ಶೈಕ್ಷಣಿಕ, ವೈದ್ಯಕೀಯ ಮತ್ತು ಕಾರ್ಯನೀತಿ ರೂಪಿಸುವಂತಹ ವಿಷಯಗಳಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಳ್ಳುವುದು, ಕಾಲದ ಅವಶ್ಯಕತೆಯಾಗಿದೆ! – ಶಾನ್ ಕ್ಲಾರ್ಕ್, ಫೋಂಡಾ, ಗೋವಾ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ಮತ್ತು ‘ಸ್ಪಿರಿಚ್ಯುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್’ ವತಿಯಿಂದ ದಾವೋಸ್‌ನ (ಸ್ವಿಟ್ಜರ್ಲೆಂಡ್) ‘ಹೌಸ್ ಆಫ್ ಪಯೋನಿಯರ್ಸ್’ನಲ್ಲಿ ‘ಭಾರತೀಯ ಜ್ಞಾನ ವ್ಯವಸ್ಥೆ’ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡನೆ!

ಫೋಂಡಾ (ಗೋವಾ) – ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿರುವ ‘ಹೌಸ್ ಆಫ್ ಪಯೋನಿಯರ್ಸ್’ನಲ್ಲಿ ಜಾಗತಿಕ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಪ್ರತಿನಿಧಿಗಳು ಭಾಗವಹಿಸಿದ್ದರು. ಆರೋಗ್ಯ, ಚೈತನ್ಯ ಮತ್ತು ಮಾನವ ಕಲ್ಯಾಣದ ಸಮಗ್ರ (ಅಂದರೆ ಕೇವಲ ದೈಹಿಕ ಮಾತ್ರವಲ್ಲ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿ) ದೃಷ್ಟಿಕೋನದ ಕುರಿತು ತಮ್ಮ ವಿಚಾರಗಳನ್ನು ಮಂಡಿಸಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವನ್ನು ಆಹ್ವಾನಿಸಲಾಗಿತ್ತು.

‘ಹೌಸ್ ಆಫ್ ಪಯೋನಿಯರ್ಸ್’ನ ‘ವರ್ಲ್ಡ್ ಸಿಸ್ಟಮಿಕ್ ಫೋರಮ್’ನಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಪರವಾಗಿ ಶ್ರೀ. ಶಾನ್ ಕ್ಲಾರ್ಕ್ (ಸಂಶೋಧನಾ ತಂಡದ ಸದಸ್ಯ ಮತ್ತು ಆಧ್ಯಾತ್ಮಿಕ ಮಟ್ಟ ಶೇ. ೬೭) ಹಾಗೂ ಸೌ. ಶ್ವೇತಾ ಕ್ಲಾರ್ಕ್ ಅವರು ಸಮಕಾಲೀನ ಜಾಗತಿಕ ಸವಾಲುಗಳ ದೃಷ್ಟಿಯಿಂದ ‘ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಗಳ ಮಹತ್ವ’ ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಅವರು ಈ ವಿಷಯದ ಕುರಿತಾದ ಆಧ್ಯಾತ್ಮಿಕ ಸಂಶೋಧನೆಯ ಆಧಾರದ ಮೇಲೆ ೩ ಪ್ರಮುಖ ಅಂಶಗಳನ್ನು ಈ ಸಮ್ಮೇಳನದಲ್ಲಿ ಪ್ರಸ್ತುತಪಡಿಸಿದರು.

‘ಹೌಸ್ ಆಫ್ ಪಯೋನಿಯರ್ಸ್’ ಒಂದು ಜಾಗತಿಕ ಸಂಘಟನೆಯಾಗಿದ್ದು, ಶ್ರೀ. ಹ್ಯಾನ್ಸ್ ಮಾರ್ಟಿನ್ ಹರ್ಲಿಂಗ್ ಮತ್ತು ಶ್ರೀ. ಹಿಮೇಶ್ ಪಟೇಲ್ ಈ ಸಂಘಟನೆಯ ಸ್ಥಾಪಕರಾಗಿದ್ದಾರೆ. ಈ ಸಂಘಟನೆಯು ಜಾಗತಿಕ ಮಟ್ಟದಲ್ಲಿ ಮೌಲ್ಯಾಧಾರಿತ (ನೈತಿಕ) ನಾಯಕತ್ವ ಮತ್ತು ಮಾನವೀಯತೆಯ ಕಲ್ಯಾಣಕ್ಕಾಗಿ ಸುಸ್ಥಿರ ದೀರ್ಘಕಾಲೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದೆ.

೧. ವೈದ್ಯಕೀಯ ಚಿಕಿತ್ಸೆಯಲ್ಲಿ ಆಧ್ಯಾತ್ಮಿಕ ಪರಿಣಾಮಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆ!

ಆಧುನಿಕ ವೈದ್ಯಕೀಯ ವಿಜ್ಞಾನವು ರೋಗವನ್ನು ತಡೆಗಟ್ಟುವ, ರೋಗನಿರ್ಣಯ ಮಾಡುವ ಮತ್ತು ಚಿಕಿತ್ಸೆ ನೀಡುವಾಗ ಅದರ ಹಿಂದಿರುವ ಆಧ್ಯಾತ್ಮಿಕ ಕಾರಣಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಅತ್ಯಂತ ಸೂಕ್ಷ್ಮ; ಆದರೆ ಮೂಲಭೂತ ಅಂಶವನ್ನು ನಿರ್ಲಕ್ಷಿಸುವುದರಿಂದ ವೈದ್ಯಕೀಯ ಚಿಕಿತ್ಸೆಗಳು ಪರಿಪೂರ್ಣವಾಗದೆ ಅಪೂರ್ಣವಾಗಿಯೇ ಉಳಿಯುತ್ತವೆ.

೨. ದೈವೀ ಕಣ

ದೈವೀ ಕಣ ಎಂದರೆ ‘ಅತ್ಯಂತ ಸೂಕ್ಷ್ಮವಾದ ಸಕಾರಾತ್ಮಕ ಶಕ್ತಿಯ ಸ್ಥೂಲ ರೂಪ’ವಾಗಿದೆ. ಈ ಅಂಶಕ್ಕೆ ವಿಜ್ಞಾನ ಮತ್ತು ತತ್ವಶಾಸ್ತ್ರ ವಿಷಯಗಳ ತಜ್ಞರಿಂದ ಅತ್ಯಂತ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದವರಿಗೆ ದೈವೀ ಕಣಗಳನ್ನು ತೋರಿಸಲಾಯಿತು. ದೈವೀ ಕಣಗಳ ಕುರಿತು ಉಪಸ್ಥಿತರು ಬಹಳ ಕುತೂಹಲ ತೋರಿದರು ಮತ್ತು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಂಡರು.

೩. ಆಧ್ಯಾತ್ಮಿಕ ಮಟ್ಟದಲ್ಲಿ ವ್ಯಕ್ತಿಯ ಚೇತನಾ ಶಕ್ತಿಯು ಹೇಗೆ ಕಾರ್ಯನಿರ್ವಹಿಸುತ್ತದೆ?

ಇಂದಿನ ಆಧುನಿಕ ವಿಜ್ಞಾನವು ಕೇವಲ ಮಿದುಳಿನ ಚಟುವಟಿಕೆಗಳು, ನರಕೋಶಗಳು ಮತ್ತು ನರಮಂಡಲದ ಪ್ರಚೋದನೆಗಳನ್ನು ಮಾತ್ರ ಅಧ್ಯಯನ ಮಾಡುತ್ತದೆ; ಆದರೆ ಈ ಸಂಶೋಧನಾ ವಿಧಾನವು ಅತ್ಯಂತ ಸೀಮಿತವಾಗಿದೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಈ ಕುರಿತು ಮಾಡಿರುವ ಸಂಶೋಧನೆಯ ಪ್ರಕಾರ, ‘ವ್ಯಕ್ತಿಯ ಮನಸ್ಸಿನ ಹೆಚ್ಚಿನ ವಿಚಾರಗಳು, ಅನುಭವಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಮಿದುಳಿಗಿಂತ ಆತನ ಅತ್ಯಂತ ಸೂಕ್ಷ್ಮವಾದ ಅಂತರ್ಮನಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ.’ ಈ ತೀರ್ಮಾನವು ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ಆಧರಿಸಿದೆ. ಭಾರತೀಯ ಜ್ಞಾನ ವ್ಯವಸ್ಥೆಯ ಪ್ರಕಾರ, ಮಾನವನ ಅನುಭವ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಮುಖ್ಯವಾಗಿ ಸುಪ್ತ ಮನಸ್ಸಿನಲ್ಲಿ ನಡೆಯುತ್ತದೆ, ಅದು ಅತ್ಯಂತ ಸೂಕ್ಷ್ಮವಾಗಿದೆ. ನಾವು ಕೇವಲ ಮಿದುಳಿನ ಬಗ್ಗೆ ಮಾತ್ರ ಯೋಚಿಸಿದಾಗ, ನಮ್ಮ ದೃಷ್ಟಿಕೋನವು ಸಂಕುಚಿತಗೊಳ್ಳುತ್ತದೆ; ಆದರೆ ನಾವು ಆಧ್ಯಾತ್ಮಿಕ ಮಟ್ಟದಲ್ಲಿ ಸುಪ್ತ ಮನಸ್ಸನ್ನು ಅಧ್ಯಯನ ಮಾಡಿದಾಗ, ಮಾನವನ ನಡವಳಿಕೆ ಮತ್ತು ಪ್ರಜ್ಞೆಯನ್ನು ಅರ್ಥಮಾಡಿಕೊಳ್ಳುವ ನಮ್ಮದೇ ಆದ ಮಿತಿಗಳು ಹೆಚ್ಚು ವಿಸ್ತಾರ ಮತ್ತು ಸಮೃದ್ಧವಾಗುತ್ತವೆ.

ಈ ಅಧಿವೇಶನಗಳ ಅವಧಿಯಲ್ಲಿ ‘ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಯು ವ್ಯಕ್ತಿಯ ಆರೋಗ್ಯ, ಮಾನವ ಪ್ರಜ್ಞೆ, ಸುಸ್ಥಿರ ಜೀವನಶೈಲಿ ಮತ್ತು ಅಭಿವೃದ್ಧಿಗೆ ಹೇಗೆ ಅಮೂಲ್ಯವಾದ ಕೊಡುಗೆಯನ್ನು ನೀಡಬಲ್ಲದು?’ ಎಂಬುದರ ಕುರಿತು ಅಂತರರಾಷ್ಟ್ರೀಯ ಸಮುದಾಯವು ಹೆಚ್ಚಿನ ಕುತೂಹಲ ಮತ್ತು ಆಸಕ್ತಿಯನ್ನು ತೋರಿತು.

ದೈವೀ ಕಣ: ಸಾತ್ತ್ವಿಕ ವ್ಯಕ್ತಿ, ಸ್ಥಳ ಇತ್ಯಾದಿಗಳಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ಹಲವು ಬಣ್ಣಗಳಲ್ಲಿ ಕಂಡುಬರುವ ಈ ಕಣಗಳನ್ನು ‘ಭಾಭಾ ಅಣು ಸಂಶೋಧನಾ ಕೇಂದ್ರ’ದಲ್ಲಿ ವಿಶ್ಲೇಷಿಸಲಾಯಿತು. ಐ.ಐ.ಟಿ. ಮುಂಬಯಿನಲ್ಲಿ ನಡೆಸಿದ ಪರೀಕ್ಷೆಯ ಪ್ರಕಾರ, ಈ ಕಣಗಳಲ್ಲಿ ಕಾರ್ಬನ್, ಸಾರಜನಕ ಮತ್ತು ಆಮ್ಲಜನಕ ಘಟಕಗಳು ಇರುವುದು ಸಾಬೀತಾಗಿದೆ. ಈ ಘಟಕಗಳ ಮೂಲಧಾತುಗಳ ಪ್ರಮಾಣದಿಂದ ಕಂಡುಹಿಡಿಯಲಾದ ಅವುಗಳ ‘ಫಾರ್ಮುಲಾ’ಗಳು ಪ್ರಸ್ತುತ ಅಸ್ತಿತ್ವದಲ್ಲಿರುವ ಯಾವುದೇ ಕಣಗಳ ‘ಫಾರ್ಮುಲಾ’ಗಳಿಗೆ ಸರಿಹೊಂದುವುದಿಲ್ಲ. ಆದ್ದರಿಂದ ಈ ಕಣಗಳು ನವೀನವಾಗಿವೆ ಎಂಬುದು ಗಮನಕ್ಕೆ ಬರುತ್ತದೆ. ಸಾಧಕರು ಈ ಕಣಗಳನ್ನು ‘ದೈವೀ ಕಣ’ ಎಂದು ಕರೆಯುತ್ತಾರೆ.