ಒಪ್ಪಂದವಾಗದಿದ್ದರೆ ಇರಾನ ಅಸ್ತಿತ್ವದಲ್ಲಿ ಇರುವುದಿಲ್ಲ! – ಟ್ರಂಪ್ ಎಚ್ಚರಿಕೆ

ನವದೆಹಲಿ – “ನಿಜ ಹೇಳಬೇಕೆಂದರೆ, ಇರಾನಿನ ತೈಲವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ನನ್ನ ನೆಚ್ಚಿನ ವಿಷಯವಾಗಿದೆ. ಇದನ್ನು ಸಾಧಿಸಲು ಅಮೇರಿಕದ ಬಳಿ ಹಲವು ಪರ್ಯಾಯಗಳಿವೆ. ಅಮೇರಿಕದಲ್ಲಿನ ಅನೇಕರು ‘ನೀವು ಇದನ್ನು ಏಕೆ ಮಾಡುತ್ತಿದ್ದೀರಿ?’ ಎಂದು ಕೇಳುತ್ತಾರೆ, ಆದರೆ ಅವರು ಮೂರ್ಖರು. ಬಹುಶಃ ನಾವು ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳಬಹುದು ಅಥವಾ ಇಲ್ಲದಿರಬಹುದು. ಈ ದ್ವೀಪದಲ್ಲಿ ಇರಾನಿನ ರಕ್ಷಣೆಯು ಅಷ್ಟೇನೂ ಬಲವಾಗಿಲ್ಲ ಮತ್ತು ಅಮೇರಿಕವು ಇದನ್ನು ಸುಲಭವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು,” ಎಂದು ಅಮೇರಿಕದ ರಾಷ್ಟ್ರಾಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ರವರು ಹೇಳಿದ್ದಾರೆ. ‘ಫೈನಾನ್ಷಿಯಲ್ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಅವರು ಹೀಗೆ ಮಾತನಾಡಿದ್ದಾರೆ.

೧. ಖಾರ್ಗ್ ದ್ವೀಪವು ಉತ್ತರ ಪರ್ಷಿಯನ್ ಕೊಲ್ಲಿಯಲ್ಲಿದ್ದು, ಇರಾನ್‌ಗೆ ಅತ್ಯಂತ ಪ್ರಮುಖ ತೈಲ ಕೇಂದ್ರವಾಗಿದೆ. ಇರಾನಿನ ತೈಲ ರಫ್ತಿನಲ್ಲಿ ಸುಮಾರು ಶೇ. ೯೦ ರಷ್ಟು ಇಲ್ಲಿಂದಲೇ ರಫ್ತಾಗುತ್ತದೆ. ಹೀಗಾಗಿ ಇದು ಇರಾನಿನ ಆರ್ಥವ್ಯವಸ್ಥೆಯ ಬೆನ್ನೆಲುಬಾಗಿದೆ.

೨. ಈ ದ್ವೀಪವನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ಇರಾನ್‌ನ ‘ರೆವಲ್ಯೂಷನರಿ ಗಾರ್ಡ್ಸ್’ನ ಆರ್ಥಿಕ ಸ್ಥಿತಿಯು ಸಂಪೂರ್ಣವಾಗಿ ದುರ್ಬಲಗೊಳ್ಳುತ್ತದೆ ಮತ್ತು ಇದು ಯುದ್ಧದ ಅಂತ್ಯಕ್ಕೆ ದಾರಿ ಮಾಡಿಕೊಡಬಹುದು ಎಂದು ವೈಟ್ ಹೌಸ್‌ನ ಕೆಲವು ಅಧಿಕಾರಿಗಳು ನಂಬಿದ್ದಾರೆ.

೩. ಮತ್ತೊಂದೆಡೆ, ದಾಳಿಯ ಸಾಧ್ಯತೆಯನ್ನು ಮನಗಂಡ ಇರಾನ್, ಖಾರ್ಗ್ ದ್ವೀಪದಲ್ಲಿ ಹೆಚ್ಚುವರಿ ಸೈನ್ಯ ಮತ್ತು ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಿದ್ದು ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ.

“ಇರಾನ್ ಹಠ ಬಿಟ್ಟು ನಮಗೆ ಯುರೇನಿಯಂ ಕೊಡಬೇಕು !” – ಟ್ರಂಪ್

ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಇರಾನ್ ಅಣ್ವಸ್ತ್ರಗಳ ಮೇಲಿನ ಹಠ ಬಿಡದಿದ್ದರೆ ಅದು ನಾಶವಾಗುವುದು ಖಚಿತ. ಪ್ರಸ್ತುತ ಇರಾನ್ ದುರ್ಬಲವಾಗಿದೆ. ಅವರ ನಾಯಕರು ಅಣ್ವಸ್ತ್ರಗಳನ್ನು ತ್ಯಜಿಸಿ, ಸಮೃದ್ಧ ಯುರೇನಿಯಂ ಅನ್ನು ನಮಗೆ ನೀಡಿ ನಮ್ಮ ಹೆಚ್ಚಿನ ಷರತ್ತುಗಳನ್ನು ಒಪ್ಪಿಕೊಳ್ಳುತ್ತಾರೆ. ಆನಂತರವೇ ಅವರು ಮತ್ತೆ ಉತ್ತಮ ದೇಶವಾಗಲು ಸಾಧ್ಯ,” ಎಂದಿದ್ದಾರೆ.

“ಯುದ್ಧ ಕೊನೆಗೊಳಿಸಲು ಶೀಘ್ರವೇ ಒಪ್ಪಂದವಾಗುವುದು !” – ಟ್ರಂಪ್ ಹೇಳಿಕೆ

ಇರಾನ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸಲು ಶೀಘ್ರದಲ್ಲೇ ಒಪ್ಪಂದ ಏರ್ಪಡಬಹುದು, ಒಂದು ವೇಳೆ ಇರಾನ್ ಅಮೇರಿಕದ ಪ್ರಸ್ತಾವನೆಯನ್ನು ಒಪ್ಪಿಕೊಳ್ಳದಿದ್ದರೆ, ಇರಾನ್ ಎಂಬ ದೇಶವೇ ಉಳಿಯುವುದಿಲ್ಲ, ಎಂದು ಟ್ರಂಪ್ ಹೇಳಿದ್ದಾರೆ.

“ಯುದ್ಧ ಯಾವಾಗ ಮುಗಿಯಬೇಕು ಎಂಬುದನ್ನು ನಾವೇ ನಿರ್ಧರಿಸುತ್ತೇವೆ!” – ಇರಾನಿನ ಪ್ರತ್ಯುತ್ತರ

ಇರಾನಿನ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, “ಯುದ್ಧ ಯಾವಾಗ ಕೊನೆಗೊಳ್ಳಬೇಕು ಎಂಬುದನ್ನು ಇರಾನ ನಿರ್ಧರಿಸುತ್ತದೆ. ಯುದ್ಧವು ಕೆಲವೇ ದಿನಗಳಲ್ಲಿ ಮುಗಿಯುತ್ತದೆ ಎಂದು ಅಮೇರಿಕವು ಈ ಹಿಂದೆ ಅಂದಾಜಿಸಿತ್ತು. ಇದು ನಮ್ಮ ಯುದ್ಧವಾಗಿದ್ದು ನಾವು ಟ್ರಂಪ್ ಮತ್ತು ನೆತನ್ಯಾಹು ಅವರಿಗೆ ಪಾಠ ಕಲಿಸುವವರೆಗೆ ನಮ್ಮ ಆತ್ಮರಕ್ಷಣೆ ನಿಲ್ಲಿಸುವುದಿಲ್ಲ. ಇರಾನಿನ ಬಳಿ ಕ್ಷಿಪಣಿ ಮತ್ತು ಡ್ರೋನ್‌ಗಳ ದೊಡ್ಡ ಸಂಗ್ರಹವಿದ್ದು, ದೀರ್ಘಕಾಲದವರೆಗೆ ದಾಳಿ ಮುಂದುವರಿಸುವ ಸಾಮರ್ಥ್ಯ ನಮಗಿದೆ,” ಎಂದು ಹೇಳಿದ್ದಾರೆ.

ಇರಾನ್ ಅಮೇರಿಕಕ್ಕೆ ತೈಲ ಪೂರೈಸುವ ಪ್ರಸ್ತಾವನೆ ನೀಡಿದೆ ! – ಟ್ರಂಪ್ ರವರ ಹೇಳಿಕೆ

ಇರಾನ್ ಅಮೇರಿಕಕ್ಕೆ ತೈಲ ಪೂರೈಸುವ ಪ್ರಸ್ತಾವನೆ ನೀಡಿದೆ ಎಂದು ಟ್ರಂಪ್ ಹೇಳಿದ್ದಾರೆ . ಮೊದಲು ೧೦ ದೊಡ್ಡ ಹಡಗುಗಳ ಮೂಲಕ ತೈಲ ಕಳುಹಿಸುವ ಯೋಜನೆ ಇತ್ತು, ಆದರೆ ಈಗ ೨೦ ಹಡಗುಗಳ ಮೂಲಕ ತೈಲ ಕಳುಹಿಸಲಾಗುತ್ತಿದೆ. ನಮ್ಮ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ಚರ್ಚೆಗಳು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದು ಅನೇಕ ಮಹತ್ವದ ಅಂಶಗಳಲ್ಲಿ ಪ್ರಗತಿ ಸಾಧಿಸಿದ್ದೇವೆ” ಎಂದು ಟ್ರಂಪ್ ಹೇಳಿದ್ದಾರೆ. ಇನ್ನೊಂದೆಡೆ ಇರಾನ ಈ ಹೇಳಿಕೆಯನ್ನು ನಿರಾಕರಿಸಿದ್ದು, ಅಮೇರಿಕದೊಂದಿಗೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ಪಾಕಿಸ್ತಾನ, ಸೌದಿ ಅರೇಬಿಯಾ, ಟರ್ಕಿ ಮತ್ತು ಈಜಿಪ್ಟಗಳ ನಡುವೆ ಚರ್ಚೆ !

ಇಸ್ಲಾಮಾಬಾದಿನಲ್ಲಿ ಪಾಕಿಸ್ತಾನ, ಸೌದಿ ಅರೇಬಿಯಾ, ಟರ್ಕಿ ಮತ್ತು ಈಜಿಪ್ಟ್ ಈ ೪ ದೇಶಗಳ ವಿದೇಶಾಂಗ ಸಚಿವರ ಸಭೆ ನಡೆದಿದೆ. ಈ ಪ್ರಾದೇಶಿಕ ಪರಿಸ್ಥಿತಿ ಮತ್ತು ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸುವ ಮಾರ್ಗಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ ಡಾರ ತಿಳಿಸಿದ್ದಾರೆ.

ಇರಾನಿನ ನೀರು ಉತ್ಪಾದನಾ ಘಟಕ ಸ್ಥಗಿತ !

ಇರಾನಿನ ಖೋಂದಾಬ ಗಡಸು ನೀರು ಉತ್ಪಾದನಾ ಘಟಕವು ಈಗ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ತಿಳಿಸಿದೆ. ಮಾರ್ಚ್ ೨೭ ರಂದು ನಡೆದ ದಾಳಿಯಲ್ಲಿ ಈ ಘಟಕಕ್ಕೆ ಭಾರಿ ಹಾನಿಯಾಗಿದ್ದು, ಘಟಕವು ಸಂಪೂರ್ಣವಾಗಿ ನಿಂತಿದೆ. ಈ ಘಟಕದಲ್ಲಿ ಯಾವುದೇ ಪರಮಾಣು ಸಾಮಗ್ರಿಗಳು ಇರಲಿಲ್ಲ ಎಂದು ವರದಿಯಾಗಿದೆ.