ಶ್ರೀರಾಮಲಲ್ಲಾನ ಹಣೆಯ ಮೇಲೆ 9 ನಿಮಿಷಗಳ ಕಾಲ ಸೂರ್ಯಕಿರಣಗಳ ತೇಜಸ್ವಿ ಸ್ಪರ್ಶ!

  • ಶ್ರೀರಾಮಲಲ್ಲಾನ ಸೂರ್ಯತಿಲಕ ಮಹೋತ್ಸವ!

  • ಅಯೋಧ್ಯೆಯಲ್ಲಿ 10 ಲಕ್ಷ ಭಕ್ತರ ಉಪಸ್ಥಿತಿ

ಅಯೋಧ್ಯೆ (ಉತ್ತರ ಪ್ರದೇಶ) – ಅಯೋಧ್ಯೆಯಲ್ಲಿ ಮಾರ್ಚ್ 27 ರಂದು ಅಭಿಜಿತ್ ಮುಹೂರ್ತದಲ್ಲಿ ಮಧ್ಯಾಹ್ನ 12 ಗಂಟೆಗೆ ಶ್ರೀರಾಮಲಲ್ಲಾನ ‘ಸೂರ್ಯತಿಲಕ ಮಹೋತ್ಸವ’ ನೆರವೇರಿತು. ಪ್ರಾಣಪ್ರತಿಷ್ಠಾಪನಾ ಸಮಾರಂಭದ ನಂತರ ಶ್ರೀರಾಮಲಲ್ಲಾನಿಗೆ ನಡೆದ ಎರಡನೇ ಸೂರ್ಯತಿಲಕ ಮಹೋತ್ಸವ ಇದಾಗಿದೆ. ಶ್ರೀರಾಮಲಲ್ಲಾನ ಹಣೆಯ ಮೇಲೆ 9 ನಿಮಿಷಗಳ ಕಾಲ ಸೂರ್ಯಕಿರಣಗಳ ತೇಜಸ್ವಿ ಸ್ಪರ್ಶವಾಯಿತು. ಈ ಸಮಾರಂಭದಲ್ಲಿ ಸುಮಾರು 10 ಲಕ್ಷ ಭಕ್ತರು ಉಪಸ್ಥಿತರಿದ್ದರು.

ಸೂರ್ಯತಿಲಕ ಮಹೋತ್ಸವಕ್ಕಾಗಿ 20 ಅಷ್ಟಧಾತು ಕೊಳವೆಗಳಿಂದ ಕೂಡಿದ 65 ಅಡಿ ಉದ್ದದ ವಿಶೇಷ ರಚನೆಯನ್ನು ಸಿದ್ಧಪಡಿಸಲಾಗಿತ್ತು.

(ಸೌಜನ್ಯ – Doordarshan National)

ಗರ್ಭಗುಡಿಯಲ್ಲಿನ 4 ಮಸೂರಗಳು ಮತ್ತು 4 ಕನ್ನಡಿಗಳ ಮೂಲಕ ಸೂರ್ಯಕಿರಣಗಳು ಶ್ರೀರಾಮಲಲ್ಲಾನ ಹಣೆಯನ್ನು ತಲುಪುವಂತೆ ವ್ಯವಸ್ಥೆ ಮಾಡಲಾಗಿತ್ತು. ಸೂರ್ಯತಿಲಕ ಮಹೋತ್ಸವದೊಂದಿಗೆ ಶ್ರೀರಾಮಲಲ್ಲಾನ ಜನ್ಮೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಗರ್ಭಗುಡಿಯಲ್ಲಿದ್ದ 14 ಅರ್ಚಕರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಶ್ರೀರಾಮಲಲ್ಲಾನಿಗೆ ವಿಶೇಷ ಆರತಿ ಬೆಳಗಲಾಯಿತು.

ದರ್ಶನದ ವೇಳೆಯಲ್ಲಿ ಹೆಚ್ಚಳ

ಶ್ರೀರಾಮನವಮಿಯ ಪ್ರಯುಕ್ತ ದೇವಸ್ಥಾನವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಈ ಶ್ರೀರಾಮನವಮಿಯಿಂದ ಭಕ್ತರಿಗೆ ಶ್ರೀರಾಮಲಲ್ಲಾನ ದರ್ಶನವನ್ನು ಮುಂಜಾನೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಪಡೆಯಬಹುದಾಗಿದೆ. ಈ ಮೊದಲು ದರ್ಶನವು ಬೆಳಿಗ್ಗೆ 6:30 ರಿಂದ ರಾತ್ರಿ 9:30 ರವರೆಗೆ ಲಭ್ಯವಿತ್ತು.