ತೆಹ್ರಾನ ಮೇಲಿನ ದಾಳಿಯಲ್ಲಿ ಇರಾನಿನ ಹಿರಿಯ ಸೇನಾಧಿಕಾರಿಗಳ ಸಾವು ! – ಟ್ರಂಪ್ ಹೇಳಿಕೆ

ಎಚ್ಚರಿಸಿದ ೪೮ ಗಂಟೆಗಳ ನಂತರ ನಡೆಸಲಾದ ದಾಳಿ

ನವದೆಹಲಿ – ಅಮೇರಿಕವು ಇರಾನಿನ ರಾಜಧಾನಿಯಾದ ತೆಹ್ರಾನಿನ ಮೇಲೆ ಭಾರಿ ದಾಳಿ ನಡೆಸಿದ್ದು, ಇದರಲ್ಲಿ ಇರಾನಿನ ಅನೇಕ ಹಿರಿಯ ಸೇನಾಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಅಮೇರಿಕದ ರಾಷ್ಟ್ರಾಧ್ಯಕ್ಷರಾದ ಡಾನಲ್ಡ ಟ್ರಂಪ್ ಹೇಳಿಕೆ ನೀಡಿದ್ದಾರೆ. ಟ್ರಂಪ್ ರವರು ಈ ದಾಳಿಯ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದು, ಅದರಲ್ಲಿ ಸ್ಫೋಟದ ಜ್ವಾಲೆಗಳಿಂದ ತೆಹ್ರಾನಿನ ಆಕಾಶವು ಉರಿಯುತ್ತಿರುವುದು ಕಂಡುಬಂದಿದೆ. ಟ್ರಂಪ್ ರವರು ಇರಾನ್‌ಗೆ ನೀಡಿದ್ದ ಎಚ್ಚರಿಕೆಯ ೪೮ ಗಂಟೆಗಳ ನಂತರ ಈ ದಾಳಿ ನಡೆದಿದೆ. ಈ ಹಿಂದೆ ಒಂದು ವೇಳೆ ಇರಾನ್ ಅಮೇರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ಅಥವಾ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯದಿದ್ದರೆ, ಇರಾನ್ ಸರ್ವನಾಶವನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ರವರು ಹೇಳಿದ್ದರು.

ಇರಾನಿನಿಂದ ಕುವೈತಿನ ವಿದ್ಯುತ್ ಮತ್ತು ನೀರಿನ ಯೋಜನೆಗಳ ಮೇಲೆ ದಾಳಿ

ಕುವೈತಿನ ವಿದ್ಯುತ್, ನೀರು ಮತ್ತು ಇಂಧನ ಸಚಿವಾಲಯದ ವಕ್ತಾರರಾದ ಫಾತಿಮಾ ಅಬ್ಬಾಸ್ ಜೋಹರ್ ಹಯಾತ್ ರವರು ಮಾತನಾಡುತ್ತ, ದೇಶದ ೨ ವಿದ್ಯುತ್ ಉತ್ಪಾದನಾ ಮತ್ತು ನೀರು ಶುದ್ಧೀಕರಣ ಯೋಜನೆಗಳನ್ನು ಗುರಿಯಾಗಿಸಲಾಗಿತ್ತು. ಈ ಅಪರಾಧಿ ದಾಳಿಯಿಂದಾಗಿ ಈ ಯೋಜನೆಗಳಿಗೆ ಭಾರಿ ಹಾನಿಯಾಗಿದ್ದು ೨ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಮುಚ್ಚಲಾಗಿದೆ. ಆದಾಗ್ಯೂ, ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ, ಎಂದು ತಿಳಿಸಿದ್ದಾರೆ.

ದೇಶದ್ರೋಹದ ಆರೋಪ ಎದುರಿಸುತ್ತಿರುವ ೧೦೦ ಜನರ ಆಸ್ತಿಯನ್ನು ಜಪ್ತು ಮಾಡಿದ ಇರಾನ್ !

ಶತ್ರುಗಳಿಗೆ ಬೆಂಬಲ ನೀಡಿರುವ ಆರೋಪದ ಮೇಲೆ ೧೦೦ಕ್ಕೂ ಹೆಚ್ಚು ಜನರ ಆಸ್ತಿಯನ್ನು ಜಪ್ತು ಮಾಡಲು ಹಾಗೂ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಇರಾನ್ ಆದೇಶಿಸಿದೆ. ಮೊಕದ್ದಮೆ ಎದುರಿಸುತ್ತಿರುವವರಲ್ಲಿ ಅನೇಕ ನಟರು, ಕ್ರೀಡಾಪಟುಗಳು ಮತ್ತು ಪತ್ರಕರ್ತರೂ ಸೇರಿದ್ದಾರೆ. ಇವರೆಲ್ಲರೂ ಇರಾನ್ ಇಂಟರ್ನ್ಯಾಷನಲ್ ಮತ್ತು ಮನೋಟೊದಂತಹ ಸುದ್ದಿ ವಾಹಿನಿಗಳೊಂದಿಗೆ ಸಂಬಂಧ ಹೊಂದಿದ್ದು, ಇವರಿಗೆ ಇಸ್ರೇಲಿನೊಂದಿಗೆ ಸಂಬಂಧವಿರುವುದಾಗಿ ಇರಾನ್ ಸರಕಾರವು ಆರೋಪಿಸಿದೆ. ಆದಾಗ್ಯೂ, ಈ ವ್ಯಕ್ತಿಗಳ ಹೆಸರನ್ನು ಘೋಷಿಸಲಾಗಿಲ್ಲ. ಇದಲ್ಲದೇ ವಿದೇಶಗಳಲ್ಲಿ ವಾಸಿಸುತ್ತಿರುವ ೨೫ ಇರಾನಿ ನಾಗರಿಕರನ್ನೂ ಗುರಿಯಾಗಿಸಲಾಗಿದೆ. ಅವರ ಮೇಲೆ ವಿವಿಧ ಮಾಧ್ಯಮಗಳ ಮೂಲಕ, ವಿಶೇಷವಾಗಿ ಇಂಟರ್ನೆಟ್ ಮೂಲಕ ಶತ್ರುಗಳ ದಾಳಿಗಳಿಗೆ ಬೆಂಬಲ ನೀಡಿರುವ ಆರೋಪವಿದೆ.

ಅಮೇರಿಕದ ಸಿ-೧೩೦ ವಿಮಾನವನ್ನು ಹೊಡೆದುರುಳಿಸಲಾಗಿದೆ ! – ಇರಾನ್ ದಾವೆ

ಇಸ್ಫಹಾನ ಪ್ರಾಂತ್ಯದಲ್ಲಿ ಅಮೇರಿಕದ ಸಿ-೧೩೦ ಹರ್ಕ್ಯುಲಿಸ ಸರಕು ಸಾಗಣೆ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಇರಾನಿನ `ಫರಾಜಾ ರೇಂಜರ್ಸ್’ ವಿಶೇಷ ಪೊಲೀಸ್ ಕಮಾಂಡೋ ಘಟಕ ಪ್ರತಿಪಾದಿಸಿದೆ. ಈ ಬಗ್ಗೆ ಅಮೇರಿಕವು ಯಾವುದೇ ಹೇಳಿಕೆ ನೀಡಿಲ್ಲ. ಕೆಲವು ದಿನಗಳ ಹಿಂದೆ ಇರಾನ್ ಅಮೇರಿಕದ `ಎಫ್-೧೫’ ಯುದ್ಧವಿಮಾನವನ್ನು ಹೊಡೆದುರುಳಿಸಿತ್ತು. ಅದರಲ್ಲಿ ಕಾಣೆಯಾದ ಪೈಲಟ್‌ನನ್ನು ರಕ್ಷಿಸಲು ಅಮೇರಿಕವು ಇರಾನಿನ ಇಸ್ಫಹಾನ ನಗರದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಇದೇ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿ-೧೩೦ ವಿಮಾನ ಮತ್ತು ೨ ಹೆಲಿಕಾಪ್ಟರ್‌ಗಳನ್ನು ತಮ್ಮ ಸೇನೆಯು ಗುರಿಯಾಗಿಸಿದೆ ಎಂದು ಇರಾನ್ ಪ್ರತಿಪಾದಿಸಿದೆ. ತಜ್ಞರ ಅನುಸಾರ, ಸಿ-೧೩೦ ವಿಮಾನವು ನಿಜವಾಗಿಯೂ ಪತನಗೊಂಡಿದ್ದರೆ, ಇದು ಅಮೇರಿಕಕ್ಕೆ ಕಳೆದ ದಶಕದಲ್ಲಿನ ಅತಿದೊಡ್ಡ ಮಿಲಿಟರಿ ಆಘಾತವಾಗಿದೆ.

ಇರಾನ್‌ನಿಂದ ಅಮೇರಿಕದ ಪೈಲಟ್ ನ ಬಿಡುಗಡೆ

ಅಮೇರಿಕದ ಸರಕಾರಿ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯ ಅನುಸಾರ, ಇರಾನಿನಲ್ಲಿ ಹೊಡೆದುರುಳಿಸಲಾದ ಎಫ್-೧೫ ಯುದ್ಧವಿಮಾನದ ಮತ್ತೊಬ್ಬ ಪೈಲಟ್ ಅನ್ನು ಸುರಕ್ಷಿತವಾಗಿ ಪತ್ತೆಹಚ್ಚಲಾಗಿದೆ. ರಕ್ಷಣಾ ತಂಡವು ಇನ್ನೂ ಯಶಸ್ವಿಯಾಗಿ ಇರಾನಿನಿಂದ ಹೊರಬಂದು ಸುರಕ್ಷಿತ ಸ್ಥಳವನ್ನು ತಲುಪಬೇಕಿದೆ. ಇರಾನ್ ಮತ್ತು ಅಮೇರಿಕ ಈ ಎರಡೂ ದೇಶಗಳಿಂದ ವ್ಯಾಪಕವಾದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಇರಾನಿನ ಸರಕಾರಿ ಮಾಧ್ಯಮಗಳು ಸ್ಥಳೀಯರಿಗೆ ಕರೆ ನೀಡಿದ್ದವು, ಪೈಲಟ್‌ನನ್ನು ಹಿಡಿದುಕೊಟ್ಟವರಿಗೆ ೫೦ ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದವು.

ಇರಾನಿನ ಹೊಸ ಸರ್ವೋಚ್ಚ ಧಾರ್ಮಿಕ ನಾಯಕ ಮೊಜತಬಾ ಖಾಮೇನಿ ನಾಪತ್ತೆ?

ಅಯಾತುಲ್ಲಾ ಅಲಿ ಖಾಮೇನಿಯವರ ಹತ್ಯೆಯ ನಂತರ, ಅವರ ಪುತ್ರ ಮೊಜತಬಾ ಖಾಮೇನಿಯವರನ್ನು ಮಾರ್ಚ್ ೮ ರಂದು ಇರಾನಿನ ಹೊಸ ಸರ್ವೋಚ್ಚ ಧಾರ್ಮಿಕ ನಾಯಕರಾಗಿ ನೇಮಿಸಲಾಗಿತ್ತು; ಆದರೆ ಅಂದಿನಿಂದ ಅವರು ಇನ್ನೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರನ್ನೂ ಕೊಲ್ಲಲಾಗಿದೆ ಎಂದು ಇಸ್ರೇಲ್ ಈ ಹಿಂದೆ ಹೇಳಿಕೊಂಡಿತ್ತು; ಆದರೆ ಇರಾನ್ ಇದನ್ನು ಖಚಿತಪಡಿಸಿಲ್ಲ. ಮೊಜತಬಾ ಸಾವನ್ನಪ್ಪಿರಬಹುದು ಅಥವಾ ಗಂಭೀರವಾಗಿ ಗಾಯಗೊಂಡಿರಬಹುದು ಎಂದು ಟ್ರಂಪ್ ಮತ್ತು ವಿದೇಶಾಂಗಮಂತ್ರಿಗಳಾದ ಮಾರ್ಕೊ ರುಬಿಯೊ ಪದೇ ಪದೇ ಪ್ರತಿಪಾದಿಸಿದ್ದಾರೆ. ಇದರಿಂದಾಗಿ, ಇರಾನಿನ ನೈಜ ಅಧಿಕಾರವು ಈಗ ಇರಾನಿಯನ್ ರೆವಲ್ಯೂಷನರಿ ಗಾರ್ಡ್ಸ್ (IRGC) ಕೈಯಲ್ಲಿದೆ ಎಂಬ ಚರ್ಚೆ ನಡೆಯುತ್ತಿದೆ.

ಇರಾನಿನ ವಿದೇಶಾಂಗ ಸಚಿವರಾದ ಅಬ್ಬಾಸ ಅರಾಘಚಿಯವರು ಈ ಎಲ್ಲಾ ಹೇಳಿಕೆಗಳನ್ನು ತಳ್ಳಿಹಾಕಿದ್ದು, ಮೊಜತಬಾರವರು ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದಾರೆ ಮತ್ತು ದೇಶದ ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ವಿಶ್ವಸಂಸ್ಥೆಯಲ್ಲಿನ ಇರಾನಿನ ರಾಯಭಾರಿಯು ಅವರ ಗೈರುಹಾಜರಿಗೆ ಭದ್ರತೆಯೇ ಕಾರಣ ಎಂದು ಹೇಳಿದ್ದಾರೆ.