎಂದು ಹೇಳಿದರು.

ಅಮೆರಿಕ ಎಚ್ಚರಿಕೆ ನೀಡುವ ಬದಲಿಗೆ ಸಂವಾದ ನಡೆಸಲಿ! – ರಷ್ಯಾ

ಅಮೆರಿಕವು ಎಚ್ಚರಿಕೆ ನೀಡುವ ಬದಲಿಗೆ ಸಂವಾದದ ಹಾದಿಯನ್ನು ಸ್ವೀಕರಿಸಿದರೆ ಪರಿಸ್ಥಿತಿ ಸಾಮಾನ್ಯವಾಗಬಹುದೆಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ತಿಳಿಸಿದ್ದಾರೆ. ಸಂಘರ್ಷವನ್ನು ಕಡಿಮೆ ಮಾಡುವ ಪ್ರಯತ್ನಗಳು ಯಶಸ್ವಿಯಾಗಲಿವೆ ಎಂದು ಲಾವ್ರೊವ್ ಆಶಿಸಿದ್ದಾರೆ.

ಯುದ್ಧದಲ್ಲಿ ಪಾಕಿಸ್ತಾನದ ಯಾವುದೇ ಪಾತ್ರವಿಲ್ಲ! – ಇರಾನ್

ಈ ಯುದ್ಧದಲ್ಲಿ ಪಾಕಿಸ್ತಾನದ ಯಾವುದೇ ಪಾತ್ರವಿಲ್ಲ ಎಂದು ಅಬ್ದುಲ್ ಮಜೀದ್ ಹಕೀಮ್ ಇಲಾಹಿ ತಿಳಿಸಿದ್ದಾರೆ. ಪಾಕಿಸ್ತಾನದ ಮೂಲಕ ಇರಾನ್ ಮತ್ತು ಅಮೆರಿಕದ ನಡುವೆ ಮಾತುಕತೆ ನಡೆಯುತ್ತಿದೆ ಎಂಬ ವರದಿಗಳು ಸಂಪೂರ್ಣ ಅಸತ್ಯವಾಗಿವೆ. ತೈಲ ಬೆಲೆಗಳ ಮೇಲೆ ಪ್ರಭಾವ ಬೀರಲು ಇಂತಹ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ವಾಸ್ತವವಾಗಿ ಯಾವುದೇ ಗಂಭೀರ ಚರ್ಚೆ ನಡೆಯುತ್ತಿಲ್ಲ ಎಂದು ಅವರು ಹೇಳಿದರು.

ಭಾರತ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳು ಈ ಯುದ್ಧ ತಪ್ಪಿಸಲು ಸಹಾಯ ಮಾಡಬಹುದು!

ಭಾರತದ ಪಾತ್ರದ ಬಗ್ಗೆ ಹಕೀಮ್ ಅವರು ಮಾತನಾಡುತ್ತಾ, ಭಾರತ ಸೇರಿದಂತೆ ವಿಶ್ವದ ಎಲ್ಲಾ ದೇಶಗಳು ಈ ಯುದ್ಧವನ್ನು ತಪ್ಪಿಸಲು ಸಹಾಯ ಮಾಡಬಹುದು. ಎಲ್ಲಾ ದೇಶಗಳು ಒಗ್ಗೂಡಿ ಕೆಲಸ ಮಾಡಿದರೆ ಈ ಬಿಕ್ಕಟ್ಟನ್ನು ಬಗೆಹರಿಸಬಹುದು. ಇರಾನ್ ಗೆ ಈ ಯುದ್ಧ ಬೇಕಿಲ್ಲ ಮತ್ತು ಅದನ್ನು ಬೇಗನೆ ಮುಗಿಸಲು ಬಯಸುತ್ತದೆ. ಇದು ಇರಾನ್ ಮೇಲೆ ಬಲವಂತವಾಗಿ ಹೇರಲ್ಪಟ್ಟ ಯುದ್ಧವಾಗಿದ್ದು, ಇದರ ಪರಿಣಾಮ ಜಗತ್ತಿನಾದ್ಯಂತ ಅನೇಕ ದೇಶಗಳ ಜನರ ಮೇಲೆ ಬೀರುತ್ತಿದೆ ಎಂದು ಇಲಾಹಿ ಹೇಳಿದರು.

ಇರಾನ್ ವಿರುದ್ಧ ಆಕ್ಷೇಪಾರ್ಹ ಭಾಷೆಯಲ್ಲಿ ಟೀಕೆ ಮಾಡಿದ್ದರಿಂದ, ಟ್ರಂಪ್ ಅವರ ಅಧಿಕಾರ ಹೋಗುವ ಭೀತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಇರಾನ್ ವಿರುದ್ಧ ಆಕ್ಷೇಪಾರ್ಹ ಮತ್ತು ಅಸಭ್ಯ ಭಾಷೆ ಬಳಸಿದ್ದಕ್ಕಾಗಿ ಅಮೆರಿಕದ ಒಳಗಡೆಯೇ ಟೀಕೆಗಳು ವ್ಯಕ್ತವಾಗುತ್ತಿವೆ. ಟ್ರಂಪ್ ಅವರನ್ನು ಪದಚ್ಯುತಗೊಳಿಸಲು ಅಮೆರಿಕ ಸಂವಿಧಾನದ ‘೨೫ ನೇ ನಿಯಮ ತಿದ್ದುಪಡಿ’ಯ ಮೊರೆ ಹೋಗಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಟ್ರಂಪ್ ಅವರು ಇರಾನ್ ಬಗ್ಗೆ ಅತ್ಯಂತ ಕೆಳಮಟ್ಟದ ಭಾಷೆ ಬಳಸಿರುವುದರಿಂದ ಅಮೆರಿಕದ ೫ ಪ್ರಮುಖ ಸಂಸದರು ಟ್ರಂಪ್ ಅವರ ಮಾನಸಿಕ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಸಂಸದರ ಪ್ರಕಾರ, ಟ್ರಂಪ್ ತಮ್ಮ ಕರ್ತವ್ಯ ನಿರ್ವಹಿಸಲು ಸಮರ್ಥರಾಗಿಲ್ಲ ಮತ್ತು ಅವರ ಇಂತಹ ವರ್ತನೆಯಿಂದ ಇಡೀ ಜಗತ್ತು ಯುದ್ಧದ ಕೂಪಕ್ಕೆ ತಳ್ಳಲ್ಪಡುತ್ತಿದೆ.

ಏನಿದು ‘೨೫ ನೇ ನಿಯಮ ತಿದ್ದುಪಡಿ’?

‘೨೫ ನೇ ನಿಯಮ ತಿದ್ದುಪಡಿ’ಯ ಪ್ರಕಾರ, ಅಧ್ಯಕ್ಷರು ತಮ್ಮ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸಲು ದೈಹಿಕವಾಗಿ ಅಥವಾ ಮಾನಸಿಕವಾಗಿ ಅಸಮರ್ಥರಾಗಿದ್ದರೆ, ಅವರನ್ನು ಪದಚ್ಯುತಗೊಳಿಸಬಹುದು.

೧. ಈ ಪ್ರಕ್ರಿಯೆಗಾಗಿ ಮೊದಲು ಉಪಾಧ್ಯಕ್ಷರು ಮತ್ತು ಸಚಿವ ಸಂಪುಟವು ಒಂದು ಪ್ರಸ್ತಾವನೆಯನ್ನು ಅಂಗೀಕರಿಸಬೇಕಾಗುತ್ತದೆ.

೨. ಅಧ್ಯಕ್ಷರು ಇದನ್ನು ವಿರೋಧಿಸಿದರೆ ಪ್ರಕರಣ ಸಂಸತ್ತಿಗೆ ಹೋಗುತ್ತದೆ.

೩. ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಈ ಪ್ರಸ್ತಾವನೆ ಅಂಗೀಕಾರವಾದರೆ, ಅಧ್ಯಕ್ಷರು ತಕ್ಷಣವೇ ಪದತ್ಯಾಗ ಮಾಡಬೇಕಾಗುತ್ತದೆ ಮತ್ತು ಉಪಾಧ್ಯಕ್ಷರು ಉಳಿದ ಅವಧಿಗೆ ಅಧಿಕಾರ ವಹಿಸಿಕೊಳ್ಳುತ್ತಾರೆ.

ಮೂರು ದಿನಗಳ ರಜೆಯಲ್ಲಿ ಟ್ರಂಪ್

ಇರಾನ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಟ್ರಂಪ್ ಇದ್ದಕ್ಕಿದ್ದಂತೆ ಮೂರು ದಿನಗಳ ರಜೆಗೆ ತೆರಳಿದ್ದಾರೆ. ಅವರ ಈ ರಜೆಯು ಅಮೆರಿಕದ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಹಾರ್ಮುಜ್ ತೆರೆಯಲು ಉತ್ತಮ ಮಾರ್ಗವೆಂದರೆ ಯುದ್ಧವನ್ನು ನಿಲ್ಲಿಸುವುದು! – ಚೀನಾ

ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ರಷ್ಯಾದ ವಿದೇಶಾಂಗ ಸಚಿವರೊಂದಿಗೆ ನಡೆಸಿದ ಚರ್ಚೆಯ ವೇಳೆ, ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಅತ್ಯುತ್ತಮ ಮಾರ್ಗವೆಂದರೆ ಯುದ್ಧವನ್ನು ನಿಲ್ಲಿಸುವುದು. ಯುದ್ಧ ಕೊನೆಗೊಂಡರೆ ಜಲಸಾರಿಗೆ ಸಹಜ ಸ್ಥಿತಿಗೆ ಬರಬಹುದು ಎಂದು ತಿಳಿಸಿದ್ದಾರೆ.

ಇರಾಕ್ ತೈಲ ಪೂರೈಕೆ ಸ್ಥಗಿತ

ಇರಾಕ್ ನ ಸರಕಾರಿ ಸ್ವಾಮ್ಯದ ಬಸ್ರಾ ತೈಲ ಸಂಸ್ಥೆಯು ಪ್ರತಿದಿನ ಅಂದಾಜು ೯೦,೦೦೦ ಬ್ಯಾರೆಲ್ ತೈಲವನ್ನು ಉತ್ಪಾದಿಸುತ್ತಿದೆ; ಆದರೆ ಹಾರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ತೈಲ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದೆ. ದಾಳಿಗಳಿಂದಾಗಿ ಕೆಲಸ ಕಾರ್ಯಗಳಿಗೂ ಅಡ್ಡಿಯಾಗಿದ್ದು, ಅನೇಕ ವಿದೇಶಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಇರಾಕ್ ನಿಂದ ಹೊರ ಕಳಿಸುತ್ತಿವೆ. ಇದರಿಂದ ಉತ್ಪಾದನೆ ಮತ್ತು ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರಿದೆ.

ನೇಪಾಳದಲ್ಲಿ ವಾರಕ್ಕೆ ಎರಡು ದಿನ ರಜೆ ಜಾರಿ

ಕೊಲ್ಲಿಯಲ್ಲಿ ಯುದ್ಧದಿಂದ ಉಂಟಾದ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ನೇಪಾಳ ಸರ್ಕಾರವು ಸರ್ಕಾರಿ ಕಚೇರಿಗಳಿಗೆ ವಾರಕ್ಕೆ ಎರಡು ದಿನಗಳ ರಜಾದಿನವನ್ನು ಜಾರಿಗೆ ತಂದಿದೆ. ಸರ್ಕಾರಿ ಕಚೇರಿಗಳು ಈಗ ಶನಿವಾರ ಮತ್ತು ಭಾನುವಾರದಂದು ಮುಚ್ಚಲ್ಪಡುತ್ತವೆ. ಈ ಹಿಂದೆ, ಶನಿವಾರವಷ್ಟೇ ರಜಾದಿನವಾಗಿ ನಿಗದಿಯಾಗಿತ್ತು. ಸರ್ಕಾರಿ ಕಚೇರಿಗಳು ಈಗ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸುತ್ತವೆ; ಮೊದಲು ಕೆಲಸದ ಸಮಯವು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಇತ್ತು. ಈ ಹಿಂದೆ, ಇಂಧನದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನೇಪಾಳವು ವಾಯುಯಾನ ಟರ್ಬೈನ್ ಇಂಧನದ ಬೆಲೆಯನ್ನು ಶೇಕಡಾ 117% ರಷ್ಟು ಹೆಚ್ಚಿಸಿತ್ತು.